Advertisement

Congress ಡಿಸಿಎಂ ಆಯ್ತು, ಈಗ ಕೆಪಿಸಿಸಿ ಡಿಶುಂ, ಡಿಶುಂ!

12:36 AM Jun 27, 2024 | Shreeram Nayak |

ಬೆಂಗಳೂರು: ಹೆಚ್ಚುವರಿ ಉಪ ಮುಖ್ಯ ಮಂತ್ರಿ ಹುದ್ದೆ ವಿಚಾರದಲ್ಲಿ ಕಾಂಗ್ರೆಸ್‌ನ “ಬಣ ರಾಜಕಾರಣ’ ಮುಂದುವರಿದಿದ್ದು, ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿ.ಕೆ. ಶಿವಕುಮಾರ್‌ ಬಣದ ನಾಯಕರು ಬಹಿರಂಗವಾಗಿ ಗುರುತಿಸಿಕೊಳ್ಳಲಾರಂಭಿಸಿದ್ದಾರೆ.

Advertisement

ಲೋಕಸಭೆ ಚುನಾವಣೆ ಮುಗಿಯುವುದನ್ನೇ ಕಾದಿದ್ದ ಕಾಂಗ್ರೆಸ್‌ ಪಡೆ, ಡಿಸಿಎಂ ಹುದ್ದೆ ವಿಷಯವನ್ನು ಸಾರ್ವಜನಿಕ ಚರ್ಚೆಗೆ ಹರಿಬಿಟ್ಟಿದೆ. ಈ ವಿಚಾರವೀಗ ಉಪಮುಖ್ಯಮಂತ್ರಿ ಹುದ್ದೆ ಮಾತ್ರವಲ್ಲದೆ, ಕೆಪಿಸಿಸಿ ಅಧ್ಯಕ್ಷ ಸ್ಥಾನ, ಸಿಎಂ ಸ್ಥಾನದ ಚರ್ಚೆಯತ್ತಲೂ ಹೊರಳುತ್ತಿದೆ. ಈ ಬಗ್ಗೆ ಮೊದಲಿನಿಂದಲೂ ರೆಬೆಲ್‌ ಆಗಿಯೇ ಮಾತನಾಡುತ್ತಾ ಬಂದಿರುವ ಸಚಿವ ಕೆ.ಎನ್‌. ರಾಜಣ್ಣ, “ಕೆಪಿಸಿಸಿ ಅಧ್ಯಕ್ಷಗಿರಿ ಬಿಡಿ’ ಎಂಬ ಸಂದೇಶವನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ಗೆ ನೇರವಾಗಿ ರವಾನೆ ಮಾಡಿದ್ದಾರೆ.

ಸಿದ್ದರಾಮಯ್ಯ ಆಪ್ತ ಬಣದಲ್ಲಿ ಗುರುತಿಸಿಕೊಂಡಿ ರುವ ಸಹಕಾರ ಸಚಿವ ಕೆ.ಎನ್‌. ರಾಜಣ್ಣ ಮಾಧ್ಯಮದವರೊಂದಿಗೆ ಮಾತನಾಡಿ, ಲೋಕಸಭೆ ಚುನಾವಣೆ ವರೆಗೆ ಕೆಪಿಸಿಸಿ ಅಧ್ಯಕ್ಷ ಗಾದಿಯಲ್ಲಿ ಡಿ.ಕೆ. ಶಿವಕುಮಾರ್‌ ಇದ್ದುದನ್ನು ಈಗ ನೆನಪು ಮಾಡಲು ಇಷ್ಟಪಡುತ್ತೇನೆ’ ಎಂದು ಹೇಳುವ ಮೂಲಕ ಲೋಕಸಭಾ ಚುನಾವಣೆ ಮುಗಿದಿದೆ, ಕೆಪಿಸಿಸಿ ಅಧ್ಯಕ್ಷಗಿರಿ ಬಿಡಿ ಎಂಬುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ.

ಸಚಿವ ರಾಜಣ್ಣ ಪ್ರವೇಶ
ಇದುವರೆಗೆ ಸಿಎಂ, ಡಿಸಿಎಂ ವಿಚಾರದಲ್ಲಿ ಡಿಕೆಶಿ-ಸಿದ್ದರಾಮಯ್ಯ ಬಣದ ನಡುವೆ ನಡೆಯುತ್ತಿದ್ದ “ಭಿನ್ನ ಹೇಳಿಕೆ’ಗಳು ಈಗ ಕೆಪಿಸಿಸಿ ಅಧ್ಯಕ್ಷ ಸ್ಥಾನದತ್ತ ತಿರುಗಿದಂತಾಗಿದೆ. “ಡಿಕೆಶಿಯನ್ನು ಸಿಎಂ ಮಾಡಿ’ ಎಂಬ ಚನ್ನಗಿರಿ ಶಾಸಕ ಬಸವರಾಜು ಶಿವಗಂಗಾ ಹೇಳಿಕೆ ಬೆನ್ನಲ್ಲೇ ಸಿದ್ದರಾಮಯ್ಯ ಅವರನ್ನು ಭೇಟಿಯಾದ ಸಚಿವ ರಾಜಣ್ಣ, ಡಿಕೆಶಿ
ಕೆಪಿಸಿಸಿ ಅಧ್ಯಕ್ಷ ಸ್ಥಾನ ತೆರವುಗೊಳಿಸುವುದು ಸೂಕ್ತವೆಂದು ಹೇಳಿದ್ದಾರೆ.

“ಶಾಸಕ ಶಿವಗಂಗಾ ಅಭಿಪ್ರಾಯ ಹೇಳಿದ್ದಾರೆ. ಬಹಳ ಸಂತೋಷ. ತಪ್ಪೇನಿಲ್ಲವಲ್ಲ? ಪ್ರಜಾಪ್ರಭುತ್ವದಲ್ಲಿ ಅವರವರ ಅಭಿಪ್ರಾಯ ಹೇಳಲು ಹಕ್ಕಿದೆ. ಯಾರು ಏನೇ ಹೇಳಿದರೂ ಅಂತಿಮವಾಗಿ ನಿರ್ಣಯ ಮಾಡುವುದು ಹೈಕಮಾಂಡ್‌. ಅದಕ್ಕೆ ಎಲ್ಲರೂ ಬದ್ಧರಾಗಿರುತ್ತೇವೆ’ ಎಂದು ಸಚಿವ ರಾಜಣ್ಣ ಹೇಳಿದ್ದಾರೆ.

Advertisement

ಹಿಂದೆ ಸರಿಯುವುದಿಲ್ಲ
“ಮೂರು ಡಿಸಿಎಂ ಹುದ್ದೆ ಸೃಷ್ಟಿಸುವ ವಿಚಾರವನ್ನು ನಾನು ಹೊಸದಿಲ್ಲಿಗೆ ಹೋದಾಗಲೂ ಪ್ರಸ್ತಾವಿಸುತ್ತೇನೆ. ಇದರಿಂದ ಹಿಂದೆ ಸರಿಯುವುದಿಲ್ಲ. ಡಿಕೆಶಿ ಅವರನ್ನು ಸಿಎಂ ಮಾಡಬೇಕೆಂಬ ಒತ್ತಾಯವಿದ್ದರೆ ಮಾಡಲಿ. ಸಿದ್ದರಾಮಯ್ಯರನ್ನು ಸಿಎಂ ಮಾಡಿದ್ಯಾರು? ಹೈಕಮಾಂಡ್‌ ತಾನೆ. ಹೈಕಮಾಂಡ್‌ ಮಾಡುತ್ತದೆ ಬಿಡಿ. ನನಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನ ಕೊಡುವುದಾದರೆ ಮಂತ್ರಿ ಪದವಿ ಬಿಡಲು ಸಿದ್ಧ ಎಂದು ನಾನು ಹಿಂದೆಯೇ ಹೇಳಿದ್ದೆ. ಲಿಂಗಾಯತರಲ್ಲೂ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಸಾಕಷ್ಟಿದ್ದಾರೆ’ ಎನ್ನುವ ಮೂಲಕ ಮತ್ತೂಂದು ಬಾಂಬ್‌ ಸಿಡಿಸಿದ್ದಾರೆ.

ಡಿಕೆಶಿಯನ್ನು ಸಿಎಂ ಮಾಡಿ ಎಂದ ಚನ್ನಗಿರಿ ಶಾಸಕಬೆಂಗಳೂರಿನಲ್ಲಿ ಬುಧವಾರ ಈ ಕುರಿತು ಪ್ರತಿಕ್ರಿಯೆ ನೀಡಿರುವ ಚನ್ನಗಿರಿ ಶಾಸಕ ಬಸವರಾಜು ವಿ. ಶಿವಗಂಗಾ, ಡಿಸಿಎಂ ಹುದ್ದೆ ಸೃಷ್ಟಿಸುವ ವಿಚಾರವನ್ನು ಹೈಕಮಾಂಡ್‌ ತೀರ್ಮಾನ ಮಾಡಬೇಕು. ಅಷ್ಟರ ಮೇಲೂ ಮಾಡಬೇಕೆಂದಿದ್ದರೆ, ಮೊದಲು ನಮ್ಮ ಶಿವಕುಮಾರ್‌ ಸಾಹೇಬರನ್ನು ಮುಖ್ಯಮಂತ್ರಿ ಮಾಡಿ, ಬಳಿಕ ಒಂದು ಡಜನ್‌ ಉಪ ಮುಖ್ಯಮಂತ್ರಿಯನ್ನು ಮಾಡಿಕೊಳ್ಳಲಿ ಎಂದಿದ್ದಾರೆ.

ಕೆಪಿಸಿಸಿ ಅಧ್ಯಕ್ಷರ ಸಂಘಟನಾ ಶಕ್ತಿಯಿಂದ ಲೋಕಸಭಾ ಚುನಾವಣೆಯಲ್ಲಿ 1ರಿಂದ 9 ಸ್ಥಾನ ಗೆದ್ದಿದ್ದೇವೆ. ಈ ಸಂಘಟನಾ ಶಕ್ತಿ ಪಕ್ಷಕ್ಕೆ ಬೇಕು ಎನ್ನುವುದಾದರೆ ಡಿ.ಕೆ. ಶಿವಕುಮಾರ್‌ ಅವರನ್ನು ಮುಖ್ಯಮಂತ್ರಿ ಮಾಡಿದರೆ ಇನ್ನೂ ಅನುಕೂಲ ಆಗುತ್ತದೆ. ಅನಂತರ ಒಂದು ಡಜನ್‌ ಜನರನ್ನಾದರೂ ಉಪಮುಖ್ಯಮಂತ್ರಿ ಮಾಡಲಿ. ಕಳೆದ 5 ವರ್ಷ ಸಿದ್ದರಾಮಯ್ಯ ಅವರು ಸಿಎಂ ಆಗಿದ್ದರು. ಈಗ ಒಂದೂವರೆ ವರ್ಷದಿಂದಲೂ ಅವರ ಆಡಳಿತವನ್ನು ನೋಡಿದ್ದೇವೆ. ಎಲ್ಲ ಶಾಸಕರೂ ಸಹಕರಿಸಿದ್ದೇವೆ. ಕೆಪಿಸಿಸಿ ಅಧ್ಯಕ್ಷರಿದ್ದರನ್ನು ಸಿಎಂ ಮಾಡುವುದು ನಮ್ಮ ಪಕ್ಷದಲ್ಲಿನ ಪರಿಪಾಠ. ರಾಜಕೀಯ ಬದಲಾವಣೆಯಿಂದ ಆಗಿಲ್ಲ. ಈಗ ಮಾಡಲಿ ಎಂದು ಒತ್ತಾಯಿಸಿದರು.

ಏನಿದು ಹೊಸ ಬೆಳವಣಿಗೆ?
-3 ಡಿಸಿಎಂ ನೇಮಕ ಬಗ್ಗೆ ಸಿದ್ದು ಬಣದ ಸಚಿವ ರಾಜಣ್ಣರಿಂದ ಪದೇ ಪದೆ ಹೇಳಿಕೆ
-ಹೀಗಾಗಿ 5 ಡಿಸಿಎಂ ನೇಮಕ ಮಾಡಿ ಎಂದು ಲೇವಡಿ ಮಾಡಿದ್ದ ಡಿ.ಕೆ.ಸುರೇಶ್‌
– ಯಾರನ್ನು ಬೇಕಿದ್ದರೂ ಡಿಸಿಎಂ ಹುದ್ದೆಗೆ ನೇಮಕ ಮಾಡಿ ಎಂದಿದ್ದ ಶಿವಕುಮಾರ್‌
– ಸಿದ್ದರಾಮಯ್ಯ ಸಿಎಂ ಆಗುವ ವೇಳೆ ಲೋಕಸಭೆ ಚುನಾವಣೆ ವರೆಗೆ ಮಾತ್ರ ಡಿಕೆಶಿ ಕೆಪಿಸಿಸಿ ಅಧ್ಯಕ್ಷ ಎಂಬ ಬಗ್ಗೆ ಒಪ್ಪಂದ

ಹೈಕಮಾಂಡ್‌ ತೀರ್ಮಾನಕ್ಕೆಬದ್ಧ: ಸಿದ್ದರಾಮಯ್ಯ
ಡಿಸಿಎಂ ಹುದ್ದೆ ಸೃಷ್ಟಿ ವಿಚಾರವಾಗಿ ಸಚಿವರು, ಶಾಸಕರು ಬಹಿರಂಗ ಹೇಳಿಕೆ ನೀಡುತ್ತಿರುವ ಮಧ್ಯೆ ಸಿಎಂ ಸಿದ್ದರಾಮಯ್ಯ ಈ ಬಗ್ಗೆ ಅಂತರ ಕಾಯ್ದುಕೊಂಡಿದ್ದಾರೆ. “ಸಮುದಾಯವಾರು ಮೂರು ಡಿಸಿಎಂ ಹುದ್ದೆ ಸೃಷ್ಟಿ ವಿಚಾರದಲ್ಲಿ ಹೈಕಮಾಂಡ್‌ ನಾಯಕರು ಏನು ತೀರ್ಮಾನ ಮಾಡುತ್ತಾರೋ ಅದಕ್ಕೆ ಬದ್ಧ ಅಷ್ಟೇ’ ಎಂದು ಹೇಳಿದ್ದಾರೆ.

ಸ್ಥಳೀಯ ಸಂಸ್ಥೆಚುನಾವಣೆ ವರೆಗೆ ಡಿಕೆಶಿ ಅಧ್ಯಕ್ಷ: ಆಪ್ತರ ಹೇಳಿಕೆ
-ಕೆಪಿಸಿಸಿಗೆ ಹೊಸ ಅಧ್ಯಕ್ಷರ ನೇಮಿಸಿದರೆ ಸಂಘಟನೆ ಸಮಯದ ಕೊರತೆ ಸಾಧ್ಯತೆ
– ತಾ.ಪಂ., ಜಿ.ಪಂ. ಸೇರಿ ಸ್ಥಳೀಯ ಸಂಸ್ಥೆ ಚುನಾವಣೆ ಹಿನ್ನೆಲೆಯಲ್ಲಿ ಡಿ.ಕೆ.ಶಿವಕುಮಾರ್‌ ಮುಂದುವರಿಯಲಿ
-ಲೋಕಸಭೆ ಚುನಾವಣೆಯಲ್ಲಿ 9 ಸ್ಥಾನ ಗೆದ್ದಿರುವುದೂ ಡಿಕೆಶಿ ಮುಂದುವರಿಕೆಗೆ ಕಾರಣ
-2018ರ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ತಂದಿದ್ದ ಹೆಗ್ಗಳಿಕೆ ಡಿಕೆಶಿಗೆ ಇದೆ
-ಕೆಪಿಸಿಸಿ ಅಧ್ಯಕ್ಷರ ನೇಮಕ ಬಗ್ಗೆ ಬಹಿರಂಗ ಹೇಳಿಕೆ ಬಗ್ಗೆ ವರಿಷ್ಠರು ಸಹಿಸುವುದಿಲ್ಲ ಎಂಬ ವಾದ.

ಎಲ್ಲರನ್ನೂ ಡಿಸಿಎಂ ಮಾಡಲಿ ಎನ್ನುವ ಪ್ರಿಯಾಂಕ್‌ ಖರ್ಗೆ ಅವರನ್ನೇ ಸಿಎಂ ಮಾಡಿದರಾಯಿತು. ಇದೆಲ್ಲ ಇಲ್ಲಿ ಚರ್ಚಿಸುವ ವಿಚಾರ ಅಲ್ಲ. ಹೈಕಮಾಂಡ್‌ ತೀರ್ಮಾನ ಮಾಡುತ್ತದೆ.
– ಡಿ.ಕೆ. ಶಿವಕುಮಾರ್‌, ಉಪ ಮುಖ್ಯಮಂತ್ರಿ

ಡಿಸಿಎಂ ಹುದ್ದೆ ವಿಚಾರ ಪತ್ರಿಕೆಗಳ ಮೂಲಕ ಗೊಂದಲ ಸೃಷ್ಟಿಸುತ್ತಿದೆ. ಈ ವಿಷಯ ಚರ್ಚೆ ಮಾಡಬಾರದೆಂಬುದು ಹೈಕಮಾಂಡ್‌ ಮಾರ್ಗದರ್ಶನ ಇದೆ. ಈ ಹಿನ್ನೆಲೆಯಲ್ಲಿ ಯಾವುದೇ ಟಿಪ್ಪಣಿ ಮಾಡಲ್ಲ. ಇಲ್ಲಿ ಚರ್ಚಿಸುವುದಿಲ್ಲ. ಅಂತಹ ಆವಶ್ಯಕತೆ ಬಿದ್ದಾಗ ಪಕ್ಷದ ವೇದಿಕೆಗಳಲ್ಲಿ ಮಾತನಾಡುತ್ತೇವೆಯೇ ಹೊರತು, ಮಾಧ್ಯಮಗಳೊಂದಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ.
ಎಚ್‌.ಕೆ. ಪಾಟೀಲ್‌, ಕಾನೂನು ಸಚಿವ

Advertisement

Udayavani is now on Telegram. Click here to join our channel and stay updated with the latest news.

Next