ಉಡುಪಿ : ಜಿಲ್ಲೆಯ ಕಾಪು ಹೋಬಳಿ ವ್ಯಾಪ್ತಿಯ ಅಡ್ವೆ ಎಂಬ ಪುಟ್ಟ ಹಳ್ಳಿಯಲ್ಲಿ ವೇದ ವಿದ್ವಾಂಸರೊಬ್ಬರು ತಮ್ಮ ಮನೆಯಲ್ಲೇ ಕಳೆದೆರಡು ವರ್ಷಗಳಿಂದ ಯಾವ ಪ್ರಚಾರವೂ ಇಲ್ಲದೇ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ ಮತ್ತು ದೇಶಕ್ಕೆ ಕ್ಷೇಮ ಸುಭಿಕ್ಷೆ ಸಮೃದ್ಧಿ ಶಾಂತಿಗಾಗಿ ಪ್ರಾರ್ಥಿಸಿ ಪ್ರತಿನಿತ್ಯ ಅತ್ಯಂತ ಶ್ರದ್ಧೆಯಿಂದ ಋಗ್ವೇದ ಸಂಹಿತಾ ಯಾಗವು ಶುಕ್ರವಾರ ಸಂಪನ್ನಗೊಂಡಿದೆ .
ವಿದ್ವಾನ್ ಅಡ್ವೆ ಲಕ್ಷ್ಮೀಶಾಚಾರ್ಯರು ಈ ಯಾಗದ ಕರ್ತೃವಾಗಿದ್ದು ಈಗಾಗಲೇ ಬಾರಿ ಲೋಕದ ಒಳಿತಿಗಾಗಿ ಒಂಭತ್ತು ಬಾರಿ ಋಕ್ ಸಂಹಿತಾಯಾಗವನ್ನು ನಡೆಸಿದ್ದು ಈ ಬಾರಿ ಹತ್ತನೇ ಸಲದ ಯಾಗವನ್ನು ಪೂರ್ಣಗೊಳಿಸಿದ್ದು ಅಪೂರ್ವ ಸಂಗತಿ .
ಉಡುಪಿ ಜಿಲ್ಲೆಯ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಅಡ್ವೆ ಗ್ರಾಮದ ನಿವಾಸಿಯಾಗಿರುವ ವಿದ್ವಾನ್ ಲಕ್ಷ್ಮೀಶ ಆಚಾರ್ಯರು ಈ ಭಾಗದ ಶ್ರೇಷ್ಠ ವೈದಿಕ ವಿದ್ವಾಂಸರಾಗಿದ್ದಾರೆ . ಶ್ರೀಯುತರು ಪ್ರಸ್ತುತ ದೇಶದಲ್ಲಿರುವ ತೀರಾ ಬೆರಳೆಣಿಕೆಯ ಅಗ್ನಿಹೋತ್ರಿಗಳಲ್ಲಿ ಒಬ್ಬರೂ ಆಗಿದ್ದು ಕಳೆದ ಅನೇಕ ವರ್ಷಗಳಿಂದ ತಮ್ಮ ಮನೆಯಲ್ಲಿ ಅಗ್ನಿಯನ್ನು ಪ್ರತಿಷ್ಠಾಪಿಸಿ ಒಂದು ದಿನವೂ ಬಿಡದೇ ಪ್ರತೀನಿತ್ಯ ಮೂರು ಹೊತ್ತು ಅಗ್ನಿಯ ಉಪಾಸನೆಯನ್ನು ಮಾಡುತ್ತಿರುವುದು ಈ ಕಾಲದಲ್ಲಿ ಅತ್ಯಂತ ಅಚ್ಚರಿಯ ಸಂಗತಿಯಾಗಿದೆ. ಈ ಆಚರಣೆ ಅತ್ಯಂತ ಕಷ್ಟಕರವಾಗಿದ್ದರೂ ಆಚಾರ್ಯರು ಅತ್ಯಂತ ಶ್ರದ್ಧೆಯಿಂದ ಇದನ್ನು ನಿರ್ವಹಿಸುತ್ತಿದ್ದಾರೆ.
ಸ್ಥಳೀಯ ಶ್ರೀ ಯೋಗದೀಪಿಕಾ ಗುರುಕುಲದಲ್ಲಿ ಪ್ರಾಚಾರ್ಯರಾಗಿ ಕರ್ತವ್ಯ ನಿರ್ವಹಿಸುತ್ತಾ ಅದರ ಜೊತೆಗೆ ಆಸುಪಾಸಿನಲ್ಲೇ ( ಅಗ್ನಿಯ ಉಪಾಸನೆಯ ಕಾರಣಕ್ಕೆ ದೂರ ಹೋಗುವಂತಿಲ್ಲ ) ಕೆಲವು ಕಡೆಗಳಲ್ಲಿ ಪ್ರವಚನ ಇತ್ಯಾದಿಗಳಿಂದ ಸೀಮಿತ ಆದಾಯವನ್ನು ಪಡೆಯುತ್ತಿದ್ದಾರೆ .ಆದರೆ ಈ ಆದಾಯದ ಬಹುಪಾಲನ್ನು ಲೋಕವಿಹಿತವಾದ ವೈದಿಕ ಕರ್ತವ್ಯಗಳಿಗಾಗಿ ವಿನಿಯೋಗಿಸುತ್ತಿರುವುದು ಅವರ ನಿಸ್ಪೃಹ ರಾಷ್ಟ್ರಭಕ್ತಿಗೆ ಸಾಕ್ಷಿಯಾಗಿದೆ .
ಇದೀಗ ಕಳೆದ ಕೊರೊನ ವಿಪತ್ತಿನ ಸಂದರ್ಭದಿಂದ ಆರಂಭಿಸಿ ಎರಡು ವರ್ಷಗಳಿಂದ ( ಒಂದು ದಿನವೂ ಬಿಡದೇ ) ನಿತ್ಯ ಅದ್ಭುತವೆನಿಸುವ ಹತ್ತನೇ ಬಾರಿಯ ಸಂಪೂರ್ಣ ಋಗ್ವೇದ ಸಂಹಿತಾ ಯಾಗವನ್ನು ಇಡೀ ದೇಶ ಸುಭಿಕ್ಷೆ -ಸಮೃದ್ಧಿ -ನೆಮ್ಮದಿ -ಶಾಂತಿಗಾಗಿ ಪ್ರಾರ್ಥಿಸಿ ಮೋದಿಯವರ ಹೆಸರು ಮತ್ತು ನಕ್ಷತ್ರದಲ್ಲಿ ಸಂಕಲ್ಪ ನೆರವೇರಿಸುತ್ತಿದ್ದರು .
ಶುಕ್ರವಾರ ಪರಮಪೂಜ್ಯ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಮತ್ತು ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶ ತೀರ್ಥ ಸ್ವಾಮೀಜಿ ಹಾಗೂ ಶಾಸಕರಾದ ಲಾಲಾಜಿ ಆರ್ ಮೆಂಡನ್ , ಜಿಲ್ಲಾ ಬಿಜೆಪಪಿ ಅಧ್ಯಕ್ಷ ಕೆ. ಸುರೇಶ್ ನಾಯಕ್ ಅವರುಗಳ ಉಪಸ್ಥಿತಿಯಲ್ಲಿ ಈ ಬೃಹತ್ ಯಾಗದ ಪೂರ್ಣಾಹುತಿ ನೆರವೇರಿತು . ಅನೇಕ ವೈದಿಕ ವಿದ್ವಾಂಸರು,ಗಣ್ಯರು ಉಪಸ್ಥಿತರಿದ್ದರು .