Advertisement

Congress ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧೆ: ಡಿಕೆಶಿ ನಿಗೂಢ ನಡೆ

12:56 AM Jun 20, 2024 | Team Udayavani |

ರಾಮನಗರ: ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಕಣವು ದಿನಾಂಕ ಘೋಷಣೆಗೆ ಮುನ್ನವೇ ದಿನಕ್ಕೊಂದು ರಾಜಕೀಯ ತಿರುವು ಪಡೆದುಕೊಳ್ಳುತ್ತಿದೆ. ಸ್ವತಃ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೇ ಇಲ್ಲಿ ಕಣಕ್ಕಿಳಿಯುತ್ತಾರೆಯೇ ಎಂಬ ಕುತೂಹಲ ಗರಿಗೆದರಿದೆ.

Advertisement

ಬುಧವಾರ ಶಿವಕುಮಾರ್‌ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸಿದ್ದು, “ಚನ್ನಪಟ್ಟಣವೇ ನನ್ನ ಹೃದಯ. ಜನಒಪ್ಪಿದರೆ ಇಲ್ಲಿ ಸ್ಪರ್ಧೆ ಮಾಡದೆ ವಿಧಿ ಇಲ್ಲ. ಇದು ನನಗೆ ರಾಜಕೀಯ ಜನ್ಮ ನೀಡಿದ ಸ್ಥಳ’ ಎಂದು ಭಾವುಕರಾಗಿ ಹೇಳುವ ಮೂಲಕ ಹೊಸ ತಿರುವು ನೀಡಿದ್ದಾರೆ. ಚನ್ನಪಟ್ಟಣದಿಂದ “ಅಚ್ಚರಿಯ ಅಭ್ಯರ್ಥಿ’ ಕಣಕ್ಕಿಳಿಯುತ್ತಾರೆ ಎಂದು ಡಿ.ಕೆ. ಸುರೇಶ್‌ ಹೇಳಿದ ಬೆನ್ನಲ್ಲೇ ಶಿವಕುಮಾರ್‌ ತಾವು ಸ್ಪರ್ಧಿಸಲು ಸಿದ್ಧ ಎಂಬ ಸಂದೇಶ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಈ ಹೇಳಿಕೆಯ ಹಿಂದೆ ಎದುರಾಳಿ ಮೈತ್ರಿ ಅಭ್ಯರ್ಥಿಗಳನ್ನು ಗೊಂದಲಕ್ಕೆ ತಳ್ಳುವ ಪ್ರಯತ್ನ ಇದೆಯೇ ಅಥವಾ ಸ್ವತಃ ತಾವೇ ಸ್ಪರ್ಧಿಸಿ ಗೆದ್ದು ರಾಮನಗರ ಜಿಲ್ಲೆಯ ಮೇಲಿನ ಹಿಡಿತವನ್ನು ಸಾಧಿಸುವ ರಾಜಕೀಯ ತಂತ್ರ ಇದೆಯೇ ಎನ್ನುವುದು ನಿಗೂಢವಾಗಿದೆ.

ಕುಮಾರಸ್ವಾಮಿ ಮಂಡ್ಯಕ್ಕೆ ವಲಸೆ ಹೋದ ಬಳಿಕ ನಾಯಕತ್ವ ನಿರ್ವಾತವಾಗಿರುವ ರಾಮನಗರ-ಚನ್ನಪಟ್ಟಣ ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯ ಸಾಧಿಸಿ ಒಕ್ಕಲಿಗ ಸಮುದಾಯದ ನಾಯಕತ್ವವನ್ನು ಸಾಧಿಸುವ ರಾಜಕೀಯ ತಂತ್ರಗಾರಿಕೆ ಇದರ ಹಿಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ. ಬುಧವಾರ ಚನ್ನಪಟ್ಟಣದ 14 ದೇಗುಲಗಳಿಗೆ ಭೇಟಿ ನೀಡಿರುವ ಡಿಕೆಶಿ, “ಚನ್ನಪಟ್ಟಣ ಕ್ಷೇತ್ರದಿಂದ ನನ್ನ ರಾಜಕೀಯ ಜೀವನದ ಹೊಸ ಅಧ್ಯಾಯ ಆರಂಭವಾಗಲಿದೆ’ ಎಂದು ಮಾರ್ಮಿಕವಾಗಿ ಹೇಳಿದರು.

ನಾನು ರಾಜಕಾರಣ ಆರಂಭಿಸಿದಾಗ ಈ ತಾಲೂಕಿನ ಒಂದು ಭಾಗ ನನ್ನ ಕ್ಷೇತ್ರಕ್ಕೆ (ಆಗ ಡಿಕೆಶಿ ಸಾತನೂರಿನಲ್ಲಿ ಸ್ಪರ್ಧಿಸಿದ್ದರು, ಬಳಿಕ ಅದು ಕನಕಪುರ ಎಂದು ಬದಲಾಯಿತು) ಸೇರಿತ್ತು.

Advertisement

ಇಲ್ಲಿನ ಜನರು ಸತತ ನಾಲ್ಕು ಬಾರಿ ನನ್ನನ್ನು ಗೆಲ್ಲಿಸಿದರು. ಕ್ಷೇತ್ರ ಮರುವಿಂಗಡಣೆಯಲ್ಲಿ ಆ ಭಾಗ ಬಿಟ್ಟುಹೋದಾಗ ನನಗೆ ತುಂಬಾ ನೋವಾಗಿತ್ತು. ಆದರೂ ಆ ಭಾಗದ ಜನತೆ ಕಾಂಗ್ರೆಸ್‌ ಅಭ್ಯರ್ಥಿಗೆ ಹೆಚ್ಚು ಮತ ನೀಡಿ ಗೆಲ್ಲಿಸಿದ ಇತಿಹಾಸವನ್ನು ಯಾರೂ ಮರೆಮಾಚಲಾಗದು. ಚನ್ನಪಟ್ಟಣದ ಜತೆಗೆ ನನಗೆ ವಿಶೇಷವಾದ ಸಂಬಂಧವಿದೆ. ಇಲ್ಲಿ ಎಲ್ಲ ಜಾತಿ, ಧರ್ಮ, ವರ್ಗದ ಜನತೆ ಒಗ್ಗಟ್ಟಿನಿಂದ ಇದ್ದಾರೆ. ಪ್ರಜ್ಞಾವಂತರು ಇರುವ ಈ ಕ್ಷೇತ್ರದ ಜನತೆ ಇಂದಿಗೂ ನನ್ನ ಬಗ್ಗೆ ಪ್ರೀತಿ ಹೊಂದಿದ್ದಾರೆ ಎಂದರು.

ಋಣ ತೀರಿಸಲು ಬಂದಿರುವೆ
ಕಳೆದ ವಿಧಾನಸಭಾ ಚುನಾವಣೆ ಯಲ್ಲಿ ಜಿಲ್ಲೆಯ ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರು ಗೆಲುವು ಸಾಧಿಸಿದ್ದಾರೆ. ಆದರೆ ಚನ್ನಪಟ್ಟಣದಲ್ಲಿ 16 ಸಾವಿರ ಮತ ಬಂದಿದ್ದು ನನಗೆ ತುಂಬಾ ನೋವು ತಂದಿತ್ತು. ಈ ಬಾರಿಯ ಲೋಕಸಭೆಯಲ್ಲಿ ಇಡೀ ಜಿಲ್ಲೆಯಲ್ಲಿ ಕಡಿಮೆ ಮತ ಬಂದಿದ್ದರೂ ಚನ್ನಪಟ್ಟಣದ ಜನತೆ ನಿರೀಕ್ಷೆ ಮೀರಿ ಮತ ನೀಡಿದ್ದೀರಿ. ನಿಮ್ಮ ಋಣತೀರಿಸುವ ಅವಕಾಶ ಈಗ ಸಿಕ್ಕಿದೆ. ಅದನ್ನು ಮಾಡಲು ನಾನು ಇಲ್ಲಿಗೆ ಬಂದಿದ್ದೇನೆ ಎಂದರು.

ಲೋಕಸಭೆ ಸೋಲು ನನ್ನ ತಪ್ಪು
ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ನನ್ನ ಸೋದರನನ್ನು ಸೋಲಿಸಿದ್ದೀರಿ. ನನ್ನ ತಪ್ಪಿಗೆ ಜನತೆ ಪಾಠ ಕಲಿಸಿದ್ದಾರೆ ಎಂದು ನಾನು ತಿಳಿದುಕೊಳ್ಳುತ್ತೇನೆ. ಈ ಸೋಲಿಗೆ ನಾನು ಯಾರಿಗೂ ಹೊಣೆ ಹೊರಿಸುವುದಿಲ್ಲ. ನಾನೇ ತಿದ್ದಿಕೊಳ್ಳುತ್ತೇನೆ. ಅಭಿವೃದ್ಧಿ ಕೆಲಸ ಮಾಡುವ ಮೂಲಕ ಜನರ ಸೇವೆ ಮಾಡುತ್ತೇನೆ. ಈ ಕ್ಷೇತ್ರದಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತೇನೆ. ಈ ತಾಲೂಕಿನ ಭೂಮಿ, ಜನ, ತಾಯಿ, ಅನ್ನದ ಋಣ ನನ್ನ ಮೇಲಿದೆ. ಅದನ್ನು ತೀರಿಸುತ್ತೇನೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ತಿಳಿಸಿದರು.

ಚನ್ನಪಟ್ಟಣದಿಂದ ಹೋದವನು ಸಚಿವನಾದೆ
ಚನ್ನಪಟ್ಟಣ – ರಾಮನಗರದಲ್ಲಿ ಕೋಮುಗಲಭೆ ಆಗಿದ್ದಾಗ ನಾನು ಮತ್ತು ಸಾದತ್‌ ಆಲಿಖಾನ್‌ ಒಂದೇ
ವೇದಿಕೆಯಲ್ಲಿದ್ದೆವು. ಅಂದು ಚನ್ನಪಟ್ಟಣ ದಿಂದ ಬೆಂಗಳೂರಿನವರೆಗೆ ರಾಜೀವ್‌ಗಾಂಧಿ ಅವರ ಕಾರಿನಲ್ಲಿ ನಾನು ಹೋದೆ. ಬಳಿಕ ವೀರೇಂದ್ರ ಪಾಟೀಲ್‌ ಅವರನ್ನು ಅನಾರೋಗ್ಯದ ಕಾರಣದಿಂದ ಕೆಳಗಿಳಿಸಿ ಬಂಗಾರಪ್ಪ ಮುಖ್ಯಮಂತ್ರಿಯಾದರು. ಅವರ ಸಚಿವ ಸಂಪುಟದಲ್ಲಿ ನಾನು ಬಂದೀಖಾನೆ ಸಚಿವನಾಗಿದ್ದೆ ಎಂದು ಸ್ಮರಿಸಿಕೊಂಡರು.

-ಎಚ್‌ಡಿಕೆ ಮಂಡ್ಯಕ್ಕೆ ಹೋದ ಅನಂತರ ಚನ್ನಪಟ್ಟಣ ಸೇರಿ ಇಡೀ ರಾಮನಗರ ಜಿಲ್ಲೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವುದು ಡಿಕೆಶಿ ತಂತ್ರವೇ?
-ಎದುರಾಳಿ ಪಕ್ಷದಲ್ಲಿ ಯಾರನ್ನು ಕಣಕ್ಕಿಳಿಸಬೇಕೆಂಬ ಗೊಂದಲ ಸೃಷ್ಟಿಸುವ ಪ್ರಯತ್ನವೇ?
-ಬಿಜೆಪಿಯಿಂದ ಯೋಗೇಶ್ವರ್‌ ಅಥವಾ ಜೆಡಿಎಸ್‌ನಿಂದ ನಿಖೀಲ್‌ ಕಣಕ್ಕಿಳಿಸುವು ದನ್ನು ತಪ್ಪಿಸುವ ಉದ್ದೇಶವೇ?
-ತಾವೇ ಸ್ಪರ್ಧಿಸಿ ಗೆದ್ದು, ಲೋಕಸಭೆ ಚುನಾವಣೆಯಲ್ಲಿ ಕಳೆದುಕೊಂಡ ವರ್ಚಸ್ಸನ್ನು ಮರಳಿ ಗಳಿಸುವ ಯೋಚನೆಯೇ?
-ಲೋಕಸಭೆಯಲ್ಲಿ ಸೋತಿರುವ ಸೋದರ ಡಿ.ಕೆ. ಸುರೇಶ್‌ಗೆ ವೇದಿಕೆ ಸೃಷ್ಟಿ ಮಾಡುವ ಪ್ರಯತ್ನವೇ?
-ಯಾರೇ ಅಭ್ಯರ್ಥಿಯಾದರೂ ತಾವೇ ಅಭ್ಯರ್ಥಿ ಎಂದು ಬಿಂಬಿಸುವ ಉದ್ದೇಶವೇ?
-ಚನ್ನಪಟ್ಟಣ ಕ್ಷೇತ್ರದಿಂದ ಗೆದ್ದವರಿಗೆ ಮುಖ್ಯಮಂತ್ರಿ ಆಗುವ ಅದೃಷ್ಟವಿದೆಎಂಬ ನಂಬಿಕೆಯೇ?

ಚನ್ನಪಟ್ಟಣ ಉಪಚುನಾವಣೆಯಲ್ಲಿ ಡಿ.ಕೆ. ಶಿವಕುಮಾರ್‌ ಸ್ಪರ್ಧೆ ಮಾಡುವ ಆವಶ್ಯಕತೆ ಇಲ್ಲ. ಈಗಾಗಲೇ ಅವರು ಉಪಮುಖ್ಯಮಂತ್ರಿ ಆಗಿದ್ದಾರೆ. ಸ್ಪರ್ಧೆ ಮಾಡುತ್ತಾರೆ ಎನ್ನುವುದೆಲ್ಲ ಊಹಾಪೋಹ. ಡಿ.ಕೆ. ಸುರೇಶ್‌ ಲೋಕಸಭಾ ಚುನಾವಣೆಯಲ್ಲಿ ಸೋತಿರುವುದರಿಂದ ಅಲ್ಲಿ ಸ್ಪರ್ಧೆ ಮಾಡುತ್ತಾರೆ ಎನ್ನುವ ಮಾತಿದೆ. ಡಿ.ಕೆ. ಸುರೇಶ್‌ ಸ್ಪರ್ಧೆ ಬಗ್ಗೆ ಪಕ್ಷ ಮತ್ತು ಸಿಎಂ, ಡಿಸಿಎಂ ನಿರ್ಧಾರ ಮಾಡುತ್ತಾರೆ.
-ಚಲುವರಾಯಸ್ವಾಮಿ, ಕೃಷಿ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next