ಮುಂಬೈ: ವಿದೇಶಿ ಬಂಡವಾಳದ ಒಳಹರಿವು ಮತ್ತು ಜಾಗತಿಕ ಬೆಳವಣಿಗೆಯ ಪರಿಣಾಮ ಮಂಗಳವಾರ (ಜುಲೈ 09) ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 391 ಅಂಕಗಳ ಏರಿಕೆಯೊಂದಿಗೆ ದಿನಾಂತ್ಯದ ವಹಿವಾಟು ಅಂತ್ಯಗೊಳಿಸಿದೆ.
ಇದನ್ನೂ ಓದಿ:Kadri Temple; ಅಣ್ಣಪ್ಪ ದೈವದ ಕಡ್ಸಲೆ ಹಿಡಿದು ಯುವಕನ ಹುಚ್ಚಾಟ; ಅರ್ಚಕರ ಮೇಲೂ ಹಲ್ಲೆ
ಬಿಎಸ್ ಇ ಸೆನ್ಸೆಕ್ಸ್ 391.26 ಅಂಕಗಳ ಜಿಗಿತದೊಂದಿಗೆ 80,351.64 ಅಂಕಗಳ ದಾಖಲೆ ಮಟ್ಟದಲ್ಲಿ ದಿನಾಂತ್ಯದ ವಹಿವಾಟು ಮುಕ್ತಾಯಗೊಂಡಿದೆ. ಮಧ್ಯಂತರ ವಹಿವಾಟಿನಲ್ಲಿ 436.79 ಅಂಕಗಳಷ್ಟು ಏರಿಕೆಯೊಂದಿಗೆ 80,397.17 ಅಂಕಗಳ ಸಾರ್ವಕಾಲಿಕ ಎತ್ತರಕ್ಕೆ ಏರಿತ್ತು.
ಎನ್ ಎಸ್ ಇ ನಿಫ್ಟಿ 112.65 ಅಂಕಗಳ ಏರಿಕೆಯೊಂದಿಗೆ 24,433.30 ಅಂಕಗಳ ದಾಖಲೆ ಮಟ್ಟದಲ್ಲಿ ದಿನಾಂತ್ಯದ ವಹಿವಾಟು ಅಂತ್ಯಗೊಂಡಿದೆ. ಮಧ್ಯಂತರ ವಹಿವಾಟಿನ ವೇಳೆಯೂ ನಿಫ್ಟಿ 123.05 ಅಂಕಗಳ ಏರಿಕೆ ಕಂಡಿತ್ತು.
ರಾಜ್ಯದಲ್ಲಿ ಪರಿಸರ ಸ್ನೇಹಿ ವಾಹನಗಳಿಗೆ ಒತ್ತು ನೀಡುವ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಸರ್ಕಾರ ಹೈಬ್ರೀಡ್ ಕಾರುಗಳ ಮೇಲಿನ ನೋಂದಣಿ ತೆರಿಗೆಯನ್ನು ರದ್ದುಪಡಿಸಲಿದೆ ಎಂಬ ವರದಿಯ ಹಿನ್ನೆಲೆಯಲ್ಲಿ ಮಾರುತಿ ಸುಜುಕಿ ಇಂಡಿಯಾದ ಷೇರುಗಳ ಬೆಲೆ ಶೇ.6ರಷ್ಟು ಏರಿಕೆಯಾಗಿತ್ತು.
ಷೇರುಪೇಟೆ ಸೆನ್ಸೆಕ್ಸ್, ನಿಫ್ಟಿ ಏರಿಕೆಯಿಂದ ಮಹೀಂದ್ರ & ಮಹೀಂದ್ರ, ಟೈಟಾನ್, ಸನ್ ಫಾರ್ಮಾ, ಐಟಿಸಿ, ನೆಸ್ಲೆ ಮತ್ತು ಟಾಟಾ ಮೋಟಾರ್ಸ್ ಸೇರಿದಂತೆ ಇತರ ಷೇರುಗಳು ಲಾಭಗಳಿಸಿವೆ. ಮತ್ತೊಂದೆಡೆ ರಿಲಯನ್ಸ್ ಇಂಡಸ್ಟ್ರೀಸ್, ಕೋಟಕ್ ಮಹೀಂದ್ರ ಬ್ಯಾಂಕ್, ಬಜಾಜ್ ಫೈನಾನ್ಸ್, ಜೆಎಸ್ ಡಬ್ಲ್ಯು ಸ್ಟೀಲ್ ಷೇರುಗಳು ನಷ್ಟ ಕಂಡಿದೆ.