ಕಲಘಟಗಿ: ಸನಾತನ ಕಾಲದಿಂದ ಈ ಕಾಲದವರೆಗೂ ನಮ್ಮ ದೇಶದ ಸಂಸ್ಕೃತಿ-ಪರಂಪರೆಯಲ್ಲಿ ಹೈನುಗಾರಿಕೆಗೆ ಹೆಚ್ಚು ಮಹತ್ವ ನೀಡುತ್ತ ಬಂದಿದ್ದು, ಅದನ್ನು ಬಳಸಿದ ರೈತರ ಆರೋಗ್ಯ ಮತ್ತು ಆರ್ಥಿಕ ಸಬಲತೆಗೆ ಸಹಕಾರಿಯಾಗಿದೆ ಎಂದು ಶಾಸಕ ಸಿ.ಎಂ.ನಿಂಬಣ್ಣವರ ನುಡಿದರು.
ತಾಲೂಕಿನ ದಾಸ್ತಿಕೊಪ್ಪ ಗ್ರಾಮದ ಹಾಲು ಉತ್ಪಾದಕರ ಸಹಕಾರಿ ಸಂಘದ ನೂತನ ಹಾಲು ಶಿಥಲೀಕರಣ ಕೇಂದ್ರ ಕಟ್ಟಡದ ಭೂಮಿಪೂಜೆ ನೆರವೇರಿಸಿ ಮಾತನಾಡಿದ ಅವರು, ಹೈನುಗಾರಿಕೆ ಮಾಡಲು ನಮ್ಮ ಗ್ರಾಮೀಣ ಮಹಿಳೆಯರು ಸಶಕ್ತರಾಗಿದ್ದು, ವೈಜ್ಞಾನಿಕವಾಗಿ ಇದನ್ನು ಉದ್ದಿಮೆಯನ್ನಾಗಿಸಿಕೊಂಡಲ್ಲಿ ಆರ್ಥಿಕ ಸಬಲೀಕರಣವಾಗಲಿದೆ ಎಂದರು.
ಒಕ್ಕೂಟದ ಅಧ್ಯಕ್ಷ ಶಂಕರ ಮುಗದ ಮಾತನಾಡಿ, ದಾಸ್ತಿಕೊಪ್ಪ ಗ್ರಾಮದ ಸಂಘಕ್ಕೆ 27ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಲಿರುವ ಒಟ್ಟು 3000 ಲೀಟರ್ ಸಾಮರ್ಥ್ಯದ ಹಾಲು ಶೀಥಲೀಕರಣ ಕೇಂದ್ರ ನೀಡಲಾಗಿದೆ. ಈ ಕೇಂದ್ರದ ಸನಿಹದ ಹಾಲು ಉತ್ಪಾದಕರ ಸಹಕಾರಿ ಸಂಘಗಳಲ್ಲಿ ಸಂಗ್ರಹಿಸಿದ ಹಾಲನ್ನು ಇಲ್ಲಿ ತಂಪು ಮಾಡಿ ಸಂಸ್ಕರಣೆ ನಂತರ ಹಾಲು ಒಕ್ಕೂಟಕ್ಕೆ ಕಳುಹಿಸಿಕೊಡಲಾಗುತ್ತದೆ. ಇದರಿಂದ ಹಾಲಿನ ಗುಣಮಟ್ಟ ಕಾಪಾಡುವುದರ ಜತೆಗೆ ಸಂಚಾರದ ವೆಚ್ಚವನ್ನೂ ಕಡಿತಗೊಳಿಸಬಹುದಾಗಿದೆ ಎಂದರು.
ಒಕ್ಕೂಟದ ನಿರ್ದೇಶಕಿ ಗೀತಾ ಮರಲಿಂಗಣ್ಣವರ ಮಾತನಾಡಿ, ತಾಲೂಕಿನಲ್ಲಿ ಇದು ನಾಲ್ಕನೇ ಬಿಎಂಸಿ ಕೇಂದ್ರವಾಗಿದ್ದು, ಸಹಕಾರಿ ಬಂಧುಗಳ ಸಹಕಾರದಿಂದ ತಾವು ನಿರ್ದೇಶಕಿಯಾದ ಮೇಲೆ ಸಂಘಗಳಿಗೆ ನೂತನವಾಗಿ ಆರು ಕಟ್ಟಡಗಳನ್ನು ನಿರ್ಮಿಸಲು ಅನುದಾನ ನೀಡಲಾಗಿದೆ ಎಂದರು.
ಹನುಮಂತಗೌಡ ತಳಬಾಗಿಲು ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕ ಡಾ|ಕೆ.ಎಂ.ಲೋಹಿತೇಶ್ವರ, ವ್ಯವಸ್ಥಾಪಕ ಡಾ|ವೀರೇಶ ತರಲಿ, ವಿಸ್ತರಣಾಧಿಕಾರಿ ಕಿರಣ ಪಾಟೀಲ, ಮಲ್ಲನಗೌಡ ಬಣಕಾರ, ಮೇಲ್ವಿಚಾರಕ ಮಲ್ಲೇಶಪ್ಪ, ಗ್ರಾಪಂ ಅಧ್ಯಕ್ಷೆ ಕಸ್ತೂರಿ ಬಡಿಗೇರ, ಚಂದ್ರಗೌಡ ಪಾಟೀಲ, ಶೇಕಪ್ಪ ಸವಣೂರ, ಗುರುಲಿಂಗಯ್ಯ ಹಿರೇಮಠ, ಶಿವಪ್ಪ ಹುಗ್ಗಿ, ಆಡಳಿತ ಮಂಡಳಿಯ ನಿಂಗಪ್ಪ ಹುಲ್ಲಂಬಿ, ಶೇಖಣ್ಣ ಜಂಗಳಪ್ಪಗೌಡ್ರ, ಶಿವಪುತ್ರಪ್ಪ ಹುಗ್ಗಿ, ಬಸವಣ್ಣೆವ್ವ ಹುಕ್ಕೇರಿ, ಬಸಲಿಂಗವ್ವ ನಿಚ್ಚಣಕಿ, ರತ್ನವ್ವ ಕ್ಯಾಮಪ್ಪನವರ, ಗದಿಗೆವ್ವ ತಲಬಾಗಿಲ, ಲಕ್ಷ್ಮವ್ವ ಬೂದಪ್ಪನವರ, ಸರಸ್ವತಿ ಕಬ್ಬೇರ, ತಾರಾಮತಿ ಬಡಿಗೇರ, ಶಂಕ್ರಮ್ಮ ಪಾಟೀಲ ಇದ್ದರು.