ಮುಂಬಯಿ:ತೌಕ್ತೇ ಚಂಡಮಾರುತ ಮುಂಬಯಿ ಸಮೀಪದ ಅರಬ್ಬಿ ಸಮುದ್ರವನ್ನು ಹಾದು ಹೋಗುವ ಒಂದು ಗಂಟೆ ಮೊದಲು ಎರಡು ಬಾರ್ಜ್ ನಲ್ಲಿ ಸಿಲುಕಿದ್ದ 146 ಮಂದಿಯನ್ನು ಭಾರತೀಯ ನೌಕಾಪಡೆ ರಕ್ಷಿಸಿರುವ ಘಟನೆ ನಡೆದಿದೆ. ಗಂಟೆಗೆ 185 ಕಿಲೋ ಮೀಟರ್ ವೇಗದಲ್ಲಿ ತೌಕ್ತೇ ಚಂಡಮಾರುತ ತೀವ್ರವಾಗಿ ಗುಜರಾತ್ ಕರಾವಳಿ ಪ್ರದೇಶದಲ್ಲಿ ಅಪ್ಪಳಿಸಿರುವುದಾಗಿ ಮಂಗಳವಾರ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಗಂಗಾವತಿ: ಕುರಿಹಟ್ಟಿಯ ಮೇಲೆ ಮೂರು ಚಿರತೆಗಳ ದಾಳಿ; 32 ಕುರಿಗಳ ಸಾವು
ಮುಂಬಯಿ ಕರಾವಳಿಯಲ್ಲಿ ಎರಡು ಬಾರ್ಜ್ ಗಳಲ್ಲಿ ಸುಮಾರು 410 ಮಂದಿ ಇದ್ದು, ಅಪಾಯದಲ್ಲಿ ಸಿಲುಕಿರುವ ಬಗ್ಗೆ ಸೋಮವಾರ ನೌಕಾಪಡೆಗೆ ಸಂದೇಶ ಬಂದಿತ್ತು. ಈ ಹಿನ್ನೆಲೆಯಲ್ಲಿ ನೌಕಾಪಡೆ ಕಾರ್ಯಾಚರಣೆ ನಡೆಸಲು ಐಎನ್ ಎಸ್ ಕೊಚ್ಚಿ, ಐಎನ್ ಎಸ್ ಕೋಲ್ಕತ್ತಾ ಮತ್ತು ಐಎನ್ ಎಸ್ ತಲ್ವಾರ್ ಸೇರಿದಂತೆ ಮೂರು ಯುದ್ಧನೌಕೆಗಳನ್ನು ನಿಯೋಜಿಸಿರುವುದಾಗಿ ವರದಿ ವಿವರಿಸಿದೆ.
ಸಮುದ್ರದ ರಕ್ಕಸ ಅಲೆಗಳ ಸವಾಲಿನ ನಡುವೆಯೂ ಕಾರ್ಯಾಚರಣೆ ನಡೆಸುವುವ ಮೂಲಕ ಬಾರ್ಜ್ ಪಿ305ರಲ್ಲಿದ್ದ ಒಟ್ಟು 132 ಮಂದಿಯನ್ನು ರಕ್ಷಿಸಲಾಗಿದೆ ಎಂದು ನೌಕಾಪಡೆ ವಕ್ತಾರ ಮಂಗಳವಾರ ತಿಳಿಸಿದ್ದಾರೆ.
ಎಂಜಿನ್ ತೊಂದರೆಯಿಂದಾಗಿ ಮುಂಬೈ ಕರಾವಳಿ ಪ್ರದೇಶದಿಂದ ಸುಮಾರು ಎಂಟು ನಾಟಿಕಲ್ ಮೈಲು ದೂರದ ಕೊಲಾಬಾ ಪಾಯಿಂಟ್ ನಲ್ಲಿ ಮತ್ತೊಂದು ಬಾರ್ಜ್ ಸಿಲುಕಿದ್ದು, ಇದರಲ್ಲಿ 137 ಮಂದಿ ಇದ್ದು, ಇವರನ್ನು ರಕ್ಷಿಸಲು ಹೆಲಿಕಾಪ್ಟರ್ ಕಾರ್ಯಾಚರಣೆ ಮುಂದುವರಿದಿದೆ ಎಂದು ವಕ್ತಾರರು ತಿಳಿಸಿದ್ದಾರೆ.