ಬೆಂಗಳೂರು: ಮಾಜಿ ಸಚಿವ ಎಂ.ಆರ್. ಸೀತಾರಾಮ್ ಅವರನ್ನು ನಮ್ಮ ಪಕ್ಷ ಗುರುತಿಸಿ ಶಾಸಕರನ್ನು, ಮಂತ್ರಿಯನ್ನಾಗಿ ಹಾಗೂ ಪರಿಷತ್ ಸದಸ್ಯರನ್ನಾಗಿ ಮಾಡಿದೆ. ಅವರಿಗೆ ದೇವರು ಒಳ್ಳೆಯ ಬುದ್ಧಿ ಕೊಟ್ಟು ಒಳ್ಳೆಯದು ಮಾಡಲಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವರು ಪಕ್ಷದ ಹಿರಿಯ ನಾಯಕರು. ಅವರು ಶಾಸಕರಾಗಿದ್ದು, ಮಂತ್ರಿಯಾಗಿದ್ದರು. ಸದನದಲ್ಲಿ ಆಡಳಿತ ಪಕ್ಷದ ನಾಯಕರಾಗಿದ್ದರು. ಪಕ್ಷ ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಕೊಟ್ಟಿತ್ತು. ಆದರೆ ಅವರು ಸ್ಪರ್ಧೆಯಿಂದ ಹಿಂದೆ ಸರಿದಿದ್ದರು. ಕಳೆದ ಬಾರಿ ವಿಧಾನ ಪರಿಷತ್ ಎರಡು ಸ್ಥಾನಗಳ ಪೈಕಿ ಹಿರಿಯರಾದ ನಾಸಿರ್ ಹಾಗೂ ಬಿ.ಕೆ ಹರಿಪ್ರಸಾದ್ ಅವರನ್ನು ಆಯ್ಕೆ ಮಾಡಲಾಯಿತು. ರಾಜ್ಯಸಭೆಗೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಆಯ್ಕೆ ಮಾಡಿದ್ದೆವು. ಈ ಬಾರಿ ಜೈರಾಮ್ ರಮೇಶ್ ಅವರಿಗೆ ನೀಡಿದ್ದೇವೆ. ಇದರಲ್ಲಿ ಏನಾದರೂ ತಪ್ಪಿದ್ದರೆ ಹೇಳಲಿ’ ಎಂದರು.
ಈ ಅಸಮಾಧಾನಿತರ ಸಭೆ ಶಿಸ್ತು ಉಲ್ಲಂಘನೆ ಆಗುವುದಿಲ್ಲವೇ ಎಂಬ ಪ್ರಶ್ನೆಗೆ, ‘ ಆ ವಿಚಾರವಾಗಿ ಪಕ್ಷದ ಶಿಸ್ತು ಸಮಿತಿ ನೋಡಿಕೊಳ್ಳುತ್ತದೆ ಎಂದರು.
ಇದನ್ನೂ ಓದಿ:ನಮಗೆ ರಾಜಕೀಯ ಮಾಡುವುದು ಗೊತ್ತಿಲ್ಲ : ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್
ಸೀತಾರಾಮ್ ಅವರಿಗೆ ಬಿಜೆಪಿ ಬಗ್ಗೆ ಮೋಹವಿದೆಯೆ ಎಂಬ ಪ್ರಶ್ನೆಗೆ ಉತ್ತರಿಸಿದ ಡಿಕೆಶಿ, ‘ಅವರು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ಹೆಸರು ಮಾಡಿದ್ದಾರೆ. ಬಿಜೆಪಿಯವರು ಯಾರನ್ನೂ ಬಿಡುವುದಿಲ್ಲ. ಬಿಜೆಪಿಯವರು ಯಾವ ರೀತಿ ಪ್ರಯತ್ನಿಸುತ್ತಿದ್ದಾರೆ, ಚಿಕ್ಕಬಳ್ಳಾಪುರದಿಂದ ಯಾರನ್ನು ಕಳುಹಿಸಿದ್ದರು ಎಂಬ ಮಾಹಿತಿ ನನ್ನ ಬಳಿ ಇದೆ. ಅವರದು ಬಹಳ ಗೌರವಯುತ ಕುಟುಂಬ ಅವರು ಈ ರೀತಿ ಮಾಡುವುದಿಲ್ಲ’ ಎಂದು ಅಭಿಪ್ರಾಯಪಟ್ಟರು.