Advertisement
ಹಾಲು ಆರೋಗ್ಯಕ್ಕೆ ಅತ್ಯುತ್ತಮ ಎಂದು ಎಲ್ಲರಿಗೂ ತಿಳಿದಿರುವ ವಿಷಯ. ಹೀಗಾಗಿಯೇ ನಮ್ಮ ದಿನನಿತ್ಯದ ಆಹಾರ ಕ್ರಮದಲ್ಲಿ ಹಾಲು ಸೇರಿರುವುದು ಅತ್ಯವಶ್ಯಕ. ಹಾಲಿನಲ್ಲಿ ಸಾಕಷ್ಟು ಪೋಷಕಾಂಶಗಳಿದ್ದು ವಿವಿಧ ರೋಗಗಳಿಂದ ನಮ್ಮನ್ನು ದೂರವಿಡುತ್ತದೆ. ಹಾಲಿನಲ್ಲಿ ಕ್ಯಾಲಿಯಂ ವಿಟಮಿನ್, ಅ, ಆ, ಉ ಇತ್ಯಾದಿ ಪೋಷಕಾಂಶಗಳಿದ್ದು ನಿಯಮಿತ ಹಾಲಿನ ಸೇವನೆಯಿಂದ ಮೂಳೆ, ಹಲ್ಲುಗಳು ಗಟ್ಟಿಯಾಗಲು ಸಹಾಯ ಮಾಡುತ್ತದೆ. ತೂಕ ಇಳಿಕೆಗೂ ಹಾಲು ಸೇವನೆ ಸಹಕಾರಿ. ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಹಾಲು ಸೇವನೆ ಆರೋಗ್ಯಕರ. ಇವೆಲ್ಲದರ ಹಿನ್ನೆಲೆಯಲ್ಲಿ ಹಾಲಿನ ಮಹತ್ವವನ್ನು ಸಾರುವ ಉದ್ದೇಶದಿಂದ ಪ್ರತೀ ವರ್ಷ ಜೂನ್ 1ರಂದು “ವಿಶ್ವ ಹಾಲಿನ ದಿನ’ ವನ್ನು ಆಚರಿಸಲಾಗುತ್ತದೆ.
Related Articles
ಪ್ರಸ್ತುತ ದೇಶದ 27 ರಾಜ್ಯಗಳಲ್ಲಿ ಹೈನು ಮಹಾ ಮಂಡಲಗಳು, ಸರಿಸುಮಾರು 1,77,000ಕ್ಕಿಂತಲೂ ಹೆಚ್ಚು ಹಾಲು ಉತ್ಪಾದಕ ಸಂಘಗಳಿದ್ದು ಅಂದಾಜು 2 ಕೋಟಿಯಷ್ಟು ಹಾಲು ಉತ್ಪಾದಕರಿದ್ದಾರೆ.
Advertisement
ರಾಷ್ಟ್ರದಲ್ಲಿ 2ನೇ ಅತೀ ದೊಡ್ಡ ಹಾಲು ಒಕ್ಕೂಟವಾಗಿ ಕರ್ನಾಟಕ ಹಾಲು ಮಹಾಮಂಡಳ ಮೂಡಿಬಂದಿದ್ದು, ಅದರ ಆಶ್ರಯದಲ್ಲಿ 16 ಒಕ್ಕೂಟಗಳು ಕಾರ್ಯಾಚರಿಸುತ್ತಿದ್ದು, ಸರಿಸುಮಾರು 15,000 ಹಾ. ಉ. ಸಹಕಾರಿ ಸಂಘಗಳ ಮೂಲಕ 25.85 ಲಕ್ಷ ಉತ್ಪಾದಕ ಸದಸ್ಯರಿಂದ ಪ್ರತಿನಿತ್ಯ ಅಂದಾಜು 90 ಲಕ್ಷ ಲೀ. ಹಾಲು ಶೇಖರಣೆಗೊಂಡು 25 ಕೋಟಿ ರೂ. ಗಿಂತಲೂ ಹೆಚ್ಚಿನ ಹಣವನ್ನು ಪ್ರತಿನಿತ್ಯ ರೈತರಿಗೆ ಬಟವಾಡೆ ಮಾಡಲಾಗುತ್ತಿದೆ.
ಇತ್ತೀಚಿನ ವರ್ಷಗಳಲ್ಲಿ ಹಾಲು ಉತ್ಪಾದನೆಯ ವೆಚ್ಚ ಒಂದೇ ಸಮನೆ ಹೆಚ್ಚುತ್ತಿದೆ. ಆದರೆ ಹೈನುಗಾರರಿಗೆ ಶ್ರಮಕ್ಕೆ ತಕ್ಕ ಪ್ರತಿಫಲ ಲಭಿಸುತ್ತಿಲ್ಲ. ಪಶುಪಾಲನೆ ಈಗ ವೆಚ್ಚದಾಯಕವಾಗಿದ್ದು, ಕಷ್ಟಸಾಧ್ಯವಾಗಿ ಪರಿಣಮಿಸಿದೆ. ಹೈನುಗಾರರು ಪೂರೈಸುವ ಹಾಲಿಗೆ ಸೂಕ್ತ ಧಾರಣೆ ಲಭಿಸಿದಲ್ಲಿ ಮಾತ್ರವೇ ಅವರು ನೆಮ್ಮದಿಯ ಮತ್ತು ಸ್ವಾವಲಂಬನೆಯ ಬದುಕನ್ನು ಕಾಣಲು ಸಾಧ್ಯ. ರೈತರಿಂದ ಖರೀದಿಸುತ್ತಿರುವ ಹಾಲಿಗೆ ನೀಡಲಾಗುತ್ತಿರುವ ಬೆಲೆಯಲ್ಲಿ ಹೆಚ್ಚಳ ಮಾಡದೇ ಹೋದಲ್ಲಿ ಮುಂದಿನ 6 ತಿಂಗಳಿನಲ್ಲಿ ಹಾಲಿನ ಉತ್ಪಾದನೆ ಗಣನೀಯವಾಗಿ ಕುಸಿದು ಕ್ಷೀರಕ್ಷಾಮ ತಲೆದೋರುವ ಸಾಧ್ಯತೆ ಇದೆ. ಅಷ್ಟು ಮಾತ್ರವಲ್ಲದೆ ರೈತರು ಹೈನುಗಾರಿಕೆಯಿಂದ ಸಂಪೂರ್ಣವಾಗಿ ವಿಮುಖರಾಗುವ ಭೀತಿ ಇದೆ. ಹೀಗಾದದ್ದೇ ಆದಲ್ಲಿ ಕೃಷಿ ಕ್ಷೇತ್ರದ ಅದರಲ್ಲೂ ಮುಖ್ಯವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೃಷಿ, ಬೇಸಾಯ ಚಟುವಟಿಕೆಗಳ ಮೇಲೆ ನೇರ ಪರಿಣಾಮ ಬೀರಲಿದೆ. ಹೈನುಗಾರರ ಸಂಕಷ್ಟವನ್ನು ಸರಕಾರ ಇನ್ನಾದರೂ ಅರ್ಥೈಸಿಕೊಂಡು, ಸಮಸ್ಯೆಯ ಗಂಭೀರತೆಯನ್ನು ಅರಿತು ಬೆಲೆ ಹೆಚ್ಚಳದ ನಿರ್ಧಾರ ತೆಗೆದುಕೊಳ್ಳದೇ ಹೋದಲ್ಲಿ ಮುಂದೊಂದು ದಿನ “ಮಿಲ್ಕ್ ಮ್ಯಾನ್ ಆಫ್ ಇಂಡಿಯಾ” ಖ್ಯಾತಿಯ ವರ್ಗೀಸ್ ಕುರಿಯನ್ ದೇಶದಲ್ಲಿ “ಕ್ಷೀರ ಕ್ರಾಂತಿ’ಗೆ ಬರೆದ ಮುನ್ನುಡಿಗೆ ತಿಲಾಂಜಲಿ ನೀಡುವ ಸಂದರ್ಭ ಬಂದರೆ ಅಚ್ಚರಿ ಇಲ್ಲ.
ಕನ್ನಾರು ಕಮಲಾಕ್ಷ ಹೆಬ್ಟಾರ್