ದಡ್ಡಲಕಾಡು: ಕೊಟ್ಟಾರ ಸಮೀಪದ ದಡ್ಡಲಕಾಡು ರಸ್ತೆ ಹೊಂಡ ಗುಂಡಿಗಳಿಂದ ಕೂಡಿದ್ದು ಸಂಚಾರಕ್ಕೆ ಅಯೋಗ್ಯವಾಗಿ ಪರಿಣಮಿಸಿದೆ. ಕಳೆದ ಐದಾರು ವರ್ಷಗಳಿಂದ ರಸ್ತೆ ಅವ್ಯವಸ್ಥೆ ಯಿಂದ ಕೂಡಿದೆ. ಕಳಪೆ ಕಾಮಗಾರಿ ಯಿಂದ ರಸ್ತೆ ಪೂರ್ತಿ ಗುಂಡಿಯಿಂದ ಕೂಡಿದೆ.
ನಗರದ ಕಾಪಿಕಾಡ್‌ನಿಂದ ದಡ್ಡಲ ಕಾಡು ಮುಖೇನ ಕೊಟ್ಟಾರ ಸಂಪರ್ಕ ರಸ್ತೆ ಪೂರ್ತಿ ಹೊಂಡಗಳೇ ಇವೆ. ಈ ರಸ್ತೆಯನ್ನು ಅನೇಕ ಬಾರಿ ಡಾಮರು ನಡೆಸಿದರೂ ಇಲ್ಲಿನ ಹೊಂಡ ಗುಂಡಿಗಳಿಗೆ ಮುಕ್ತಿ ಎಂಬುವುದು ಸಿಗುತ್ತಿಲ್ಲ.
ಈ ಹಿಂದೆ ಡಾಮರು ಹಾಕಿದ ಕೆಲವೇ ತಿಂಗಳಲ್ಲಿ ರಸ್ತೆ ಪೂರ್ತಿ ಗುಂಡಿ ಬಿದ್ದಿರುವ ಉದಾಹರಣೆಗಳಿವೆ. ಇದೀಗ ಮಳೆಗಾಲ ಆರಂಭದಲ್ಲಿ ರಸ್ತೆಯ ಮತ್ತಷ್ಟು ಕಡೆಗಳಲ್ಲಿ ಗುಂಡಿಗಳಾಗಿದ್ದು, ಇದರಿಂದಾಗಿ ವಾಹನ ಸವಾರರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆ ಉಂಟಾ ಗುತ್ತಿದೆ.
ನಗರದ ಪ್ರಮುಖ ಕೇಂದ್ರವಾದ ಕೊಟ್ಟಾರವನ್ನು ಸಂಪರ್ಕಿಸಲು ಕೆಎಸ್ಸಾ ರ್ಟಿಸಿ ಬಸ್ ನಿಲ್ದಾಣದಿಂದ ಕೊಟ್ಟಾರ ಸಂಪರ್ಕ ಇರುವ ಈ ರಸ್ತೆಯಲ್ಲಿ ದಡ್ಡಲಕಾಡು ಸಮೀಪ ನಿತ್ಯ ಗುಂಡಿ ಗಳಿಂದ ಕೂಡಿರುವ ರಸ್ತೆಯಲ್ಲೇ ಸಂಚಾರ ನಡೆಸಬೇಕಾದ ಅನಿವಾರ್ಯತೆ ವಾಹನ ಸವಾರರದ್ದು. ಕೊಟ್ಟಾರ ಸಂಪರ್ಕದ ರಸ್ತೆ ಬಹುತೇಕ ಕಾಂಕ್ರೀಟ್ ರಸ್ತೆಯಾಗಿದ್ದು, ದಡ್ಡಲಕಾಡು ಪ್ರದೇಶದಲ್ಲಿ ಮಾತ್ರವೇ ಡಾಮರು ರಸ್ತೆಯಾಗಿದೆ. ಇದೇ ಕಾರಣದಿಂದ ಇಲ್ಲಿ ಹೊಂಡಗುಂಡಿಗಳಿಗೆ ಮುಕ್ತಿ ಸಿಗುತ್ತಿಲ್ಲ.
ಮಳೆ ಸುರಿಯುವ ವೇಳೆ ರಸ್ತೆ ಜಲಾವೃತ
ಜೋರಾಗಿ ಮಳೆ ಸುರಿದರೆ ಈ ರಸ್ತೆಯಲ್ಲಿ ವಾಹನ ಸಂಚಾರಕ್ಕೆ ತೊಂದರೆಯಾಗುತ್ತದೆ. ಅಲ್ಪ ತಗ್ಗು ಪ್ರದೇಶವಾಗಿರುವ ಕಾರಣ ರಸ್ತೆಯಲ್ಲಿ ನೀರು ತುಂಬಿಕೊಳ್ಳುತ್ತದೆ. ಇದರಿಂದಾಗಿ ಹೊಂಡಗುಂಡಿಗಳು ಗೋಚರಕ್ಕೆ ಬರದೆ ಸವಾರರು ಪರದಾಡುವಂತಾಗಿದೆ.
ಮಳೆ ನೀರು ಹರಿಯಲು ಚರಂಡಿ ಇಲ್ಲ
ಇನ್ನು, ಈ ಪ್ರದೇಶದಲ್ಲಿ ಮಳೆ ನೀರು ಹರಿಯಲು ಚರಂಡಿಯ ವ್ಯವಸ್ಥೆ ಇಲ್ಲ. ಇದರಿಂದ ಮಳೆ ನೀರು ರಸ್ತೆಯಲ್ಲೇ ಹರಿದು ಸಮಸ್ಯೆ ತಲೆದೋರಿದೆ.
ಮಳೆ ನೀರು ರಸ್ತೆಯನ್ನು ಸಂಪೂರ್ಣ ಆವರಿಸಿಕೊಳ್ಳುವ ಕಾರಣ ಪಾದಚಾರಿ ಗಳಿಗೆ ತೆರಳಲು ಅವಕಾಶಗಳೇ ಇಲ್ಲ ಎಂಬಂತಾಗಿದೆ. ಇದೇ ಭಾಗದಲ್ಲಿ ಒಂದು ರಸ್ತೆ ಉರ್ವಸ್ಟೋರ್‌ಗೆ ಸಂಪರ್ಕ ಕಲ್ಪಿಸು ತ್ತಿದ್ದು, ಇಲ್ಲಿ ಯಾವುದೇ ಮುನ್ನೆಚ್ಚರಿಕೆಫಲಕ ಇಲ್ಲದಿರುವುದು ಅಪಾಯಕ್ಕೆ ಆಹ್ವಾನ.
ಉರ್ವಸ್ಟೋರ್‌ನಿಂದ ದಡ್ಡಲಕಾಡು ಸಂಪರ್ಕದ ರಸ್ತೆಯೂ ಕೂಡ ಅವ್ಯವಸ್ಥೆಯಿಂದ ಕೂಡಿದೆ. ಉರ್ವಸ್ಟೋರ್ ಸಮೀಪ ಹೊಂಡಗುಂಡಿಗಳಿಂದಾಗಿ ಸವಾರರು ಪರದಾಡು ವಂತಾಗಿದೆ. ಹೆಚ್ಚಿನ ಆಟೋ ರಿಕ್ಷಾಗಳು ಈ ರಸ್ತೆಯಲ್ಲಿ ಸಂಚರಿಸುತ್ತಿದ್ದು, ನಿತ್ಯ ಪರದಾಡು ವಂತಾಗಿದೆ. ಇನ್ನೊಂದೆಡೆ ಸಾರ್ವಜನಿಕರಿಗೆ ಈ ರಸ್ತೆ ಪಕ್ಕದಲ್ಲಿ ನಡೆದಾಡಲು ಫುಟ್ ಪಾತ್ ಇಲ್ಲ. ಜನರು ನಡೆದುಕೊಂಡು ಹೋಗಲು ಭಯ ಪಡುತ್ತಿದ್ದಾರೆ. ಮಳೆ ನೀರು ಹರಿದು ಹೋಗಲು ಸರಿಯಾದ ಚರಂಡಿ ಇಲ್ಲದೆ ರಸ್ತೆಯಲ್ಲಿ ನೀರು ತುಂಬಿಕೊಳ್ಳುತ್ತಿದೆ.