ರಾಯಚೂರು: ಕೇರಳ, ತಮಿಳುನಾಡಿನಲ್ಲಿ ಸಂಭವಿಸಿದ ಚಂಡಮಾರುತದ ಪರಿಣಾಮ ಜಿಲ್ಲೆಯಲ್ಲಿ ಅಷ್ಟಾಗಿ ಬೀರದಿದ್ದರೂ ಸತತ ಮೂರ್‍ನಾಲ್ಕು ದಿನಗಳಿಂದ ಮೋಡ ಕವಿದ ವಾತಾವರಣ ಇರುವುದು ತೊಗರಿಗೆ ಕಂಟಕವಾಗಿ ಪರಿಣಮಿಸಿದೆ. ಜಿಲ್ಲೆಯಲ್ಲಿ ಈ ಬಾರಿ ಮುಂಗಾರು ಹಿಂಗಾರು ನಿರೀಕ್ಷಿತ ಮಟ್ಟದಲ್ಲಿ ಸುರಿದಿದ್ದು, ಬೆಳೆಗಳು ಉತ್ತಮ ರೀತಿಯಲ್ಲಿವೆ. ಹಿಂಗಾರು ಮಳೆ ತುಸು ಹೆಚ್ಚಾಗಿದ್ದರಿಂದ ಅಲ್ಲಲ್ಲಿ ತೊಗರಿ, ಹತ್ತಿ ಬೆಳೆಗೆ ಸ್ವಲ್ಪ ಕಂಟಕ ಎನಿಸಿದರೂ ಇಳುವರಿ
ಚೆನ್ನಾಗಿ ಬರಲು ನೆರವಾಯಿತು.
ಆದರೆ, ಕಳೆದ ಮೂರ್‍ನಾಲ್ಕು ದಿನಗಳಿಂದ ಚಂಡಮಾರುತದ ಪರಿಣಾಮ ಜಿಲ್ಲೆಯಲ್ಲೂ ಸಂಪೂರ್ಣ ಮೋಡ ಕವಿದ ವಾತಾವರಣವಿತ್ತು. ಜತೆಗೆ ಆಗಾಗ ತುಂತುರು ಮಳೆ ಸುರಿದಿದೆ. ಮಂಗಳವಾರ ಕೂಡ ಜಿಲ್ಲೆಯ ವಿವಿಧೆಡೆ ಮಳೆ ಸುರಿದಿದೆ. ಈಗ ಎಲ್ಲೆಡೆ ಭತ್ತ ಕಟಾವು ನಡೆದಿದ್ದರೆ, ಕೆಲವೆಡೆ ಇನ್ನೂ ಮಾಡಲಾಗುತ್ತಿದೆ. ಅದರ ಜತೆಗೆ ಹತ್ತಿ ಬಿಡಿಸಲಾಗುತ್ತಿದೆ. ಬಹುತೇಕ ಕಡೆ ಮೊದಲ ಹಂತದ ಹತ್ತಿ ಬಿಡಿಸಿದ್ದು, ಎರಡನೇ ಹಂತ ಬಿಡಿಸಲಾಗುತ್ತಿದೆ.
ಇಂತಹ ವೇಳೆ ಮಳೆ ಸುರಿದ ಪರಿಣಾಮ ಹತ್ತಿ ಕೆಂಪಾಗಲಿದ್ದು, ಮಾರುಕಟ್ಟೆಯಲ್ಲಿ ಬೆಲೆ ಕುಸಿಯಲಿದೆ. ಕೂಲಿಯವರು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಸಾಕಷ್ಟು ಜನ ಹತ್ತಿ ಬಿಡಿಸಿಲ್ಲ. ಮಂಗಳವಾರ ಮಧ್ಯಾಹ್ನ ಸುಮಾರು ಅರ್ಧ ಗಂಟೆ ಮಳೆ ಸುರಿದಿದ್ದು, ಹತ್ತಿ ಬೆಳೆಗಾರರನ್ನು ಚಿಂತೆಗೀಡು ಮಾಡಿದೆ. ಇನ್ನೂ ಭತ್ತ ಕಟಾವು ಮಾಡಿ ಸಂಗ್ರಹಿಸಿಕೊಂಡಿರುವ ರೈತರಿಗೂ ಅಕಾಲಿಕ ಮಳೆ ಸಮಸ್ಯೆ ಉಂಟು ಮಾಡಿದೆ. ಭತ್ತ ತೇವಗೊಂಡರೆ ಮೊಳಕೆ ಬರುತ್ತದೆ. ಇನ್ನೂ ಭತ್ತ ಕಟಾವಾಗಿರದಿದ್ದರೆ ತೆನೆಗಳೆಲ್ಲ ನೆಲಕ್ಕೆ ಬಾಕಿ ಭತ್ತ ಹಾಳಾಗುತ್ತಿದೆ. ಅದೃಷ್ಟವಶಾತ್ ಜಿಲ್ಲೆಯ ಕೆಲವೆಡೆ ಮಾತ್ರ ಮಳೆ ಸುರಿದಿದ್ದು, ಎಲ್ಲಿಯೂ ಭಾರೀ ಪ್ರಮಾಣದ ಹಾನಿ ಉಂಟಾಗಿಲ್ಲ.
ತೊಗರಿಗೆ ಕೀಟಬಾಧೆ: ತೊಗರಿ ವಾಣಿಜ್ಯ ಬೆಳೆ ಎನ್ನುವುದು ಎಷ್ಟು ಸತ್ಯವೋ ಖರ್ಚಿನ ಬೆಳೆ ಎನ್ನುವುದು ಅಷ್ಟೇ ಸತ್ಯ. ಮೂರು ಬಾರಿ ಕ್ರಿಮಿನಾಶಕ ಸಿಂಪರಣೆ ಮಾಡಬೇಕು. ಅಂತಹದರಲ್ಲಿ ವಾತಾವರಣ ಕೈ ಕೊಟ್ಟರೆ ಖರ್ಚು ಇನ್ನಷ್ಟು ಹೆಚ್ಚಾಗುತ್ತದೆ. ಈಚೆಗೆ ವಾತಾವರಣ ತಂಪಾಗಿರುವ ಕಾರಣ ತೊಗರಿಗೆ ಹಸಿರುಳು ಕಾಟ ಶುರುವಾಗಿದೆ. ಇದರಿಂದ ಮತ್ತೂಮ್ಮೆ ಕ್ರಿಮಿನಾಶಕ ಸಿಂಪರಣೆ ಮಾಡಬೇಕು. ಈಗ ತೊಗರಿ ಕಾಯಿ ಕಟ್ಟಿದ್ದು, ಇಂತಹ ವೇಳೆ ಈ ಕೀಟಗಳು
ತೊಗರಿಯನ್ನೆಲ್ಲ ತಿಂದು ಹಾಕುತ್ತವೆ.ಇನ್ನೂ ಹೆಚ್ಚಿನ ಸಮಸ್ಯೆ ಎದುರಾಗಿಲ್ಲ. ಒಂದು ವೇಳೆ ಇದೇ ಪರಿಸ್ಥಿತಿ ಮುಂದುವರಿದರೆ ತೊಗರಿ ಬೆಳೆಗಾರರು ನಷ್ಟಕ್ಕೀಡಾಬೇಕಾಗುತ್ತದೆ.
ಶೇ.35ರಷ್ಟು ಮಳೆ ಕೊರತೆ:
ಅಕ್ಟೋಬರ್‌ನಿಂದ ಈವರೆಗೆ ಸುರಿದ ಮಳೆಯಲ್ಲಿ ಶೇ.35ರಷ್ಟು ಕೊರತೆಯಾಗಿದೆ. ಈ ಬಾರಿ ಸರಾಸರಿ ವಾಡಿಕೆಯಷ್ಟು ಮಳೆ ಸುರಿದಿದೆ. ಅಕಾಲಿಕ ಮಳೆ ಹೊರತಾಗಿಯೂ ತುಸು ಮಳೆ ಅಭಾವ ಕಂಡು ಬಂದಿದೆ. ಆದರೆ, ಕೆಲವೆಡೆ ಮಾತ್ರ ಅಕಾಲಿಕ ಮಳೆದ ಸುರಿದಾಗ ಬೆಳೆ ಹಾನಿ ಪರಿಗಣಿಸಲು ಬರುವುದಿಲ್ಲ ಎನ್ನುತ್ತಾರೆ. ಎನ್‌ಡಿಆರ್ ಎಫ್ ನಿಧಿಯಮಾನುಸಾರ ಶೇ.33ರಷ್ಟು ಬೆಳೆ ಹಾನಿಯಾದರೆ ಮಾತ್ರ ಬೆಳೆ ಹಾನಿ ಸಮೀಕ್ಷೆ ನಡೆಸಲಾಗುವುದು. ಈಗ ಜಿಲ್ಲೆಯಲ್ಲಿ ಹೆಚ್ಚಿನ ಬೆಳೆ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.