ಬೆಂಗಳೂರು: ಮಾತೃಪೂರ್ಣ ಯೋಜನೆಯಡಿ ಗರ್ಭಿಣಿ ಹಾಗೂ ಬಾಣಂತಿಯರಿಗೆ ಊಟ ಸಿದ್ಧಪಡಿಸಲು ಹಾಗೂ ಮಕ್ಕಳಿಗೆ ಶಾಲೆಪೂರ್ವ ಶಿಕ್ಷಣ ನೀಡುವಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕರಿಗೆ ತ್ವರಿತವಾಗಿ ಅಡುಗೆ ಸಿದ್ಧಪಡಿಸಲು ಹೆಚ್ಚುವರಿ ಸಿಲಿಂಡರ್, ಎರಡು ಬರ್ನಲ್, ಕುಕ್ಕರ್ ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನಿರ್ದೇಶಕಿ ದೀಪಾ ಚೋಳನ್ ತಿಳಿಸಿದರು.
ನಗರದಲ್ಲಿ ಮಂಗಳವಾರ ಯೋಜನೆ ಕುರಿತಂತೆ ಸಂವಾದದಲ್ಲಿ ಮಾತನಾಡಿದ ಅವರು, ಈಗಾಗಲೇ 35,000 ಅಂಗನವಾಡಿ ಕಾರ್ಯಕರ್ತೆಯರಿಗೆ ಮಾರ್ಗದರ್ಶನ ನೀಡಲಾಗಿದೆ. ಗುಡ್ಡಗಾಡು ಪ್ರದೇಶ, ಕೆಲಸಕ್ಕೆ ಹೋಗುವ ಗರ್ಭಿಣಿ, ಬಾಣಂತಿಯರ ಅನುಕೂಲಕ್ಕಾಗಿ ಮೆನು, ಸಮಯ ಬದಲಾವಣೆ ಮಾಡಲಾಗುವುದು ಎಂದರು. ಬೆಂಗಳೂರು ಸೇರಿದಂತೆ ನಗರ- ಪಟ್ಟಣಗಳಲ್ಲಿನ ಗಾರ್ಮೆಂಟ್ ಮಹಿಳಾ ಉದ್ಯೋಗಿಗಳ ಪೈಕಿ ಗರ್ಭಿಣಿಯರು, ಬಾಣಂತಿಯರು ಗಾರ್ಮೆಂಟ್‌ಗೆ ಸಮೀಪದಲ್ಲಿರುವ ಅಂಗನವಾಡಿಯಲ್ಲಿ
ನೋಂದಣಿ ಮಾಡಿಕೊಂಡರೆ ಅಲ್ಲಿಯೇ ಮಧ್ಯಾಹ್ನದ ಊಟ ಸೇವಿಸಬಹುದಾಗಿದೆ. ಇವರಿಗೆ ಮಧ್ಯಾಹ್ನ ಒಂದು ಗಂಟೆ ಬಿಡುವು ನೀಡಲು ಗಾರ್ಮೆಂಟ್ ಮಾಲಿಕರಿಗೆ ಸೂಚಿಸುವಂತೆ ಅಧಿಕಾರಿಗಳಿಗೆ ತಿಳಿಸಲಾಗಿದೆ ಎಂದರು.
ಕರಾವಳಿ ಪ್ರದೇಶ, ಉತ್ತರ ಕನ್ನಡ, ದಕ್ಷಿಣ ಕನ್ನಡ, ಶಿವಮೊಗ್ಗ ಇತರೆಡೆ 2- 3 ಕಿ.ಮೀ.ಗೆ ಒಂದು ಅಂಗನವಾಡಿಯಿದ್ದು, ಅಷ್ಟು ದೂರ ಹೋಗಿ ಊಟ ಸೇವಿಸುವುದು ಕಷ್ಟಕರವಾಗಲಿದೆ. ಹಾಗಾಗಿ ಸ್ತ್ರೀಶಕ್ತಿ ಮಹಿಳೆಯರನ್ನು ಇದರಲ್ಲಿ ತೊಡಗಿಸಿಕೊಳ್ಳಬಹುದೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದರು. ಅಲ್ಪಸಂಖ್ಯಾತ ಸಮುದಾಯದ ಕೆಲವರಲ್ಲಿ ಗರ್ಭಿಣಿಯರನ್ನು 40 ದಿನ ಹೊರಗೆ ಕಳುಹಿಸುವುದಿಲ್ಲ. ಹಾಗಾಗಿ ಆ ಕುಟುಂಬದ ಸದಸ್ಯರು ಅಂಗನವಾಡಿ ಕೇಂದ್ರಕ್ಕೆ ತೆರಳಿ ಊಟ ಪಡೆದು ನೀಡಲು ಅವಕಾಶ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಗರ್ಭಿಣಿ ಹಾಗೂ ಬಾಣಂತಿಯರಿಗೆ ತಮ್ಮ ಪ್ರಾದೇಶಿಕ ಆಹಾರ ಪದ್ಧತಿಯಡಿ ಪೌಷ್ಟಿಕ ಆಹಾರ ನೀಡಲು ಅವಕಾಶ ಕಲ್ಪಿಸಲಾಗಿದೆ. ಅದರಂತೆ ಪ್ರತಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು, ಸಮಿತಿಯೇ ನಿರ್ಧಾರ ಕೈಗೊಳ್ಳಲಿದೆ.
●ದೀಪಾ ಚೋಳನ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿರ್ದೇಶಕಿ