Advertisement

ಚನ್ನಪಟ್ಟಣ ಟಿಕೆಟ್‌: ಮೈತ್ರಿಪಕ್ಷದಲ್ಲಿ ಪೈಪೋಟಿ?

03:34 PM Jun 15, 2024 | Team Udayavani |

ರಾಮನಗರ: ಚನ್ನಪಟ್ಟಣ ಉಪಚುನಾವಣೆ ಘೋಷಣೆಗೆ ಮುನ್ನವೇ ರಾಜಕೀಯ ವಲಯದಲ್ಲಿ ಬಿಸಿಬಿಸಿ ಚರ್ಚೆಗಳು ಆರಂಭಗೊಂಡಿವೆ. ಈ ಉಪಚುನಾವಣೆಯಲ್ಲಿ ತಮ್ಮದೇ ಪ್ರಾಬಲ್ಯ ಉಳಿಸಿಕೊಳ್ಳಲು ಮೈತ್ರಿ ಪಕ್ಷಗಳ ನಡುವೆ ಪೈಪೋಟಿ ನಡೆಯುತ್ತಿದೆಯಾ? ಎಂಬ ಅನುಮಾನ ಮೂಡಿಸಿದೆ. ಇದಕ್ಕೆ ಎರಡೂ ಪಕ್ಷದ ಮುಖಂಡರ ಹೇಳಿಕೆಗಳು ಕಾರಣವಾಗಿದೆ.

Advertisement

ಹೌದು.., ಚನ್ನಪಟ್ಟಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಎಂಎಲ್‌ಸಿ ಸಿ.ಪಿ.ಯೋಗೇಶ್ವರ್‌, ಜಿಲ್ಲೆಯಲ್ಲಿ ಬಿಜೆಪಿ ಪ್ರಾಬಲ್ಯ ಹೊಂದಿರುವುದು ಇದೊಂದೇ ಕ್ಷೇತ್ರ. ಈ ಕಾರಣದಿಂದ ಬಿಜೆಪಿ ವರಿಷ್ಠರು ಉಪಚುನಾವಣೆ ಅಭ್ಯರ್ಥಿ ಆಯ್ಕೆಮಾಡುವಾಗ ಈ ಸಂಗತಿಯನ್ನು ಗಮನದಲ್ಲಿಟ್ಟುಕೊಳ್ಳುತ್ತಾರೆ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡುವ ಮೂಲಕ ಚನ್ನಪಟ್ಟಣ ಬಿಜೆಪಿಗೆ ಬೇಕು ಎಂಬ ಪರೋಕ್ಷ ಸಂದೇಶವನ್ನು ರವಾನಿಸಿದ್ದಾರೆ.

ಇದೇ ಸಮಯದಲ್ಲಿ ವಿಭಿನ್ನ ಹೇಳಿಕೆ ನೀಡಿರುವ ಚನ್ನಪಟ್ಟಣ ತಾಲೂಕು ಜೆಡಿಎಸ್‌ ಅಧ್ಯಕ್ಷ ಎಚ್‌ .ಸಿ.ಜಯಮುತ್ತು, ಕುಮಾರಸ್ವಾಮಿ ರಾಷ್ಟ ರಾಜಕಾರಣಕ್ಕೆ ಹೋಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಪಕ್ಷವನ್ನು ಬಲಿಷ್ಟಗೊಳಿಸುವ ನಾಯಕನ ಅವಶ್ಯಕತೆ ಇದೆ. ನಿಖೀಲ್‌ಕುಮಾರಸ್ವಾಮಿ ಈ ಕಾರ್ಯಕ್ಕೆ ಸಮರ್ಥರಿದ್ದು, ಅವರಿಗೆ ಸೂಕ್ತ ಸ್ಥಾನಮಾನ ನೀಡ ಬೇಕು. ಇದಕ್ಕಾಗಿ ಚನ್ನಪಟ್ಟಣ ಉಪಚುನಾವಣೆಯಲ್ಲಿ ಅವರನ್ನೇ ಅಭ್ಯರ್ಥಿ ಮಾಡಬೇಕು ಎಂಬುದು ನಮ್ಮ ಕಾರ್ಯಕರ್ತರ ಓತ್ತಾಸೆಯಾಗಿದೆ ಎಂದು ಹೇಳುವ ಮೂಲಕ ಜೆಡಿಎಸ್‌ಗೆ ಚನ್ನಪಟ್ಟಣ ಕ್ಷೇತ್ರ ಬೇಕು ಎಂದು ಪ್ರತಿಪಾದಿಸಿದ್ದಾರೆ.

ಚನ್ನಪಟ್ಟಣ ಪ್ರತಿಷ್ಠೆಯ ಕಣ: ಮಾಜಿ ಸಿಎಂ ಎಚ್‌ .ಡಿ.ಕುಮಾರಸ್ವಾಮಿ ಇದೀಗ ಮಂಡ್ಯ ಲೋಕಸಭಾ ಸದಸ್ಯರಾಗುವ ಜತೆಗೆ ಎನ್‌ಡಿಎ ಮೈತ್ರಿಕೂಟದಲ್ಲಿ ಮೋದಿ ಕ್ಯಾಬಿನೆಟ್‌ ಸೇರಿದ್ದಾರೆ. ಇವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಇವರ ರಾಜೀನಾಮೆ ಯಿಂದ ತೆರವಾಗುವ ಶಾಸಕ ಸ್ಥಾನಕ್ಕೆ ಉಪಚುನಾವಣೆ ಎದುರಾಗಲಿದೆ. ಈ ಉಪಚುನಾವಣೆ ಕಾಂಗ್ರೆಸ್‌ ಮತ್ತು ಮೈತ್ರಿ ಪಕ್ಷಗಳಿಗೆ ಪ್ರತಿಷ್ಟೆಯ ಕಣವಾಗಿದ್ದು, ಕ್ಷೇತ್ರದಲ್ಲಿ ಗೆಲುವು ಸಾಧಿಸಲು ಉಭಯಪಕ್ಷಗಳು ಪ್ರಯತ್ನಿಸುತ್ತಿವೆ. ಚನ್ನಪಟ್ಟಣ ಕುಮಾರಸ್ವಾಮಿ ಸ್ಪರ್ಧೆಮಾಡಿದ್ದ ಕ್ಷೇತ್ರ  ವಾಗಿದ್ದು, ಉಪಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳುವುದು ಎನ್‌ಡಿಎ ಮೈತ್ರಿ ಕೂಟಕ್ಕೆ ಪ್ರತಿಷ್ಠೆಯ ಸಂಗತಿ. ಇನ್ನು ಯೋಗೇಶ್ವರ್‌ ಈ ಕ್ಷೇತ್ರದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದು, ಕಳೆದ 2 ಬಾರಿ ಕುಮಾರಸ್ವಾಮಿ ವಿರುದ್ಧ ಪರಾಜಿತರಾಗಿ ಕ್ಷೇತ್ರ ಕಳೆದುಕೊಂಡಿದ್ದಾರೆ. ತಮ್ಮ ತವರು ಕ್ಷೇತ್ರದಲ್ಲಿ ಮೈತ್ರಿಕೂಟಕ್ಕೆ ಸೋಲಾಗದಂತೆ ನೋಡಿಕೊಳ್ಳುವುದು ಅವರಿಗೂ ಪ್ರತಿಷ್ಠೆಯಾಗಿದೆ.

ಇನ್ನು ಡಿಸಿಎಂ ಡಿ.ಕೆ. ಶಿವಕುಮಾರ್‌ ಸಾತನೂರು ಕ್ಷೇತ್ರವನ್ನು ಪ್ರತಿನಿಧಿಸು ತ್ತಿದ್ದಾಗ ಚನ್ನಪಟ್ಟಣ ತಾಲೂಕಿನ ಕೆಲ ಗ್ರಾಮಗಳು ಇವರ ಕ್ಷೇತ್ರಕ್ಕೆ ಸೇರಿತ್ತು. ಹೀಗಾಗಿ ಇಲ್ಲಿ ಕೈ ಅಭ್ಯರ್ಥಿ ಗೆಲ್ಲಿಸಿಕೊಳ್ಳುವುದು, ಈ ಮೂಲಕ ಎಚ್‌ಡಿಕೆ ಪ್ರತಿನಿಧಿಸುತ್ತಿದ್ದ ಕ್ಷೇತ್ರವನ್ನು ಕಸಿದುಕೊಂಡು ಲೋಕಸಭಾ ಚುವಣೆಯಲ್ಲಿ ತಮ್ಮ ಸಹೋದರನಿಗೆ ಆಗಿರುವ ಸೋಲಿನ ಸೇಡು ತೀರಿಸಿಕೊಳ್ಳುವುದು ಇವರಿಗೂ ಪ್ರತಿಷ್ಠೆಯ ಸಂಗತಿಯಾಗಿ ಪರಿಣಮಿಸಿದೆ.

Advertisement

ಜೆಡಿಎಸ್‌-ಬಿಜೆಪಿ ಯಾರಿಗೆ ಕ್ಷೇತ್ರ?: ಚನ್ನಪಟ್ಟಣ ವಿಧಾನಸಭಾ ಕ್ಷೇತ್ರ ಎನ್‌ಡಿಎ ಮೈತ್ರಿಕೂಟದ ಪಕ್ಷಗಳಾದ ಜೆಡಿಎಸ್‌-ಬಿಜೆಪಿ ಪೈಕಿ ಯಾರಿಗೆ ಸಿಗಲಿದೆ ಎಂಬ ಚರ್ಚೆ ಎದುರಾಗಿದೆ. ಚನ್ನಪಟ್ಟಣದ ಜತೆಗೆ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಗೆಲುವು ಸಾಧಿಸಿರುವ ಶಿಗ್ಗಾವಿ ಮತ್ತು ತುಕಾರಂ ಗೆಲುವು ಸಾಧಿಸಿರುವ ಬಳ್ಳಾರಿ ವಿಧಾನಸಭಾ ಕ್ಷೇತ್ರಗಳಿಗೂ ಚುನಾವಣೆ ನಡೆಯಲಿದ್ದು, ಮೈತ್ರಿ ಪಕ್ಷಗಳು 3 ಕ್ಷೇತ್ರವನ್ನು ಬಿಜೆಪಿಗೆ ಬಿಟ್ಟುಕೊಡುವುದಾ?, ಇಲ್ಲ ಎರಡರಲ್ಲಿ ಬಿಜೆಪಿ ಸ್ಪರ್ಧೆಗೆ ಅವಕಾಶ ನೀಡಿ ಒಂದರಲ್ಲಿ ಜೆಡಿಎಸ್‌ಗೆ ಅವಕಾಶ ದೊರೆಯಲಿದೆಯಾ ಕಾಯ್ದು ನೋಡಬೇಕಿದೆ. ಚನ್ನಪಟ್ಟಣ ಕ್ಷೇತ್ರದ ಮೇಲೆ ಉಭಯ ಪಕ್ಷದ ಸ್ಥಳೀಯ ನಾಯಕರು ಕಣ್ಣಿಟ್ಟಿದ್ದು, ಅಂತಿಮವಾಗಿ ಉಭಯ ಪಕ್ಷದ ವರಿಷ್ಠರು ಯಾರಿಗೆ ಕ್ಷೇತ್ರ ಬಿಟ್ಟುಕೊಡುತ್ತಾರೆ ಕಾದು ನೋಡಬೇಕಿದೆ.

ತಾಲೂಕು ಅಧ್ಯಕ್ಷ ಜಯಮುತ್ತು ಹೇಳಿದ್ದೇನು..? ಕುಮಾರಸ್ವಾಮಿ ಕೇಂದ್ರ ಸಚಿವರಾಗಿರುವ ಕಾರಣ ರಾಜ್ಯದಲ್ಲಿ ಪಕ್ಷ ಸಂಘಟನೆ ಮಾಡಲು ನಿಖೀಲ್‌ ಕುಮಾರಸ್ವಾಮಿ ಅತ್ಯವಶ್ಯಕ. ಮುಂದೆ ರಾಜ್ಯದಲ್ಲಿ ಜೆಡಿಎಸ್‌ ಅಧಿಕಾರಕ್ಕೆ ಬರುತ್ತದೆ. ಹೀಗಾಗಿ ನಿಖೀಲ್‌ ಕುಮಾರಸ್ವಾಮಿ ಅವರನ್ನು ಚನ್ನಪಟ್ಟಣ ಉಪಚುನಾವಣೆಗೆ ಸ್ಪರ್ಧೆಮಾಡುವಂತೆ ತಾಲೂಕಿನ ಜೆಡಿಎಸ್‌ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ನಮ್ಮ ಆಸೆಯೂ ನೂರಕ್ಕೆ ನೂರಷ್ಟು ಇದೇ ಆಗಿದೆ. ಎನ್‌ಡಿಎ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಎರಡೂ ಪಕ್ಷದ ವರಿಷ್ಠರು ಕುಳಿತು ಚರ್ಚಿಸಿ ತೀರ್ಮಾನ ಮಾಡುತ್ತಾರೆ. ನಾವು ಕ್ಷೇತ್ರ ಕಾರ್ಯಕರ್ತರ ಅಭಿಪ್ರಾಯವನ್ನು ವರಿಷ್ಠರಿಗೆ ತಿಳಿಸಿ ನಿಖಿಲ್‌ಕುಮಾರಸ್ವಾಮಿ ಅವರನ್ನು ಕಣಕ್ಕಿಳಿಸಲು ಒಪ್ಪಿಸುವ ಪ್ರಯತ್ನ ಮಾಡುತ್ತೇವೆ.

Advertisement

Udayavani is now on Telegram. Click here to join our channel and stay updated with the latest news.

Next