ಈ ಅಂಕಣ ಬರೆಯುವ ಹೊತ್ತಿಗೆ ನಾನು ಮಹಾನಗರ ಮುಂಬೈಗೆ ಬಂದಿದ್ದೇನೆ. ಎಲ್ಲಿ ನೋಡಿದರೂ ಸ್ಪರ್ಧೆಗೆ ಬಿದ್ದಂತೆ ಗಗನಚುಂಬಿ ಕಟ್ಟಡಗಳೇ. ನಾನು ಇರುವ ಮನೆ ಮುಂಬೈಯ ಥಾನಾದ ಪೋಕ್‌ರಾನ್ ನಂ. 2 ಬೀದಿಯ “ರುನ್‌ವಾಲ್ ಗಾರ್ಡನ್’ ಅಪಾರ್ಟ್‌ಮೆಂಟಿನ 5ನೇ ಮಾಳಿಗೆಯಲ್ಲಿದೆ. ಅದು ನನ್ನ ಅತ್ತೆಯ ಮನೆ. ಸಾಮಾನ್ಯವಾಗಿ ನಾನು ಪೇಟೆ ಮನೆಯ ಹಾಲು, ತುಪ್ಪ, ಮಜ್ಜಿಗೆ, ಮೊಸರು ಉಪಯೋಗಿಸುವುದು ಕಡಿಮೆಯೆ. ಇದಕ್ಕೆ ಕಾರಣ ನನಗೆ ತೊಟ್ಟೆ ಹಾಲು ಸೇರುವುದಿಲ್ಲ. ಆದರೆ, ಇಲ್ಲಿ ಹಾಗೇನೂ ಆಗಲಿಲ್ಲ. ನನ್ನ ಮನೆಹಾಲಿನಷ್ಟು ಅಲ್ಲದಿದ್ದರೂ ಅದಕ್ಕೆ ರುಚಿ ಇತ್ತು. ಈ ಬಗ್ಗೆ ಅತ್ತೆಯಲ್ಲಿ ಕೇಳಿದೆ. ಅವರು ಹೇಳಿದರು, “”ಇದು ತೊಟ್ಟೆ ಹಾಲು ಅಲ್ಲ. ಇಲ್ಲೇ ಸ್ವಲ್ಪ ದೂರದಲ್ಲಿ ಹಸು ಸಾಕುವವರ ಒಂದು ಮನೆಯಿದೆ. ಅಲ್ಲಿಂದಲೇ ನಾವು ಹಾಲು ತರುವುದು”.
ನನಗೋ ಆಶ್ಚರ್ಯ! ಹಳ್ಳಿಯವರಾದ ನಾವು ಲಾಭವಿಲ್ಲವೆಂದು ಜಾನುವಾರು ಸಾಕಣೆಯನ್ನು ಕೈ ಬಿಡುತ್ತಿರುವಾಗ ಈ ಕಾಂಕ್ರೀಟ್ ಪೇಟೆಯಲ್ಲಿ ಹಸು ಹೇಗೆ ಸಾಕುತ್ತಾರೆ? ನನಗೆ ಉತ್ತರ ತಿಳಿಯಬೇಕಿತ್ತು. ಈ ಮುಂಬೈಯಂತಹ ನಗರದಲ್ಲಿ ಹಸು ಸಾಕುವುದು ನನ್ನ ಕಲ್ಪನೆಗೂ ಮೀರಿದ ವಿಷಯ. “”ನೀವು ಹಾಲು ತರಲು ಹೋಗುವಾಗ ನಾನೂ ಬರುತ್ತೇನೆ” ಅತ್ತೆಯಲ್ಲಿ ಹೇಳಿದೆ. “”ನಾನು ಹಾಲು ತರುವುದು ಅಲ್ಲ. ಮಾವ ರಾತ್ರಿ ಆಫೀಸಿನಿಂದ ಬರುವಾಗ ತಂದು ಬಿಡುತ್ತಾರೆ. ಅವರು ಹಾಲು ಕರೆಯಲು ಶುರು ಮಾಡುವಾಗ ರಾತ್ರಿಯಾಗುತ್ತದೆ” ಎಂದರು. “”ಇಂದು ಮಾವ ತರುವುದು ಬೇಡ. ನಾವೇ ಹೋಗೋಣ. ನನಗೆ ದಾರಿ ಗೊತ್ತಾದರೆ ನಾಳೆಯಿಂದ ನಾನು ಇಲ್ಲಿ ಇರುವವರೆಗೂ ನಾನೇ ತರುತ್ತೇನೆ” ಎಂದು ಹೇಳಿ ಹೇಗೋ ಅತ್ತೆಯನ್ನು ಒಪ್ಪಿಸಿದೆ.
ನಾವು ಅಲ್ಲಿಗೆ ಹೋದಾಗ ರಾತ್ರಿ ಗಂಟೆ ಎಂಟಾಗಿತ್ತು. ಅದು ಇಟ್ಟಿಗೆ ಗೋಡೆಯ ಸಿಮೆಂಟ್ ಶೀಟ್ ಹೊದೆಸಿದ ಸಾಮಾನ್ಯ ಗಾತ್ರದ ಮನೆ. ಮುಂಬೈಯಲ್ಲಿ ಅಂಥ ಮನೆ ಹೊಂದುವುದೂ ಪರಮ ಸೌಭಾಗ್ಯವೇ. ಮನೆ ಜಗಲಿಯಲ್ಲಿ ಎಚ್‌ಎಫ್ ಹಾಗೂ ಜರ್ಸಿ ತಳಿಗೆ ಸೇರಿದ ಒಟ್ಟು ಏಳು ಹಸುಗಳು ಹಾಗೂ ಕೆಲವು ಕರುಗಳಿದ್ದವು. ಅವುಗಳಿಗೆ ತಿನ್ನಲು ಒಣಹುಲ್ಲು ಹಾಕಲಾಗಿತ್ತು. ಒಳ ಕೋಣೆಯಲ್ಲಿ ತೊಗರಿ ಹೊಟ್ಟು, ಗೋಧಿ-ಜೋಳ ಬೂಸಾ, ಹತ್ತಿ ಬೀಜದ ಹಿಂಡಿ ಇತ್ಯಾದಿ ಪಶುಆಹಾರವನ್ನು ದೊಡ್ಡ ದೊಡ್ಡ ಡ್ರಮ್‌ಗಳಲ್ಲಿ ಶೇಖರಿಸಿ ಇಡಲಾಗಿತ್ತು. ಮಲಗಲು, ಅಡುಗೆ ಮಾಡಲು ಇನ್ನೆರಡು ಕೋಣೆ ಇತ್ತು. ಒಬ್ಬ ಹಾಲು ಹಿಂಡುತ್ತಿದ್ದ. ಅವನೇ ಮನೆಯ ಯಜಮಾನ. ಅತ್ತೆ ನನ್ನನ್ನು ಅವನಿಗೆ ಪರಿಚಯ ಮಾಡಿಕೊಟ್ಟರು. “”ಕರ್ನಾಟಕದ ಹಳ್ಳಿಯೊಂದರಿಂದ ಬಂದಿದ್ದಾಳೆ. ಹಸು ನೋಡಬೇಕೆಂದು ಹೇಳಿದಳು. ಇವಳೂ ಹಸು ಸಾಕುತ್ತಾಳೆ. ಇವಳ ಹತ್ತಿರ ಐದು ಹಸುಗಳಿವೆ” ಎಂದರು. ನನ್ನದೂ ಅವನದೇ ವೃತ್ತಿ ಎಂದು ತಿಳಿದು ಅವನ ಮುಖ ಸಂತೋಷದಿಂದ ಅರಳಿದರೂ ಅವನಿಗೆ ಯಾಕೋ ನಂಬಿಕೆ ಬರಲಿಲ್ಲ. ವಿಶ್ವಾಸ ಮೂಡುವುದಕ್ಕಾಗಿ, “”ನಮ್ಮ ಹಸುವಿನ ಹಾಲು ಕರೆಯುತ್ತೀರಾ?” ಕೇಳಿದ. “”ಇಂದು ಇಲ್ಲ. ನಾಳೆ ಬೆಳಿಗ್ಗೆ ಬಂದು ಕರೆಯುತ್ತೇನೆ” ಎಂದೆ.
ಮರುದಿನ ಬೆಳಿಗ್ಗೆ ಏಳು ಗಂಟೆಗೆ ಒಬ್ಬಳೇ ಅಲ್ಲಿಗೆ ಹೋದೆ. ಅವನ ಶಾಲೆಗೆ ಹೋಗುವ ಮಗಳು ಸೆಗಣಿ ಹೆಕ್ಕಿ ಮನೆಯ ಮುಂಭಾಗದಲ್ಲಿ ರಾಶಿ ಹಾಕುತ್ತಿದ್ದಳು. ಅವನ ಹೆಂಡತಿ ಹಟ್ಟಿ ತೊಳೆಯುತ್ತಿದ್ದಳು. ತುಂಬ ಸಂತೋಷದಿಂದ ದೇವರ ಕಾರ್ಯವೆಂಬಂತೆ ಅವರು ಆ ಕೆಲಸ ಮಾಡುತ್ತಿದ್ದರು. ನನ್ನನ್ನು ಕಂಡಾಕ್ಷಣ ಅವನು, “”ಬನ್ನಿ, ಬನ್ನಿ” ಎನ್ನುತ್ತ ಹಸುವಿನ ಎರಡು ಕಾಲುಗಳನ್ನು ಮತ್ತು ಬಾಲವನ್ನು ಸೇರಿಸಿ ಕಟ್ಟಿದ. ಕೆಚ್ಚಲನ್ನು ತೊಳೆದು ಎಣ್ಣೆ ಪಸೆ ಮಾಡಿ ಕೊಟ್ಟು, “”ಈಗ ಹಾಲು ಕರೆಯಿರಿ” ಎಂದು ನನಗೆ ಹೇಳಿದ. ನಾನು ಅಂಜಿಕೆಯಿಲ್ಲದೆ ಎರಡೂ ಕೈಯಿಂದ ಸರಾಗವಾಗಿ ಹಾಲು ಹಿಂಡುವುದನ್ನು ನೋಡಿದಾಗ ಅವನಿಗೆ ನಾನು ಗೋಪಾಲಕಿಯೆಂಬ ನಂಬಿಕೆ ಬಂತು. ನಾನು ಅವನನ್ನು ಮಾತಾಡಿಸಿದೆ.
ಅವನ ಹೆಸರು ರಾಜ್ ಯಾದವ್. ಅವನ ತಂದೆ ಉತ್ತರಪ್ರದೇಶದ ಬನಾರಸ್ ಎಂಬ ಹಳ್ಳಿಯಿಂದ ಮೂವತ್ತೆ„ದು ವರ್ಷಗಳ ಹಿಂದೆ ಇಲ್ಲಿಗೆ ಬಂದಿದ್ದರಂತೆ. ಆಗ ಅವನು ಚಿಕ್ಕ ಬಾಲಕ. ತಂದೆ ಮಾಡುತ್ತಿದ್ದ ಹೈನುಗಾರಿಕೆಯನ್ನು ಅವನು ಮುಂದುವರಿಸಿದ್ದ. ಹಸುಸಾಕಣೆಯೇ ಅವನ ಜೀವನಕ್ಕೆ ಆಧಾರ. “”ಹಸು ಸಾಕುವುದರಿಂದ ಲಾಭ ಇದೆಯಾ?” ಎಂದು ಕೇಳಿದೆ. “”ಖಂಡಿತ ಇದೆ. ನಾನು, ನನ್ನ ಹೆಂಡತಿ, ನಾಲ್ಕು ಮಕ್ಕಳ ಜೀವನ ಸರಾಗವಾಗಿ ಸಾಗುತ್ತದೆ. ದೊಡ್ಡ ಮಗ ಹಳ್ಳಿಯಲ್ಲಿದ್ದಾನೆ. ಉಳಿದ ಮೂವರು ಮಕ್ಕಳನ್ನು ಇಲ್ಲೇ ಹತ್ತಿರದ ಇಂಗ್ಲಿಷ್ ಮೀಡಿಯಂ ಸ್ಕೂಲಿಗೆ ಕಳಿಸುತ್ತಿದ್ದೇನೆ. ದಿನಕ್ಕೆ ಸುಮಾರು 70 ಲೀ. ಹಾಲು ದೊರೆಯುತ್ತದೆ. ಹಸುಗಳಿಗೆ ತಿನ್ನಲು ಹಿಂಡಿ, ಒಣಹುಲ್ಲು ಕೊಡುತ್ತೇನೆೆ. ಹಸಿಹುಲ್ಲಿಗೆ ಪೇಟೆಯಲ್ಲಿ ಎಲ್ಲಿಗೆ ಹೋಗುವುದು? ತರಕಾರಿ ಅಂಗಡಿಯವರು ಎಸೆಯುವ ತರಕಾರಿಗಳನ್ನು ಹಾಕುತ್ತೇನೆ. ಖರ್ಚು ಕಳೆದು ತಿಂಗಳಿಗೆ 60,000 ರೂಪಾಯಿ ಸಿಗುತ್ತದೆ. ಹಾಲು ಮಾರಿ ಬಂದ ದುಡ್ಡಿನಲ್ಲಿಯೇ ಇನ್ನೊಂದು ಮನೆಯನ್ನೂ ಮಾಡಿದ್ದೇನೆ. ಅದನ್ನು ಬಾಡಿಗೆಗೆ ಕೊಟ್ಟಿದ್ದೇನೆ” ಅಂದ.
“”ಓಹ್! ಹೌದಾ? ನಾನು ನಷ್ಟದಲ್ಲಿಯೇ ಹಸು ಸಾಕುವುದು” ಅಂದೆ. “ನಮ್ಮ ಉತ್ತರಪ್ರದೇಶದ ಹಳ್ಳಿಯಲ್ಲಿಯೂ ಹಸು ಸಾಕುವುದು ನಷ್ಟವೇ. ನಾನು ಇಲ್ಲಿ ಹಾಲಿಗೆ ಲೀಟರಿಗೆ 65 ರೂಪಾಯಿಯಂತೆ ಮಾರುತ್ತೇನೆ. ಆದ್ದರಿಂದ ಲಾಭ. ದುಡ್ಡು ಎಷ್ಟಾದರೂ ಪರವಾಗಿಲ್ಲ, ದನದ ಹಾಲೇ ಬೇಕೆಂದು ಹುಡುಕಿಕೊಂಡು ಬರುವವರೂ ಇದ್ದಾರೆ. ಆದರೆ, ನಮ್ಮ ಹಳ್ಳಿಯಲ್ಲಿ ನಮಗೆ ಲೀಟರಿಗೆ 25 ರೂಪಾಯಿಯೂ ಸಿಗುವುದಿಲ್ಲ. ಕೆಲವೊಮ್ಮೆ ಹಾಲಿಗೆ ಗಿರಾಕಿಗಳೇ ಇರುವುದಿಲ್ಲ!” ಹೇಳಿದ. “”ಈ ವೃತ್ತಿ ನಿನಗೆ ಕಷ್ಟ ಅನಿಸುವುದಿಲ್ಲವೇ? ಹಾಲು ಕರೆಯಲು ಮಿಶನ್ ಇಟ್ಟುಕೊಳ್ಳಬಹುದಲ್ಲವೇ?” ಕೇಳಿದೆ. “”ನನಗೆ ಪಶುಸಂಗೋಪನೆಯಲ್ಲಿ ಅಪಾರ ಅನುಭವ ಇದೆ. ಯಾವ ಕಷ್ಟವೂ ಇಲ್ಲ. ಭಗವಂತ ನನಗೆ ಕೈ ಕೊಟ್ಟದ್ದು ಏತಕ್ಕೆ? ಹಾಲು ಹಿಂಡಲು ಅಲ್ಲವೇ?”ಎಂದು ನಕ್ಕ.
ಅವನ ಹೆಂಡತಿ, ಮಕ್ಕಳೂ ನಕ್ಕರು. ಅದು ಸಂತೃಪ್ತಿಯ ನಗುವೆಂದು ಅವರ ಮುಖಭಾವದಲ್ಲಿ ಗೊತ್ತಾಗುತ್ತಿತ್ತು. ಅಷ್ಟರಲ್ಲಿ ಹಾಲು ಪಡಕೊಳ್ಳುವವರು ಬರತೊಡಗಿದರು. ಕೆಲವರ ಕೈಯಲ್ಲಿ ಚಪಾತಿಯಿತ್ತು. ಅದನ್ನು ಅವರು ಹಸುಗಳ ಬಾಯಿಗೆ ಕೊಟ್ಟು ಬಾಲ ಮುಟ್ಟಿ ನಮಸ್ಕರಿಸುತ್ತಿದ್ದರು. ಇನ್ನು ಕೆಲವರು ಹಸುಗಳಿಗೆ ನಮಸ್ಕಾರ ಮಾಡಲೆಂದೇ ಬರುತ್ತಿದ್ದರು. ರಾಜ್ ಯಾದವ್ ಹಾಲನ್ನು ಪ್ಲಾಸ್ಟಿಕ್ ತೊಟ್ಟೆಗೆ ಹಾಕಿ ಅರ್ಧ ಲೀಟರ್, ಒಂದು ಲೀಟರ್, ಎರಡು ಲೀಟರ್ ಹೀಗೆ ತುಂಬಿಸಿ ಕೊಡಲು ಶುರುಮಾಡಿದ. “ಕ್ಷೀರದಾತ ಸುಖೀಭವ’ ನಾನು ಮನದಲ್ಲಿ ಹೇಳಿಕೊಂಡೆ.
ಮುಂಬೈಯಲ್ಲಿ ಹೀಗೆ ಉತ್ತರಪ್ರದೇಶದಿಂದ ಬಂದು ಹಸು, ಎಮ್ಮೆ ಸಾಕಿ ಬದುಕು ಕಟ್ಟಿಕೊಂಡವರು ಅಲ್ಲಿ-ಇಲ್ಲಿ ಕಾಣಸಿಗುತ್ತಾರೆ ಎಂದು ಅತ್ತೆ ಹೇಳಿದರು. ನಾನೂ ಈಗ ನನ್ನ ಹಸುಗಳನ್ನು ಹೊಡೆದುಕೊಂಡು ಪೇಟೆಗೆ ಹೋದರೆ ಹೇಗೆ ಎಂದು ಯೋಚಿಸುತ್ತಿದ್ದೇನೆ.
ಸಹನಾ ಕಾಂತಬೈಲು