ಬೆಂಗಳೂರು: ಗಾಯತ್ರಿ ನಗರದಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಸೈಕಲ್‌ಗಳನ್ನು ಕಳವು ಮಾಡುತ್ತಿದ್ದ ಆರೋಪಿಯನ್ನು ಹಿಡಿದು ಥಳಿಸಿದ ಸಾರ್ವಜನಿಕರು, ನಂತರ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಭಾನುವಾರ ಸಂಜೆ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಚಾಮರಾಜಪೇಟೆ ನಿವಾಸಿ ಮೊಹಮ್ಮದ್ ಜಬೀಅಬ್ದುಲ್ (27) ಬಂಧಿತ. ಆರೋಪಿ ಮನೆ ಮುಂದೆ ನಿಲ್ಲಿಸಿದ ಸೈಕಲ್‌ಗಳನ್ನು ಕಳವು ಮಾಡಿ ಸಂಡೇ ಬಜಾರ್‌ನಲ್ಲಿ 500-1000 ರೂ.ಗೆ ಮಾರಾಟ ಮಾಡುತ್ತಿದ್ದ. ನೋಡಲು ಸಭ್ಯಸ್ಥನಂತೆ ಕಾಣುವ ಆರೋಪಿ ಇದುವರೆಗೂ ನಾಲ್ಕೈದು ಸೈಕಲ್‌ಗಳನ್ನು ಕದ್ದು ಮಾರಾಟ ಮಾಡಿರುವುದಾಗಿ ಹೇಳಿಕೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಬ್ರಹ್ಮಣ್ಯನಗರ ಠಾಣೆ ವ್ಯಾಪ್ತಿಯ ಗಾಯಿತ್ರಿನಗರದಲ್ಲಿ ಆರೋಪಿ ಮನೆ ಮುಂದೆ ನಿಲ್ಲಿಸಿದ್ದ ಸೈಕಲ್‌ಗಳನ್ನು ಕಳವು ಮಾಡಿ ಅಲ್ಲಿಂದ ಪರಾರಿಯಾಗುತ್ತಿದ್ದ. ಭಾನುವಾರ ತಡರಾತ್ರಿ ಗಾಯಿತ್ರಿನಗರದ ಮನೆಯೊಂದರ ಆವರಣದಲ್ಲಿದ್ದ ಸೈಕಲ್ ಅನ್ನು ಬೀಗ ಮುರಿದು ಕಳವು ಮಾಡಲು ಯತ್ನಿಸಿದ್ದಾನೆ.
ಈ ವೇಳೆ ಬೀಗ ಮುರಿಯುವ ಶಬ್ಧದಿಂದ ಎಚ್ಚರಗೊಂಡ ಮನೆ ಮಾಲೀಕ ಮನೆಯಿಂದ ಹೊರ ಬಂದ ಕೂಡಲೇ ಮೊಹಮ್ಮದ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆಗ ಸ್ಥಳೀಯರು ಆರೋಪಿಯನ್ನು ಬೆನ್ನತ್ತಿ ಹಿಡಿದು ಹಿಗ್ಗಾಮುಗ್ಗ ಥಳಿಸಿದ್ದಾರೆ.
ನಂತರ ನಮ್ಮ-100ಕ್ಕೆ ಕರೆ ಮಾಡಿ ದೂರು ನೀಡಿದ್ದರು. ಈ ಸಂಬಂಧ ಸ್ಥಳಕ್ಕೆ ಬಂದ ಸುಬ್ರಹ್ಮಣ್ಯನಗರ ಠಾಣೆಯ ಹೊಯ್ಸಳ ಸಿಬ್ಬಂದಿಗೆ ಆರೋಪಿಯನ್ನು ಒಪ್ಪಿಸಿದ್ದಾರೆ. ಪ್ರಕರಣ ಸುಬ್ರಹ್ಮಣ್ಯನಗರ ಠಾಣೆಯಲ್ಲಿ ದಾಖಲಾಗಿದೆ.