Advertisement

ಕಾಲೇಜ್‌ ಗೇಟಲ್ಲಿ ಅಪ್ಪ-ಮಗನ ಜುಗಲ್‌ಬಂದಿ

06:49 PM Nov 10, 2017 | |

“ನನಗೆ ತಲೆಗೆ ವಿದ್ಯೆ ಹತ್ತೋದಿಲ್ಲ. ಓದೋದು ಎಷ್ಟು ಕಷ್ಟ ಎಂದು ನಿಮಗೆ ಗೊತ್ತಾ, ಬಾಯಲ್ಲಿ ಹೇಳಿದಷ್ಟು ಸುಲಭವಲ್ಲ. ನಾನು ಕಾಲೇಜಿಗೆ ಹೋಗಲ್ಲ. ತಾಕತ್ತಿದ್ದರೆ ನೀವು ಕಾಲೇಜಿಗೆ ಹೋಗಿ, ಪಾಸಾಸ್‌ ಆಗಿ ನೋಡೋಣ …’  ಮಗ ಸಾಹೇಬನಾಗುತ್ತೇನೆ, ಮಗ ದೊಡ್ಡ ಆಫೀಸರ್‌ ಆಗುತ್ತಾನೆಂದು ಕನಸು ಕಂಡು ಬಾಲ್ಯದಿಂದ ಮುದ್ದಾಗಿ ಸಾಕಿದ ಮಗ ಇಡೀ ವಠಾರದ ಎದುರು ಅಪ್ಪನಿಗೆ ಈ ರೀತಿ ಸವಾಲು ಹಾಕುತ್ತಾನೆ.

Advertisement

ಅಪ್ಪನ ಹೃದಯ ಚೂರಾಗುತ್ತದೆ. “ಕನಸೇ ನನ್ನ ಕೂಸು, ಕೂಸೇ ನನ್ನ ಕನಸು’ ಎಂದುಕೊಂಡಿದ್ದ ಅಪ್ಪ ಮಗನ ಸವಾಲನ್ನು ಸ್ವೀಕರಿಸುತ್ತಾನೆ. ಡ್ನೂಟಿ ಎಕ್ಸ್‌ಚೇಂಜ್‌ ಆಗುತ್ತದೆ. ಕಾಲೇಜಿಗೆ ಹೋಗಿ ಪಾಸಾಗುವ ಜವಾಬ್ದಾರಿ ಅಪ್ಪನಿಗಾದರೆ, ಮನೆ ನಡೆಸಿ, ಅಪ್ಪನನ್ನು ಕಾಲೇಜು ಓದಿಸುವ ಜವಾಬ್ದಾರಿ ಮಗನದ್ದು. ಈ ಜವಾಬ್ದಾರಿಯನ್ನು ಯಾರು ಸರಿಯಾಗಿ ನಿಭಾಹಿಸುತ್ತಾರೆಂಬ ಕುತೂಹಲವಿದ್ದರೆ ನೀವು “ಕಾಲೇಜ್‌ ಕುಮಾರ್‌’ ನೋಡಿ. 

ನಿಮಗೆ ಕಾಲೇಜ್‌ ಕುಮಾರ್‌ ಚಿತ್ರ ಇಷ್ಟವಾಗೋದೇ ಅದರ ಕಾನ್ಸೆಪ್ಟ್ನಿಂದ. ಪರಸ್ಪರ ತಮ್ಮ ತಮ್ಮ ಜವಾಬ್ದಾರಿ ಹಸ್ತಾಂತರಿಸಿಕೊಳ್ಳುವ ಮೂಲಕ ಹೊಸ ಜರ್ನಿಗೆ ಒಡ್ಡಿಕೊಳ್ಳುವ ಅಪ್ಪ-ಮಗನ ಜುಗಲ್‌ಬಂಧಿಯನ್ನು ನೋಡೋದೇ ಒಂದು ಮಜಾ. ಆ ಮಟ್ಟಿಗೆ ನಿರ್ದೇಶಕ ಸಂತು ಒಂದು ನೀಟಾದ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ನಿರ್ದೇಶಕ ಸಂತು ವಯಸ್ಸಿಗೆ ತುಂಬಾ ಮೆಚುರ್ಡ್ ಕಥೆ ಕೂಡಾ.

“ಕಾಲೇಜ್‌ಕುಮಾರ್‌’ ಟೈಟಲ್‌ ಕೇಳಿದಾಗ ನಿಮಗೆ ಇದೊಂದು ಕಾಲೇಜ್‌ ಲವ್‌ಸ್ಟೋರಿ, ಅದೇ ಲವ್‌, ಫ್ಯಾಮಿಲಿ ಡ್ರಾಮಾ ಎಂದು ನೀವು ಭಾವಿಸಬಹುದು. ಆದರೆ, ಸಂತು ಮಾತ್ರ “ಕಾಲೇಜ್‌ಕುಮಾರ್‌’ನಲ್ಲಿ ಒಂದು ಸೆಂಟಿಮೆಂಟ್‌ ಜೊತೆಗೆ ಸಂದೇಶಾತ್ಮಕ ಕಥೆಯನ್ನು ಹೇಳಿದ್ದಾರೆ. ಇಲ್ಲಿ ಮಕ್ಕಳ ಮೇಲೆ ತಮ್ಮ ಕನಸುಗಳನ್ನು ಬಲವಂತವಾಗಿ ಹೇರುವ ತಂದೆ-ತಾಯಂದಿರ ಕಥೆ ಇದೆ. ಅಪ್ಪನ ಕನಸನ್ನು ನುಚ್ಚು ನೂರು ಮಾಡಿ ದಾರಿ ತಪ್ಪಿದ ಮಗ ರಾದ್ಧಾಂತವಿದೆ.

ಓದಿಗೆ ವಯಸ್ಸು ಅಡ್ಡಿ ಬರೋದಿಲ್ಲ ಎಂಬ ಸಂದೇಶವಿದೆ. ಕೃಷಿಯನ್ನು ನಂಬಿದರೆ ಯಾವತ್ತೂ ಕೈ ಕೊಡೋದಿಲ್ಲ ಹಾಗೂ ರೈತರು ಕೂಡಾ ಮಾರುಕಟ್ಟೆ ವಿಷಯದಲ್ಲಿ ಅಪ್‌ಡೇಟ್‌ ಆಗಬೇಕೆಂಬ ಅಂಶವೂ ಇದೆ. ಇಷ್ಟು ಅಂಶಗಳನ್ನು “ಕಾಲೇಜ್‌ ಕುಮಾರ್‌’ ಎಂಬ ಟೈಟಲ್‌ನಡಿ ಕಟ್ಟಿಕೊಡಲಾಗಿದೆ. ಇಷ್ಟೆಲ್ಲಾ ಅಂಶಗಳು ಒಂದೇ ಸಿನಿಮಾದಲ್ಲಿದ್ದರೂ ಎಲ್ಲೂ ಭೋದನೆಯಂತೆ ಅನಿಸೋದಿಲ್ಲ ಮತ್ತು ಅತಿಯಾಗಿ ಯಾವ ಅಂಶವನ್ನು ಎಳೆದಾಡಿಲ್ಲ.

Advertisement

ಕಥೆಯ ಜೊತೆ ಜೊತೆಗೆ ಪಾಸಿಂಗ್‌ ಶಾಟ್‌ನಲ್ಲಿ ಈ ಅಂಶಗಳು ಬಂದು ಹೋದರೂ ಅದರದ್ದೇ ಆದ ಮಹತ್ವ ಮಾತ್ರ ಪಡೆದುಕೊಂಡಿದೆ. ಚಿತ್ರದಲ್ಲಿ ಸೆಂಟಿಮೆಂಟ್‌, ಕಾಮಿಡಿ, ಲವ್‌ ಎಲ್ಲವೂ ಇದೆ. ಕೆಲವೊಮ್ಮೆ ನಿರೂಪಣೆ ನಿಧಾನಗತಿಯಲ್ಲಿ ಸಾಗಿದಂತೆ ಅನಿಸುತ್ತದೆ. ಜೊತೆಗೆ ಕಾಲೇಜಿನ ಕೆಲವು ಆರಂಭದ ದೃಶ್ಯಗಳಿಗೆ ಕತ್ತರಿ ಹಾಕಿದರೆ ಚಿತ್ರ ಮತ್ತಷ್ಟು ವೇಗ ಪಡೆದುಕೊಳ್ಳುತ್ತಿತ್ತು.

ಅದು ಬಿಟ್ಟರೆ “ಕಾಲೇಜ್‌ ಕುಮಾರ್‌’ ಒಂದು ನೀಟಾದ ಫ್ಯಾಮಿಲಿ ಎಂಟರ್‌ಟೈನರ್‌. ನಿರ್ದೇಶಕ ಸಂತು ಈ ಬಾರಿ ಕಥೆಗೆ ಹೆಚ್ಚು ಒತ್ತುಕೊಟ್ಟಿದ್ದಾರೆ ಮತ್ತು ಅದನ್ನು ಪರಿಣಾಮಕಾರಿಯಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ. ಈ ಚಿತ್ರದ ಹೀರೋ ವಿಕ್ಕಿ ಅನ್ನುವ ಬದಲು ರವಿಶಂಕರ್‌ ಎನ್ನಬಹುದು. ಅದೇ ಕಾರಣಕ್ಕೆ ಥಿಯೇಟರ್‌ ಮುಂದೆ ಅವರದ್ದೇ ಕಟೌಟ್‌ ಹಾಕಲಾಗಿದೆ.

ಈ ಹಿಂದಿನ ಸಿನಿಮಾಗಳಲ್ಲಿ ಅಬ್ಬರಿಸಿ ಬೊಬ್ಬಿರಿದ ರವಿಶಂಕರ್‌ಗೆ ಇಲ್ಲಿ ಅದಕ್ಕೆ ತದ್ವಿರುದ್ಧವಾದ ಪಾತ್ರ ಸಿಕ್ಕಿದೆ. ಯಾವುದೇ ಬಿಲ್ಡಪ್‌ ಇಲ್ಲದ, ಪಕ್ಕಾ ಫ್ಯಾಮಿಲಿಮ್ಯಾನ್‌ ಆಗಿರುವ ಪಾತ್ರದಲ್ಲಿ ರವಿಶಂಕರ್‌ ನಿಮ್ಮನ್ನು ಆವರಿಸಿಕೊಳ್ಳುತ್ತಾರೆ.  ಮಗನ ಬಗ್ಗೆ ಕನಸು ಕಾಣುವ ತಂದೆಯಾಗಿ, 54ರ ವಯಸ್ಸಿನಲ್ಲಿ ಕಾಲೇಜು ಓದುವ ವಿದ್ಯಾರ್ಥಿಯಾಗಿ ಅವರು ಇಷ್ಟವಾಗುತ್ತಾರೆ.

ನಾಯಕ ವಿಕ್ಕಿ ಕೊಟ್ಟ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಅವರ ಮ್ಯಾನರೀಸಂಗೆ ಈ ಪಾತ್ರ ತುಂಬಾನೇ ಹೊಸದು ಎನ್ನಬಹುದು. ನಾಯಕಿ ಸಂಯುಕ್ತಾ ಹೆಗಡೆ ಮತ್ತೂಮ್ಮೆ ಬಜಾರಿ ಹುಡುಗಿಯಾಗಿ ಕಾಣಿಸಿಕೊಂಡಿದ್ದಾರೆ. ತಾಯಿ ಪಾತ್ರದಲ್ಲಿ ಶ್ರುತಿ ಗಮನ ಸೆಳೆಯುತ್ತಾರೆ. ಉಳಿದಂತೆ ಅಚ್ಯುತ್‌ ಕುಮಾರ್‌, ಪ್ರಕಾಶ್‌ ಬೆಳವಾಡಿ, ಸುಂದರ್‌ರಾಜ್‌ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಹಾಡು ಹಾಗೂ ಹಿನ್ನೆಲೆ ಸಂಗೀತ ಚಿತ್ರಕ್ಕೆ ಪೂರಕ.

ಚಿತ್ರ: ಕಾಲೇಜ್‌ಕುಮಾರ್‌
ನಿರ್ಮಾಣ: ಎಲ್‌.ಪದ್ಮನಾಭ್‌
ನಿರ್ದೇಶನ: ಹರಿ ಸಂತೋಷ್‌
ತಾರಾಗಣ: ವಿಕ್ಕಿ, ರವಿಶಂಕರ್‌, ಸಂಯುಕ್ತಾ ಹೆಗಡೆ, ಶ್ರುತಿ, ಅಚ್ಯುತ್‌ ಕುಮಾರ್‌, ಪ್ರಕಾಶ್‌ ಬೆಳವಾಡಿ, ಸುಂದರ್‌ರಾಜ್‌ ಮತ್ತಿತರರು. 

* ರವಿಪ್ರಕಾಶ್‌ ರೈ

Advertisement

Udayavani is now on Telegram. Click here to join our channel and stay updated with the latest news.

Next