Advertisement

ನಿವೇಶನ ರಹಿತರಿಗೆ ಮನೆ: ಸರಕಾರಿ ಭೂಮಿ ಗುರುತಿಸಿ

09:44 AM Sep 27, 2018 | Team Udayavani |

ಮಂಗಳೂರು: ನಿವೇಶನ ರಹಿತರಿಗೆ ಭೂಮಿ ಒದಗಿಸಲು ಸರಕಾರಿ ಭೂಮಿ ಲಭ್ಯತೆಯ ಬಗ್ಗೆ ಸೂಕ್ತ ಸರ್ವೇ ನಡೆಸಿ ವರದಿ ನೀಡುವಂತೆ ಸಚಿವ ಯು.ಟಿ. ಖಾದರ್‌ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ. ದ.ಕ. ಜಿ.ಪಂ.ನಲ್ಲಿ ಬುಧವಾರ ನಡೆದ ತ್ತೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಬೆಂಗಳೂರಿನಲ್ಲಿ 1,000 ಎಕರೆ ಸರಕಾರಿ ಭೂಮಿ ಲಭ್ಯತೆ ವಿವರ ಪಡೆದಿದ್ದರು. ಆದರೆ ಗ್ರಾಮಾಂತರ ಹೆಚ್ಚಿರುವ ಜಿಲ್ಲೆಯಲ್ಲಿ ಯಾಕಾಗಿ ಸರಕಾರಿ ಭೂಮಿ ಲಭ್ಯತೆ ವಿವರ ದೊರಕುತ್ತಿಲ್ಲ ಎಂದು ಪ್ರಶ್ನಿಸಿದರು.

Advertisement

ಅಪರ ಜಿಲ್ಲಾಧಿಕಾರಿ ಕುಮಾರ್‌ ಮಾತನಾಡಿ, ಜಿಲ್ಲೆಯಲ್ಲಿ ಈ ಡಾಟಾ ಕಾಯ್ದಿರಿಸುವ ಪದ್ಧತಿ ಇರಲಿಲ್ಲ. 28,000 ನಿವೇಶನ ರಹಿತ ಕುಟುಂಬಗಳಿಗೆ ವಸತಿಗಾಗಿ 1,335 ಎಕರೆ ಅಗತ್ಯ. 463 ಎಕರೆ ಲಭ್ಯ ಇದ್ದು, 26 ಎಕರೆ ವಸತಿ ಗಾಗಿ ಮೀಸಲಿರಿಸಲಾಗಿದೆ. ಉಳಿದ 872 ಎಕರೆ ಗುರುತಿಸಬೇಕಿದೆ ಎಂದರು.

ಇತರೆಡೆಗೂ ಯುಪಿಒಆರ್‌ ಕಾರ್ಡ್‌ 
94ಸಿಸಿಯಡಿ ಆರ್‌ಟಿಸಿ ವಿತರಣೆಯಲ್ಲಿ ವಿಳಂಬ ಹಾಗೂ ಲೋಪವಾಗುತ್ತಿರುವ ಬಗ್ಗೆ ಸಚಿವ ಖಾದರ್‌ ಅಧಿಕಾರಿಗಳ ಗಮನ ಸೆಳೆದರು. ಗ್ರಾಮಾಂತರ ಭಾಗದಲ್ಲಿ ಆರ್‌ಟಿಸಿ ನೀಡುವಾಗ ಕೆಲವು ನಿವೇಶನ ಕೈಬಿಟ್ಟಿರುವ ಬಗ್ಗೆ ದೂರು ಇದೆ. ಗ್ರಾಮ ಕರಣಿಕರು ಆರ್‌ಟಿಸಿ ಹಂಚಿಕೆ ಮಾಡುವಾಗ ಬಿಟ್ಟು ಹೋದ ಪ್ರಕರಣ ಗಳಿದ್ದಲ್ಲಿ ಸಹಾಯಕ ಆಯುಕ್ತರ ಗಮನಕ್ಕೆ ತಂದಲ್ಲಿ ತನಿಖೆ ಮಾಡಲಾಗುವುದು ಎಂದರು. ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಮಾತನಾಡಿ, ಭೂಪರಿವರ್ತನೆ ಸಮಸ್ಯೆ ಸರಿ ಯಾಗುತ್ತಿದೆ. ಮಂಗಳೂರು ತಾ| ನಗರ ಪ್ರದೇಶದಲ್ಲಿ ಯುಪಿಒಆರ್‌ ಕಾರ್ಡ್‌ ವಿತರಣೆ ನಡೆಯುತ್ತಿದ್ದು, 6 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.

ಪಶ್ಚಿಮ ವಾಹಿನಿ; ಅಧ್ಯಯನಕ್ಕೆ ಸಲಹೆ
ಜಿಲ್ಲಾಧಿಕಾರಿ ಮಾತನಾಡಿ, ಪಶ್ಚಿಮವಾಹಿನಿ ಯೋಜನೆಯ ಅನುಷ್ಠಾನಕ್ಕೆ ವೇಗ ನೀಡುವ ಜತೆಗೆ ಅದರ ಪರಿಣಾಮಗಳ ಬಗ್ಗೆಯೂ ಗಮನ ಹರಿಸಬೇಕಾಗಿದೆ. ಯೋಜನೆಯಡಿ ಅಣೆಕಟ್ಟು ನಿರ್ಮಾಣ ಸಂಬಂಧ ತಜ್ಞರ ಸಮಿತಿ ರಚಿಸಿ ಪರಿಣಾಮ ಅಧ್ಯಯನ ನಡೆಸುವುದು ಸೂಕ್ತ ಎಂದು ಸಲಹೆ ನೀಡಿದರು. 

ಅ. 11: ಉದ್ಘಾಟನೆ
ಸರಕಾರಿ ಲೇಡಿಗೋಶನ್‌ ಆಸ್ಪತ್ರೆಯಲ್ಲಿ ನೂತನ ಕಟ್ಟಡ ಮುಕ್ತಾಯ ಹಂತದಲ್ಲಿದೆ ಎಂದು ಅಧಿಕಾರಿಗಳು ಪ್ರಸ್ತಾವಿಸಿದರು. ಅ. 11ರಂದು ಉದ್ಘಾಟನೆ ನಿಗದಿ ಮಾಡುವಂತೆ ಖಾದರ್‌ ಸೂಚಿಸಿದರು. 

Advertisement

ತಾಲೂಕು ಮಟ್ಟದಲ್ಲಿ  ಕೆಡಿಪಿ
ಮುಂದೆ ತಾಲೂಕು ಮಟ್ಟದಲ್ಲಿ ಕೆಡಿಪಿ ಸಭೆ ನಡೆಸಲಾಗುವುದು. ಆಸ್ಪತ್ರೆ ಮೇಲ್ದರ್ಜೆ, ಆರೋಗ್ಯ ಇಲಾಖೆ ಮೂಲಸೌಕರ್ಯ ಬಗ್ಗೆ ಮುಂದಿನ ವಾರ ಬೆಂಗಳೂರಿನಲ್ಲಿ ಸಭೆ ನಡೆಸ ಲಾಗುವುದು ಎಂದು ಸಚಿವರು ತಿಳಿಸಿದರು. 
ಶಾಸಕ ರಾಜೇಶ್‌ ನಾೖಕ್‌, ಜಿ.ಪಂ. ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಉಪಾಧ್ಯಕ್ಷೆ ಕಸ್ತೂರಿ ಪಂಜ, ಯು.ಪಿ. ಮುಹಮ್ಮದ್‌, ಜನಾರ್ದನ ಗೌಡ, ಅನಿತಾ ಹೇಮನಾಥ್‌, ಪೊಲೀಸ್‌ ಆಯುಕ್ತರು, ಎಸ್‌ಪಿ, ಜಿ.ಪಂ. ಸಿಇಒ ಉಪಸ್ಥಿತರಿದ್ದರು.

ಗ್ರಾಮ ಪಂಚಾಯತ್‌ಗಳಲ್ಲಿ  ಕಿಯಾಸ್ಕ್ ಆರಂಭ
ಗ್ರಾ.ಪಂ. ಬಾಪೂಜಿ ಸೇವಾ ಕೇಂದ್ರಗಳ ಮೂಲಕ 100 ಸೇವೆಗಳನ್ನು ಒದಗಿಸಲು ನಿರ್ದೇಶನವಿದೆ. ಆದರೆ ಸದ್ಯ ಈ ಸೇವೆ ಪರಿಣಾಮಕಾರಿಯಾಗಿಲ್ಲ ಎಂಬ ಆರೋಪವಿದೆ. ಕಿಯಾಸ್ಕ್ ಮಾದರಿಯಲ್ಲಿ ವ್ಯವಸ್ಥೆ ರೂಪಿಸಲು ಪ್ರತ್ಯೇಕ ಸಿಬಂದಿ ಹಾಗೂ ವೇಗದ ಇಂಟರ್ನೆಟ್‌ ಸೇವೆ ನೀಡಬೇಕಾಗಿದೆ. ಈ ಬಗ್ಗೆ ಶೀಘ್ರ ಸಿದ್ಧತೆ ಮಾಡಲಾಗುವುದು ಎಂದು ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಹೇಳಿದರು.

ಪಡಿತರ: ಬಯೋಮೆಟ್ರಿಕ್‌ ಸಮಸ್ಯೆ ಇಲ್ಲ
ಪಡಿತರ ಪಡೆಯಲು ಬಯೋಮೆಟ್ರಿಕ್‌ ಬೆರಳಚ್ಚು ಸಮಸ್ಯೆ ಜಿಲ್ಲೆಯ ಸುಮಾರು 16 ಕಡೆ ಇದೆ ಎಂದು ಆಹಾರ ಇಲಾಖೆಯ ಉಪನಿರ್ದೇಶಕರು ಪ್ರಸ್ತಾವಿಸಿದರು. ಸಚಿವರು ಮಾತನಾಡಿ, ಜಿಲ್ಲೆಯ ಎಲ್ಲ ಕಡೆ ಹಾಗೂ ಪಂಚಾಯತ್‌ಗಳಲ್ಲಿ ಸರ್ವರ್‌ ಸಮಸ್ಯೆ ಇಲ್ಲ. ಕೆಲವೇ ನ್ಯಾಯಬೆಲೆ ಅಂಗಡಿಗಳಲ್ಲಿ ಸರ್ವರ್‌ ಸಮಸ್ಯೆ ಒಪ್ಪಲಾಗದು. ಈ ನೆಪ ಹೇಳುವ ನ್ಯಾಯಬೆಲೆ ಅಂಗಡಿ ಪರವಾನಿಗೆ ರದ್ದು ಮಾಡಿ ಬೇರೆಯವರಿಗೆ ನೀಡಲು ಕ್ರಮ ಕೈಗೊಳ್ಳ ಬೇಕು. ಪ್ರತೀ ನ್ಯಾಯಬೆಲೆ ಅಂಗಡಿಯಲ್ಲಿ ಪಡಿತರ ಚೀಟಿದಾರರ ಪೈಕಿ ಶೇ. 2ರಷ್ಟು ಮಂದಿಗೆ ಬೆರಳಚ್ಚು ಇಲ್ಲದೆಯೂ ಪಡಿತರ ಒದಗಿಸಲು ಅವಕಾಶವಿದೆ. ಒಂದು ವೇಳೆ ಶೇ. 2ಕ್ಕಿಂತ ಅಧಿಕ ಮಂದಿಯ ಬಯೋಮೆಟ್ರಿಕ್‌ ಸಮಸ್ಯೆ ಆದಲ್ಲಿ ಕೂಡಲೇ ತಾಲೂಕು ಮಟ್ಟದಿಂದ ಅನುಮತಿ ಪಡೆದು ಪಡಿತರ ಒದಗಿಸಲು ಅವಕಾಶವಿದೆ. ಒಂದೆಡೆ 500 ಪಡಿತರ ಚೀಟಿದಾರರಿದ್ದು, ಬೆರಳೆಣಿಕೆ ಮಂದಿಯ ಬೆರಳಚ್ಚು ತಾಳೆಯಾಗದಿರಬಹುದು. ಅದಕ್ಕಾಗಿ ಪಡಿತರ ನಿರಾಕರಿಸುವಂತಿಲ್ಲ ಎಂದು ಅಧಿಕಾರಿಗಳಿಗೆ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next