ರಾಯಚೂರು: ಪೆಟ್ರೋಲ್ ಬಳಕೆಗೆ ಕಡಿವಾಣ ಹಾಕುವ ಮೂಲಕ ಜೀವ ಸಂಕುಲದ ಆರೋಗ್ಯದ ಜತೆಗೆ ಪರಿಸರ ಸಂರಕ್ಷಣೆಯೂ ಸಾಧ್ಯವಾಗಲಿದೆ. ನಮ್ಮ ಇಂದಿನ ಆದ್ಯತೆ ಪೆಟ್ರೋಲ್ ಮಿತ ಬಳಕೆ ಆಗಿರಲಿ ಎಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಆರ್.ಮಹಾಜನ್ ತಿಳಿಸಿದರು.
ಭಾರತ ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ನಗರದ ಸ್ಟೇಶನ್ ರಸ್ತೆಯ ಸತ್ಯಂ ಪೆಟ್ರೋಲಿಯಂನಿಂದ ಹಮ್ಮಿಕೊಂಡಿದ್ದ ಆರೋಗ್ಯ ಮತ್ತು ಪರಿಸರ ಸಂರಕ್ಷಣೆಗಾಗಿ ಸೈಕಲ್ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ವಾಯು ಮಾಲಿನ್ಯಕ್ಕೆ ಪೆಟ್ರೋಲ್ ಬಳಕೆ ಪ್ರಮುಖ ಕಾರಣವಾಗಿದೆ.
ಅನಗತ್ಯ ಕೆಲಸಗಳಿಗೆ ವಾಹನಗಳ ಬಳಕೆ ಹೆಚ್ಚುತ್ತಿದ್ದು, ಅದರ ನೇರ ಪರಿಣಾಮ ವಾತಾವರಣದ ಮೇಲಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು. ಸೈಕಲ್ ಬಳಕೆಯಿಂದ ನಮ್ಮ ಆರೋಗ್ಯ ಕಾಪಾಡಿಕೊಳ್ಳಬಹುದು. ದಿನ ನಿತ್ಯದ ವ್ಯಾಯಾಮ ಮಾಡುವ ಬದಲು ಸೈಕಲ್ ತುಳಿದರೆ ಅದೇ ದೊಡ್ಡ ವ್ಯಾಯಾಮವಾಗುತ್ತದೆ.
ಅನಗತ್ಯವಾಗಿ ಬೈಕ್ ಓಡಾಟ ನಿಲ್ಲಿಸಿ ಹತ್ತಿರ ಪ್ರದೇಶ ಒಡಾಡಲು ಸೈಕಲ್ ಬಳಸುವುದು ದೇಹಕ್ಕೂ ಒಳ್ಳೆಯದು ದೇಶಕ್ಕೂ ಒಳ್ಳೆಯದು. ಅ ಧಿಕಾರಿಗಳು ಕಚೇರಿ ಹತ್ತಿರ ಮನೆ ಮಾಡಿಕೊಂಡರೆ ಸೈಕಲ್ ಬಳಕೆ ಮಾಡಬಹುದು. ಈ ನಿಟ್ಟಿನಲ್ಲಿ ಪರಿಸರ ಸಂರಕ್ಷಣೆ ಹಾಗೂ ಪೆಟ್ರೋಲಿಯಂ ಮಿತ ಬಳಕೆ ಮಾಡಿ ಉತ್ತಮ ಆರೋಗ್ಯ ಕಾಪಾಡಿಕೊಳ್ಳಿ ಎಂದರು.
ತಹಶೀಲ್ದಾರ್ ಡಾ| ಹಂಪಣ್ಣ ಸಜ್ಜನ್ ಮಾತನಾಡಿ, ನಮ್ಮ ಜೀವನಶೈಲಿ ಆಧುನಿಕತೆಗೆ ಒಗ್ಗಿಕೊಂಡಿದೆ. ತಂತ್ರಜ್ಞಾನ ಬದಲಾದಂತೆ ಅದಕ್ಕೆ ನಾವು ಹೊಂದಿಕೊಳ್ಳುತ್ತಲೆ ಸಾಗುತ್ತಿದ್ದೇವೆ. ಆದರೆ, ಇಂಥ ಜೀವನ ಶೈಲಿ ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಶರವೇಗದ ಅಭಿವೃದ್ಧಿಯಿಂದ ಕೆಲಸದ ಒತ್ತಡ ಹೆಚ್ಚಾಗಿದೆ. ಗುರಿ ತಲುಪುವ ಧಾವಂತದಲ್ಲಿ ಸಾಕಷ್ಟು ಶ್ರಮ ವಹಿಸುತ್ತಿದ್ದೇವೆ. ನಾವು ಬೈಕ್ ಮತ್ತು ಇನ್ನಿತರ ವಾಹನಗಳ ಮೇಲೆ ಓಡಾಟ ಕಡಿಮೆ ಮಾಡಬೇಕಿದೆ ಎಂದರು.
ಭಾರತ ಪೆಟ್ರೋಲಿಯಂನ ಕಲ್ಬುರ್ಗಿಯ ವಿಭಾಗಿಯ ಮುಖ್ಯಸ್ಥ ವೆಂಕಟರಮಣ, ಗ್ರೀನ್ ರಾಯಚೂರು ಸಂಸ್ಥೆಯ ಅಧ್ಯಕ್ಷೆ ಸರಸ್ವತಿ ಕಿಲೆಕಿಲೆ, ಸತ್ಯಂ ಪೆಟ್ರೋಲ್ ಬಂಕ್‌ನ ಮಾಲೀಕ ಗೋಪಾಲ್‌ದಾಸ್, ನೀಲಕಂಠ ಬೇವಿನ್ ಸೇರಿದಂತೆ ವಿದ್ಯಾರ್ಥಿಗಳು ವಿವಿಧ ಸಂಘಟನೆಯ ಪದಾಧಿಕಾರಿಗಳು, ವಿದ್ಯಾರ್ಥಿಗಳು ಭಾಗವಹಿಸಿದ್ದರು.