ನವದೆಹಲಿ: ಯಾಸ್ ಚಂಡಮಾರುತವು ತೀವ್ರ ಸ್ವರೂಪ ತಾಳುವ ಮೂಲಕ ಉತ್ತರ ಒಡಿಶಾದ ಬಾಲಸೋರ್ ಕರಾವಳಿ ಪ್ರದೇಶಕ್ಕೆ ಮೇ 26ರ ಮಧ್ಯಾಹ್ನ ಅಪ್ಪಳಿಸುವ ಸಾಧ್ಯತೆ ಇದ್ದಿರುವುದಾಗಿ ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಯಾಸ್ ಮುಂದಿನ ಕೆಲವೇ ಗಂಟೆಗಳಲ್ಲಿ ತೀವ್ರ ಸ್ವರೂಪಕ್ಕೆ ತಿರುಗಲಿದೆ ಎಂದು ಎಚ್ಚರಿಸಿದೆ.
ಇದನ್ನೂ ಓದಿ:ಕೋಲ್ಕತಾ ಹೈಕೋರ್ಟ್ ಆದೇಶದ ಪ್ರಶ್ನಿಸಿ ಸುಪ್ರೀಂಗೆ ಸಲ್ಲಿಸಿದ್ದ ಮೇಲ್ಮನವಿ ವಾಪಸ್ ಪಡೆದ ಸಿಬಿಐ
ಮುನ್ನೆಚ್ಚರಿಕೆಯ ಹಿನ್ನೆಲೆಯಲ್ಲಿ ಪಶ್ಚಿಮಬಂಗಾಳದಿಂದ ಒಂಬತ್ತು ಲಕ್ಷ ಹಾಗೂ ಒಡಿಶಾದಿಂದ ಎರಡು ಲಕ್ಷ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಏತನ್ಮಧ್ಯೆ ಆಂಧ್ರಪ್ರದೇಶ ಕರಾವಳಿ ಪ್ರದೇಶಕ್ಕೂ ಎಚ್ಚರಿಕೆಯ ಸಂದೇಶ ನೀಡಲಾಗಿದೆ ಎಂದು ವರದಿ ಹೇಳಿದೆ.
ಯಾಸ್ ಚಂಡಮಾರುತ ಒಡಿಶಾದ ಪರದೀಪ್ ಮತ್ತು ಪಶ್ಚಿಮಬಂಗಾಳದ ಸಾಗರ್ ದ್ವೀಪದ ನಡುವಿನ ಕರಾವಳಿ ಪ್ರದೇಶಕ್ಕೆ ಅಪ್ಪಳಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಯಾಸ್ ಚಂಡಮಾರುತದ ಹಿನ್ನೆಲೆಯಲ್ಲಿ ಸೋಮವಾರದಿಂದ ಗುರುವಾರದ ತನಕ ಒಡಿಶಾದಲ್ಲಿ ರೈಲು ಸಂಚಾರವನ್ನು ರದ್ದುಗೊಳಿಸಲಾಗಿದೆ.
ಪಶ್ಚಿಮ ಬಂಗಾಳ ಮತ್ತು ಒಡಿಶಾದಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡವನ್ನು ಈಗಾಗಲೇ ನಿಯೋಜಿಸಲಾಗಿದ್ದು, ಒಡಿಶಾದಲ್ಲಿ ಆಕ್ಸಿಜನ್ ತಯಾರಿಕೆಯ ಪ್ಲ್ಯಾಂಟ್ ನಿರಂತರವಾಗಿ ಚಾಲನೆಯಲ್ಲಿರಲಿದೆ ಎಂದು ವರದಿ ವಿವರಿಸಿದೆ. ಇಂದು ಮಧ್ಯರಾತ್ರಿಯಿಂದ ಕೋಲ್ಕತಾದಿಂದ ಚೆನ್ನೈಗೆ ತೆರಳುವ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.