Advertisement
ಮಂಗಳೂರು ಮಹಾನಗರ ಪಾಲಿಕೆಯ ಇತಿಹಾಸದಲ್ಲಿ ಸುದೀರ್ಘ ವರ್ಷಗಳ ಬಳಿಕ ಪಾಲಿಕೆ ದಿನಾಚರಣೆ ಅಂಗವಾಗಿ ಮನೋರಂಜನ ಕಾರ್ಯಕ್ರಮವು ಡಿ. 8ರಂದು ಪುರಭವನದಲ್ಲಿ ನಡೆಯಲಿದೆ. ಕಾರ್ಪೊರೇಟರ್‌ಗಳು ರಾಜಕೀಯ, ಜನಸೇವೆ ಕಾರ್ಯದಿಂದ ಒಂದಷ್ಟು ಹೊತ್ತು ಬಿಡುವು ಮಾಡಿಕೊಂಡು ತಮ್ಮ ಪ್ರತಿಭೆಗಳನ್ನು ಜನರ ಮುಂದೆ ಪ್ರದರ್ಶಿಸಲು ಸಿದ್ಧರಾಗಿದ್ದಾರೆ. ಅಧಿಕಾರಿಗಳು ಸಹಿತ ಸಿಬಂದಿಯೂ ನೃತ್ಯಕ್ಕೆ ಹೆಜ್ಜೆ ಹಾಕಲಿದ್ದಾರೆ. ಅಂದು ಮಧ್ಯಾಹ್ನ 2.30ರಿಂದ 6.30 ರವರೆಗೆ ಸದಸ್ಯರು ಮತ್ತು ಸಿಬಂದಿಯ ಸಾಂಸ್ಕೃತಿಕ ಪ್ರತಿಭಾ ಪ್ರದರ್ಶನಕ್ಕೇ ಮೀಸಲು.
ಹಲವು ಕ್ಷೇತ್ರಗಳಲ್ಲಿ ಹಿಡಿತವುಳ್ಳ ಅನೇಕ ಪ್ರತಿಭೆಗಳು ಪಾಲಿಕೆಯಲ್ಲಿದ್ದಾರೆ. ನೃತ್ಯ ಹಾಗೂ ಸಂಗೀತ ಕ್ಷೇತ್ರದಲ್ಲಿ ವೃತ್ತಿಪರರಾಗಿ ತೊಡಗಿಸಿಕೊಳ್ಳದಿದ್ದರೂ, ಆ ರಂಗದ ಹವ್ಯಾಸದವರಿದ್ದಾರೆ. ಮೇಯರ್ ಕವಿತಾ ಸನಿಲ್ ಅವರಿಂದ ಕರಾಟೆ ಪ್ರಾತ್ಯಕ್ಷಿಕೆಯಿದೆ. ಯು. ಶ್ರೀನಿವಾಸ ಮಲ್ಯ ಹೆಸರಿನಲ್ಲಿ ಪ್ರಶಸ್ತಿ
ಸಂಜೆ 6.30ರಿಂದ ರಾತ್ರಿ 8 ಗಂಟೆಯವರೆಗೆ ಸಭಾ ಕಾರ್ಯಕ್ರಮ ನಡೆಯಲಿದ್ದು, ದಿ| ಉಳ್ಳಾಲ ಶ್ರೀನಿವಾಸ ಮಲ್ಯ ಗೌರವ ಪ್ರಶಸ್ತಿ ಪ್ರದಾನ ಸಮಾರಂಭ ಈ ವೇಳೆ ಜರಗಲಿದೆ. ಅದರ ವಿವರ ಲಭ್ಯವಾಗಿಲ್ಲ. ದಿ| ಮಲ್ಯ ಅವರು ಅವಿಭಜಿತ ಜಿಲ್ಲೆಯ ಅಭಿವೃದ್ಧಿಗಾಗಿ ಮಾಡಿರುವ ಸಾಧನೆಯ ಬಗ್ಗೆ ಪಾಲಿಕೆ ವ್ಯಾಪ್ತಿಯ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಬೆಳಗ್ಗೆ 9.30ಕ್ಕೆ ಚಿತ್ರ ಕಲಾ ಸ್ಪರ್ಧೆ ಏರ್ಪಡಿಸಲಾಗಿದೆ. 8ರಿಂದ 9.30ರ ತನಕ ಹೆಸರಾಂತ ಗಾಯಕರನ್ನೊಳಗೊಂಡ ಕಲಾವಿದರಿಂದ ‘ಸುರ್ ಸಂಗಮ್ ಆರ್ಕೆಸ್ಟ್ರಾ’ ಜರಗಲಿದೆ. ಪಾಲಿಕೆ ದಿನಾಚರಣೆ ಹಿನ್ನೆಲೆಯಲ್ಲಿ ಮನಪಾ ಕ್ರೀಡಾ ಸ್ಪರ್ಧೆ ನಡೆದಿದ್ದು, ವಿಜೇತರಿಗೆ ಬಹುಮಾನ ವಿತರಣೆಯಾಗಲಿದೆ.
Related Articles
ಹಲವು ವರ್ಷಗಳ ಬಳಿಕ ಪಾಲಿಕೆ ದಿನಾಚರಣೆ ನಡೆಯುತ್ತಿದ್ದು, ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ವಿಪಕ್ಷ ಬಿಜೆಪಿ ಸಮಾರಂಭದಿಂದ ದೂರ ಉಳಿಯಲು ನಿರ್ಧರಿಸಿದೆ. ಅಭಿವೃದ್ಧಿ ಕಾಮಗಾರಿ, ಜನರ ಸಮಸ್ಯೆಗಳಿಗೆ ಒತ್ತು ಕೊಡುವುದನ್ನು ಬಿಟ್ಟು ದಿನಾಚರಣೆ ಹೆಸರಿನಲ್ಲಿ ಡ್ಯಾನ್ಸ್ ಮಾಡುತ್ತಾ ಸಮಯ ಪೋಲು ಮಾಡುವುದು ಸರಿಯಲ್ಲ ಎನ್ನುವುದು ವಿಪಕ್ಷ ನಾಯಕರ ವಾದ.
Advertisement
ಅಭಿವೃದ್ಧಿ ಸಭೆಯಲ್ಲಿ ಭಾಗವಹಿಸುತ್ತೇವೆನೀರು ಪೂರೈಕೆಯಲ್ಲಿ ಸಮಸ್ಯೆಯಾಗುತ್ತಿದೆ. ನಗರದ ಒಳಚರಂಡಿ ವ್ಯವಸ್ಥೆ ನಿರ್ವಹಣೆ ಮಾಡುವವರಿಗೆ ಸಂಬಳ ನೀಡಿಲ್ಲ. ಕಸ ವಿಲೇವಾರಿಯಲ್ಲಿ ತೊಡಕು ಮುಂತಾದ ಹಲವು ಸಮಸ್ಯೆಗಳು ನಗರದಲ್ಲಿವೆ. ಸೆಪ್ಟಂಬರ್‌ನಿಂದ ಯಾವುದೇ ರಸ್ತೆಗಳಲ್ಲಿ ಪ್ಯಾಚ್‌ವರ್ಕ್ ಕೂಡ ಆಗಿಲ್ಲ. ಜನರ ಮೂಲ ಸಮಸ್ಯೆಗಳಿಗೆ ಸ್ಪಂದಿಸುವುದು ಬಿಟ್ಟು ದಿನಾಚರಣೆ ಹೆಸರಲ್ಲಿ ಸಂಭ್ರಮಿಸುವುದು ಸರಿಯಲ್ಲ. ಹೀಗಾಗಿ ಕೇವಲ ಅಭಿವೃದ್ಧಿ ಸಂಬಂಧಿತ ಸಭೆಗಳಲ್ಲಿ ಮಾತ್ರ ಭಾಗವಹಿಸುವುದಾಗಿ ನಿರ್ಧರಿಸಲಾಗಿದೆ. ಆದರೆ ಪ್ರಮುಖರೆಲ್ಲ ಸೇರಿ ಈ ಬಗ್ಗೆ ಸೂಕ್ತ ತೀರ್ಮಾನಕ್ಕೆ ಬರಲಾಗುವುದು.
– ಗಣೇಶ್ ಹೊಸಬೆಟ್ಟು, ವಿಪಕ್ಷ ನಾಯಕ, ಮನಪಾ ಎಲ್ಲರೂ ಭಾಗವಹಿಸಿದರೆ ಮಹತ್ವ
ಜನಪರ ಮತ್ತು ಅಭಿವೃದ್ಧಿ ಕೆಲಸಕ್ಕೆ ಸಂಬಂಧಿಸಿ ಮೇಯರ್ ಶೀಘ್ರವಾಗಿಯೇ ಸ್ಪಂದಿಸುತ್ತಿದ್ದಾರೆ. ಹಂತ ಹಂತವಾಗಿಯೇ ಅಭಿವೃದ್ಧಿ ಕಾಮಗಾರಿಗಳು ನಡೆಯುತ್ತಿವೆ. ಅಭಿವೃದ್ಧಿ ಆಗುತ್ತಿಲ್ಲ ಎಂಬುದರಲ್ಲಿ ಹುರುಳಿಲ್ಲ. ಹಲವು ವರ್ಷಗಳ ಬಳಿಕ ಪಾಲಿಕೆ ದಿನಾಚರಣೆ ನಡೆಯುತ್ತಿದೆ. ನಮ್ಮದೇ ದಿನವಾದ್ದರಿಂದ ಪ್ರತಿಯೊಬ್ಬರೂ ಭಾಗವಹಿಸಿದರೆ ಕಾರ್ಯಕ್ರಮಕ್ಕೂ ಮಹತ್ವ ಬರುತ್ತದೆ.
ಶಶಿಧರ್ ಹೆಗ್ಡೆ,
ಮನಪಾ ಮುಖ್ಯ ಸಚೇತಕ ವಿಶೇಷ ವರದಿ