ಭುವನೇಶ್ವರ್: ಯಾಸ್ ಚಂಡಮಾರುತದಿಂದ ಹಾನಿಗೀಡಾದ ಪ್ರದೇಶವನ್ನು ಒಡಿಶಾ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಅವರು ಗುರುವಾರ(ಮೇ 27) ವೈಮಾನಿಕ ಸಮೀಕ್ಷೆ ಮೂಲಕ ಪರಿಶೀಲನೆ ನಡೆಸಿದರು. ಶುಕ್ರವಾರ (ಮೇ 28) ಪ್ರಧಾನಿ ನರೇಂದ್ರ ಮೋದಿ ಅವರು ಒಡಿಶಾ ಮತ್ತು ಪಶ್ಚಿಮಬಂಗಾಳಕ್ಕೆ ಭೇಟಿ ನೀಡಲಿದ್ದಾರೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಮೂರೇ ಮೂರು ತಿಂಗಳಲ್ಲಿ ದೇಶದ 23 ಸಾವಿರ ಮಂದಿಗೆ ಉದ್ಯೋಗ ನೀಡಿದ ಫ್ಲಿಪ್ ಕಾರ್ಟ್..!
ಭುವನೇಶ್ವರಕ್ಕೆ ಆಗಮಿಸುವ ಪ್ರಧಾನಿ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಮತ್ತು ಅಧಿಕಾರಿಗಳ ಜತೆ ಪರಿಶೀಲನಾ ಸಭೆ ನಡೆಸಿದ ನಂತರ ಯಾಸ್ ಚಂಡಮಾರುತದಿಂದ ಹಾನಿಗೊಳಗಾದ ಬಾಲಾಸೋರ್, ಭದ್ರಕ್ ಮತ್ತು ಪುರ್ಬಾ ಮೇದಿನಿಪುರ್ ಪ್ರದೇಶಗಳಲ್ಲಿ ವೈಮಾನಿಕ ಸಮೀಕ್ಷೆ ನಡೆಸಲಿದ್ದಾರೆ ಎಂದು ವರದಿ ಹೇಳಿದೆ.
ಯಾಸ್ ಚಂಡಮಾರುತ ಮೇ 26ರಂದು ಮಧ್ಯಾಹ್ನ ಒಡಿಶಾ ಮತ್ತು ಪಶ್ಚಿಮಬಂಗಾಳ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಿತ್ತು. ಎರಡೂ ರಾಜ್ಯಗಳಲ್ಲಿ ಸುಮಾರು 20 ಲಕ್ಷಕ್ಕೂ ಅಧಿಕ ಮಂದಿಯನ್ನು ಸ್ಥಳಾಂತರಿಸಲಾಗಿತ್ತು. ಚಂಡಮಾರುತದಲ್ಲಿ ಸುಮಾರು 3ಲಕ್ಷಕ್ಕೂ ಅಧಿಕ ಮನೆಗಳು ಬಂಗಾಳದಲ್ಲಿ ಹಾನಿಗೀಡಾಗಿದ್ದವು.
ಯಾಸ್ ಚಂಡಮಾರುತ ಬುಧವಾರ ಸಂಜೆ ನಂತರ ದುರ್ಬಲಗೊಂಡಿತ್ತು. ದಕ್ಷಿಣ ಜಾರ್ಖಂಡ್ ಕರಾವಳಿ ಪ್ರದೇಶದತ್ತ ಸಾಗಿರುವ ಚಂಡಮಾರುತ ಮತ್ತಷ್ಟು ದುರ್ಬಲಗೊಳ್ಳಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ.