Advertisement

ಕರಾವಳಿಗೆ ತಪ್ಪಿದ “ಮಹಾ’ಆತಂಕ

12:38 PM Nov 03, 2019 | mahesh |

ಮಂಗಳೂರು: ಅರಬಿ ಸಮುದ್ರ-ಲಕ್ಷದ್ವೀಪದಲ್ಲಿ ಉಂಟಾಗಿದ್ದ “ಮಹಾ’ ಚಂಡಮಾರುತ ವಾಯವ್ಯ ದಿಕ್ಕಿನತ್ತ ಚಲಿಸುತ್ತಿದ್ದು, ರಾಜ್ಯ ಕರಾವಳಿಗೆ ಇದ್ದ ಆತಂಕ ದೂರವಾಗಿದೆ. ಕಳೆದ ಎರಡು ದಿನಗಳಿಗೆ ಹೋಲಿಸಿದರೆ ಕರಾವಳಿಯಲ್ಲಿ ಶುಕ್ರವಾರ ಮಳೆ ಕಡಿಮೆ ಇತ್ತು. ಮಂಗಳೂರು ನಗರದಲ್ಲಿ ದಿನವಿಡೀ ಬಿಸಿಲಿನಿಂದ ಕೂಡಿದ ವಾತಾವರಣ ಇತ್ತು. ಉಳಿದೆಡೆಯೂ ಮಳೆ ಕಡಿಮೆ ಇತ್ತು.

Advertisement

ಕೆಲವು ದಿನಗಳ ಹಿಂದೆ ತೀವ್ರ ಸ್ವರೂಪ ಪಡೆದ ಮಹಾ ಚಂಡಮಾರುತ ಗುರುವಾರದಂದು ತಾಸಿಗೆ 18 ಕಿ.ಮೀ. ವೇಗದಲ್ಲಿ ಚಲಿಸುತ್ತಿತ್ತು. ಅದರ ಪ್ರಭಾವದಿಂದ ಶುಕ್ರವಾರ ಕರಾವಳಿಯಲ್ಲಿ ಭಾರೀ ಮಳೆಯಾಗಬಹುದು ಎಂದು ನಿರೀಕ್ಷಿಸಲಾಗಿತ್ತು. ಯೆಲ್ಲೋ ಅಲರ್ಟ್‌ ಘೋಷಿಸಲಾಗಿತ್ತು. ಮೀನುಗಾರರು ಕಡಲಿಗೆ ಇಳಿಯದಂತೆ ಮುನ್ನೆಚ್ಚರಿಕೆ ನೀಡಲಾಗಿತ್ತು. ಆದರೆ ಮಹಾ ದುರ್ಬಲಗೊಂಡು ಒಮಾನ್‌ ದೇಶದತ್ತ ಸಂಚರಿಸಲಿದೆ ಎಂದು ಹವಾಮಾನ ಇಲಾಖೆಯ ಅಧಿಕಾರಿಗಳು “ಉದಯವಾಣಿ’ಗೆ ತಿಳಿಸಿದ್ದಾರೆ. ಅಕ್ಟೋಬರ್‌ ಕೊನೆಯ ವಾರದಲ್ಲಿ ಅರಬಿ ಸಮುದ್ರದಲ್ಲಿ ಉಂಟಾದ “ಕ್ಯಾರ್‌’ ಎಂಬ ಚಂಡಮಾರುತ ಉಂಟಾಗಿತ್ತು. ಪರಿಣಾಮವಾಗಿ ಕರಾವಳಿಯಲ್ಲಿ ಮೂರು ದಿನ ಭಾರೀ ಗಾಳಿ ಮಳೆಯಾಗಿತ್ತು.

ಹವಾಮಾನ ಮುನ್ಸೂಚನೆಯ ಪ್ರಕಾರ ಮುಂದಿನ ಎರಡು ದಿನಗಳ ಕಾಲ ಕರಾವಳಿಯ ಕೆಲವು ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಸಮುದ್ರದಲ್ಲಿ ಅಲೆಗಳ ಆಬ್ಬರ ಹೆಚ್ಚಾಗಿ ಇರಲಿದ್ದು, ಗಂಟೆಗೆ ಸುಮಾರು 50-60 ಕಿ.ಮೀ. ವೇಗದಲ್ಲಿ ಗಾಳಿ ಬೀಸಲಿದೆ. ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಉಡುಪಿ ಜಿಲ್ಲೆಯಲ್ಲಿ ಗುರುವಾರ ತಡರಾತ್ರಿ ಹಲವೆಡೆ ಮಳೆಯಾಗಿದ್ದು, ಶುಕ್ರವಾರ ಇಡೀ ದಿನ ಬಿಸಿಲು ಮತ್ತು ಮೋಡ ಕವಿದ ವಾತಾವರಣವಿತ್ತು.

ಉತ್ತರ ಧ್ರುವದಿಂ ದಕ್ಷಿಣ ಧ್ರುವಕೆ!
ಸುರತ್ಕಲ್‌: ಇಲ್ಲಿಗೆ ಸಮೀಪ ಗುಡ್ಡೆಕೊಪ್ಲದಲ್ಲಿ ನಿಲ್ಲಿಸಲಾಗಿರುವ ಹಾಳಾದ ಡ್ರೆಜ್ಜರ್‌ ಭಗವತಿ ಪ್ರೇಮ್‌ ಅನ್ನು ನವಮಂಗಳೂರು ಬಂದರಿನ ಟಗ್‌ಗಳು ಸಮುದ್ರ ತೀರಕ್ಕೆ ತಂದು ನಿಲ್ಲಿಸಿದ್ದವು. ಅದನ್ನು ಉತ್ತರ ಮುಖವಾಗಿ ನಿಲ್ಲಿಸಲಾಗಿತ್ತು. ಆದರೆ ಗುರುವಾರ ಸಮುದ್ರದಲ್ಲಿ ಬೀಸಿದ ಭಾರೀ ಗಾಳಿಗೆ ಡ್ರೆಜ್ಜರ್‌ ಸಂಪೂರ್ಣ ತಿರುಗಿ ಈಗ ದಕ್ಷಿಣಕ್ಕೆ ಮುಖ ಮಾಡಿ ನಿಂತಿದೆ.

ಉಳ್ಳಾಲದಲ್ಲಿ ಮನೆಗೆ ಹಾನಿ
ಉಳ್ಳಾಲ: ಚಂಡಮಾರುತದ ಪ್ರಭಾವದಿಂದ ಗುರುವಾರ ತಡರಾತ್ರಿಯ ವರೆಗೆ ಧಾರಾಕಾರ ಮಳೆ ಸುರಿದಿದ್ದು, ಉಳ್ಳಾಲ ಸೇರಿದಂತೆ ಸೋಮೇಶ್ವರ -ಉಚ್ಚಿಲ ಪ್ರದೇಶದಲ್ಲಿ ದೊಡ್ಡ ಹಾನಿಯಾಗದಿದ್ದರೂ ಈ ಹಿಂದೆ ಭಾಗಶಃ ಕುಸಿದಿದ್ದ ಮನೆಗೆ ಇನ್ನಷ್ಟು ಹಾನಿಯಾಗಿದೆ.

Advertisement

ಬಟ್ಟಪ್ಪಾಡಿ ಬಳಿ ಝೋಹರಾ ಅವರ ಮನೆಯ ಶೌಚಗೃಹಕ್ಕೆ ಹಾನಿಯಾದರೆ ಈ ಹಿಂದೆ ಭಾಗಶಃ ಕುಸಿದಿದ್ದ ಮೋಹನ್‌ ಅವರ ಮನೆಗೆ ಇನ್ನಷ್ಟು ಹಾನಿಯಾಗಿದೆ. ಉಳಿದಂತೆ ಸೋಮೇಶ್ವರ ಪೆರಿಬೈಲು, ಬಟ್ಟಪ್ಪಾಡಿ, ಉಳ್ಳಾಲದ ಕೈಕೋ, ಕಿಲೇರಿಯಾನಗರ, ಮುಕ್ಕಚ್ಚೇರಿ ಬಳಿ ಸಮುದ್ರದ ಅಲೆಗಳು ಮನೆಗಳಿಗೆ ಅಪ್ಪಳಿಸಿವೆ. ಶುಕ್ರವಾರ ಸಮುದ್ರ ಶಾಂತವಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next