ಟ್ರಾಫಿಕ್ ಕಿರಿಕಿರಿ ಹೆಚ್ಚಿರುತ್ತಿದ್ದ ಮಹಾನಗರಗಳು ಕೊರೊನಾ ಲಾಕ್‌ಡೌನ್‌ನಿಂದ ಸಂಪೂರ್ಣ ಸ್ತಬ್ಧವಾಗಿದ್ದವು. ಇದೇಸಂದರ್ಭದಲ್ಲಿ ಮುನ್ನೆಲೆಗೆ ಬಂದ ವರ್ಕ್‌ಫ್ರಂ ಹೋಮ್ ಪ್ರವೃತ್ತಿಯಿಂದಾಗಿ ಸಾಮಾನ್ಯ ದಿನಗಳಿಗೆ ಹೋಲಿಸಿದರೆ ಇಂದಿಗೂ ನಗರಗಳಲ್ಲಿ ವಾಹನ ಸಂಚಾರ ವಿರಳವಾಗಿದೆ. ಇಂತಹ ಸಂದರ್ಭವನ್ನು ನಗರದ ಸೈಕಲ್ ಪ್ರಿಯರು ಸದ್ಬಳಕೆ ಮಾಡಿ ಕೊಂಡಿದ್ದಾರೆ. ಮೋಜಿಗಿಂತಲೂ ಹೆಚ್ಚಾಗಿ ಫಿಟ್‌ನೆಸ್, ಸಾರ್ವಜನಿಕ ಸಾರಿಗೆಯಿಂದ ದೂರ ಉಳಿಯಲು ಸೈಕಲ್ ತುಳಿಯುತ್ತಿದ್ದಾರೆ.
ಯುರೋಪ್, ಸಿಂಗಾಪುರ, ಅಮೆರಿಕಾ, ಆಸ್ಟ್ರೇಲಿಯಾ ಸೇರಿದಂತೆ ಭಾರತದ ಪ್ರಮುಖ ನಗರಗಳಲ್ಲಿ ಕೊರೊನಾ ಲಾಕ್‌ಡೌನ್ ವೇಳೆ ಸೈಕ್ಲಿಂಗ್ ಟ್ರೆಂಡ್ ಮೂರು ಪಟ್ಟು ಹೆಚ್ಚಳವಾಗಿದೆ. ಇದೇ ಟ್ರೈಂಡ್‌ಗೆ ಸಿಲಿಕಾನ್ ಸಿಟಿ ಮಂದಿಯೂ ಹೊರತಾಗಿಲ್ಲ. ಲಾಕ್‌ಡೌನ್ ವೇಳೆ ಶೇ. 30- 35 ಬೈಸಿಕಲ್‌ಗಳ ಸಂಚಾರ ಹೆಚ್ಚಿದೆ.
ಇದನ್ನೂ ಓದಿ:ಚಿನ್ನಮ್ಮನ ಬೆಂಗಳೂರು ವಾಸ ಅಂತ್ಯ: ತಮಿಳುನಾಡಿನತ್ತ ಹೊರಟ ವಿ.ಕೆ. ಶಶಿಕಲಾ
ವಾರಾಂತ್ಯದಲ್ಲಿ ಸುತ್ತಾಟ ಹೆಚ್ಚು: ನಗರದಲ್ಲಿ ಸಾಮಾನ್ಯ ದಿನಗಳಿಗಿಂತ ಮೂರುಪಟ್ಟು ಹೆಚ್ಚು ಸೈಕಲ್‌ಗಳು ರಸ್ತೆಗಿಳಿಯುತ್ತವೆ. ಈ ಪೈಕಿ ಶೇ.30 ಮಂದಿ ನಗರದ ಕೇಂದ್ರಭಾಗಗಳಾದ ವಿಧಾನಸೌಧ, ಕಬ್ಬನ್ ಉದ್ಯಾನ, ಎಂ.ಜಿ.ರಸ್ತೆ, ಚರ್ಚ್ ಸ್ಟ್ರೀಟ್, ಕೆ.ಆರ್.ವೃತ್ತ ಸೇರಿದಂತೆ ಪ್ರಮುಖ ರಸ್ತೆ, ವೃತ್ತಗಳು, ಉದ್ಯಾನಗಳು, ಪ್ರವಾಸಿ ಸ್ಥಳಗಳಲ್ಲಿ ಸುತ್ತಿ ಖುಷಿ ಪಡುತ್ತಾರೆ. ಶೇ.50 ನಗರದ ಹೊರಭಾಗದ ಮೈಸೂರು ರಸ್ತೆ, ಕನಕಪುರ ರಸ್ತೆ, ದೊಡ್ಡಬಳ್ಳಾಪುರ ರಸ್ತೆ, ಹೆಸರಘಟ್ಟ ರಸ್ತೆ, ಮದ್ರಾಸ್ ರಸ್ತೆ,ವರ್ತುಲ ರಸ್ತೆ, ವಿಮಾನ ನಿಲ್ದಾಣ ರಸ್ತೆಗಳಲ್ಲಿ 15-20 ಕಿ.ಮೀ. ಹೋಗಿ ಬರುತ್ತಾರೆ. ಬಾಕಿ ಉಳಿದ ಶೇ.20 ಮಂದಿ ಪಕ್ಕದ ಜಿಲ್ಲೆಗಳು, ಪ್ರವಾಸಿತಾಣಗಳಾದ ನಂದಿಬೆಟ್ಟ, ಶಿವಗಂಗೆ ಬೆಟ್ಟ, ತುಮಕೂರು, ಬನ್ನೇರು ಘಟ್ಟಕ್ಕೆ ತಂಡೋಪ ತಂಡವಾಗಿ ತೆರಳುತ್ತಾರೆ.
ಬೇಡಿಕೆ ಹೆಚ್ಚು, ಪೂರೈಕೆ ಕಡಿಮೆ: ಲಾಕ್‌ಡೌನ್ ವೇಳೆಯಲ್ಲಿ ಬೇಡಿಕೆ ಸಾಕಷ್ಟು ಹೆಚ್ಚಳವಾಗಿತ್ತಾದರೂ, ಪೂರೈಕೆ ಕೊರತೆಯಿಂದ ಎರಡರಿಂದ ಮೂರು ತಿಂಗಳು ಕಾದು ಸೈಕಲ್ ಖರೀದಿ ಮಾಡಿದ್ದಾರೆ. ಅಲ್ಲದೆ, ಮುಂಚಿತವಾಗಿಯೇ ಬುಕ್ ಮಾಡಿದ್ದಾರೆ. ಇಂದಿಗೂ ಐಶಾರಾಮಿ ಸೈಕಲ್ ವಿಚಾರದಲ್ಲಿ ಇದೇ ಪರಿಸ್ಥಿತಿ ಮುಂದುವರಿದಿದೆ. ಅದರಲ್ಲೂ ಚೀನಾ ಉತ್ಪನ್ನಗಳು ಬಂದ್ ಆದ ಬಳಿಕ ಸಾಕಷ್ಟು ಸಮಸ್ಯೆಯಾಗಿದ್ದು, ಬಿಡಿಭಾಗ ಗಳು ಸಿಗುತ್ತಿಲ್ಲ. ಸಿಟಿ ಬೈಕ್, ಎಂಟಿಬಿ ಅಡ್ವೆಂಚರ್, ರೇಸ್ ಸೈಕಲ್, ಇ ಬೈಕ್ ಬ್ಯಾಟರಿ ಚಾಲಿತ ಸೈಕಲ್ ಗಳು ಹೆಚ್ಚು ಬಳಕೆ ಯಲ್ಲಿವೆ. ಸಾಮಾನ್ಯ ಸೈಕಲ್ ಗಿಂತ ಗೇರ್ ಸೈಕಲ್ ಗಳು ಹೆಚ್ಚು ಖರೀದಿ ಯಾಗುತ್ತಿವೆ ಎನ್ನು ತ್ತಾರೆ ಜಯನಗರದ ವರ್ತಕ ಮೋಹನ್.
ಆರೋಗ್ಯ ಲಾಭ ಹೆಚ್ಚು: ಲಾಕ್‌ಡೌನ್ ವೇಳೆ ಜಿಮ್, ಈಜುಕೊಳ ಬಂದ್ ಆಗಿದ್ದ ಹಿನ್ನೆಲೆ ವ್ಯಾಯಾಮಕ್ಕೆ ವಾಯುವಿಹಾರ, ರನ್ನಿಂಗ್ ಹಾಗೂ ಸೈಕ್ಲಿಂಗ್ ಮಾತ್ರ ಅವಕಾಶ ವಾಗಿ ದ್ದವು. ಈಗ ಯುವಜನತೆ ಹೆಚ್ಚು ಸೈಕಲ್ ತುಳಿಯಲು ಮುಂದಾಗಿದ್ದಾರೆ. ಫಿಟ್‌ನೆಸ್ ತಜ್ಞರ ಪ್ರಕಾರ ನಿತ್ಯ 20 ಕಿ.ಮೀ. ಸೈಕ್ಲಿಂಗ್ ದೇಹವನ್ನು ಸದೃಢವಾಗಿಸುತ್ತದೆ. ಮಾಂಸ ಖಂಡಗಳಿಗೆ ಬಲತುಂಬಿ, ಮೂಳೆಗಳು ಶಕ್ತಿ ಶಾಲಿಯಾಗುತ್ತವೆ. ಸದ್ಯ ಕೊರೊನಾ ಪೂರ್ಣ ನಿಯಂತ್ರಣಕ್ಕೆ ಬಂದಿಲ್ಲ. ಈ ವೇಳೆ ಸೈಕ್ಲಿಂಗ್ ಉತ್ತಮ ಎನ್ನುವುದು ಫಿಟ್‌ನೆಸ್ ತಜ್ಞರ ಅಭಿಪ್ರಾಯ.
ಇದನ್ನೂ ಓದಿ: ಪ್ರೀತಿ ನಿರಾಕರಿಸಿದ ಯುವತಿಗೆ ಪಾಗಲ್ ಪ್ರೇಮಿಯಿಂದ ಚಾಕು ಇರಿತ : ಪೊಲೀಸರಿಂದ ಆರೋಪಿಯ ಬಂಧನ
ಶೇ.25 ಹೆಚ್ಚಳ!: ಕೋವಿಡ್-19ನಿಂದಾಗಿ ನಗರದಲ್ಲಿ ಸೈಕಲ್ ಬಳಸುವವರ ಸಂಖ್ಯೆ ಶೇ.20ರಿಂದ 25 ಪ್ರತಿಶತ ಹೆಚ್ಚಾಗಿದೆ ಎನ್ನುವುದು ಸ್ಟ್ರಾವಾ ಎಂಬ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಬೆಳಕಿಗೆ ಬಂದಿದೆ. ನಗರದಲ್ಲಿ ಐದು ಸಾವಿರದ ಆಸುಪಾಸಿನಲ್ಲಿದ ಸೈಕ್ಲಿಸ್ಟ್‌ಗಳ ಸಂಖ್ಯೆ ಕೊರೊನಾ ಸಂದರ್ಭದಲ್ಲಿ, ಲಾಕ್‌ಡೌನ್ ವೇಳೆ 45 ಸಾವಿರದಿಂದ 60 ಸಾವಿರಕ್ಕೆ ಮುಟ್ಟಿದೆ. ಆಗ ಸೈಕಲ್ ತುಳಿಯಲು ಪ್ರಾರಂಭಿಸಿದವರಲ್ಲಿ ಹಲವರು ಈಗಲೂ ಸಂಚಾರಕ್ಕೆ ಸೈಕಲ್ ಬಳಸುತ್ತಿದ್ದಾರೆ ಎನ್ನುತ್ತಾರೆ ಸೈಕಲ್ ಮೇಯರ್ ಎಂದೇ ಖ್ಯಾತಿ ಗಳಿಸಿರುವ ಸತ್ಯ ಶಂಕರ್.
ನಿರೀಕ್ಷಿತ ಮಟ್ಟದಲ್ಲಿಲ್ಲ ಸೈಕಲ್ ಪಥ: ಸೈಕಲ್‌ದಾರಿ (ಸೈಕಲ್ ಪಥ) ನಿರ್ಮಾಣಕ್ಕೆ ನಿರೀಕ್ಷಿತ ಮಟ್ಟದಲ್ಲಿ ಬಿಬಿಎಂಪಿ ಆಸಕ್ತಿ ವಹಿಸುತ್ತಿಲ್ಲ. ಹೀಗಾಗಿ, ಬಿಬಿಎಂಪಿಯ ಸೈಕಲ್ ಪಥ ಯೋಜನೆ ಮಂದಗತಿಯಲ್ಲಿ ಸಾಗುತ್ತಿದೆ. ಪ್ರತಿ ವರ್ಷ ಅಂದಾಜು 100 ಕಿ.ಮೀ. ವ್ಯಾಪ್ತಿಯಲ್ಲಿ ಸೈಕಲ್ ಪಥ ನಿರ್ಮಿಸುವ ಯೋಜನೆ ನಿರಂತರವಾಗಿ ನಡೆದರೆ ಮಾತ್ರ, ಸೈಕಲ್ ಪಥದ ನೆಟ್‌ವರ್ಕ್ ನಿರ್ಮಾಣವಾಗಲಿದೆ.
ಹೊಸ ಪ್ರಸ್ತಾವನೆ: ಬಿಬಿಎಂಪಿಯಿಂದ ಮೊದಲ ಹಂತದಲ್ಲಿ 51 ಕೋಟಿ ರೂ. ಮೊತ್ತದಲ್ಲಿ ಸಿಲ್ಕ್ ಬೋರ್ಡ್‌ನಿಂದ ಲೌರಿ ಮಾರ್ಗದ 17 ಕಿ.ಮೀ. (ಎರಡು ಮಾರ್ಗದಲ್ಲಿ 34 ಕಿ.ಮೀ.) ಸೈಕಲ್ ಪಥ ನಿರ್ಮಾಣವಾಗುತ್ತಿದೆ. ಇದರಲ್ಲಿ ಸಿಲ್ಕ್ ಬೋರ್ಡ್‌ನಿಂದ ಇಬ್ಬಲೂರು ಜಂಕ್ಷನ್ ವರೆಗಿ 5 ಕಿ.ಮೀ. ಸೈಕಲ್ ಪಥ ಪೂರ್ಣವಾಗಿದೆ. ಮುಂದಿನ ದಿನಗಳಲ್ಲಿ ಲೌರಿಯಿಂದ ಟ್ರಿನಿ ಟಿಗೆ ಸೈಕಲ್ ಪಥದ ಪ್ರಸ್ತಾವನೆ ಇದೆ ಎನ್ನುತ್ತಾರೆ ಪಾಲಿಕೆಯ ವಿಭಾಗದ ಸಂಚಾರ ವಿಭಾಗದ ಸಹಾಯಕ ಎಂಜಿನಿಯರ್ ಅಶೋಕ್.
ನಗರದಲ್ಲಿ ಜಲಮಂಡಳಿ, ಸ್ಮಾರ್ಟ್‌ಸಿಟಿ, ವೈಟ್‌ಟಾಪಿಂಗ್ ಹಾಗೂ ಮೆಟ್ರೋ ಕಾಮಗಾರಿಗಳಿಂದ ಸೈಕ್ಲಿಸ್ಟ್‌ಗಳು ಮುಖ್ಯ ಬೀದಿಗಳಲ್ಲಿ ಸೈಕಲ್ ತುಳಿಯಲು ಹಿಂದೇಟು ಹಾಕುತ್ತಿದ್ದಾರೆ. ವಿವಿಧ ಕಾಮಗಾರಿಗಳಿಂದ ರಸ್ತೆ ಮಾರ್ಗ ಕಿರಿದಾಗುತ್ತಿದ್ದು, ಸಂಚಾರ ದಟ್ಟಣೆ ನಡುವೆ ಸೈಕಲ್ ತುಳಿಯುವುದು ತುಂಬಾ ಸವಾಲಿನ ಕೆಲಸ ಎನ್ನುತ್ತಾರೆ ಸೈಕ್ಲಿಸ್ಟ್‌ಗಳು.
ಅವಕಾಶದ್ದೇ ಸವಾಲು!: ನಗರದಲ್ಲಿ ಪಾಲಿಕೆಯಿಂದ ಹಾಗೂ ಸ್ಮಾರ್ಟ್ ಸಿಟಿ ಯೋಜನೆಯ ಅಡಿ ಭೂಸಾರಿಗೆ ನಿರ್ದೇಶನಾಲಯ (ಡಲ್ಟ್)ಯ ನೀಲ ನಕ್ಷೆಯ ಪ್ರಕಾರ ಸೈಕಲ್‌ಪಥ ನಿರ್ಮಾಣವಾಗುತ್ತಿದೆ. ಆದರೆ, ಇದು ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಕಾಣುತ್ತಿಲ್ಲ. ನಗರದಲ್ಲಿ 70 ಕಿ.ಮೀ ಪ್ರದೇಶದಲ್ಲಿ ಸೈಕಲ್ ಪಥ ನಿರ್ಮಾಣ ಮಾಡಲು ಯೋಜನೆ ರೂಪಿಸಿಕೊಳ್ಳಲಾಗಿದೆ. ಆದರೆ, ಇದರಲ್ಲಿ ಪೂರ್ಣ ಗೊಂಡಿರು ವುದು ಐದು ಕಿ.ಮೀ. ಮಾತ್ರ ! ಇನ್ನು ಸ್ಮಾರ್ಟ್‌ಸಿಟಿಯಿಂದ ಎಂಟು ರಸ್ತೆಯಲ್ಲಿ 6.2 ಕಿ.ಮೀ. ಮಾರ್ಗದಲ್ಲಿ ಸೈಕಲ್ ಪಥಕ್ಕೆ ಅವಕಾಶ ಕಲ್ಪಿಸಲಾಗಿದೆ. ಇದರಲ್ಲೂ ಬೆರಳೆಣಿಕೆಯ ಭಾಗದಲ್ಲಿ ಮಾತ್ರ ಸೈಕಲ್ ಪಥ ಪೂರ್ಣವಾಗಿದೆ.
ಇದನ್ನೂ ಓದಿ: ಬೆಳಗ್ಗೆ ಕಾಂಗ್ರೇಸ್ ತೊರೆದು ಬಿಜೆಪಿ ಸೇರಿದ್ದ ಸದಸ್ಯೆ ಸಂಜೆಯಾಗುತ್ತಲೇ ಮತ್ತೆ ಕಾಂಗ್ರೇಸ್ ಗೆ
ಬಾಡಿಗೆ ಸೈಕಲ್‌ಗೂ ಬೇಡಿಕೆ: ನಗರದಲ್ಲಿ ಸೈಕಲ್ ಜಾಥಾಗಳು, ಅಭಿಯಾನಗಳು ಹೆಚ್ಚಳವಾದ ಹಿನ್ನೆಲೆ ಬಾಡಿಗೆ ಸೈಕಲ್‌ಗೆ ಬೇಡಿಕೆ ಹೆಚ್ಚಿದೆ. ಜಾಥಾದಲ್ಲಿ ಒಂದು ದಿನ ಅಥವಾ ಕೆಲ ಗಂಟೆಗಳ ಕಾಲ ಮಾತ್ರ ಸೈಕಲ್ ಬಳಸಲಾಗುತ್ತಿದೆ. ಇದಕ್ಕಾಗಿ ಸಾವಿರಾರು ರೂ. ಖರ್ಚುಮಾಡುವ ಬದಲು ಸೈಕಲ್ ಗಳನ್ನೆ ಬಾಡಿಗೆ ತೆಗೆದುಕೊಳ್ಳುತ್ತಿದ್ದಾರೆ. ಇನ್ನು ಯುವಕ ಯುವತಿಯರು ಸ್ನೇಹಿತರು, ಸಹೋದ್ಯೋಗಿಗಳೊಟ್ಟಿಗೆ ತೆರಳಲು ಬಾಡಿಗೆ ಸೈಕಲ್ ಮೊರೆ ಹೋಗುತ್ತಿದ್ದಾರೆ ಎಂದು ರಾಜಾಜಿನಗರದ ಬಾಡಿಗೆ ಸೈಕಲ್ ವ್ಯಾಪಾರಿ ಸತೀಶ್ ಹೇಳುತ್ತಾರೆ
ಪೆಟ್ರೋಲ್ ದರ ಏರಿಕೆ ಕಾರಣ: ಸದ್ಯ ಪೆಟ್ರೋಲ್ ದರ 90 ರೂ. ಆಸುಪಾಸಿಗೆ ಏರಿಕೆಯಾಗಿದೆ. ಮನೆಯಲ್ಲಿ ಸೈಕಲ್ ಇದ್ದವರು ಜತೆಗೆ ಲಾಕ್‌ಡೌನ್ ಅವಧಿಯಲ್ಲಿ ಸೈಕಲ್ ಖರೀದಿಸಿದವರ ಪೈಕಿ ಶೇ.10 ಮಂದಿ ಪೆಟ್ರೋಲ್ ದರ ಏರಿಕೆಯಿಂದ ಬೇಸತ್ತು ನಿತ್ಯ ಅಥವಾ ವಾರದಲ್ಲಿ ಎರಡು/ಒಂದು ದಿನಆಫೀಸ್ ತೆರಳಲು, ಸಮೀಪದ ಓಡಾಟಗಳಿಗೆ ಸೈಕಲ್ ಬಳಸುತ್ತಿದ್ದಾರೆ.
ಸೈಕ್ಲಿಸ್ಟ್‌ಗಳ ಬೇಡಿಕೆಗಳಿವು
* ಹೆಚ್ಚು ಕಡೆಗಳಲ್ಲಿ ಸೈಕಲ್ ಪಾಥ್ ನಿರ್ಮಾಣ ಮತ್ತು ಈಗಾಗಲೇ ಕೈಗೊಂಡಿರುವಸೈಕಲ್ ಪಾಥ್ ಕಾಮಗಾರಿ ಶೀಘ್ರ ಮುಗಿಸಬೇಕು
* ಮಾರಕವಾಗಿರುವ ರಸ್ತೆಗುಂಡಿಗಳಿಗೆ ಮುಕ್ತಿ ಬೇಕು
* ರಸ್ತೆಗಳಲ್ಲಿ ಸಣ್ಣಗಾತ್ರದ ನಿಯಂತ್ರಕ (ಹಂಪ್) ಅಪಾಯಕಾರಿಯಾಗಿದ್ದು, ದೊಡ್ಡ ಹಂಪ್ ಹಾಕಬೇಕು
* ಸೈಕ್ಲಿಂಗ್ ವೇಳೆ ಮಾಸ್ಕ್ ಬಳಕೆಯಲ್ಲಿ ವಿನಾಯ್ತಿ ಬೇಕು
* ಸಾರ್ವಜನಿಕ ಸ್ಥಳಗಳಲ್ಲಿ ಸೈಕಲ್ ನಿಲುಗಡೆಗೆ ಅಗತ್ಯ ಸೌಕರ್ಯ ಬೇಕು
* ಸರ್ಕಾರವು ಹೆಚ್ಚು ಸೈಕಲ್ ಜಾಥಾ, ಪ್ರವಾಸ ಹಮ್ಮಿಕೊಳ್ಳಬೇಕು
ನಗರದಲ್ಲಿ ಸೈಕಲ್ ಪಥ ನಿರ್ಮಾಣ ಕಾಮಗಾರಿ ಹಂತ ಹಂತವಾಗಿ ನಡೆಯುತ್ತಿದೆ. ಪ್ರಮುಖ ಎಂಟು ರಸ್ತೆಗಳಲ್ಲಿ ಸ್ಮಾರ್ಟ್ ಸಿಟಿ ಪ್ರತ್ಯೇಕ ಸೈಕಲ್ ಪಥ ನಿರ್ಮಿಸುತ್ತಿದೆ. :
ವಿ. ಮಂಜುಳಾ, ಭೂಸಾರಿಗೆ ನಿರ್ದೇಶನಾಲಯ (ಡಲ್ಟ್) ಆಯುಕ್ತ
ಲಾಕ್‌ಡೌನ್ ಅವಧಿಯಲ್ಲಿ ಸೈಕಲ್ ಖರೀದಿಸಿದೆ. ನಿತ್ಯ 50-60ಕಿ.ಮೀ, ವಾರಾಂತ್ಯದಲ್ಲಿ 150 ಕಿ.ಮೀಸೈಕ್ಲಿಂಗ್ ಮಾಡುತ್ತೇನೆ. ಆರೋಗ್ಯದಲ್ಲಿ ಸಾಕಷ್ಟು ಚೇತರಿಕೆಯಾಗಿದ್ದು, ತೂಕವೂ 14 ಕೆ.ಜಿ ಕಡಿಮೆಯಾಗಿದೆ:
ವಿಜಯ್, ಸೈಕ್ಲಿಸ್ಟ್ ಹೆಬ್ಟಾಳ
ನಗರದಲ್ಲಿ ಸೈಕಲ್ ತುಳಿಯುವುದಕ್ಕೆ ಪೂರಕವಾದ ವಾತಾವರಣ ಇಲ್ಲ. ಒಂದು ರಸ್ತೆಯಲ್ಲಿ ಸೈಕಲ್ ಪಥ ಇದ್ದರೆ, ಮತ್ತೂಂದು ರಸ್ತೆಯಲ್ಲಿ ಇರುವುದಿಲ್ಲ. ಬೈಕ್ ಮತ್ತು ಕಾರು ಚಲಾಯಿಸುವವರು ಸೈಕ್ಲಿಸ್ಟ್‌ಗಳನ್ನು ನೋಡುವ ವಿಧಾನ ಬದಲಾಗ ಬೇಕು:
ಧೀರಜ್, ಹವ್ಯಾಸಿ ಸೈಕ್ಲಿಸ್ಟ್
ಜಯಪ್ರಕಾಶ್ ಬಿರಾದಾರ್/ ಹಿತೇಶ್ ವೈ