Advertisement
ಹಲವೆಡೆ ಮಳೆಯಿಂದಾಗಿ ಕಟಾವು ಮಾಡಿರುವ ಹಾಗೂ ಕಟಾವಿಗೆ ಬಂದಿರುವ ರಾಗಿ ಬೆಳೆ ಹಾಳಾಗುತ್ತಿದೆ. ಮಳೆಯಿಂದ ನೆನೆದು ತೆನೆಯ ಭಾರ ಹೆಚ್ಚಾಗಿ ಹೊಲದಲ್ಲೇ ಬೀಳುತ್ತಿದೆ. ರಾಗಿ ಕೊಯ್ಲು ಯಂತ್ರಗಳು ನಿರಂತರ ಮಳೆಯಿಂದ ಜಮೀನಿನೊಳಗೆ ಹೋಗಲು ಸಾಧ್ಯವಾಗದ ಕಾರಣ ಕೆಲವು ರೈತರು ಕೂಲಿ ಕಾರ್ಮಿಕರನ್ನು ಕರೆದು ರಾಗಿ ತೆನೆ ಕಟಾವು ಮಾಡಿಸುತ್ತಿದ್ದಾರೆ. ಮಳೆ ಮುಂದುವರಿದರೆ ದನಕರುಗಳಿಗೂ ಮೇವು ಸಿಗದಂತಾಗಲಿದೆ. ಚಿತ್ರದುರ್ಗ, ಕೊಪ್ಪಳ, ಧಾರವಾಡದಲ್ಲಿ ಬಿಳಿಜೋಳ, ಗೋಧಿ, ಕಡಲೆ, ಕುಸುಬೆ, ಬಳ್ಳಾರಿಯಲ್ಲಿ ಕಟಾವಿಗೆ ಬಂದಿದ್ದ ಭತ್ತದ ಬೆಳೆ ನೆಲಕಚ್ಚಿದೆ.
ಸಕಲೇಶಪುರ ತಾಲೂಕಿನಲ್ಲಿ ಕೇವಲ ಶೇ. 10 ರಿಂದ 15ರಷ್ಟು ಮಾತ್ರ ಭತ್ತ ಕಟಾವು ಮಾಡಲಾಗಿದ್ದು, ಗದ್ದೆಯಲ್ಲಿ ಕಟಾವು ಮಾಡಿ ಇಟ್ಟಿದ್ದ ಭತ್ತ ಸಂಪೂರ್ಣವಾಗಿ ಮಳೆ ನೀರಿನಿಂದ ನೆನೆದು ಹೋಗಿದೆ. ಅಕಾಲಿಕ ಮಳೆ ಕಾಫಿ ಬೆಳೆ ಗಾರರಲ್ಲೂ ಆತಂಕ ಸೃಷ್ಟಿಸಿದೆ. ಅರೇಬಿಕಾ ಕಾಫಿ ಕೊಯ್ಲು ಸಮಯ ಇದಾಗಿದ್ದು, ಮಳೆಯಿಂದಾಗಿ ಕಾಫಿ ಕುಯ್ಲು ಮಾಡಲು ಅಡಚಣೆಯುಂಟಾಗಿದೆ. ಕೊçಲಾದ ಕಾಫಿಯನ್ನು ಒಣಗಿಸುವುದೇ ಬೆಳೆಗಾರರಿಗೆ ಸವಾಲಾಗಿದೆ. ರೋಬಸ್ಟ್ ಕಾಫಿ ಅರ್ಧಂಬರ್ಧ ಹಣ್ಣಾಗಿದೆ. ಕೋಲಾರದಲ್ಲಿ ಜಡಿ ಮಳೆಗೆ ಸುಮಾರು 5 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಟೊಮ್ಯಾಟೋ ಬೆಳೆ ಹಾನಿಯಾಗಿದೆ. ಆಲೂಗಡ್ಡೆ, ಕ್ಯಾಪ್ಸಿಕಂ, ಮೆಣಸಿನಕಾಯಿ ಬೆಳೆಗಳಿಗೆ ತೇವಾಂಶ ಹೆಚ್ಚಾಗಿ ಫಂಗಸ್ ವೈರಸ್, ಬಿಳಿ ಸೊಳ್ಳೆ ಮತ್ತು ಅಂಗಮಾರಿ ಕಾಟ ಹೆಚ್ಚಾಗುವಂತಾಗಿದೆ.