Advertisement

ಕಳಂಕಿತ ಸಚಿವರ ರಕ್ಷಣೆಗೆ ನಿಂತು ಸಿಎಂ ಬೊಮ್ಮಾಯಿ ದೊಡ್ಡ ಅಪರಾಧ ಮಾಡುತ್ತಿದ್ದಾರೆ: ಡಿಕೆಶಿ

03:32 PM Apr 15, 2022 | Team Udayavani |

ಬೆಂಗಳೂರು: ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಪ್ರೇರಣೆ ನೀಡಿರುವ ಸಚಿವ ಈಶ್ವರಪ್ಪ ಅವರು ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರು ಕಳಂಕಿತರ ರಕ್ಷಣೆಗೆ ಮುಂದಾಗಿದ್ದಾರೆ. ಆ ಮೂಲಕ ಅವರು ಬಹುದೊಡ್ಡ ಅಪರಾಧ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕಿಡಿಕಾರಿದ್ದಾರೆ.

Advertisement

ವಿಧಾನಸೌಧದಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುತ್ತಿಗೆದಾರ ಸಂತೋಷ್ ಆತ್ಮಹತ್ಯೆಗೆ ಸಚಿವ ಈಶ್ವರಪ್ಪ ಹಾಗೂ ಅವರ ಆಪ್ತ ಸಹಾಯಕರ 40 % ಲಂಚದ ಕಿರುಕುಳವೇ ಕಾರಣ ಎಂದು ಮೃತ ವ್ಯಕ್ತಿ ವಾಟ್ಸಾಪ್ ಸಂದೇಶ ರವಾನಿಸಿದ್ದಾನೆ. ಜತೆಗೆ ಮೃತನ ಪತ್ನಿ, ತಾಯಿ ಹಾಗೂ ಪಂಚಾಯ್ತಿ ಅಧ್ಯಕ್ಷರು ಪ್ರತ್ಯಕ್ಷದರ್ಶಿಗಳಾಗಿ ಇದೇ ಹೇಳಿಕೆ ನೀಡಿದ್ದಾರೆ. ಮೃತನ ಸಹೋದರ ಪೊಲೀಸರಿಗೆ ನೀಡಿರುವ ದೂರಿನಲ್ಲೂ ಇದನ್ನೇ ಹೇಳಿದ್ದಾರೆ. ಆದರೂ, ಈ ಪ್ರಕರಣದ ತನಿಖೆ ನಡೆಯುವ ಮುನ್ನವೇ ಮುಖ್ಯಮಂತ್ರಿಗಳು ಈಶ್ವರಪ್ಪ ಯಾವುದೇ ತಪ್ಪು ಮಾಡಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಪೊಲೀಸರು ಈ ಪ್ರಕರಣದ ನ್ಯಾಯಯುತ ತನಿಖೆ ನಡೆಸಲು ಹೇಗೆ ಸಾಧ್ಯ? ಸಚಿವರ ರಕ್ಷಣೆಗಾಗಿ ಮುಖ್ಯಮಂತ್ರಿಗಳು ಕೊಟ್ಟಿರುವ ಹೇಳಿಕೆ ಪೊಲೀಸ್ ತನಿಖೆ ಮೇಲೆ ಪ್ರಭಾವ ಬೀರುವುದಿಲ್ಲವೇ? ಬೊಮ್ಮಾಯಿ ಅವರು ಗೃಹಮಂತ್ರಿ ಆಗಿದ್ದವರು. ಈ ರೀತಿ ಹೇಳಿಕೆ ಕೊಡಬಾರದು ಎಂಬುದು ಅವರಿಗೆ ಗೊತ್ತಿಲ್ಲವೇ? ಅವರೇ ಪ್ರಕರಣದಲ್ಲಿ ದಿಕ್ಕು ತಪ್ಪಿಸುತ್ತಿದ್ದಾರೆ. ಆ ಮೂಲಕ ಆರೋಪಿಗಿಂತಲೂ ಬಹುದೊಡ್ಡ ಅಪರಾಧ ಮಾಡುತ್ತಿದ್ದಾರೆ ಎಂದರು.

ಮೃತ ಸಂತೋಷ್ ಸಹೋದರ ಕೊಟ್ಟಿರುವ ದೂರಿನಲ್ಲಿ 40% ಲಂಚದ ಕಿರುಕುಳದ ಪ್ರಸ್ತಾಪವಾಗಿದ್ದು, ಆರೋಪಿ ವಿರುದ್ಧ ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿಯಲ್ಲಿ ಎಫ್ ಐಆರ್ ದಾಖಲಾಗಿಲ್ಲ ಯಾಕೆ? ನಾವು ಈಶ್ವರಪ್ಪ ಅವರ ರಾಜೀನಾಮೆಗೆ ಒತ್ತಾಯ ಮಾಡುತ್ತಿಲ್ಲ. ಇದೇ ರೀತಿಯ ಬೇರೆ ಪ್ರಕರಣಗಳಲ್ಲಿ ಹೇಗೆ ಕ್ರಮ ಕೈಗೊಂಡು, ಕಾನೂನು ಪಾಲನೆ ಮಾಡಲಾಗುತ್ತದೆಯೋ ಅದೇ ರೀತಿ ಈ ಪ್ರಕರಣದಲ್ಲೂ ಕಾನೂನು ಪಾಲನೆ ಆಗಬೇಕು. ಸಚಿವ ಈಶ್ವರಪ್ಪ ಬಂಧನ ಆಗಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಡೆಯಲಿದೆ ಎಂದರು.

ಈಶ್ವರಪ್ಪ ರಾಜೀನಾಮೆ ನೀಡುತ್ತಾರೋ ಇಲ್ಲವೋ ಬೇರೆ ವಿಚಾರ. ಅವರು ಯಾವತ್ತೂ ನುಡಿದಂತೆ ನಡೆದಿಲ್ಲ. ಈಶ್ವರಪ್ಪ ಸುಳ್ಳಿನ ಕಾರ್ಖಾನೆ ಮಾಲೀಕ ಇದ್ದಂತೆ. ಈ ಪ್ರಕರಣದ ಆರಂಭದಲ್ಲಿ ಸಂತೋಷ್ ಯಾರೆಂದು ಗೊತ್ತೇ ಇಲ್ಲ ಎಂದು ಸುಳ್ಳು ಹೇಳಿದ್ದರು. ನಂತರ ಮಾಧ್ಯಮಗಳಲ್ಲಿ ಅವರು ಸಂತೋಷ್ ಅವರನ್ನು ಭೇಟಿಯಾಗಿರುವ ಫೋಟೋಗಳು ಬಿತ್ತರವಾದವು. ನಾನು ವರ್ಕ್ ಆರ್ಡರ್ ಕೊಟ್ಟೇ ಇಲ್ಲ ಎಂದರು. ಆದರೆ ಸಂತೋಷ್ ಗೆ ಕೆಲಸ ಮಾಡಲು ಈಶ್ವರಪ್ಪನವರು ಹೇಳಿದ್ದಕ್ಕೆ ನಾನೇ ಸಾಕ್ಷಿ ಎಂದು ಗ್ರಾಮ ಪಂಚಾಯ್ತಿ ಅಧ್ಯಕ್ಷರು ಹೇಳಿದ್ದಾರೆ. ಹೀಗೆ ಸುಳ್ಳನ್ನೇ ನೂರು ಬಾರಿ ಹೇಳಿ ನಿಜ ಮಾಡುವ ಕೆಲಸ ಅವರದು. ಅವರು ಯಾವುದೋ ಕಾರ್ಯಕ್ರಮದಲ್ಲಿ ಸುಳ್ಳು ಹೇಳಿಯಾದರೂ ಕೆಲಸ ಸಾಧಿಸಬೇಕು ಎಂದು ಅವರ ಪಕ್ಷದ ಕಾರ್ಯಕರ್ತರಿಗೆ ಸಂದೇಶ ಕೊಟ್ಟಿದ್ದಾರೆ. ಇಂತಹ ವ್ಯಕ್ತಿಯಿಂದ ನಿಜ ನಿರೀಕ್ಷೆ ಮಾಡಲು ಹೇಗೆ ಸಾಧ್ಯ ಎಂದು ಡಿಕೆಶಿ ಪ್ರಶ್ನಿಸಿದರು.

ಅವರ ರಾಜಿನಾಮೆಗಾಗಿ ನಾವು ಹೋರಾಟ ಮಾಡುತ್ತಿಲ್ಲ. ಅವರ ವಿರುದ್ಧದ ದೂರಿನಲ್ಲಿ ಭ್ರಷ್ಟಾಚಾರ ಆರೋಪ ಕೇಳಿ ಬಂದಿದ್ದು, ಆ ಪ್ರಕಾರ ಕೇಸ್ ದಾಖಲಾಗಿ, ಅವರ ಬಂಧನವಾಗಬೇಕು. ಹೈಕೋರ್ಟ್ ನ್ಯಾಯಾಧೀಶರ ಮೇಲ್ವಿಚಾರಣೆಯಲ್ಲಿ ತನಿಖೆ ನಡೆಯಬೇಕು ಎಂಬುದು ನಮ್ಮ ಆಗ್ರಹ. ಈ ವಿಚಾರದಲ್ಲಿ ನಮ್ಮ ಹೋರಾಟ ನಿರಂತರವಾಗಿ ಮುಂದುವರಿಯಲಿದೆ ಎಂದರು.

Advertisement

ರಮೇಶ್ ಜಾರಕಿಹೊಳಿ ಏನೂ ಬೇಕಾದರೂ ಮಾಡಿಕೊಳ್ಳಲಿ. ಎದುರಿಸಲು ನಾನು ರೆಡಿ. ಏನೂ ಬೇಕಾದರೂ ಬಿಚ್ಚಿ ತೋರಿಸಲಿ. ಅವರು ಏನೇನು ಬಿಚ್ಚಿದರು ಅಂತ ಜನ ಈಗಾಗಲೇ ನೋಡಿದ್ದಾರೆ ಎಂದು ಡಿಕೆ ಶಿವಕುಮಾರ್ ವ್ಯಂಗ್ಯವಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next