Advertisement
ಬೆಳಗ್ಗೆಯಿಂದ ಸುರೇಶ್ ಅವರ ನಿವಾಸಕ್ಕೆ ಕಾಂಗ್ರೆಸ್ ನಾಯಕರ ದಂಡು ಭೇಟಿ ನೀಡುತ್ತಲೇ ಇತ್ತು. ಈ ನಡುವೆ ಬಿಜೆಪಿ ಶಾಸಕರಾದ ಎಸ್.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ಕೂಡ ಆಗಮಿಸಿ ಫಲಿತಾಂಶದ ಪರಾಮರ್ಶೆ ಮಾಡಿದರು. ಅನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸೋಮಶೇಖರ್, ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ. ಸುರೇಶ್ ಅವರನ್ನು ಜನ ಸೋಲಿಸಿದ್ದಾರೆ. ಮುಂದಿನ ದಿನಗಳಲ್ಲಿ ಜನರಿಗೇ ತಮ್ಮ ತಪ್ಪಿನ ಅರಿವಾಗಲಿದೆ. ಎಲ್ಲರೂ ಸೇರಿ ಈ ಬಾರಿ ಅವರನ್ನು ಟಾರ್ಗೆಟ್ ಮಾಡಿದರು. ದಿನದ 24 ಗಂಟೆ ರಾಜಕಾರಣ ಮಾಡಿದವರು. ಕ್ಷೇತ್ರದ ಸೇವೆ ಮಾಡಿದ ಸುರೇಶ್ ಅವರನ್ನು ಯಾಕೆ ಸೋಲಿಸಿದೆವು ಅಂತಾ ಜನ ಯೋಚನೆ ಮಾಡಲಿದ್ದಾರೆ ಎಂದರು.
ತಾವು ಕಾಂಗ್ರೆಸ್ ಕಡೆ ಯಾವಾಗ ಎನ್ನುವ ಪ್ರಶ್ನೆಗೆ, 2028ಕ್ಕೆ ನಾನು ಯೋಚನೆ ಮಾಡುತ್ತೇನೆ. ಈಗ ಯೋಚನೆ ಮಾಡುವ ಆವಶ್ಯಕತೆ ಇಲ್ಲ ಎಂದು ಎಸ್.ಟಿ. ಸೋಮಶೇಖರ್ ಸ್ಪಷ್ಟಪಡಿಸಿದರು. ಇದೇ ವೇಳೆ ಮಾತನಾಡಿದ ಶಿವರಾಮ ಹೆಬ್ಬಾರ್, ಉತ್ತರ ಕನ್ನಡದಲ್ಲಿ ಬಿಜೆಪಿ ಗೆದ್ದಿದೆ. ರಾಜಕಾರಣದ ಬಗ್ಗೆ ಕಾಲ ಬಂದಾಗ ಹೇಳುತ್ತೇವೆ ಎಂದಷ್ಟೇ ಹೇಳಿದರು.