ಕುರುಗೋಡು: ಗ್ರಾಮಗಳಲ್ಲಿ ದಿನನಿತ್ಯ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಸಾರ್ವಜನಿಕರು, ವಿದ್ಯಾರ್ಥಿಗಳು, ವೃದ್ಧರು ತೊಂದರೆ ಒಳಗಾಗಿ ಜೆಸ್ಕಾಂ ಅಧಿಕಾರಿಗಳಿಗೆ ನಿತ್ಯ ಹಿಡಿಶಾಪ ಹಾಕುತ್ತಿದ್ದಾರೆ.
ಎಮ್ಮಿಗನೂರು ಗ್ರಾಮದ 33 ಕೆವಿ ವ್ಯಾಪ್ತಿಯ ಜನರದ್ದು ಇದು ದಿನನಿತ್ಯದ ಗೋಳು. ಕೆಲ ವಾರ್ಡ್ ಗಳಲ್ಲಿ ವಿದ್ಯುತ್ ತಂತಿಗಳು ಕೆಳಭಾಗದಲ್ಲಿ ಹಾದುಹೋಗಿದ್ದು, ವಿದ್ಯುತ್ ತಂತಿಗಳ ಮಧ್ಯೆ ಕಟ್ಟಿಗೆ ತುಂಡನ್ನು ಆಳವಡಿಸಲಾಗಿದೆ. ಮನೆ ಮೇಲ್ಭಾಗದಲ್ಲೂ ವಿದ್ಯುತ್ ತಂತಿಗಳು ಕೈಗೆಟುಕುವಂತಿದ್ದು, ಜೀವ ಕೈಯಲ್ಲಿ ಹಿಡಿದು ಮಹಡಿಗಳನ್ನು ಎತ್ತುವಂತಾಗಿದೆ.
ಕೆಲವೆಡೆ ವಿದ್ಯುತ್ ಪರಿವರ್ತಕಗಳ ಕೆಳಗೆ ವಿದ್ಯುತ್ ಸಂಪರ್ಕ ಕಲ್ಪಿಸುವ ಬಾಕ್ಸ್‌ಗಳನ್ನು ಅಳವಡಿಸಲಾಗಿದ್ದು, ಅವುಗಳ ಮುಚ್ಚಳಿಕೆಗಳು ಸುತ್ತಾಡುವಂತಾಗಿದೆ. ಗ್ರಾಮದ ಶತಮಾನೋತ್ಸವ ಶಾಲೆಯ ಎಸ್.ಎಚ್. 132 ರಸ್ತೆಯ ಬಳಿ ವಿದ್ಯುತ್ ಕೆಳಮಟ್ಟದಲ್ಲಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಅದನ್ನು ಬೇರೆಡೆ ವರ್ಗಾಯಿಸುವಂತೆ ಪಾಲಕರು ಒತ್ತಾಯಿಸಿದ್ದಾರೆ. ಈ ವಿದ್ಯುತ್ ಪರಿವರ್ತಕದ ಎರಡೂ ಬದಿಯಲ್ಲಿ ಸರಕಾರಿ, ಖಾಸಗಿ, ಅಂಗನವಾಡಿ ಶಾಲೆಗಳಿದ್ದು, ಸಾವಿರಕ್ಕೂ ಹೆಚ್ಚು ಮಕ್ಕಳು ನಿತ್ಯ ಇದರ ಬದಿಯಲ್ಲೇ ಓಡಾಡುತ್ತಿದ್ದು ಮೈಮರೆತರೆ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಶತಮಾನೋತ್ಸವ ಶಾಲೆಯ ಬಳಿ ವಿದ್ಯುತ್ ಸಂಪರ್ಕವುಳ್ಳ ಬಾಕ್ಸ್ ಕೈಗೆಟುಕುವಂತಿರುವುದು ದುರಂತವಾಗಿದೆ.
ಹಗಲಲ್ಲಿ ಬೆಳಗುವ ದೀಪಗಳು: ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಅಳವಡಿಸಿರುವ ಬೀದಿ ದೀಪಗಳು ಹಗಲು ಹೊತ್ತಿನಲ್ಲೂ ಉರಿಯುತ್ತಿದ್ದು, ಇದರಿಂದ ಅಪಾರ ಪ್ರಮಾಣದಲ್ಲಿ ವಿದ್ಯುತ್ ಪೋಲಾಗುತ್ತಿದೆ. ಈ ಬಗ್ಗೆ ಜೆಸ್ಕಾಂ ಅಧಿ ಕಾರಿಗಳಿಗೆ ಮನವಿ ಸಲ್ಲಿಸಿದರೂ ಪ್ರಯೋಜ ನವಾಗಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ. ಈಗಲಾದರೂ ಅಧಿಕಾರಿಗಳು ಎಚ್ಚೆತ್ತುಕೊಂಡು ಹಗಲು ಉರಿಯುವ ಬೀದಿ ದೀಪಗಳನ್ನು ನಿಲ್ಲಿಸಬೇಕು. ಕೈಗೆಟುವಂತಿರುವ ವಿದ್ಯುತ್ ಪರಿವರ್ತಗಳ ಬಾಕ್ಸ್‌ಗಳನ್ನು ಬೇರೆಡೆ ಸ್ಥಳಾಂತರಿಸಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ವಿದ್ಯುತ್ ಸಮಸ್ಯೆ ಕುರಿತು ಗ್ರಾಪಂ ಸಭೆಗಳಲ್ಲಿ ಮತ್ತು ಅಧಿಕಾರಿಗಳಿಗೆ ಲಿಖಿತ ರೂಪದಲ್ಲಿ ನೀಡಿ ಬಗೆಹರಿಸುವಂತೆ ತಿಳಿಸಲಾಗಿದೆ. ಇದರ ಬಗ್ಗೆ ಚರ್ಚೆ ಕೂಡ ಮಾಡಲಾಗಿದೆ. ಆದರೂ ಉಪಯೋಗವಾಗಿಲ್ಲ, ಪದೇ ಪದೇ ವಿದ್ಯುತ್ ಕಡಿತಗೊಳ್ಳುತ್ತಿದೆ. ಜೆಸ್ಕಾಂ ಅಧಿಕಾರಿಗಳ ಗಮನಕ್ಕೆ ತಂದರೂ ಕೂಡ ಪ್ರಯೋಜನವಾಗಿಲ್ಲ. ಈಗಲಾದರೂ ಇದರ ಬಗ್ಗೆ ಗಮನ ಹರಿಸಬೇಕು.
ಗ್ರಾಮಸ್ಥರು ಎಮ್ಮಿಗನೂರು
ವಿದ್ಯಾಭ್ಯಾಸಕ್ಕೆ ಸಂಬಂಧಪಟ್ಟ ಪಾಠ-ಪ್ರವಚನಗಳು ಸೇರಿದಂತೆ ಇತರೆ ಚಟುವಟಿಕೆ ಮನೆಯಲ್ಲೇ ಮಾಡಬೇಕಾದರೆ ತುಂಬಾ ಸಮಸ್ಯೆಯಾಗುತ್ತಿದೆ. ಆದ್ದರಿಂದ
ನಿಯಮಿತವಾಗಿ ವಿದ್ಯುತ್ ಪೂರೈಕೆ ಮಾಡಬೇಕು.
ಪವಿತ್ರ, ಜಡೆಮ್ಮ, ವಿದ್ಯಾರ್ಥಿನಿಯರು, ಎಮ್ಮಿಗನೂರು
*ಸುಧಾಕರ ಮಣ್ಣೂರು