ಬೆಂಗಳೂರು : ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ವಿರುದ್ಧ ಸಮರಕ್ಕಿಳಿಡಿರುವ ಐಪಿಎಸ್ ಅಧಿಕಾರಿ ಡಿ.ರೂಪಾ ಅವರು ಸದ್ಯ ರಾಜ್ಯದ ಗಮನ ಸೆಳೆದಿದ್ದಾರೆ. ಸಾಮಾಜಿಕ ತಾಣದಲ್ಲಿ ರೋಹಿಣಿ ಸಿಂಧೂರಿ ಅವರ ವಿವಿಧ ಭಂಗಿಯ ಖಾಸಗಿ ಫೋಟೋಗಳನ್ನು ಹಂಚಿಕೊಂಡಿದ್ದು ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.
ಡಿಸಿ ಆಗಿ ಮಾಡಿದ ಕರ್ತವ್ಯಕ್ಕೆ ಎಂಎಲ್ಎ ಸಾ ರಾ ಮಹೇಶ್ ಅವರ ಬಳಿ ಸಂಧಾನಕ್ಕೆ ಹೋಗುವ ವಿಷಯವೇ ಸೇವಾ ನಿಯಮ ಉಲ್ಲಂಘನೆ. ಇದಕ್ಕೆ ರೋಹಿಣಿ ಸಿಂಧೂರಿ ಗೆ ಶಿಕ್ಷೆ ಆಗುತ್ತದೆಯೇ. ಸಂಧಾನಕ್ಕೆ ಹೋಗಿದ್ದ ಬಗ್ಗೆ ಮಾನ್ಯ ಎಂಎಲ್ಎ ಅವರು ಅಸೆಂಬ್ಲಿಯಲ್ಲಿ ಕೂಡ ಹೇಳಿದ್ದಾರೆ ಎಂದು ರೂಪಾ ಅವರು ಫೇಸ್ ಬುಕ್ ನಲ್ಲಿ ಪ್ರಶ್ನಿಸಿದ್ದಾರೆ.
ಡಿಸಿ ಮೈಸೂರು ಮನೆಯಲ್ಲಿ, ಹೆರಿಟೇಜ್ ಬಿಲ್ಡಿಂಗ್ ನಲ್ಲಿ ಅದೂ ಕೊರೋನಾ ಸಮಯದಲ್ಲಿ ಸಾರ್ವಜನಿಕ ಹಣದಲ್ಲಿ ಸ್ವಿಮ್ಮಿಂಗ್ ಪೂಲ್ ಕಟ್ಟಿಸಿದ್ದು ತಪ್ಪು ಎಂದು ಪ್ರಾಥಮಿಕ ಪೂರ್ವಭಾವಿ ವಿಚಾರಣೆಯಲ್ಲಿ ಸಾಬೀತು ಮಾಡಿದ್ದಾರೆ. ತನಿಖಾ ಅಧಿಕಾರಿ ರವಿಶಂಕರ್ ಐಎಎಸ್, ಇದರ ಮೇಲೆ ರೋಹಿಣಿ ಗೆ ಶಿಕ್ಷೆ ಆಗುತ್ತದೆಯೆ? ಇಷ್ಟೇ ಉತ್ತರಿಸಲಿ ಉತ್ತರಿಸಬೇಕಾದವರು ಎಂದು ಬರೆದಿದ್ದಾರೆ.
ಎಲ್ಲರ ಕೈ ಸೇರಿದೆ
”ಮಾಧ್ಯಮ ಮಿತ್ರರಲ್ಲಿ ವಿನಂತಿ…ನೀವು ಕೆಲವರು ರೋಹಿಣಿ ಸಿಂಧೂರಿ ಕಳಿಸಿದ ಸಾಲುಗಳನ್ನು ಕಳುಹಿಸಿದ್ದೀರಿ.ಅದರಲ್ಲಿ ಆಕೆ ಹೇಳುತ್ತಾರೆ, ಡಿಕೆ ರವಿ ಸತ್ತದ್ದು ಮಾನಸಿಕ ಅಸ್ವಸ್ಥತೆಯಿಂದ ಅಂತ. ರವಿಯನ್ನು ಇಷ್ಟು ನಿಕೃಷ್ಟವಾಗಿ ಹೀಯಾಳಿಸಿದರೆ? ನನ್ನ ಪ್ರಶ್ನೆ ಇಷ್ಟೇ…ರೋಹಿಣಿ ಸಿಂಧೂರಿ ಯಾಕೆ ರವಿಯನ್ನು ಬ್ಲಾಕ್ ಮಾಡಲಿಲ್ಲ. ಅವರಿಬ್ಬರ ಪ್ರೇಮ ಸಲ್ಲಾಪ ಸಿಬಿಐ ಕೊಟ್ಟ ಫೈನಲ್ ರಿಪೋರ್ಟ್ ನಲ್ಲಿ ಎಲ್ಲರ ಕೈ ಸೇರಿದೆ. ಒಬ್ಬ ಪುರುಷ ಎಲ್ಲೆ ಮೀರಿ ನಡೆದಾಗ ಈಕೆ ಜವಾಬ್ದಾರಿಯುತ ಹೆಣ್ಣು ಮಗಳಾಗಿ ಯಾಕೆ ಬ್ಲಾಕ್ ಮಾಡಲಿಲ್ಲ. ಅಂದರೆ ಉತ್ತೇಜನ ಕೊಟ್ಟಂತೆ ಅಲ್ಲವೇ? ಅದೇ ರೀತಿ ಐಎಎಸ್ ಅಧಿಕಾರಿಗಳಿಗೆ ಕಳುಹಿಸಿದ ಆ ರೀತಿಯ ಚಿತ್ರಗಳು ಉತ್ತೇಜನ ಕೊಡುವುದು ಎಂದು ಅರ್ಥ ಆಗುವುದಿಲ್ಲವೇ? ಅವರು ಯಾವ ವೇದಿಕೆಗೆ ಹೋದರೂ, ಸತ್ಯ ಸತ್ಯವೇ. ಸತ್ಯ ಮಣಿಸಲು ಸಾಧ್ಯವಿಲ್ಲ. ಈ ಬಾರಿ ಸಾಧ್ಯವಿಲ್ಲ” ಎಂದು ರೂಪಾ ಸಮರಕ್ಕಿಳಿದಿದ್ದಾರೆ.
ಸಿಂಧೂರಿ ಆಕ್ರೋಶ
ಡಿ.ರೂಪಾ ಮಾನಸಿಕ ಸ್ಥಿಮಿತ ಕಳೆದುಕೊಂಡ ರೀತಿ ವರ್ತಿಸುತ್ತಿದ್ದಾರೆ. ಆಧಾರರಹಿತ ಆರೋಪ ಮಾಡಿ ಮಾಧ್ಯಮಗಳ ಗಮನ ಸೆಳೆಯುತ್ತಾರೆ. ವೈಯಕ್ತಿಕ ನಿಂದನೆ, ತೇಜೋವಧೆ ವಿರುದ್ಧ ಐಪಿಎಸ್ ಸೆಕ್ಷನ್ ಗಳ ಅಡಿ ಕಾನೂನು ಕ್ರಮ, ಸಕ್ಷಮ ಪ್ರಾಧಿಕಾರದ ಮುಂದೆ ದೂರು ಸಲ್ಲಿಸುತ್ತೇನೆ ಎಂದು ಆಕೋಶ ಹೊರ ಹಾಕಿದ್ದಾರೆ.
ಕರ್ಮ ಮರಳುತ್ತದೆ
“ಕರ್ಮವು ನಿಮ್ಮ ಬಳಿಗೆ ಮರಳುತ್ತದೆ, ಬೇಗ ಅಥವಾ ನಂತರ ಅದು ಖಂಡಿತವಾಗಿಯೂ ಬರುತ್ತದೆ” ಎಂದು ಡಿ.ಕೆ. ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ ಅವರು ಟ್ವೀಟ್ ಮಾಡಿದ್ದಾರೆ.
”ಕುಸುಮಾ, ಒಬ್ಬ ಮಹಿಳೆಯಾಗಿ ನಿಮ್ಮ ನೋವು ನನಗೆ ಅರ್ಥವಾಗುತ್ತದೆ. ಮತ್ತು ಅನೇಕ ಇತರ ಮಹಿಳೆಯರ ನೋವು (ಅವರಲ್ಲಿ ಕೆಲವರು ಐಎಎಸ್‌ನಲ್ಲಿ), ಇನ್ನೂ ಅಸಹಾಯಕರಾಗಿದ್ದಾರೆ. ಆದರೆ ಅಂತಿಮವಾಗಿ, ಯಾರಾದರೂ ಅಪರಾಧಿಯ ವಿರುದ್ಧ ನಿಲ್ಲಬೇಕು (ಅವಳು ಮಹಿಳೆಯಾಗಿದ್ದರೂ ಸಹ). ಈ ವಿಷಯದಲ್ಲಿ ನಿಮ್ಮೊಂದಿಗೆ. ದೇವರು “ಅವಳ” ಪರಾನುಭೂತಿ ಮತ್ತು ಸದ್ಬುದ್ಧಿಯನ್ನು ಪುನರಾವರ್ತಿಸದಿರಲಿ” ಎಂದು ರೂಪಾ ಅವರು ಮರು ಟ್ವೀಟ್ ಮಾಡಿದ್ದಾರೆ.