ಹುಮನಾಬಾದ: ಪಟ್ಟಣದ ಕೈಗಾರಿಕಾ ಪ್ರದೇಶದಲ್ಲಿ ಕಳೆದ ಶನಿವಾರ ಮಧ್ಯಾಹ್ನದ ಅಡುಗೆ ಮಾಡುತ್ತಿದ್ದ ವೇಳೆ ಸಿಲಿಂಡರ್ ಸ್ಫೋಟ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಹೆಣ್ಣು ಮಗು ಮೃತಪಟ್ಟಿದೆ.
ಜೊಯಲ್ ಯೂನೂಸ್ ಪಠಾಣ್(5) ಎಂಬಾಕೆ ಮೃತಪಟ್ಟಿದ್ದಾಳೆ. ಮಹಾರಾಷ್ಟ್ರದ ಮಿರಜ್ ಆಸ್ಪತ್ರೆಯಲ್ಲಿ ಸೋಮವಾರ ಮಧ್ಯಾಹ್ನ ಮಗು ಮೃತಪಟ್ಟಿದ್ದು, ಮಗುವಿನ ತಂದೆ ಸೇರಿದಂತೆ ಇನ್ನು ಮೂವರು ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಾರ್ಖಾನೆಯಲ್ಲಿ ವಸತಿ: ಕೈಗಾರಿಕಾ ಪ್ರದೇಶದಲ್ಲಿ ವಸತಿ ವ್ಯವಸ್ಥೆ ಮಾಡುವುದು ಕಾನೂನು ಬಾಹಿರ. ಅಲ್ಲದೇ ದೊಡ್ಡ ಮಟ್ಟದ ಕೈಗಾರಿಕಾ ಕಾರ್ಖಾನೆಗಳಲ್ಲಿಯೇ ಕಾರ್ಮಿಕರಿಗೆ ವಸತಿ ವ್ಯವಸ್ಥೆ ಕಲ್ಪಿಸುತ್ತಿದ್ದರು ಕೂಡ ಸಂಬಂಧಿಸಿದ ಅಧಿ ಕಾರಿಗಳು ಮಾತ್ರ ಮೌನಕ್ಕೆ ಶರಣಾಗಿದ್ದಾರೆ. ಕಾಲಕಾಲಕ್ಕೆ ಸಂಬಂಧಪಟ್ಟವರು ಕೈಗಾರಿಕಾಗಳ ಮೇಲೆ ಕಣ್ಣು ಹರಿಸಿದರೆ ಅವಘಡ ಸಂಭವಿಸುವಂತಹ ಘಟನೆಗಳು ನಡೆಯುತ್ತಿರಲಿಲ್ಲ. ಸಂಬಂಧಿಸಿದ ಅಧಿಕಾರಿಗಳು ಕೈಗಾರಿಕಾ ಪ್ರದೇಶದಲ್ಲಿನ ಕಾರ್ಖಾನೆಗಳಿಗೆ ಭೇಟಿ ನೀಡಿ ಅಲ್ಲಿನ ಕಾರ್ಮಿಕರ ವಸತಿ ಕುರಿತು ಪರಿಶೀಲಿಸುವುದು ಅಗತ್ಯವಾಗಿದೆ ಎಂಬ ಆಗ್ರಹ ಕೇಳಿ ಬಂದಿದೆ.
ಈ ಹಿಂದೆ ಕೂಡ ಕೈಗಾರಿಕಾ ಪ್ರದೇಶದ ರಾಸಾಯನಿಕ ಘಟಕದಲ್ಲಿ ಬೆಂಕಿ ತಗುಲಿ ಮುಖ್ಯ ಇಂಜಿನಿಯರ್ ಸಜೀವ ದಹನವಾದ ನಂತರ ಕಾರ್ಮಿಕ ಇಲಾಖೆ ಅಧಿಕಾರಿಗಳು ಎಚ್ಚೆತುಕೊಳ್ಳುತ್ತಾರೆ ಎಂದು ಭಾವಿಸಲಾಗಿತ್ತು. ಆದರೆ ಇಂದಿಗೂ ಕೈಗಾರಿಕಾ ಪ್ರದೇಶದಲ್ಲಿ ಕೆಲಸ ಮಾಡುವ ಬಡಪಾಯಿಗಳ ಜೀವಕ್ಕೆ ಬೆಲೆ ಇಲ್ಲ ಎಂಬಂತೆ ಸಂಬಂಧಿಸಿದವರು ವರ್ತಿಸುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.
ನಾಮ ಫಲಕ ಇಲ್ಲ: ಕೈಗಾರಿಕಾ ಪ್ರದೇಶದಲ್ಲಿನ ಬಹುತೇಕ ಕಾರ್ಖಾನೆಗಳಿಗೆ ನಾಮಫಲಕ ಇಲ್ಲ. ಅನಿಲ ನ್ಪೋಟಗೊಂಡ ಘಟನೆ ನಂತರ ಘಟನಾ ಸ್ಥಳಕ್ಕೆ ಪೊಲೀಸ್ ಅದಿಕಾರಿಗಳು ಭೇಟಿ ನೀಡುವ ಸಂದರ್ಭದಲ್ಲಿ ಯಾವ ಕಂಪನಿ ಎಂದು ಹುಡುಕುವ ಸ್ಥಿತಿ ಇತ್ತು. ಕಾರಣ ಅಲ್ಲಿನ ಕಾರ್ಖಾನೆಗಳಲ್ಲಿ ನಾಮಫಲಕಗಳು ಇಲ್ಲ. ಅಲ್ಲದೇ ಆ ಕಾರ್ಖಾನೆ ಅಥವಾ ಕಂಪನಿಗಳಲ್ಲಿ ಯಾವ ಪದಾರ್ಥ, ವಸ್ತು ತಯಾರಿಸಲಾಗುತ್ತಿದೆ ಎಂಬ ವಿವರಣೆ ಕೂಡ ಇಲ್ಲ. ಈ ಕುರಿತು ಅನೇಕ ಬಾರಿ ಬೆಳಕು ಚಲ್ಲಿದರು ಕೂಡ ಅಧಿಕಾರಿಗಳು ಮಾತ್ರ ಯಾವುದಕ್ಕೂ ತಲೆ ಕಡೆಸಿಕೊಂಡಿಲ್ಲ. ಇಂತಹ ದುರ್ಘಟನೆಗಳು ಸಂಭವಿಸಿದ ಸಂದರ್ಭದಲ್ಲಿ ಮೊದಲಿಗೆ ಕರ್ತವ್ಯ ಲೋಪ ಮಾಡಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮುಂದಾಗಬೇಕು. ಜಿಲ್ಲಾಡಳಿತ ಕೂಡ ಇತ್ತ ಹೆಚ್ಚಿನ ಗಮನಹರಿಸಬೇಕಾದ ಅನಿವಾರ್ಯತೆ ಕೂಡ ಇದೆ ಎನ್ನುತ್ತಾರೆ ಕೈಗಾರಿಗೆ ಪ್ರದೇಶ ಸುತ್ತಲಿನ ಜನರು.
ಕೈಗಾರಿಕಾ ಪ್ರದೇಶದಲ್ಲಿ ವಿವಿಧ ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಮಿಕರ ಕುರಿತು ಕಾರ್ಮಿಕ ಇಲಾಖೆ ಸಂಪೂರ್ಣ ಮಾಹಿತಿ ಸಂಗ್ರಹಿಸಬೇಕು. ಸೂಕ್ತ ಸಮಯಕ್ಕೆ ಅಧಿಕಾರಿಗಳು ಭೇಟಿ ನೀಡಿ ಅಲ್ಲಿನ ವ್ಯವಸ್ಥೆಗಳು, ಸಂಬಳ ಸೇರಿದಂತೆ ಕಾರ್ಮಿಕರ ಕುಂದುಕೊರತೆ ಬಗ್ಗೆ ಗಮನಹರಿಸುವ ಕೆಲಸ ಮಾಡಬೇಕು. ಅಲ್ಲದೇ ವಿವಿಧ ಕಾರ್ಖಾನೆಗಳು ಕಾರ್ಮಿಕರಿಗೆ ಸಿಗಬೇಕಾದ ಸೌಲಭ್ಯ ನೀಡುತ್ತಿಲ್ಲ ಎಂಬ ಆರೋಪ ಕೇಳಿ ಬಂದಿದ್ದು, ಅಧಿಕಾರಿಗಳು ಚಿತ್ತ ಹರಿಸಬೇಕು ಎಂದು ಆಗ್ರಹಿಸಲಾಗಿದೆ.