Advertisement

ಹಿಂದುಳಿದ ಸಮುದಾಯಗಳತ್ತ ಡಿಕೆಶಿ ಚಿತ್ತ

03:37 PM Sep 07, 2021 | Team Udayavani |

ಬೆಂಗಳೂರು: ವಿಧಾನಸಭೆ ಚುನಾವಣೆ ಇನ್ನೂ ಹದಿನಾರು ತಿಂಗಳು ಇರುವಾಗಲೇ ಕಾಂಗ್ರೆಸ್‌ನಲ್ಲಿ ವೈಯಕ್ತಿಕ ಬಲ ಗಟ್ಟಿ ಮಾಡಿಕೊಳ್ಳುವ ಕಸರತ್ತು ಪ್ರಾರಂಭವಾಗಿದ್ದು ಹಿಂದುಳಿದ ಸಮುದಾಯಗಳತ್ತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಚಿತ್ತ ಹರಿಸಿದ್ದಾರೆ.

Advertisement

ಯಾದವ, ಸವಿತಾ, ಮಡಿವಾಳ, ಬಲಿಜ, ಈಡಿಗ, ಉಪ್ಪಾರ, ಗಾಣಿಗ ಸೇರಿ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರ ವಹಿಸುವ ಹಿಂದುಳಿದ ವರ್ಗ ಗಳ ನಾಯಕರ ಜತೆ ಸಭೆ- ಸಮಾಲೋಚನೆ ಮೂಲಕ ಅವರ ಒಲವುಗಳಿಸಲು ಕಾರ್ಯತಂತ್ರ ರೂಪಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಹಿಂದುಳಿದ ವರ್ಗ ಎಂದಾಕ್ಷಣ ಸಹಜವಾಗಿ ಸಿದ್ದರಾಮಯ್ಯ ಅವರೇ ನಾಯಕರು ಎಂಬಂತಾಗಿರುವುದರಿಂದ ತಮಗೂ ಹಿಂದುಳಿದ ವರ್ಗಗಳ ಬೆಂಬಲ ಇದೆ ಎಂಬ ಸಂದೇಶ ರವಾನಿಸುವುದು ಇದರ ಉದ್ದೇಶ ಎಂಬ ಮಾತುಗಳು ಕೇಳಿಬರುತ್ತಿವೆ.

ಸಿದ್ದರಾಮಯ್ಯ ಅವರು ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಜಾತಿಗಣತಿ ವರದಿ ಬಿಡುಗಡೆ ಸಂಬಂಧ ಹೋರಾಟಕ್ಕೆ ಸಜ್ಜಾ ಗುತ್ತಿದ್ದಾರೆ ಎಂಬ ಮಾತುಗಳ ನಡುವೆಯೇ ಡಿ.ಕೆ.ಶಿವ ಕುಮಾರ್‌ ನಡೆಕುತೂಹಲ ಮೂಡಿಸಿದೆ.

ಆಂತರಿಕ ಸಂಘರ್ಷ: ಮೇಲ್ನೋಟಕ್ಕೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವ ಕುಮಾರ್‌ ಒಂದೇ ವೇದಿಕೆಯಲ್ಲಿ ಕುಳಿತು ಚರ್ಚಿಸಿದರೂ ಆಂತರಿಕ ವಾಗಿ ಇಬ್ಬರ ನಡುವೆ ನಾಯಕತ್ವ ವಿಚಾರದಲ್ಲಿ ಸಂಷರ್ಘ‌ ನಡೆಯುತ್ತಲೇ ಇದೆ ಎಂದು ಹೇಳಲಾಗಿದೆ.

ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಮುಖ್ಯಮಂತ್ರಿಯಾಗುವ ರೇಸ್‌ನಲ್ಲಿ ಇಬ್ಬರೂ ಇರುವುದರಿಂದ ಸಮಯ ಬಂದಾಗಲೆಲ್ಲಾ ವೈಯಕ್ತಿಕ ಬಲ ಹೆಚ್ಚಿಸಿಕೊಳ್ಳಲು ಕಸರತ್ತು ನಡೆಸುತ್ತಲೇ ಇದ್ದಾರೆ. ಒಂದೆಡೆ ಸಿದ್ದರಾಮಯ್ಯ ಅವರು ಹಿಂದುಳಿದ ವರ್ಗದವರ ಜತೆಗೆ ದಲಿತ, ಅಲ್ಪಸಂಖ್ಯಾತ ವರ್ಗದ ಮೇಲೆ ಹಿಡಿತ ಸಾಧಿಸಲು ಪ್ರಯತ್ನಿಸುತ್ತಿದ್ದರೆ ಮತ್ತೂಂದೆಡೆ ಡಿ.ಕೆ.ಶಿವಕುಮಾರ್‌ ಸಿದ್ದರಾಮಯ್ಯ ಅವರ ಜತೆಗಿರುವ ವರ್ಗಗಳನ್ನು ಸೆಳೆಯುವ ಮಾಸ್ಟರ್‌ ಪ್ಲ್ಯಾನ್ ರೂಪಿಸುತ್ತಿದ್ದಾರೆ.

Advertisement

ಇದನ್ನೂ ಓದಿ:ಕಲಬುರಗಿ ಪಾಲಿಕೆ: ದೋಸ್ತಿ ವಿಚಾರದಲ್ಲಿ ಸ್ಥಳೀಯರ ಮುಖಂಡರ ಮಾತಿಗೆ ಮನ್ನಣೆ ಎಂದ ಎಚ್ ಡಿಡಿ

ಇದರ ಭಾಗವಾಗಿ ಹಿಂದುಳಿದ ಸಮುದಾಯದ ಮುಖಂಡರನ್ನು ಮನೆಗೆಕರೆಸಿ ಸಭೆನಡೆಸುವುದು,ನಂತರ ಸಂವಾದದಲ್ಲಿ ಭಾಗಿಯಾಗುವುದು, ಹಿಂದುಳಿದ ವರ್ಗದ ಪೀಠಗಳ ಸ್ವಾಮೀಜಿಗಳ ಜತೆ ಸಮಾಲೋಚನೆ ಮಾಡುವುದು ಹೀಗೆ ಹಲವು ಮಾರ್ಗಗಳ ಮೂಲಕ ಡಿ.ಕೆ. ಶಿವಕುಮಾರ್‌ ತಮ್ಮದೇ ಆದ ಲೆಕ್ಕಾಚಾರ ಹಾಕಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.ಕಾಂಗ್ರೆಸ್‌ನಲ್ಲಿರುವ ಹಿಂದುಳಿದ ವರ್ಗದ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ಸಭೆ ಸಹ ನಡೆಸಿದ್ದಾರೆ. ಆದರೆ, ಡಿ.ಕೆ.ಶಿವಕುಮಾರ್‌ ಹಾಗೂ ಸಿದ್ದರಾಮಯ್ಯ ಅವರ ನಡೆ ಹಾಗೂ ಕಾರ್ಯತಂತ್ರ ಮುಖಂಡರಿಗೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಯಾವ ಕಡೆ ಗುರುತಿಸಿಕೊಳ್ಳಬೇಕು ಎಂಬ ಜಿಜ್ಞಾಸೆ ಯಲ್ಲಿದ್ದಾರೆ ಎನ್ನಲಾಗಿದೆ.

ಮತ್ತೊಂದೆಡೆತಮ್ಮ ಬಲ ಹೆಚ್ಚಿಸಿ ಕೊಳ್ಳಲು ಜೆಡಿಎಸ್‌ನಲ್ಲಿರುವ ಪ್ರಭಾವಿ ಮುಖಂಡರನ್ನು ಒಬ್ಬೊಬ್ಬರನ್ನಾಗಿಯೇ ಸೆಳೆಯಲು ಡಿ.ಕೆ.ಶಿವಕುಮಾರ್‌
ಮುಂದಾಗಿದ್ದಾರೆ. ಜೆಡಿಎಸ್‌ ಹಾಗೂ ಬಿಜೆಪಿಯ ಕೆಲವು ನಾಯಕರ ಜತೆ ಸಂಪರ್ಕ ಹೊಂದಿದ್ದು ವಿಧಾನಸಭೆ ಚುನಾವಣೆ ಹತ್ತಿರ ಇರುವಾಗ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಮಾತುಕತೆ ನಡೆದಿದೆ ಎಂದು ಹೇಳಲಾಗಿದೆ.

ಸಿದ್ದರಾಮಯ್ಯ ಗೈರು ನಷ್ಟವಾಯ್ತಾ?
ಮೂರು ಮಹಾನಗರ ಪಾಲಿಕೆ ಚುನಾವಣೆ ಸಂದರ್ಭದಲ್ಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಜಿಂದಾಲ್‌ನಲ್ಲಿ ಪ್ರಕೃತಿ ಚಿಕಿತ್ಸೆಗೆ ದಾಖಲಾಗಿದ್ದು ಚರ್ಚೆಗೆ ಗ್ರಾಸವಾಗಿತ್ತು. ಫ‌ಲಿತಾಂಶದ ನಂತರ ಸಿದ್ದರಾಮಯ್ಯ ಅವರೂ ಹೋಗಿದ್ದರೆ ಮತ್ತಷ್ಟು ಸೀಟು ಗೆಲ್ಲಬಹುದಿತ್ತು. ಕಲಬುರಗಿಯಲ್ಲಿ ಕಾಂಗ್ರೆಸ್‌ಗೆ ಸಂಪೂರ್ಣ ಬಹುಮತ ದೊಂದಿಗೆ ಅಧಿಕಾರ ಹಿಡಿಯುವ ಅವಕಾಶ ಇತ್ತು ಎಂಬ ಮಾತುಗಳು ಕಾಂಗ್ರೆಸ್‌ ವಲಯದಲ್ಲಿ ಕೇಳಿಬರುತ್ತಿದೆ. ನಾಯಕರ ಸಹಕಾರ ಸಿಗದ ಬಗ್ಗೆ ಡಿ.ಕೆ. ಶಿವಕುಮಾರ್‌ ಅವರು ಬೇಸರಗೊಂಡಿದ್ದಾರೆ ಎಂದು ಹೇಳಲಾಗಿದೆ.

-ಎಸ್‌. ಲಕ್ಷ್ಮಿನಾರಾಯಣ

Advertisement

Udayavani is now on Telegram. Click here to join our channel and stay updated with the latest news.

Next