ಚಿಕ್ಕೋಡಿ: ನೆರೆಯ ಮಹಾರಾಷ್ಟ್ರದ ಪಶ್ಚಿಮ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದ ಶೇ. 38 ರಷ್ಟು ನೀರು ಮಾತ್ರ ಕೃಷ್ಣಾ, ದೂಧಗಂಗಾ ಮತ್ತು ವೇದಗಂಗಾ ನದಿಗಳಿಗೆ ಹರಿದು ಬರುತ್ತಿದೆ. ಒಟ್ಟು 2.90 ಲಕ್ಷ ಕ್ಯೂಸೆಕ್ ನೀರು ಬಂದರೆ ಮಾತ್ರ ಇಲ್ಲಿ ಪ್ರವಾಹ ಉಂಟಾಗುವ ಸಾಧ್ಯತೆ ಇರುತ್ತದೆ. ಪ್ರವಾಹ ನಿರ್ವಹಣೆಗೆ ರಾಜ್ಯ ಸರ್ಕಾರ ಜಿಲ್ಲಾಡಳಿತಕ್ಕೆ ಅನುದಾನ ನೀಡಿದೆ. ನದಿ ತೀರದ ಜನರು ಸುರಕ್ಷಿತವಾಗಿ ಇರಬೇಕು ಮತ್ತು ಸಂಭವನೀಯ ಪ್ರವಾಹ ಎದುರಿಸಲು ಜಿಲ್ಲಾಡಳಿತ ಸಕಲ ಸಿದ್ಧತೆ ಮಾಡಿಕೊಂಡಿದೆ ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಹೇಳಿದರು.
ಕೃಷ್ಣಾ ನದಿ ವ್ಯಾಪ್ತಿಯ ವಿವಿಧ ಗ್ರಾಮಗಳಿಗೆ ತೆರಳಿ ಬೆಳಗಾವಿ ಜಿಪಂ ಸಿಇಒ ದರ್ಶನ ಮತ್ತು ಎಸ್‌ಪಿ ಡಾ| ಸಂಜೀವ ಪಾಟೀಲ ಜೊತೆಗೂಡಿ ಪ್ರವಾಹ ನಿರ್ವಹಣೆ ಸಿದ್ಧತೆಗಳನ್ನು ಪರಿಶೀಲಿಸಿ ಅವರು ಮಾತನಾಡಿದರು. ಸದ್ಯ ಕೃಷ್ಣಾ ನದಿಗೆ ಕಲ್ಲೋಳ ಬ್ಯಾರೇಜ್‌ದಿಂದ 1.12 ಲಕ್ಷ ಕ್ಯೂಸೆಕ್ ನೀರು ಬರುತ್ತಿದೆ. ಮುಂದಿನ ವಾರದಲ್ಲಿ ಹೆಚ್ಚಾಗುವ ಸಾಧ್ಯತೆ ಇದೆ. ಈಗ ಮಹಾರಾಷ್ಟ್ರದ ಜಲಾಶಯಗಳಿಂದ ಯಾವುದೇ ನೀರು ಹರಿಬಿಟ್ಟಿಲ್ಲ. ಅಲ್ಲಿಯ ಜಲಾಶಯ ಭರ್ತಿಯಾಗಿಲ್ಲ, ಭರ್ತಿಯಾದ ನಂತರ ನೀರು ಬಿಡುವ ಸಾಧ್ಯತೆ ಇದೆ ಎಂದರು.
ಕಳೆದ ಬಾರಿಯ ಅನುಭವವನ್ನು ಆಧರಿಸಿ ಪರಿಸ್ಥಿತಿಯನ್ನು ಪರಿಣಾಮಕಾರಿಯಾಗಿ ನಿಭಾಯಿಸಬೇಕು. ಯಾವುದೇ ಕಾರಣಕ್ಕೂ ಜನರು ಮತ್ತು ಜಾನುವಾರುಗಳ ಪ್ರಾಣ ಹಾನಿಯಾಗದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲು ಅಧಿ ಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದರು.
ಹಾನಿಯಾದ ಮನೆಗೆ ಪರಿಹಾರ: ಮನೆಗಳಿಗೆ ನೀರು ನುಗ್ಗಿದರೆ 10 ಸಾವಿರ ಮತ್ತು ಸಂಪೂರ್ಣ ಮನೆ ಬಿದ್ದರೆ 5 ಲಕ್ಷ ರೂ. ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ಜಿಲ್ಲೆಯಲ್ಲಿ ಇಲ್ಲಿಯವರಿಗೆ 317 ಮನೆಗಳಿಗೆ ಹಾನಿಯಾಗಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಅಧಿಕಾರಿಗಳು ಹಾನಿಯಾದ ಮನೆ ಸಮೀಕ್ಷೆ ಮಾಡಿದ ಬಳಿಕ ಸೂಕ್ತ ಪರಿಹಾರ ನೀಡಲಾಗುತ್ತದೆ ಎಂದರು.
ನೋಡಲ್ ಅಧಿಕಾರಿಗಳಿಗೆ ಸೂಚನೆ: ಪ್ರವಾಹ ಪರಿಸ್ಥಿತಿಯನ್ನು ಸಮರ್ಪಕವಾಗಿ ನಿಭಾಯಿಸಲು ಅನುಕೂಲವಾಗುವಂತೆ ಈಗಾಗಲೇ ಪ್ರತಿ ತಾಲೂಕಿಗೂ ನೋಡಲ್ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ನೋಡಲ್ ಅಧಿಕಾರಿಗಳು ಆಯಾ ತಾಲೂಕಿನ ಪರಿಸ್ಥಿತಿಯ ಮೇಲೆ ನಿರಂತರವಾಗಿ ನಿಗಾವಹಿಸಬೇಕು ಎಂದು ಸೂಚನೆ ನೀಡುವುದಾಗಿ ತಿಳಿಸಿದರು.
ರಕ್ಷಣೆಗೆ 30 ಬೋಟ್ ವ್ಯವಸ್ಥೆ: ಕೃಷ್ಣಾ ಮತ್ತು ಉಪನದಿಗಳಿಗೆ ಪ್ರವಾಹ ಎದುರಾದರೆ ಜನ-ಜಾನುವಾರು ರಕ್ಷಣೆ ಮಾಡಲು ಉಪವಿಭಾಗದಲ್ಲಿ 30 ಬೋಟ್ ವ್ಯವಸ್ಥೆ ಮಾಡಲಾಗಿದೆ. ಎನ್‌ಡಿಆರ್‌ಎಫ್ ಮತ್ತು ಎಸ್‌ಡಿಆರ್‌ಎಫ್ ತಂಡಗಳು ಈಗಾಗಲೇ ನದಿ ತೀರದ ಪ್ರದೇಶದಲ್ಲಿ ಬಿಡುಬಿಟ್ಟಿದ್ದಾರೆ.
ಬೋಟ್‌ಲ್ಲಿ ಸಂಚರಿಸಿದ ಜಿಲ್ಲಾಧಿಕಾರಿ: ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಿಂದ ಕಲ್ಲೋಳ ಗ್ರಾಮದ ಸೇತುವೆ ತನಕ ಕೃಷ್ಣಾ ನದಿಯಲ್ಲಿ ಬೋಟ್‌ದಲ್ಲಿ ಜಿಲ್ಲಾಧಿಕಾರಿ ಸೇರಿದಂತೆ ಅಧಿಕಾರಿಗಳು ಸಂಚರಿಸಿ ನೀರಿನ ಮಟ್ಟವನ್ನು ಅವಲೋಕಿಸಿದರು. ಬೋಟ್ ಹತ್ತುವ ಮೊದಲು ಜಿಲ್ಲಾ ಧಿಕಾರಿ ನಿತೇಶ ಪಾಟೀಲ ಲೈಫ್ ಜಾಕೇಟ್ ಧರಿಸಿ, ಉಳಿದ ಅಧಿಕಾರಿಗಳಿಗೂ ಸಹ ಲೈಫ್ ಜಾಕೇಟ್ ಧರಿಸುವಂತೆ ಸೂಚಿಸಿದರು.
ಚಿಕ್ಕೋಡಿ ತಹಶೀಲ್ದಾರ್ ಸಿ.ಎಸ್.ಕುಲಕರ್ಣಿ, ಜಿಲ್ಲಾ ನೋಡಲ್ ಅಧಿಕಾರಿ ಎಸ್.ಎಸ್.ಪಾಟೀಲ, ಉಪತಹಶೀಲ್ದಾರ್ ಸಿ.ಎ.ಪಾಟೀಲ, ಡಿವೈಎಸ್‌ಪಿ ಬಸವರಾಜ ಯಲಿಗಾರ, ಗಿರೀಶ ಎಸ್.ಬಿ, ಸಿಪಿಐ ಆರ್.ಆರ್.ಪಾಟೀಲ, ಕೃಷಿ ಸಹಾಯಕ ನಿರ್ದೇಶಕ ಮಂಜುನಾಥ ಜನಮಟ್ಟಿ ಮುಂತಾದವರು ಇದ್ದರು.