Advertisement
ಈಗ ಇಂಗ್ಲೆಂಡಿನಲ್ಲಿ ಎಲ್ಲೆಡೆ ಡ್ಯಾಫೋಡಿಲ್‌ಗಳು ಅರಳುತ್ತಿವೆ. ಹೊರಗಡೆ ತೋಟಗಳಲ್ಲಿ ಮತ್ತು ಸೂಪರ್ ಮಾರ್ಕೆಟ್‌ಗಳಲ್ಲಿ ಕಾಣಸಿಗುತ್ತವೆ. ನಮ್ಮನೆ ಅಲ್ಲಿದೆ, ಇಲ್ಲಿ ಬಂದೆ ಸುಮ್ಮನೆ ಅಂತ ಅನ್ನುತ್ತಲೇ ಡ್ಯಾಫೋಡಿಲ್ ಖ್ಯಾತಿಯ ಆಂಗ್ಲ ಕವಿ ವಿಲಿಯಮ್ ವರ್ಡ್ಸ್‌ವರ್ಥ್ನ ನಾಡಿಗೆ ನಾನು ಬಂದು ನೆಲೆಸಿ ಹೆಚ್ಚು ಕಡಿಮೆ ಐದು ದಶಕಗಳೇ ಆಗಿವೆ. ಆದರೂ ಪ್ರತಿವರ್ಷ ಇಲ್ಲಿಯ ವಸಂತಾಗಮನದ ಸೂಚನೆಯಾದ ಆ ಹಳದಿ ಹೂಗಳನ್ನು ನೋಡಿದಾಗೆಲ್ಲ ನಾನು ಮೊದಲ ಬಾರಿ ಅವುಗಳನ್ನು ಲೇಕ್ ಡಿಸ್ಟ್ರಿಕ್ಟ್ದಲ್ಲಿ ಕಂಡ ದೃಶ್ಯವನ್ನು ಮರೆಯುಲಾಗುತ್ತಿಲ್ಲ.
Related Articles
Advertisement
ನೀರಂಚಿನಲ್ಲಿ ಸಾಲು ಮರಗಳು, ಅವುಗಳಡಿ ಬಂಗಾರದ ಬಣ್ಣದ ಹೂಗಿಡಗಳ ಗುಂಪೇ ರಾರಾಜಿಸಿತ್ತು. ನಾನು ಹೋದಾಗಲೆಲ್ಲ ಲೇಕ್ ಡಿಸ್ಟ್ರಿಕ್ಟ್‌ನಲ್ಲಿ ಮೋಡ, ಗಾಳಿ, ತಂಪು ಹವೆ! ಅದೇ ವಾತಾವರಣ 1802ರ ಎಪ್ರಿಲ್ 15 ರಲ್ಲಿಯೂ ಇತ್ತೆಂದು ವಿಲ್ಲಿಯಮ್‌ನ ತಂಗಿ ಡೋರಥಿ ವರ್ಡ್ಸ್‌ವರ್ಥಳ ದಿನಚರಿ ಪುಟಗಳಲ್ಲಿ ದಾಖಲಾಗಿದೆ.
ಮಂಜು ಮುಸುಕಿದ ಮುಂಜಾನೆ ಗಾಳಿ ಉಸಿರನ್ನು ಕಟ್ಟಿದೆ… ಅವಳ ವರ್ಣನೆ: ಅಲ್ಲಿ ಪ್ರಿಮ್ ರೋಸ್, ವಾಯೋಲೆಟ್ ಅಲ್ಲದೆ ಹಳದಿ ಕ್ರೋಫುಟ್ ಹೂಗಳೂ ಕಂಡವು. ಗೌಬಾರೋ ಪಾರ್ಕ್‌ನೊಳಗೆ ಹೋದಾಗ ಡ್ಯಾಫೋಡಿಲ್‌ಗಳು ಕಣ್ಸೆಳೆದವು. ಕೆರೆಯ ದಂಡೆಗುಂಟದ ಪಾಚಿ ಮೆತ್ತಿದ ಕಲ್ಲುಗಳ ಮಧ್ಯೆ ಗೋಚರಿಸಿದ ಡ್ಯಾಫೋಡಿಲ್‌ಗಳಷ್ಟು ಅಂದದ ಹೂಗಳನ್ನೆಂದೂ ನಾನು ಕಂಡಿರಲಿಲ್ಲ. ಕೆಲವು ದಣಿದು ಕಲ್ಲನ್ನೇ ದಿಂಬಾಗಿ ಮಾಡಿಕೊಂಡು ತಲೆಯಿಟ್ಟಿದ್ದರೆ, ಉಳಿದವು ಕುಣಿಯುತ್ತ ಬೀಸಿ ಬಂದ ಮಾರುತದೊಡನೆ ನಕ್ಕು ನಲಿದಾಡುತ್ತಿದ್ದವು. ಸ್ವಲ್ಪ ಸಮಯದ ಅನಂತರ ಮಳೆ ಬಂತು. ಎರಡು ವರ್ಷಗಳ ಅನಂತರ ಈ ವರ್ಣನೆಯ ಸ್ಫೂರ್ತಿಯಿಂದಲೇ ವಿಲಿಯಮ್ ತನ್ನ ಸುಪ್ರಸಿದ್ಧ ಕವನ ಡ್ಯಾಫೋಡಿಲ್ಸ… ರಚಿಸಿದ ಎನ್ನುವದು ಈಗ ಸರ್ವವಿಧಿತ. 1815ರಲ್ಲಿ ಪ್ರಕಟವಾದ ಅದರ ಎರಡನೇ ಆವೃತ್ತಿಯೇ ಇಂದು ಜಗತ್ತಿನಾದ್ಯಂತ ಓದಲ್ಪಡುತ್ತಿದೆ. ಬ್ರಿಟನ್‌ನ ಅತ್ಯಂತ ಜನಪ್ರಿಯ ಕವನಗಳ ಸಾಲಿನಲ್ಲಿ ಅದು ಐದನೆಯದು..
ಡ್ಯಾಫೋಡಿಲ್ ಬ್ರಾಂಡ್ :
ನೆಲನೈದಿಲೆ, ಮಂಜಳಹೂ ಎಂದೂ ಕರೆಯಲ್ಪಡುವ ಈ ಹೂ ಉಷ್ಣ ವಲಯದಲ್ಲಿ ನೈಸರ್ಗಿಕವಾಗಿ ಬೆಳೆಯುವುದಿಲ್ಲವಾದರೂ ಇಂದು ಅದು ಒಂದು ಜಾಗತಿಕ ಬ್ರಾಂಡ್. ಅದನ್ನು ನರ್ಗಿಸ್ ಎಂದೂ ಕರೆಯುವುದುಂಟು. ವರ್ಡ್ಸ್ ವರ್ಥ್ ಕವಿ ಕಂಡ ಡ್ಯಾಫೋಡಿಲ್ Narcissus pseudonarcissus ನ ತಳಿ. ಅದಕ್ಕೆ ಹಳದಿ ಪಕಳೆಗಳ ಮಧ್ಯೆ ಉದ್ದನೆಯ ಹಳದಿ ತುತ್ತೂರಿಯುಂಟು. ಅದಕ್ಕೇ ಆತ ” A host, of golden daffodils ‘ಎಂದು ಬರೆದ. ಕರ್ನಾಟಕದಲ್ಲಿ ಎಷ್ಟೋ ಆಂಗ್ಲ ಮಾಧ್ಯಮದ ವಿದ್ಯಾಸಂಸ್ಥೆಗಳೂ ಆ ಹೆಸರನ್ನಿಟ್ಟುಕೊಂಡಿವೆ. ಅಮೆರಿಕ, ನ್ಯೂಜಿಲ್ಯಾಂಡ್, ಕೆನಡ ದೇಶಗಳ ಕ್ಯಾನ್ಸರ್ ಸೊಸೈಟಿಗಳು ಅದನ್ನು ತಮ್ಮ ಚಿಹ್ನೆಯಾಗಿ ಉಪಯೋಗಿಸಿಕೊಂಡಿವೆ.
ವಿಲಿಯಮ್ ವರ್ಡ್ಸ್ ವರ್ಥ್ ಬರೆದ ಕವಿತೆಯೇನೋ ಜನಪ್ರಿಯವಾಗಿದೆ. ಆದರೆ ಕವಿಯ ಪ್ರೀತಿಯ ಹೂ ಅದು ಆಗಿರಲಿಲ್ಲ. ಆತ ಮೆಚ್ಚಿದ್ದು buttercup ಜಾತಿಯ lesser celandine (Ficaria verna) ಹೂ. ಅವನು ಅದರ ಮೇಲೆ ಮೂರು ಕವನಗಳನ್ನು ಬರೆದಿದ್ದನಾದರೂ (There’s a flower that shall be mine, ’tis the little celandine)
ಅವನ ಕೀರ್ತಿ ಡ್ಯಾಫೋಡಿಲ್ಲಿನಿಂದಲೇ ಅಥವಾ ಆ ಹೂವಿನ ಪ್ರಸಿದ್ಧಿ ಅವನ ಕವಿತೆಯಿಂದಲೇ ಎನ್ನ ಬಹುದು! ಡ್ಯಾಫೋಡಿಲ್‌ಗಳಲ್ಲಿ 13,000 ಪ್ರಭೇದಗಳಿವೆ. ಆದರೂ ಅವುಗಳಲ್ಲಿ 12ರಷ್ಟು ಪ್ರಕಾರಗಳನ್ನು ವಿಂಗಡಿಸಬಹುದು. 19ನೇ ಶತಮಾನದಲ್ಲಿ ಪ್ರಾಂಭವಾದ “ಕಟ್ ಫ್ಲಾವರ್ ವ್ಯಾಪಾರ ಈಗಿನ ಕಾಲದಲ್ಲಿ ದೊಡ್ಡ ಉದ್ಯಮ. ಯುಕೆಯಲ್ಲಿ 26,000 ಡ್ಯಾಫೋಡಿಲ್ ಕೃಷಿಕರಿದ್ದಾರೆ, ಮುಖ್ಯವಾಗಿ ದಕ್ಷಿಣ ಪಶ್ಚಿಮದ ಕಾರ್ನ್ ವಾಲ್ ಪ್ರಾಂತದಲ್ಲಿ. ಉತ್ತರದ ನಾಡಿನಲ್ಲಿ ಚಳಿಯಿಂದಾಗಿ ತಡವಾಗಿ ಹೂ ಬಿಡುತ್ತವೆಯಾದ್ದರಿಂದ ಕಟಾವಿನ ಕಾಲ ಎಪ್ರಿಲ…- ಮೇವರೆಗೆ ಬೆಳೆಸಲು ಅನುಕೂಲವಾಗಲು ಡ್ಯಾಫೋಡಿಲ್ ಫಾರ್ಮ್
ಗಳು ಉತ್ತರದ ತಂಪು ಪ್ರದೇಶವಾದ ಸ್ಕಾಟ್ಲಂಡ್‌ವರೆಗೆ ಹಬ್ಬಿವೆ. ಜಗತ್ತಿನ ಶೇ.90ರಷ್ಟು ಬೇಡಿಕೆಯನ್ನು ಯುಕೆ ಪೂರೈಸುತ್ತದೆ. ಉದ್ದನೆಯ ದೇಟಿನೊಂದಿಗೆ ಮೊಗ್ಗುಗಳನ್ನು ಕತ್ತರಿಸಿ 1- 2 ಕೆಸಿ ತಾಪಮಾನದಲ್ಲಿಟ್ಟು ಯೂರೋಪ್ ಮತ್ತು ಅಮೆರಿಕ ಮಾರುಕಟ್ಟೆಗಳಿಗೆ ರವಾನಿಸಲಾಗುತ್ತದೆ.
ಈಗ ಆರಂಭವಾಗಿರುವ ಡ್ಯಾಫೋಡಿಲ್ ಸೀಸನ್ ನಲ್ಲಿ “ಡ್ಯಾಫೋಡಿಲ್ ವಾಕ’ ಎಂದೇ ಪ್ರಸಿದ್ಧವಾಗಿರುವ ಸ್ಥಳಗಳಿಗೆ ಪ್ರವಾಸಿಗರು ಭೇಟಿ ಕೊಟ್ಟು ನಿಸರ್ಗದಲ್ಲಿ ಅವುಗಳು ಕಂಗೊಳಿಸುವ ತೋಟಗಳನ್ನು ನೋಡಲು ಕಂಬ್ರಿಯ (ಅಲ್ಸ್ ವಾಟರ್), ಫಾರ್ನ್ಹಲೆ (ಯಾಕ್ ಶೈರರ್), ಗ್ಲಾಸ್ಟರ್ ಶೈರರ್, ಬ್ರಾಡೀ ಕಾಸಲ್ (ಸ್ಕಾಟ್ಲ್ಯಾಂಡ್‌ನ ಮೋರೇ) ಮುಂತಾದ ಕಡೆಗಳಿಗೆ ಹೋಗುತ್ತಾರೆ.
-ಡಾ| ಶ್ರೀವತ್ಸ ದೇಸಾಯಿ, ಇಂಗ್ಲೆಂಡ್