Advertisement
ಹಿಂಸಾಚಾರ, ಗುಂಡಿನ ಭೋರ್ಗರೆತ, ಪ್ರಕ್ಷುಬ್ಧ ಸ್ಥಿತಿ, ಬೂದಿ ಮುಚ್ಚಿದ ಕೆಂಡದಂತ ವಾತಾವರಣ, ಘರ್ಷಣೆ ಸಂಭವಿಸಿದರೆ ಯಾವಾಗ ಅಂತ್ಯವಾಗುತ್ತದೆ ಎಂಬ ಆತಂಕ, ಇಲ್ಲಿರುವ ವಿವಾದಗಳಂತೂ ಇತ್ಯರ್ಥಪಡಿಸಲು ಬಹುಶಃ ಸಾಧ್ಯವೇ ಇಲ್ಲ ಎಂದೇ ಹೇಳಬಹುದು. ಇದು ಜಮ್ಮು ಮತ್ತು ಕಾಶ್ಮೀರದ ಪರಿಸ್ಥಿತಿ. ಇದೀಗ ಈ ರಾಜ್ಯದ ಆರ್ಥಿಕ ವ್ಯವಸ್ಥೆಗೆ ದಾಪುಗಾಲಿಡಲು ಮೈಲುಗಲ್ಲು ಎಂದೇ ಭಾವಿಸಲಾಗಿರುವ ಏಷ್ಯಾದಲ್ಲೇ ಅತಿ ಉದ್ದದ ಅತ್ಯಾಧುನಿಕ ಸುರಂಗ ಮಾರ್ಗ ನಿರ್ಮಾಣಗೊಂಡಿದೆ. ಈ ಯೋಜನೆ ಬೇರೆ ಯಾವುದೇ ರಾಜ್ಯದಲ್ಲಿ ಅನುಷ್ಠಾನಗೊಂಡಿದ್ದರೆ ಸಡಗರ ಸಂಭ್ರಮಕ್ಕೆ ಪಾರವೇ ಇರುತ್ತಿರಲಿಲ್ಲ. ಆದರೆ, ಕಾಶ್ಮೀರದಲ್ಲಿ ಈ ಸಂಭ್ರಮ ಕಾಣುತ್ತಿಲ್ಲ. ವಾಸ್ತವವಾಗಿ ಕಂಡರೂ ಅದನ್ನು ಮರೆಮಾಚಲು ಪಟ್ಟಭದ್ರ ಹಿತಾಸಕ್ತಿಗಳು ಕೆಲಸ ಮಾಡುತ್ತಿರುತ್ತವೆ. ಇಂತಹ ಅಭಿವೃದ್ಧಿಗಳು ರಾಜ್ಯಕ್ಕೆ ತುರ್ತಾಗಿ ಬೇಕಿದೆ, ಇವುಗಳಿಂದಲೇ ತಮ್ಮ ಅಭ್ಯುದಯ ಎಂದು ಇಲ್ಲಿನ ಜನತೆ ನಿರೀಕ್ಷೆ, ಆಶಾವಾದ ಇಟ್ಟುಕೊಂಡಿದ್ದರೆ ಅದಕ್ಕಿಂತ ‘ಮುಖ್ಯ’ವಾಗಿರುವುದೊಂದು ಬೇಕಿದೆ ಎಂಬುದಾಗಿ ದಿಕ್ಕು ತಪ್ಪಿಸುವ ಹುನ್ನಾರಗಳು ನಡೆಯುತ್ತಿರುತ್ತವೆ.
ಜಮ್ಮು- ಕಾಶ್ಮೀರದಲ್ಲಿ ಶ್ರೀನಗರ ಹಾಗೂ ಜಮ್ಮುವನ್ನು ಸಂಪರ್ಕಿಸುವ ಹೆದ್ದಾರಿ ಅವ್ಯವಸ್ಥೆಯಿಂದ ಕೂಡಿತ್ತು. ಇದು ಚಳಿಗಾಲದಲ್ಲಿ ಮತ್ತಷ್ಟು ಹದಗೆಟ್ಟು ಅಲ್ಲಲ್ಲಿ ಭೂಕುಸಿತ ಸಂಭವಿಸಿ ಈ ಹೆದ್ದಾರಿ ಸಂಚಾರವೇ ಸ್ಥಗಿತವಾಗುತ್ತಿತ್ತು. ಇದನ್ನು ನಿವಾರಿಸಲು ಚೆನಾನಿ – ಉಧಂಪುರ ಜಿಲ್ಲೆಯ ಚೆನಾನಿ – ನಶ್ರಿ ಮಧ್ಯೆ ಏಷ್ಯಾದಲ್ಲೇ ಉದ್ದವಾದ 10.89 ಕಿ.ಮೀ. ಅಂತರದ ಸುರಂಗ ಮಾರ್ಗವನ್ನು ಅಂತಾರಾಷ್ಟ್ರೀಯ ದರ್ಜೆ ಮಾದರಿಯಲ್ಲಿ ನಿರ್ಮಿಸಲಾಗಿದ್ದು, ಇದರಿಂದ ಚೆನಾನಿ – ನಶ್ರಿ ಸುರಂಗ ಮಾರ್ಗದಿಂದಾಗಿ 41 ಕಿ.ಮೀ. ಸುತ್ತಿ ಬಳಸಿ ಹೋಗುವುದು ತಪ್ಪುತ್ತದೆ. ಜೊತೆಗೆ 2 ಗಂಟೆ ಸಮಯ ಹಾಗೂ ಪ್ರತಿದಿನ 27 ಲಕ್ಷ ರೂ.ಮೌಲ್ಯದ ಇಂಧನ ಉಳಿತಾಯವಾಗುತ್ತದೆ. 2011ರಲ್ಲಿ ಸುಮಾರು 2,500 ಕೋಟಿ ರೂ.ವೆಚ್ಚದಲ್ಲಿ ಕೈಗೆತ್ತಿಕೊಂಡ ಈ ಯೋಜನೆ ಇದೀಗ ಪೂರ್ಣಗೊಂಡಿದ್ದು, ಇನ್ನು ಸಂಚಾರ ಸುಗಮವಾಗಲಿದೆ. ಈ ಸುರಂಗ ಮಾರ್ಗ ಲೋಕಾರ್ಪಣೆಯನ್ನು ವಿರೋಧಿಸಲು ಈ ಪ್ರತ್ಯೇಕತಾವಾದಿಗಳು ಬಂದ್‌ಗೆ ಕರೆ ನೀಡಿವೆ.
Related Articles
ಮೊದಲು ಕಾಶ್ಮೀರ ವಿವಾದ ಬಗೆಹರಿಸಿ, ಬಳಿಕ ಅಭಿವೃದ್ಧಿ ವಿಷಯಕ್ಕೆ ಬನ್ನಿ ಎಂದು ಪ್ರತ್ಯೇಕತಾವಾದಿಗಳು ಕ್ಯಾತೆ ತೆಗೆದಿದ್ದಾರೆ. ಕಾಶ್ಮೀರ ವಿವಾದ ಇತ್ಯರ್ಥ ಎಂದರೆ ಅವರಿಗೆ ‘ಅಜಾದಿ’ ಬೇಕಿದೆ ಎಂದರ್ಥ. ಹೀಗಾಗಿಯೇ ಅಭಿವೃದ್ಧಿಗಿಂತ ಇದು ಅವರಿಗೆ ‘ಮುಖ್ಯ’ವಾಗಿದೆ. ಇದಕ್ಕಾಗಿ ಕಾಶ್ಮೀರ ಕಣಿವೆಯಲ್ಲಿ ಮತ್ತೆ ಕಲ್ಲೆಸೆತ ಶುರುವಾಗಿದೆ. ಬಾಡಿಗೆ ಯುವಕರನ್ನು ನೇಮಿಸಿಕೊಂಡು, ಕೆಲ ಮುಗ್ಧ ಜನರನ್ನು ಓಲೈಕೆ ಮಾಡಿಕೊಂಡು ರಸ್ತೆಗಳಲ್ಲಿ ಕಲ್ಲು ಎಸೆಯಲು ಪ್ರೇರಣೆ ನೀಡಲಾಗುತ್ತಿದೆ. ಯುವಜನತೆಯನ್ನು ಗುರಿಯಾಗಿರಿಸಿಕೊಂಡು ಸಾಮಾಜಿಕ ಜಾಲತಾಣಗಳಾದ ಫೇಸ್‌ಬುಕ್, ವಾಟ್ಸಪ್‌ನಲ್ಲಿ ಪ್ರಚೋದನಾಕಾರಿ ಸಂದೇಶಗಳನ್ನು ರವಾನಿಸಲಾಗುತ್ತಿದೆ. ನೋಟು ನಿಷೇಧ ನಂತರ ಬಹುತೇಕ ನಿಂತು ಹೋಗಿದ್ದ ಕಲ್ಲೆಸೆತ ಮತ್ತೆ ಶುರುವಾಗಿದೆ. ಈ ಕೆಲಸಕ್ಕಾಗಿ ದಿನವೊಂದಕ್ಕೆ ತಲಾ 500 ರೂ., 1000 ರೂ. ನೀಡಲಾಗುತ್ತಿದೆ. ಪೊಲೀಸ್ ಪಡೆ ಮೇಲೆ ಕಲ್ಲೆಸೆಯುತ್ತಿರುವುದು ಸಾಮಾನ್ಯವಾಗಿದೆ.
Advertisement
ಅಭಿವೃದ್ಧಿ ವಿರೋಧಿಸುವುದೂ ಉಗ್ರವಾದಹಿಂಸಾಚಾರ ಮಾಡಿದರಷ್ಟೇ ಭಯೋತ್ಪಾದನೆ ಆಗುವುದಿಲ್ಲ. ಅಭಿವೃದ್ಧಿ ಯೋಜನೆಗಳನ್ನು ವಿರೋಧಿಸುವುದು, ಅದಕ್ಕೆ ಅಡ್ಡಗಾಲು ಹಾಕುವುದು, ಶಾಲಾ ಕಾಲೇಜುಗಳಿಗೆ ಬೆಂಕಿ ಹಚ್ಚುವುದು, ಸಾರ್ವಜನಿಕ ಆಸ್ತಿಪಾಸ್ತಿ ನಾಶ ಮಾಡುವುದು ಕೂಡ ಉಗ್ರವಾದದ ಮತ್ತೂಂದು ಸ್ವರೂಪವಾಗಿದೆ. ಇಂತಹ ಸಮಾಜಘಾತಕ ಕೃತ್ಯಗಳಿಗೆ ಯುವಕರನ್ನು ಬಳಸಿಕೊಳ್ಳುತ್ತಿರುವುದು ಹಿಂದಿನಿಂದಲೂ ನಡೆಯುತ್ತಿದೆ. ಇದಕ್ಕೆ ಕುಮ್ಮಕ್ಕು ನೀಡುವವರು ಇರುವವರೆಗೆ ಇಂತಹ ಕೃತ್ಯಗಳು ನಿಲ್ಲುವುದಿಲ್ಲ. ಕಾಶ್ಮೀರ ಕಣಿವೆಯಲ್ಲಿ ಪ್ರಬಲವಾಗಿ ಬೀಡು ಬಿಟ್ಟಿರುವ ಹಿಜ್ಬುಲ್ ಮುಜಹಿದ್ದೀನ್ ಉಗ್ರ ಬುರ್ಹಾನ್ ವಾನಿ ಪೊಲೀಸರ ಗುಂಡಿನಿಂದ ಸತ್ತು ಹೋದ ಬಳಿಕ ಹಿಂಸಾಚಾರ ಭುಗಿಲೆದ್ದಿತ್ತು. ಈ ವೇಳೆ ಪೊಲೀಸರು, ನಾಗರಿಕರು ಸಾವನ್ನಪ್ಪಿದ್ದಲ್ಲದೇ ಸಾಕಷ್ಟು ಶಾಲೆಗಳಿಗೆ ಬೆಂಕಿ ಹಚ್ಚಲಾಗಿತ್ತು. ಇದು ತಣ್ಣಗಾಗಲು ಆರು ತಿಂಗಳೇ ಬೇಕಾಗಿತ್ತು. ಜನತೆ ಬಯಸಿರುವುದೇನು?
ಕಾಶ್ಮೀರದಲ್ಲಿ ವಾಸ್ತವ ಬೇರೆಯದೇ ಇದೆ. ಘರ್ಷಣೆ, ಹಿಂಸಾಚಾರದಿಂದ ನೊಂದಿರುವ ಯುವಜನತೆಗೆ ಅಭಿವೃದ್ಧಿಯನ್ನು ಬಯಸುತ್ತಿದ್ದಾರೆ. ಅಭಿವೃದ್ಧಿಗಿಂತ ಮುಖ್ಯವಾದ ಅಜೆಂಡಗಳನ್ನು ಇಟ್ಟುಕೊಂಡು ಬರುವವರಿಂದ ಏನು ಸಿಗುತ್ತದೆ ಎಂಬುದು ಅವರಿಗೆ ಮನದಟ್ಟಾಗಿವೆ. ನಿರುದ್ಯೋಗ, ಮೂಲ ಸೌಲಭ್ಯಗಳ ಕೊರತೆಗಳಿಂದ ನಲುಗಿ ಹೋಗಿರುವ ಯುವಕರು, ಉದ್ಯೋಗ, ಶಿಕ್ಷಣವನ್ನು ಬಯಸುತ್ತಿದ್ದಾರೆ. ನೆಮ್ಮದಿ, ಶಾಂತಿಯ ಜೀವನಕ್ಕೆ ಹಾತೊರೆಯುತ್ತಿದ್ದಾರೆ. ಅವರಿಗೆ ಮೊದಲು ಬೇಕಾಗಿರುವುದು ಉದ್ಯೋಗವಾಗಿದೆ. ಈ ನಿರುದ್ಯೋಗವನ್ನೇ ಬಂಡವಾಳ ಮಾಡಿಕೊಂಡಿರುವ ಪಟ್ಟಭದ್ರರು ಧರ್ಮಾಂಧತೆಯನ್ನು ಬಿತ್ತಿ ತಮ್ಮ ವಿಧ್ವಂತಕ ಕೃತ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಇದೀಗ ಸುರಂಗ ಮಾರ್ಗ ವಿಷಯದಲ್ಲೂ ಇದೆ ಆಗಿದೆ. ಸ್ವಾತಂತ್ರ್ಯ ನಂತರ ರಾಜ್ಯದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಪಿಡಿಪಿ ಹಾಗೂ ನ್ಯಾಷನಲ್ ಕಾನ್ಫರೆನ್ಸ್ ನಾಯಕರು ಪ್ರತ್ಯೇಕತಾವಾದಿಗಳೊಂದಿಗೆ ಉತ್ತಮ ಸಂಬಂಧವನ್ನಿಟ್ಟುಕೊಂಡು ಬಂದಿವೆ. ಅದರಲ್ಲೂ ಪಿಡಿಪಿ ಒಂದು ಹೆಜ್ಜೆ ಮುಂದಿದೆ. ಕಾಶ್ಮೀರದ ಅಭಿವೃದ್ಧಿಗಿಂತ ಓಲೈಕೆ ರಾಜಕಾರಣ ಮಾಡಿದ್ದೇ ಹೆಚ್ಚು. ಇನ್ನು ಅಭಿವೃದ್ಧಿ ಮಂತ್ರವನ್ನು ಜಪಿಸುವ ಬಿಜೆಪಿ, ತನ್ನ ಅಜೆಂಡಾಗಳ ಮೂಲಕ ಒಂದು ಸಮುದಾಯದಲ್ಲಿ ಭೀತಿಯ ವಾತಾವರಣವನ್ನು ಮೂಡಿಸಿದೆ. ಜಮ್ಮು – ಕಾಶ್ಮೀರಕ್ಕೆ ವಿಶೇಷ ಅಧಿಕಾರ ನೀಡಲಾಗಿರುವ 370 ಕಲಂ ಬಗ್ಗೆ ಖಚಿತ ನಿಲುವನ್ನು ತಿಳಿಸಿಲ್ಲ. ಗೋಹತ್ಯೆ ನಿಷೇಧ ಕುರಿತು ಬಿಜೆಪಿ ನಿಲುವು ಏನೆಂಬುದು ಜನನಿತವಾಗಿದೆ. ಮುಸ್ಲಿಂ ಬಾಹುಳ್ಯದ ಕಾಶ್ಮೀರದಲ್ಲಿ ಗೋ ಹತ್ಯೆ ನಿಷೇಧ ಹಾಗೂ ಅದರ ಪರಿಣಾಮಗಳು ಯಾವಾಗಲೂ ಒಂದು ಬಗೆಯ ಆತಂಕ, ಭಯ ಇರುವುದು ಕಂಡು ಬರುತ್ತದೆ. ವಿಶೇಷ ಸಶಸ್ತ್ರ ಪಡೆ ಕಾಯ್ದೆಯನ್ನು ರದ್ದು ಪಡಿಸುವಂತೆ ಪ್ರತ್ಯೇಕತಾವಾದಿಗಳು ಹಾಗೂ ರಾಜಕೀಯ ಪಕ್ಷಗಳು ಒತ್ತಾಯಿಸುತ್ತಲೇ ಬಂದಿವೆ. ಆದರೆ, ಕಾಶ್ಮೀರದಲ್ಲಿ ಗಲಭೆ, ಹಿಂಸಾಚಾರ ಸಂಭವಿಸಿದಾಗ ಇಲ್ಲಿನ ಜನರು, ತಮ್ಮ ರಕ್ಷಣೆಗೆ ಮೊದಲು ನಂಬುವುದು ಭದ್ರತಾ ಸಿಬ್ಬಂದಿಯನ್ನು. ಅಷ್ಟರಮಟ್ಟಿಗೆ ಇಲ್ಲಿನ ಸೇನಾ ಪಡೆಗಳು ವಿಶ್ವಾಸಾರ್ಹವಾಗಿವೆ. ಇಲ್ಲಿನ ಯೋಧರ ಜಾತ್ಯತೀತ ನಿಲುವು ಪ್ರಶ್ನಾತೀತವಾಗಿದೆ. ಜಮ್ಮು ಕಾಶ್ಮೀರವು ವಿಶ್ವದಲ್ಲೇ ಅತಿ ಹೆಚ್ಚು ಸೇನಾ ಸಿಬ್ಬಂದಿ ಹೊಂದಿರುವು ಭೂಭಾಗವಾಗಿದೆ. ಇಲ್ಲಿನ ತಲಾ 10 – 12 ಮಂದಿಗೆ ಒಬ್ಬರಂತೆ ಸಿಬ್ಬಂದಿ ನಿಯೋಜಿಸಲಾಗಿದೆ. ಸೇನಾಪಡೆಗೆ ನೇಮಕಗೊಳ್ಳಲು ಸೇನಾ ರ್ಯಾಲಿಗಳಲ್ಲಿ ಕಾಶ್ಮೀರದ ಸಹಸ್ರಾರು ಯುವಕರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಇದನ್ನು ನೋಡಿದರೆ ಯುವಕರಿಗೆ ಸೇನೆಯ ಮೇಲೆ ಯಾವುದೇ ದ್ವೇಷವಿಲ್ಲ ಎಂಬುದು ತಿಳಿಯುತ್ತದೆ. ವಿವಾದ, ಘರ್ಷಣೆಗಳನ್ನು ಜೀವಂತವಾಗಿಟ್ಟುಕೊಂಡಷ್ಟು ತಮ್ಮ ಪ್ರತಿಷ್ಠೆ, ರಾಜಕೀಯ ಮಹತ್ವಾಕಾಂಕ್ಷೆ, ಅಧಿಕಾರ, ಮೂಲಭೂತವಾದಿ ಸಿದ್ಧಾಂತವನ್ನು ಜಾರಿಗೊಳಿಸುವ ಬಯಕೆ ಇಟ್ಟುಕೊಂಡಿರುವ ರಾಜಕೀಯ ಪಕ್ಷಗಳು ಹಾಗೂ ಪ್ರತ್ಯೇಕತಾವಾದಿಗಳ ಹಠಮಾರಿತನ ಇಷ್ಟಕ್ಕೆಲ್ಲ ಕಾರಣವಾಗಿದೆ. ಈ ಪ್ರತ್ಯೇಕತಾವಾದಿಗಳಿಗೆ ಭಾರತದ ಸೌಲಭ್ಯ ಬೇಕಿದೆ. ವಿವಿಐಪಿ ಸೌಲಭ್ಯ ಪಡೆದುಕೊಳ್ಳುತ್ತಿದ್ದಾರೆ. ಇವರಿಗೆ ಪಾಸ್‌ಪೋರ್ಟ್ ಬೇಕಾದಾಗ ಭಾರತ ಎಂಬುದಾಗಿ ನಮೂದಿಸುತ್ತಾರೆ. ಆದರೆ, ತಾನು ಭಾರತೀಯ ಎಂದು ಹೇಳಿಕೊಳ್ಳಲು ಇಷ್ಟವಿಲ್ಲ ಎಂಬುದು ಈ ಮೂಲಕ ತೋರುತ್ತದೆ. ಜಮ್ಮು ಕಾಶ್ಮೀರದ ಬಹುತೇಕ ಮಂದಿಗೆ ಭಾರತವೇ ತಮಗೆ ಸುರಕ್ಷಿತ ಎಂದು ನಂಬಿದ್ದಾರೆ. ಇದಕ್ಕಾಗಿ ಅವರು ಅಭಿವೃದ್ಧಿಗಾಗಿ ಹಾತೊರೆಯುತ್ತಿದ್ದಾರೆ. ಇಲ್ಲಿದ್ದರೆ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಉದ್ಯೋಗ ದೊರೆಯುತ್ತದೆ ಎಂಬ ಆಶಾಭಾವನೆ ಹೊಂದಿದ್ದಾರೆ. ಆದರೆ, ಇವರನ್ನು ದಾರಿ ತಪ್ಪಿಸುವ ಹುನ್ನಾರಗಳು ಹಿಂದಿನಿಂದಲೂ ನಡೆದುಕೊಂಡು ಬಂದಿದೆ. – ಎಂ.ಆರ್.ನಿರಂಜನ್