Advertisement

ಗುಜರಾತ್‌ಗೆ ಅಪ್ಪಳಿಸಿದ ಚಂಡಮಾರುತ: ಶಿಕ್ಷಣ ಸಂಸ್ಥೆಗಳಿಗೆ ರಜೆ, ಹಲವೆಡೆ ಧಾರಾಕಾರ ಮಳೆ

12:56 AM Jun 16, 2023 | Team Udayavani |

ಹೊಸದಿಲ್ಲಿ/ಅಹ್ಮದಾಬಾದ್‌: ಬಹು ನಿರೀಕ್ಷಿತ ಬಿಪರ್‌ಜಾಯ್‌ ಚಂಡಮಾರುತ ಗುಜರಾತ್‌ ಕರಾವಳಿಗೆ ಗುರುವಾರ ಅಪ್ಪಳಿಸಿದೆ. ಪ್ರತೀ ಗಂಟೆಗೆ 125ರಿಂದ 150 ಕಿ.ಮೀ. ವೇಗದಲ್ಲಿ ಗಾಳಿ ಬೀಸುತ್ತಿರುವ ಹಿನ್ನೆಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಹತ್ತು ದಿನಗಳಿಂದ ಈಚೆಗೆ ಹವಾಮಾನ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ಜತೆಗೂಡಿ ಸಂಭಾವ್ಯ ಹಾನಿಯನ್ನು ತಡೆಯುವ ಪ್ರಯತ್ನ ಮಾಡಿವೆ. ಸಂಜೆ 4.30ರಿಂದ ಶುರುವಾದ ಚಂಡಮಾರುತ ಅಪ್ಪಳಿಸುವ ಪ್ರಕ್ರಿಯೆ ಮಧ್ಯರಾತ್ರಿಯ ವರೆಗೆ ಮುಂದುವರಿದಿತ್ತು ಎಂದು ಭಾರತೀಯ ಹವಾಮಾನ ಇಲಾಖೆ ತಿಳಿಸಿದೆ. ಸೌರಾಷ್ಟ್ರ, ಕಛ್‌ ಅನ್ನು ದಾಟಿ ಪಾಕಿಸ್ಥಾನದ ಸಿಂಧ್‌ ಪ್ರಾಂತದ ಕರಾವಳಿಯತ್ತ ಚಂಡಮಾರುತ ಸಾಗಿದೆ.

Advertisement

ಚಂಡಮಾರುತದ ಪ್ರಭಾವದಿಂದಾಗಿ ಈಗಾಗಲೇ ಗುಜರಾತ್‌ನ ಕಛ್‌, ದ್ವಾರಕ, ಜಾಮ್‌ನಗರ, ಮೊರ್ಬಿ, ರಾಜ್‌ಕೋಟ್‌, ಪೋರ್‌ಬಂದರ್‌, ಗಿರ್‌ಸೋಮನಾಥ ಜಿಲ್ಲೆಗಳಾದ್ಯಂತ ಸುರಿಯುತ್ತಿದ್ದ ಧಾರಾಕಾರ ಮಳೆ, ಗುರುವಾರದ ವೇಳೆಗೆ ಅದು ಮತ್ತಷ್ಟು ಬಿರುಸಾಗಿದೆ. 2021ರಲ್ಲಿ ತೌಕ್ತೇ ಚಂಡಮಾರುತದ ಬಳಿಕ ರಾಜ್ಯ ಎದುರಿಸುತ್ತಿರುವ ಅತ್ಯಂತ ದೊಡ್ಡ ಮಟ್ಟದ ಚಂಡಮಾರುತ ಇದಾಗಿದೆ.

ಒಂದು ಲಕ್ಷ ಮಂದಿ: ಕಛ್‌, ದ್ವಾರಕ, ಜಾಮ್‌ನಗರ, ಮೊರ್ಬಿ, ರಾಜ್‌ಕೋಟ್‌, ಪೋರ್‌ಬಂದರ್‌, ಗಿರ್‌ಸೋಮ ನಾಥ ಜಿಲ್ಲೆಗಳಿಂದ ಸರಿ ಸುಮಾರು ಒಂದು ಲಕ್ಷಕ್ಕೂ ಅಧಿಕ ಮಂದಿಯನ್ನು ಆಯಾ ಜಿಲ್ಲೆಗಳಲ್ಲಿ ವಿಶೇಷವಾಗಿ ವ್ಯವಸ್ಥೆ ಮಾಡಲಾಗಿರುವ ತಾತ್ಕಾಲಿಕ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ.

ಹಲವೆಡೆ ಹಾನಿ
ಗಾಳಿಯ ರಭಸ ತೀವ್ರಗೊಳ್ಳುತ್ತಿರುವಂತೆಯೇ ದ್ವಾರಕ, ಕಛ್‌, ಪೋರ್‌ಬಂದರ್‌ ಸೇರಿದಂತೆ ಹಲವೆಡೆ ಹಾನಿ ಸಂಭವಿಸಿದೆ. ಸದ್ಯಕ್ಕೆ ಯಾವುದೇ ಸಾವು ನೋವು ಉಂಟಾದ ಬಗ್ಗೆ ವರದಿಗಳು ಬಂದಿಲ್ಲ. ದ್ವಾರಕ ಜಿಲ್ಲೆಯಲ್ಲಿ ಮರ ಬಿದ್ದು ಮೂವರಿಗೆ ಗಾಯಗಳಾಗಿವೆ. ಗುಜರಾತ್‌ನ ಕರಾವಳಿ ಭಾಗದಲ್ಲಿ ವಿದ್ಯುತ್‌ ಕಂಬಗಳು, ಮರಗಳು ಉರುಳಿ ಬಿದ್ದಿವೆ. ಕಛ್‌ ಜಿಲ್ಲೆಯಲ್ಲಿ ಇರುವ ಜಖೌ, ಮಾಂಡವಿಯಲ್ಲಿ ಕೂಡ ಮಳೆ, ಗಾಳಿಯ ರಭಸಕ್ಕೆ ವಿದ್ಯುತ್‌ ಕಂಬಗಳು, ಮರಗಳು ಉರುಳಿ ಬಿದ್ದಿವೆ.

ರಕ್ಷಣ ಕಾರ್ಯಾಚರಣೆ
ಹಾನಿಗೆ ಗುರಿಯಾಗಿರುವ ಎಲ್ಲ ಜಿಲ್ಲೆಗಳಲ್ಲಿ ಗುಜರಾತ್‌ ಪೊಲೀಸ್‌ ಇಲಾಖೆ, ಭೂಸೇನೆ, ಎನ್‌ಡಿಆರ್‌ಎಫ್, ರಾಜ್ಯ ವಿಪತ್ತು ನಿರ್ವಹಣ ಪಡೆ, ಐಎಎಫ್, ಭಾರತೀಯ ನೌಕಾದಳಗಳು ವಿವಿಧ ರೀತಿಯಲ್ಲಿ ರಕ್ಷಣೆ ಮತ್ತು ಪರಿಹಾರ ಕಾರ್ಯಾಚರಣೆಗಳಲ್ಲಿ ನೆರವಾಗುತ್ತಿವೆ.

Advertisement

ಶಾಲೆಗಳಿಗೆ ರಜೆ
ಅಹ್ಮದಾಬಾದ್‌, ನವಸಾರಿ ಸೇರಿದಂತೆ ಧಾರಾಕಾರ ಮಳೆಯಾ ಗುತ್ತಿರುವ ಹಲವು ಜಿಲ್ಲೆಗಳಲ್ಲಿ ಎಲ್ಲ ಶಿಕ್ಷಣ ಸಂಸ್ಥೆಗಳಿಗೆ 17ರ ವರೆಗೆ ರಜೆ ಘೋಷಿಸಲಾಗಿದೆ. ಗುಜರಾತ್‌ ತಾಂತ್ರಿಕ ವಿವಿಯ ಎಲ್ಲ ಕೋರ್ಸ್‌ಗಳ ಪರೀಕ್ಷೆಗಳನ್ನು ಪ್ರಾಕೃತಿಕ ವಿಪತ್ತಿನ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಸದ್ಯದ ಮಟ್ಟಿಗೆ ಜು.17ರ ಬಳಿಕ ಅವುಗಳನ್ನು ನಡೆಸಲು ವಿವಿಯ ಆಡಳಿತ ತೀರ್ಮಾನಿಸಿದೆ.

ದ್ವಾರಕಾಧೀಶ ದೇಗುಲ ಮುಚ್ಚಲು ನಿರ್ಧಾರ
ಚಂಡಮಾರುತದ ಪ್ರಭಾವದಿಂದಾಗಿ ಧಾರಾಕಾರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ದ್ವಾರಕ ಜಿಲ್ಲೆಯಲ್ಲಿ ಇರುವ ದ್ವಾರಕಾಧೀಶ ದೇಗುಲವನ್ನು ಕೆಲವು ದಿನಗಳ ವರೆಗೆ ಮುಚ್ಚಲು ತೀರ್ಮಾನಿಸಲಾಗಿದೆ. ಭಾರತೀಯ ಪುರಾತತ್ವ ಇಲಾಖೆ (ಎಎಸ್‌ಐ) ಉಸ್ತುವಾರಿಯಲ್ಲಿ ಈ ದೇಗುಲ ಬರುತ್ತಿದೆ. ಅದರ ಇನ್ನೂ ಸಣ್ಣ ದೇಗುಲಗಳಿಗೆ ಕೂಡ ಸಾರ್ವಜನಿಕರ ಪ್ರವೇಶವನ್ನು ಮುನ್ನೆಚ್ಚರಿಕೆಯ ಕಾರಣದಿಂದ ನಿಷೇಧಿಸಲಾಗಿದೆ. ಚಂಡಮಾರುತವನ್ನು ತಡೆಯುವಂಥ ದೊಡ್ಡ ಗೋಡೆಯನ್ನು ನಿರ್ಮಾಣ ಮಾಡಲು ಸಾಧ್ಯವಿಲ್ಲ. ಆದರೆ ಭಕ್ತರ ಜೀವ ರಕ್ಷಣೆಯ ಬಗ್ಗೆ ಕ್ರಮ ಕೈಗೊಳ್ಳಲು ಸಾಧ್ಯ ಎಂದು ರಾಜ್‌ಕೋಟ್‌ ವಲಯದ ಎಎಸ್‌ಐ ಅಧಿಕಾರಿ ಹೇಳಿದ್ದಾರೆ.

ಬಿಪರ್‌ಜಾಯ್‌ ಹೆಸರು !
ಗುಜರಾತ್‌ಗೆ ಬಿಪರ್‌ಜಾಯ್‌ ಚಂಡಮಾರುತ ಅಪ್ಪಳಿಸಿದೆ. ಅದರ ಹೆಸರನ್ನೇ ಶಿಶುವಿಗೆ ಇರಿಸಿದ ಅಂಶ ಬೆಳಕಿಗೆ ಬಂದಿದೆ. ಈ ತಿಂಗಳ ಆರಂಭದಲ್ಲಿ ಚಂಡಮಾರುತ ಏಳಲಿದೆ ಎಂದು ಗೊತ್ತಾಗುತ್ತಿದ್ದಂತೆಯೇ ಆ ಶಿಶು ಜನಿಸಿತ್ತು. ಕಛ್‌ನ ಜಖೌನ ತಾತ್ಕಾಲಿಕ ನಿರಾಶ್ರಿತರ ಕುಟುಂಬಗಳನ್ನು ಸ್ಥಳಾಂತರಿಸುವ ವೇಳೆ ಈ ಅಚ್ಚರಿಯ ವಿಚಾರ ಜಗತ್ತಿಗೆ ಗೊತ್ತಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next