Advertisement
ಹೌದು…! ಇಂಥಹದ್ದೊಂದು ಮುನ್ನೆಚ್ಚರಿಕೆಯ ಆತಂಕವನ್ನು ತುಂಗಭದ್ರಾ ಜಲಾಶಯದ ಇಂಜಿನೀಯರ್‌ಗಳೇ ವ್ಯಕ್ತಪಡಿಸಿದ್ದಾರೆ. ಬರೋಬ್ಬರಿ 19 ವರ್ಷಗಳ ಹಿಂದೆ ಸುಮಾರು 2003-04 ಅಥವಾ 2004-05ನೇ ಸಾಲಿನಲ್ಲೂ ಮುಂಗಾರು ಹಂಗಾಮುಗೂ ಮುನ್ನವೇ ಸೈಕ್ಲೋನ್ ಪ್ರಭಾವದಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿತ್ತು. ಸೈಕ್ಲೋನ್‌ನ್ನು ಮಾನ್ಸೂನ್ ಎನ್ನಲೂ ಬರಲ್ಲ. ಸೈಕ್ಲೋನ್ ಪ್ರಭಾವದಿಂದ ಬೀಸುವ ಬಿರುಗಾಳಿ ಪರಿಣಾಮ ಮಾನ್ಸೂನ್ ಮೋಡಗಳು ಸಹ ಮುಂದಕ್ಕೆ ಹೋಗುವ ಸಾಧ್ಯತೆಗಳು ದಟ್ಟವಾಗಿದ್ದು, ಮುಂಗಾರು ಕೈಕೊಟ್ಟರೂ ಅಚ್ಚರಿಪಡುವಂತಿಲ್ಲ. 19 ವರ್ಷಗಳ ಹಿಂದೆಯೂ ಹೀಗೆ ಆಗಿತ್ತು. ಸೈಕ್ಲೋನ್ ಪರಿಣಾಮ ಅವ ಗೆ ಜಲಾಶಯಕ್ಕೆ ಒಂದಷ್ಟು ನೀರು ಹರಿದು ಬರಬಹುದಾದರೂ, ಕೃಷಿಗೆ ನೀಡುವಷ್ಟು, ನದಿಗೆ ಹರಿಸುವಷ್ಟು ಸಿಗುವುದು ಅನುಮಾನ. 19 ವರ್ಷಗಳ ಹಿಂದೆಯೂ ಹೀಗೆ ಆಗಿದ್ದರಿಂದ ಆ ವರ್ಷ 2ನೇ ಬೆಳೆಗೆ ನೀರು ಕೊಡಲು ಆಗಿಲ್ಲ ಎಂದು ಜಲಾಶಯದ ತಾಂತ್ರಿಕ ತಜ್ಞರೊಬ್ಬರು ಅಂದಿನ ದಿನಗಳನ್ನು ಮೆಲುಕು ಹಾಕಿದರು.
Related Articles
Advertisement
ನೆರೆಯ ಆಂಧ್ರ, ತೆಲಂಗಾಣ ಸೇರಿ ಅವಿಭಜಿತ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಿಗೆ ಒಂದು ಬೆಳೆಗೆ ಕನಿಷ್ಠ 40 ಟಿಎಂಸಿ ಅಡಿಗೂ ಹೆಚ್ಚು ನೀರು ಬೇಕಾಗಲಿದೆ. ಹಾಗಾಗಿ ಜಲಾಶಯದಲ್ಲಿ ಕನಿಷ್ಠ 55 ಟಿಎಂಸಿ ಅಡಿ ನೀರು ಸಂಗ್ರಹವಿದ್ದಲ್ಲಿ ಐಸಿಸಿ ಸಭೆಯಲ್ಲಿ ಮುಂದೆ ನೀರು ಹರಿದು ಬರುವ ಪ್ರಮಾಣವನ್ನು ಆಧರಿಸಿ ನಿರ್ಣಯಗಳನ್ನು ಕೈಗೊಂಡು ಕೃಷಿ ಚಟುವಟಿಕೆಗೆ ನೀರು ಕೊಡಬಹುದು. ಆದರೆ, ಜಲಾಶಯದಲ್ಲಿ ಸದ್ಯ 27 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಇನ್ನೊಂದು ಐದಾರು ಟಿಎಂಸಿಯಷ್ಟು ನೀರು ಹರಿದು ಬರಬಹುದು. ಇಷ್ಟು ಪ್ರಮಾಣದಲ್ಲಿ ಐಸಿಸಿ ಸಭೆ ನಡೆಸಿ ನಿರ್ಣಯ ಕೈಗೊಳ್ಳಲೂ ಆಗಲ್ಲ. ಇನ್ನೊಂದು 10-15 ದಿನಗಳ ಕಾಲ ನೀರು ಹರಿದು ಬಂದರೆ ಅನುಕೂಲವಾಗುತ್ತಿತ್ತು ಎನ್ನುತ್ತಾರೆ ತಂತ್ರಜ್ಞರು. ಸದ್ಯ ತುಂಗಭದ್ರಾ ಜಲಾಶಯದಲ್ಲಿ ನೀರಿನ ಮಟ್ಟ 1605.56 ಅಡಿಯಿದ್ದು, 89964 ಕ್ಯೂಸೆಕ್ ಒಳಹರಿವು ಇದ್ದು, 255 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದೆ. 27.48 ಟಿಎಂಸಿ ಅಡಿ ನೀರು ಸಂಗ್ರಹವಿದೆ. ಸೈಕ್ಲೋನ್ ರೂಪದಲ್ಲಿ ಕೃಪೆ ತೋರಿರುವ ವರುಣ, ಮುಂಗಾರನ್ನು ಮುಂದೂಡುವನೋ ಕೃಪೆ ತೋರುವನೋ ಕಾದು ನೋಡಬೇಕಾಗಿದೆ.
ಮುಂಗಾರು ಹಂಗಾಮುಗೂ ಮುನ್ನ ಸೈಕ್ಲೋನ್ ಬರಬಾರದು. ಇದರಿಂದ ಮಾನ್ಸೂನ್ ಮುಂದೂಡುವ ಸಾಧ್ಯತೆಗಳು ದಟ್ಟವಾಗಿದೆ. 19 ವರ್ಷಗಳ ಹಿಂದೆಯೂ ಅವಧಿಗೆ ಮುನ್ನವೇ ಸೈಕ್ಲೋನ್ ಪರಿಣಾಮದಿಂದ ಜಲಾಶಯಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬಂದಿದ್ದು, ಅಂದು ಎರಡನೇ ಬೆಳೆಗೆ ನೀರು ಕೊಡಲಾಗಿಲ್ಲ. ಅಲ್ಲದೇ, ಸೈಕ್ಲೋನ್ ಪರಿಣಾಮದಿಂದ ಜಲಾಶಯಕ್ಕೆ ನಾಲ್ಕು ದಿನಗಳಲ್ಲಿ 20ಕ್ಕೂ ಹೆಚ್ಚು ಟಿಎಂಸಿ ನೀರು ಹರಿದು ಬಂದಿದ್ದು, ಇನ್ನು 10-15 ದಿನಗಳು ಮುಂದುವರೆದಿದ್ದರೆ ಅನುಕೂಲವಾಗುತ್ತಿತ್ತು. ಇದೀಗ ಸೈಕ್ಲೋನ್ ಕಡಿಮೆಯಾಗಿದ್ದು, ಮುಂಗಾರು ಹಂಗಾಮನ್ನೇ ಅವಲಂಬಿಸಬೇಕಾಗಿದೆ. -ಬಸಪ್ಪ ಜಾನೇಕರ್, ಮುಖ್ಯ ಅಭಿಯಂತರರು, ತುಂಗಭದ್ರಾ ಜಲಾಶಯ.
-ವೆಂಕೋಬಿ ಸಂಗನಕಲ್ಲು