Advertisement

D.K.Shivakumar ವಿಚಾರಣೆ ತಡೆಗೆ ವಿರೋಧ: ಹೈಕೋರ್ಟ್‌ಗೆ ಸಿಬಿಐ ಮೊರೆ

01:17 AM Jan 06, 2024 | Team Udayavani |

ಬೆಂಗಳೂರು: ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ವಿರುದ್ಧದ ಆದಾಯ ಮೀರಿದ ಆಸ್ತಿ ಗಳಿಕೆ ಪ್ರಕರಣದ ತನಿಖೆಗೆ ನೀಡಲಾಗಿದ್ದ ಅನುಮತಿಯನ್ನು ವಾಪಸ್‌ ಪಡೆದ ಸರಕಾರದ ಕ್ರಮವನ್ನು ಪ್ರಶ್ನಿಸಿ ಸಿಬಿಐ ಈಗ ಹೈಕೋರ್ಟ್‌ ಮೆಟ್ಟಿಲೇರಿದೆ. ಇದೇ ವಿಚಾರವಾಗಿ ಬಿಜೆಪಿ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಕೂಡ ಅರ್ಜಿ ಸಲ್ಲಿಸಿದ್ದಾರೆ. ಈ ಎರಡೂ ಅರ್ಜಿಗಳು ಈಗ ಹೈಕೋರ್ಟ್‌ನ ವಿಸ್ತೃತ ಪೀಠಕ್ಕೆ ಶಿಫಾರಸುಗೊಂಡಿವೆ. ಸಿಬಿಐ ಹಾಗೂ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಸಲ್ಲಿಸಿದ್ದ ಎರಡು ಪ್ರತ್ಯೇಕ ತಕರಾರು ಅರ್ಜಿಗಳನ್ನು ನ್ಯಾಯಮೂರ್ತಿ ಕೃಷ್ಣ ಎಸ್‌. ದೀಕ್ಷಿತ್‌ ಅವರಿದ್ದ ಏಕಸದಸ್ಯ ನ್ಯಾಯಪೀಠ ಶುಕ್ರವಾರ ವಿಚಾರಣೆ ನಡೆಸಿತು. ಹೀಗಾಗಿ ಮತ್ತೆ ಶಿವಕುಮಾರ್‌ ಸಿಬಿಐನಿಂದ ವಿಚಾರಣೆಗೆ ಒಳಗಾಗುವ ಆತಂಕದಲ್ಲಿದ್ದಾರೆ.

Advertisement

ಸುದೀರ್ಘ‌ ವಾದ-ಪ್ರತಿವಾದವನ್ನು ಆಲಿಸಿದ ನ್ಯಾ| ಕೃಷ್ಣ ಎಸ್‌. ದೀಕ್ಷಿತ್‌ ಅವರು, ಪ್ರಕರಣದ ದಾಖಲೆಗಳನ್ನು ಮುಖ್ಯ ನ್ಯಾಯಮೂರ್ತಿಗಳ ಮುಂದೆ ಮಂಡಿಸಬೇಕು. ಕರ್ನಾಟಕ ಹೈಕೋರ್ಟ್‌ ಕಾಯ್ದೆಯ ಸೆಕ್ಷನ್‌ 8ರ ಪ್ರಕಾರ ಮುಖ್ಯ ನ್ಯಾಯಮೂರ್ತಿಗಳ ಪೀಠ ರಚನೆ ಮಾಡಲಿ ಎಂದು ಶಿಫಾರಸು ಮಾಡಿದರು. ಅಲ್ಲದೆ ನ್ಯಾಯಪೀಠ ಹೇಗಿರಬೇಕು, ನ್ಯಾಯಪೀಠದಲ್ಲಿ ಎಷ್ಟು ಸದಸ್ಯರು ಇರಬೇಕು ಎಂಬುದನ್ನೂ ಮುಖ್ಯ ನ್ಯಾಯಮೂರ್ತಿಗಳೇ ನಿರ್ಧರಿಸಲಿ. ಒಂದೇ ಬಾರಿಗೆ ಪ್ರಕರಣವನ್ನು ಇತ್ಯರ್ಥಪಡಿಸಿದಂತಾಗುತ್ತದೆ. ಮುಖ್ಯ ನ್ಯಾಯ ಮೂರ್ತಿಯವರಿಂದ ರಚಿಸಲ್ಪಟ್ಟ ಪೀಠವು ಸಮರೋ ಪಾದಿಯಲ್ಲಿ ಪ್ರಕರಣವನ್ನು ನಿರ್ವಹಿಸಬೇಕು ಎಂಬುದಕ್ಕೆ ಕಕ್ಷಿದಾರರ ಸಹಮತವಿದೆ. ನ್ಯಾಯಪೀಠವೂ ಇದೇ ಅಭಿಪ್ರಾಯ ಹೊಂದಿದೆ ಎಂದು ಆದೇಶದಲ್ಲಿ ತಿಳಿಸಿದರು.
ಇದೇ ವೇಳೆ ವಿಸ್ತೃತ ಪೀಠ ಪ್ರಕರಣ ತೀರ್ಮಾನಿಸುವವರೆಗೆ ಲೋಕಾಯುಕ್ತ ಪೊಲೀಸರು ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂಬ ಸಿಬಿಐ ವಕೀಲರ ಕೋರಿಕೆ ಮತ್ತು ಸಿಬಿಐ ಕೂಡ ಯಾವುದೇ ಕ್ರಮಕ್ಕೆ ಮುಂದಾಗುವಂತಿಲ್ಲ ಎಂಬ ಅಡ್ವೊಕೇಟ್‌ ಜನರಲ್‌ ಮನವಿಯನ್ನು ನ್ಯಾಯಪೀಠ ತನ್ನ ಆದೇಶದಲ್ಲಿ ದಾಖಲಿಸಿತು. ಅಲ್ಲದೆ ಡಿಸಿಎಂ ಡಿ.ಕೆ. ಶಿವಕುಮಾರ್‌ ಸೇರಿ ಎರಡೂ ಅರ್ಜಿಗಳ ಪ್ರತಿವಾದಿಗಳಿಗೆ ನ್ಯಾಯಪೀಠ ನೋಟಿಸ್‌ ಜಾರಿಗೊಳಿಸಿತು.

ಇದಕ್ಕೆ ಮುನ್ನ ರಾಜ್ಯ ಸರಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್‌ ಜನರಲ್‌ ಕೆ. ಶಶಿಕಿರಣ್‌ ಶೆಟ್ಟಿ ಅವರು ಎರಡೂ ಅರ್ಜಿಗಳನ್ನು ವಿರೋಧಿಸಿದರು. ಅರ್ಜಿದಾರರಿಗೆ ಅರ್ಜಿ ಸಲ್ಲಿಸುವ ಅಧಿಕಾರವಿಲ್ಲ. 2013ರ ಸುಪ್ರೀಂ ಕೋರ್ಟ್‌ ತೀರ್ಪಿನ ಪ್ರಕಾರ ಮೂರನೇ ವ್ಯಕ್ತಿಯು ಕ್ರಿಮಿನಲ್‌ ಪ್ರಕ್ರಿಯೆಯಲ್ಲಿ ಮೂಗು ತೂರಿಸುವಂತಿಲ್ಲ ಎಂದರು.
ಸಿಬಿಐ ಪರ ವಿಶೇಷ ಅಭಿಯೋಜಕ ಪಿ. ಪ್ರಸನ್ನಕುಮಾರ್‌ ಹಾಗೂ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಪರ ವಕೀಲ ವೆಂಕಟೇಶ್‌ ದಳವಾಯಿ ವಾದ ಮಂಡಿಸಿ, ದಿಲ್ಲಿ ವಿಶೇಷ ಪೊಲೀಸ್‌ ಸ್ಥಾಪನಾ ಕಾಯ್ದೆ-1984ರ ಸೆಕ್ಷನ್‌ 6ರಡಿ ಒಮ್ಮೆ ರಾಜ್ಯ ಸರಕಾರವು ಸಿಬಿಐ ತನಿಖೆಗೆ ಅನುಮತಿ ನೀಡಿದ ಮೇಲೆ ಅದನ್ನು ಹಿಂಪಡೆಯಲಾಗದು. ಮುಖ್ಯವಾಗಿ ಯಾವುದೇ ಸಂದರ್ಭದಲ್ಲೂ ಪೂರ್ವಾನ್ವಯವಾಗುವಂತೆ ಆದೇಶ ಹಿಂಪಡೆಯಲಾಗದು. ಸಿಬಿಐ ತನಿಖೆ ಮುಂದುವರಿಸಲು, ಕಾನೂನಿನ ಪ್ರಕಾರ ಅಂತಿಮ ವರದಿ ಸಲ್ಲಿಸಲು ಅನುಮತಿ ನೀಡಬೇಕು ಎಂದು ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next