Advertisement

ಕರಾವಳಿ: ಕಟ್ಟೆಚ್ಚರ ಮುಂದುವರಿಕೆ

06:00 AM Dec 04, 2017 | |

ಮಂಗಳೂರು/ಮುಂಬಯಿ: ಒಖೀ ಚಂಡ ಮಾರುತದ ಪ್ರಭಾವದಿಂದಾಗಿ ಶನಿವಾರ ರಾತ್ರಿ ಪ್ರಕ್ಷುಬ್ಧ ಗೊಂಡಿದ್ದ ಅರಬಿ ಸಮುದ್ರ ರವಿವಾರ ಶಾಂತಗೊಂಡಿದೆ. ಆದರೂ ತೀರದಲ್ಲಿ ಕಟ್ಟೆಚ್ಚರ ಮುಂದುವರಿದಿದೆ.

Advertisement

ಚಂಡಮಾರುತದ ಪ್ರಭಾವದಿಂದ ಕೇರಳದ ಕಾಂಞಂಗಾಡ್‌ನಿಂದ ತೊಡಗಿ ಕುಂದಾಪುರದ ಗಂಗೊಳ್ಳಿವರೆಗೆ ದೊಡ್ಡ ಅಲೆಗಳು ಬಂದಿದ್ದು ಕಡಲ್ಕೊರೆತ ತೀವ್ರ ವಾಗಿತ್ತು. ಇದರೊಂದಿಗೆ ಮೀನುಗಾರಿಕೆ ದೋಣಿ ಗಳಿಗೂ ಸಮಸ್ಯೆಯಾಗಿದ್ದು, ಮುನ್ನೆಚ್ಚರಿಕೆಯಿಂದಾಗಿ ಸಮುದ್ರಕ್ಕಿಳಿದಿರಲಿಲ್ಲ.

ಮಂಗಳೂರಿನಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಚಿವ ಖಾದರ್‌ ನೇತೃತ್ವದಲ್ಲಿ ತುರ್ತು ಸಭೆ ನಡೆದಿದ್ದು, ಸಂಭಾವ್ಯ ಪರಿಸ್ಥಿತಿ ಎದುರಿಸಲು ಸನ್ನದ್ಧರಾಗಿರುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಸಚಿವರು 2 ದಿನಗಳ ತನ್ನೆಲ್ಲ 
ಕಾರ್ಯಕ್ರಮಗಳನ್ನು ರದ್ದುಗೊಳಿಸಿದ್ದು, ಮಂಗಳೂರಿನಲ್ಲಿಯೇ ಇರಲು ನಿರ್ಧರಿಸಿದ್ದಾರೆ. ಇತರ ಅಧಿಕಾರಿಗಳಿಗೂ ಸಮುದ್ರ ತೀರದ ಮೇಲೆ ನಿಗಾ ಇರಿಸುವಂತೆ ಸೂಚಿಸಿದ್ದಾರೆ. ಮುನ್ನೆಚ್ಚರಿಕೆಯಾಗಿ ಸಮುದ್ರ ಬದಿ ಕಟ್ಟಿ ಹಾಕಲಾಗಿದ್ದ ಎಲ್ಲ ಬೋಟ್‌ಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಿಸಲಾಗಿದೆ. ರಾಜ್ಯದ ಎಲ್ಲ ಬಂದರುಗಳಲ್ಲಿ 2ನೇ ಸಂಖ್ಯೆಯ ಸಿಗ್ನಲ್‌ ಹಾಕಲಾಗಿದೆ.

4 ಹೆಲಿಕಾಪ್ಟರ್‌ ಸನ್ನದ್ಧ: ಕರಾವಳಿಯಲ್ಲಿ ಡಿ. 4ರ ಮಧ್ಯರಾತ್ರಿವರೆಗೆ ಕಟ್ಟೆಚ್ಚರ ಸ್ಥಿತಿ ಘೋಷಿಸಲಾಗಿದ್ದು, ಸಮುದ್ರ ಹಾಗೂ ತೀರದಲ್ಲಿ ಅಪಾಯ ಸಂಭವಿಸಿದರೆ ರಕ್ಷಣಾ ಕಾರ್ಯಕ್ಕಾಗಿ 4 ಹೆಲಿಕಾಪ್ಟರ್‌ಗಳನ್ನು ಮಂಗಳೂರಿಗೆ ತಂದಿರಿಸಲಾಗಿದೆ. ಗೋವಾದಿಂದ 4 ಹೆಲಿಕಾಪ್ಟರ್‌ಗಳನ್ನು ತರಿಸಲಾಗಿದೆ ಎಂದು ಕೋಸ್ಟ್‌ಗಾರ್ಡ್‌ ತಿಳಿಸಿದೆ.

ಕರ್ನಾಟಕದ ಇಬ್ಬರು ಬೆಸ್ತರ ರಕ್ಷಣೆ
ಒಖೀ ಚಂಡಮಾರುತದಿಂದಾಗಿ ಸಮುದ್ರದ ಮಧ್ಯೆ ಸಿಲುಕಿದ್ದ ಕರ್ನಾಟಕದ ಇಬ್ಬರು ಸೇರಿದಂತೆ 321 ಮಂದಿ ಮೀನುಗಾರರನ್ನು ರವಿವಾರ ರಕ್ಷಿಸಲಾಗಿದೆ. ಮಹಾರಾಷ್ಟ್ರ ಸಿಎಂ ದೇವೇಂದ್ರ ಫ‌ಡ್ನವೀಸ್‌ ಅವರೇ ಈ ಕುರಿತು ಮಾಹಿತಿ ನೀಡಿದ್ದು, 321 ಬೆಸ್ತರು ಇದ್ದ 28 ದೋಣಿಗಳನ್ನು ದಡಕ್ಕೆ ತರಲಾಗಿದೆ. ಎಲ್ಲ ಮೀನುಗಾರರೂ ಸುರಕ್ಷಿತವಾಗಿದ್ದಾರೆ ಎಂದು ಹೇಳಿದ್ದಾರೆ.

Advertisement

ಇದೇ ವೇಳೆ, ಚಂಡಮಾರುತವು ನಿಧಾನವಾಗಿ ದುರ್ಬಲಗೊಳ್ಳುತ್ತಿದ್ದು, ಸೋಮವಾರ ಗುಜರಾತ್‌ ಹಾಗೂ ಮುಂಬೈ ಕರಾವಳಿ ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇನ್ನೊಂದೆಡೆ, ಒಖೀ ಚಂಡಮಾರುತವನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗದು ಎಂದು ಕೇಂದ್ರ ಸರಕಾರ ಸ್ಪಷ್ಟಪಡಿಸಿದೆ. ಚಂಡಮಾರುತದ ಪ್ರಭಾವಕ್ಕೆ ಒಳಗಾದ ಲಕ್ಷದ್ವೀಪವು ಸುಮಾರು 500 ಕೋಟಿ ರೂ.ಗಳಷ್ಟು ನಷ್ಟ ಅನುಭವಿಸಿದೆ ಎಂದು ಇಲ್ಲಿನ ಸಂಸದ ಮೊಹಮ್ಮದ್‌ ಫೈಜಲ್‌ ರವಿವಾರ ತಿಳಿಸಿದ್ದಾರೆ.

ವಿದೇಶಿ ಯುವತಿಯರ ರಕ್ಷಣೆ
ಪಣಜಿಯ ಕಾಣಕೋಣ ಪಾಲೊಲೆಂ ಬೀಚ್‌ನಲ್ಲಿ ಈಜುತ್ತಿದ್ದಾಗ ಮುಳುಗುತ್ತಿದ್ದ ಇಬ್ಬರು ವಿದೇಶಿ ಯುವತಿಯರು ಹಾಗೂ ಅವರ ರಕ್ಷಣೆಗೆ ತೆರಳಿದ್ದ ನೇವಿ ನೌಕರನನ್ನು ಸ್ಥಳೀಯರು ಹರಸಾಹಸ ಪಟ್ಟು ರಕ್ಷಿಸಿದ್ದಾರೆ. ಸಮುದ್ರದ ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿರುವುದರಿಂದ ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದ್ದರೂ ಇಬ್ಬರು ವಿದೇಶಿ ಯುವತಿಯರು ನೀರಿಗಿಳಿದಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next