Advertisement
ಒಂದು ಕಾಲವಿತ್ತು. ಆಗ ಎಲ್ಲರ ಬಳಿಯೂ ಸೈಕಲ್ ಇದ್ದವು. ಅವತ್ತಿನ ಸಂದರ್ಭಕ್ಕೆ ಸೈಕಲ್ ಇದೆ ಎಂದವನೇ ಸಿರಿವಂತ. ಮೋಟಾರು ಚಾಲಿತ ದ್ವಿಚಕ್ರ ವಾಹನ, ಕಾರುಗಳ ಜಮಾನ ಬಂದಂತೆ ಸೈಕಲ್ ಬಳಕೆ ಕ್ಷೀಣಿಸತೊಡಗಿತು. ಆದರೆ ಈಗ ಕಾಲಚಕ್ರ ಮತ್ತೂಂದು ಸುತ್ತು ತಿರುಗಿದೆ. ಸೈಕಲ್‌ಗಳಿಗೆ ಮತ್ತೆ ಬೇಡಿಕೆ ಹೆಚ್ಚಾಗಿದೆ. ಪರಿಸರ ಸ್ನೇಹಿ, ವ್ಯಾಯಾಮಕ್ಕೆ ಒಳ್ಳೆಯದು ಎಂಬ ಆಕರ್ಷಕ ಪ್ಲಸ್ ಪಾಯಿಂಟ್‌ಗಳು ಸೈಕಲ್‌ನ ಬೆನ್ನಿಗಿವೆ.
Related Articles
Advertisement
ನಗರಗಳಲ್ಲಿ ಹೆಚ್ಚಿದ ಮಾರಾಟ: ಭಾರತದ ನಗರಗಳಲ್ಲಿ ಇತ್ತೀಚಿನ ದಿನಗಳಲ್ಲಿ ವಿವಿಧ ಕಾರಣಗಳಿಗಾಗಿ ಸೈಕಲ್‌ಗಳ ಮಾರಾಟ ಹೆಚ್ಚಿದೆ. ಅತಿ ಹೆಚ್ಚು ಸೈಕಲ್‌ಗಳು ಮಾರಾಟವಾಗುವ ನಗರಗಳಲ್ಲಿ ಬೆಂಗಳೂರು ಅಗ್ರ ಸ್ಥಾನದಲ್ಲಿದೆ. ಒಂದು ಸಮೀಕ್ಷೆ ಪ್ರಕಾರ ಭಾರತದ ನಗರಗಳಲ್ಲಿ ವಾರ್ಷಿಕ ಸುಮಾರು 12 ಲಕ್ಷ ಸೈಕಲ್‌ಗಳು ಮಾರಾಟವಾಗುತ್ತಿವೆ. ಇದರೊಂದಿಗೆ ಪ್ರೀಮಿಯಂ ಬೈಕ್ ಮಾರಾಟವೂ ಹೆಚ್ಚಿವೆ.
ಪ್ರೀಮಿಯಂ ಬೈಕ್‌ಗಳಿಗೆ ಬಹುಬೇಡಿಕೆ ಇರುವ ನಗರಗಳಲ್ಲಿ ಬೆಂಗಳೂರು ಕೂಡ ಒಂದು. ಬೆಂಗಳೂರಿನಲ್ಲಿ 50ಕ್ಕೂ ಹೆಚ್ಚು ವಿವಿಧ ಸೈಕ್ಲಿಂಗ್ ಗ್ರೂಪ್‌ಗ್ಳಿವೆ. ಈ ಗ್ರೂಪ್‌ಗ್ಳು ಸೈಕಲ್ ಮಾರುಕಟ್ಟೆ ವೃದ್ಧಿಗೂ ಗಣನೀಯ ಕೊಡುಗೆ ನೀಡಿವೆ. ಜೊತೆಗೆ, ಬೆಂಗಳೂರಿನಲ್ಲಿ ಪರಿಸರ ಸ್ನೇಹಿ ಸಾರಿಗೆ/ಸೈಕ್ಲಿಂಗ್ ಡೇ ಆಚರಣೆಗಳಿಗೆ ಇದು ಪ್ರೇರಣೆಯಾಗಿದೆ.
ತಾಂತ್ರಿಕ ಸುಧಾರಣೆ: ದೇಶದಲ್ಲಿ ಸೈಕಲ್ ಬಗ್ಗೆ ಒಲವು ಹೆಚ್ಚಲು ಸೈಕಲ್‌ನ ತಯಾರಿಕೆಯಲ್ಲಿ ಆಗಿರುವ ತಾಂತ್ರಿಕ ಸುಧಾರಣೆಗಳೂ ಒಂದು ಪ್ರಮುಖ ಕಾರಣ. ಹಳೆಯ ಕಾಲದ ಅತಿ ಭಾರದ ಸ್ಟೀಲ್ ಫ್ರೆಮ್‌ನ ಸೈಕಲ್‌ಗಳ ಬದಲಾಗಿ ಈಗ ಹಗುರವಾದ ಸೈಕಲ್‌ಗಳು ಬಂದಿವೆ. ಹಿಂದಿನವು ಹೆಚ್ಚು ಗಟ್ಟಿಮುಟ್ಟಾಗಿದ್ದರೂ, ಸುಲಭ ಚಾಲನೆಗೆ, ಅತಿ ವೇಗ, ದೂರದ ಸವಾರಿಗೆ ಅಷ್ಟು ಸೂಕ್ತವಾಗಿರಲಿಲ್ಲ.
ಆದರೆ ಇಂದು ಅತಿ ವೇಗದ, ದೂರದ ಚಾಲನೆಗೆ ಹೇಳಿ ಮಾಡಿಸಿದ ಕಾರ್ಬನ್ ಫೈಬರ್, ಅಲಾಯ್ ಫ್ರೆàಮ್‌ನ ಸೈಕಲ್‌ಗಳು ಮಾರುಕಟ್ಟೆಗೆ ಬಂದಿವೆ. ಇವುಗಳ ಬೆಲೆ ಸಾಮಾನ್ಯ ಸೈಕಲ್‌ಗಳಿಗಿಂತ 10-20 ಪಟ್ಟು ಹೆಚ್ಚಾದರೂ (ಕೆಲವು ಸೈಕಲ್‌ಗಳ ಬೆಲೆ ಲಕ್ಷಕ್ಕೂ ಹೆಚ್ಚು) ಬಳಕೆಗೆ ಉತ್ತಮ ಎಂಬ ಕಾರಣಕ್ಕೆ ಖರೀದಿಯೂ ಹೆಚ್ಚಾಗಿದೆ. ಇದರೊಂದಿಗೆ ಇತರ ತಾಂತ್ರಿಕ ಅಂಶಗಳಾದ ಗಿಯರ್, ಹಗುರವಾದ ಫ್ರೆಮ್, ಟಯರ್‌ಗಳು, ಸುಧಾರಿತ ಬೇರಿಂಗ್‌ಗಳು, ಹ್ಯಾಂಡಲ್ ಇತ್ಯಾದಿಗಳ ಕಾರಣಕ್ಕೆ ಸೈಕಲ್ ಎಲ್ಲ ವಯೋಮಾನದವರಿಗೂ ಅಚ್ಚುಮೆಚ್ಚಾಗಿದೆ.
ಪ್ರೀಮಿಯಂ ಮಾರಾಟ: ಅನುಕೂಲ, ಹೆಚ್ಚು ಸೌಲಭ್ಯ, ವೇಗ, ಅತಿ ಹಗುರ, ಹೆಚ್ಚಿನ ತಾಂತ್ರಿಕತೆ ಎಂಬ ಕಾರಣಕ್ಕೆ ದುಬಾರಿ ಪ್ರೀಮಿಯಂ ಸೈಕಲ್‌ಗಳ ಮಾರಾಟ ಭಾರತದಲ್ಲಿ ಏರತೊಡಗಿದೆ. ನಗರದಲ್ಲಿ ಒಂದು ವರ್ಗ ಇವುಗಳಿಗೆ ಹೆಚ್ಚು ಒತ್ತು ನೀಡಿದೆ. ಸೈಕ್ಲಿಂಗ್ ಕ್ಲಬ್‌ಗಳು ಸೈಕಲ್‌ಗಳ ಮಾರಾಟ ಏರಲು ಕಾರಣವಾಗಿವೆ. 20 ಸಾವಿರ ರೂ.ಗಳಿಂದ ತೊಡಗಿ 3-4 ಲಕ್ಷ ರೂ.ವರೆಗೆ ಪ್ರೀಮಿಯಂ ದರದ ಸೈಕಲ್‌ಗಳಿವೆ.
ಪ್ರೀಮಿಯಂ ಸೈಕಲ್‌ಗಳಲ್ಲಿ ಪ್ರಮುಖವಾಗಿ ಎಂಟಿಬಿ (ಮೌಂಟೇನೇರಿಂಗ್ ಬೈಕ್), ನ್ಪೋರ್ಟ್ಸ್, ಹೈಬ್ರಿಡ್, ಇ ಬೈಕ್ ಎಂಬ ಮಾದರಿಗಳಿವೆ. ಇವುಗಳಲ್ಲಿ ಇಬೈಕ್ ಬ್ಯಾಟರಿ ಚಾಲಿತವಾಗಿದ್ದು, ಭಾರತದಲ್ಲಿ ಇನ್ನಷ್ಟೇ ಮಾರುಕಟ್ಟೆ ಚಿಗುರಬೇಕಿದೆ. ಉಳಿದಂತೆ ಸೈಕ್ಲಿಸ್ಟ್‌ಗಳು, ಹವ್ಯಾಸಿಗಳು ಎಂಟಿಬಿ ಸೈಕಲ್‌ಗಳಿಂದ ಹೈಬ್ರಿಡ್‌ವರೆಗೆ ಆಯ್ಕೆ ಆಧಾರದ ಮೇಲೆ ವಿಶಾಲ ಶ್ರೇಣಿಯಲ್ಲಿ ತಮ್ಮ ಆಯ್ಕೆಗೆ ತಕ್ಕಂತೆ ಖರೀದಿಸುತ್ತಾರೆ.
ಭಾರತದಲ್ಲಿ ಪ್ರೀಮಿಯಂ ಸೈಕಲ್‌ಗಳ ಮಾರಾಟ ಮೂಗಿನ ಮೇಲೆ ಬೆರಳಿಡುವ ರೀತಿ ಶೇ.30ರಿಂದ ಶೇ.40ರಷ್ಟರವರೆಗೆ ವೃದ್ಧಿ ಕಂಡಿದೆ. ಆದರೆ ದೇಶೀಯ ಸೈಕಲ್‌ಗಳ ಮಾರಾಟದಲ್ಲಿ ಶೇ.5ರವರೆಗೆ ಮಾತ್ರ ವೃದ್ಧಿಯಾಗಿರುವುದು ಪ್ರೀಮಿಯಂ ಸೈಕಲ್‌ಗಳು ಜನಪ್ರಿಯಗೊಳ್ಳುತ್ತಿವೆ ಎಂಬುದಕ್ಕೆ ಸಾಕ್ಷಿಯಾಗಿದೆ.
ಭಾರತ ಅತಿ ದೊಡ್ಡ ತಯಾರಕ/ರಫ್ತುದಾರ: ಸೈಕಲ್‌ಗಳ ತಯಾರಿಕೆಯಲ್ಲಿ ಭಾರತ 2ನೇ ಸ್ಥಾನದಲ್ಲಿದ್ದರೆ, ರಫ್ತಿನಲ್ಲಿ ಮೂರನೇ ಸ್ಥಾನದಲ್ಲಿದೆ. ತಯಾರಿಕೆಯಲ್ಲಿ ಮೊದಲ ಸ್ಥಾನದಲ್ಲಿ ಚೀನಾವಿದೆ. ಜಗತ್ತಿನ ಒಟ್ಟು ಬಳಕೆಯ ಸೈಕಲ್‌ಗಳಲ್ಲಿ ಶೇ.10ರಷ್ಟನ್ನು ಭಾರತ ಉತ್ಪಾದನೆ ಮಾಡುತ್ತಿದ್ದು, ಸುಮಾರು 12.5 ಕೋಟಿ ಸೈಕಲ್ ತಯಾರಿಕೆ ಮಾಡುತ್ತಿದೆ ಎಂದು ಅಂದಾಜಿಸಲಾಗಿದೆ. ಇವುಗಳಲ್ಲಿ ಹೀರೋ (ಶೇ.40), ಟಿಐ (ಶೇ.22), ಎವಾನ್ ಮತ್ತು ಅಟ್ಲಾಸ್ (ಶೇ.10) ಮಾರುಕಟ್ಟೆ ಸ್ವಾಮ್ಯ ಹೊಂದಿವೆ. ಭಾರತದಲ್ಲಿ ಲೂಧಿಯಾನ ಸೈಕಲ್ ತಯಾರಿಕೆಯ ರಾಜಧಾನಿಯಾಗಿದೆ.
ಮಾರುಕಟ್ಟೆ ವೃದ್ಧಿಗೆ ಸರಕಾರಗಳ ಕೊಡುಗೆ: ಸೈಕಲ್ ಮಾರುಕಟ್ಟೆ ದೇಶದಲ್ಲಿ ಬೆಳೆಯಲು ಸರಕಾರಗಳ ಕೊಡುಗೆಯೂ ಸಾಕಷ್ಟಿವೆ. ಇತ್ತೀಚಿನ ವರ್ಷಗಳಲ್ಲಿ ಶಾಲೆಗಳಿಗೆ ಉಚಿತ ಸೈಕಲ್‌ಗಳನ್ನು ಪೂರೈಸಲಾಗುತ್ತಿದ್ದು, ಇದರಿಂದಾಗಿ ಮಾರುಕಟ್ಟೆ ಬೆಳವಣಿಗೆಗೂ ಕಾರಣವಾಗಿದೆ. ಜತೆಗೆ ನಗರದಲ್ಲಿ ಸೈಕಲ್ ಬಳಕೆಗೆ ಉತ್ತೇಜನ, ಪ್ರತ್ಯೇಕ ಸೈಕಲ್ ಹಾದಿಗಳ ನಿರ್ಮಾಣ, ಸೈಕಲ್ ಜಾಗೃತಿ, ವಾರಾಂತ್ಯದ ಬಳಕೆಗೆ ಉತ್ತೇಜನ, ಸೈಕಲ್ ಡೇ ಇತ್ಯಾದಿಗಳು ಸೈಕಲ್ ಬಳಕೆಗೆ ಒಂದಷ್ಟು ಪ್ರೇರಣೆ ನೀಡಿವೆ.
ಬ್ರಾಂಡ್‌ಗಳ ಸುರಿಮಳೆ: ವಿಶ್ವದಲ್ಲಿ ಪ್ರಸಿದ್ಧವಾದ ಪ್ರೀಮಿಯಂ ಸೈಕಲ್ ಬ್ರಾಂಡ್‌ಗಳಲ್ಲಿ ಟ್ರೆಕ್, ಬಿಯಾಂಚಿ, ಸ್ಪೆಷಲೈಸ್ಡ್, ಮೆರಿಡಾ, ಪಾಲಿಗಾನ್, ರ್ಯಾಲಿಗಾ, ದೋಹಾನ್, ಫಿಜಿ, ಸ್ಕಾಟ್, ಕೆನ್ನಾಂಡೆಲ್, ಜಿಟಿ ಬೈಕ್ಸ್, ಜೈಂಟ್, ಪಿನರೆಲ್ಲೋ, ಸಾಂತಾಕ್ರೂಜ್, ಕೋನಾ ಬೈಕ್ಸ್, ಶ್ವಿನ್ ಇತ್ಯಾದಿ ಬ್ರ್ಯಾಂಡ್‌ಗಳು ಭಾರತದಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುತ್ತಿವೆ. ಆದರೆ ಇದರ ಮಾರುಕಟ್ಟೆ ಬೆಳವಣಿಗೆ ಇತ್ತೀಚಿನ ವರ್ಷಗಳಲ್ಲಾಗಿದ್ದು, ಒಟ್ಟಾರೆ ಮಾರುಕಟ್ಟೆ ಗಾತ್ರ ಶೇ.2ರಷ್ಟು ಮಾತ್ರ ಇವೆ.
ದೇಶೀಯ ಸೈಕಲ್‌ಗಳ ಮೇಲಾಟ: ಇದೀಗ ದೇಶೀ ಕಂಪನಿಗಳಾದ ಹೀರೋ, ಹರ್ಕ್ನೂಲಸ್, ಮೋಂಟ್ರಾ, ಫೈರ್‌ಫಾಕ್ಸ್, ಟಿಐ ಸೈಕಲ್ ಬ್ರ್ಯಾಂಡ್‌ಗಳು ತರಹೇವಾರಿ ಸೈಕಲ್‌ಗಳನ್ನು ಮಾರುಕಟ್ಟೆಗೆ ಬಿಡತೊಡಗಿದ್ದು, ಯುವಕರು, ಚಿಣ್ಣರನ್ನು ಹೆಚ್ಚು ಗುರಿಯಾಗಿಸಿಕೊಂಡಿವೆ. ಪರಿಣಾಮ, ಇವುಗಳ ಮಾರಾಟವೂ ಹೆಚ್ಚಾಗಿವೆ.
ಕೆಲವೊಂದು ಕಂಪನಿಗಳು ವಿದೇಶಿ ಕಂಪನಿಗಳ ಸಹಯೋಗದಲ್ಲಿ ತಾಂತ್ರಿಕತೆಯನ್ನು ವೃದ್ಧಿಸಿ, ಹೊಸ ಮಾದರಿಗಳನ್ನು ಮಾರುಕಟ್ಟೆಗೆ ತರುತ್ತಿರುವುದು ಸೈಕಲ್ ಉತ್ಪಾದನಾ ರಂಗದಲ್ಲಿ ಬದಲಾವಣೆ ಗಾಳಿ ಬೀಸಲು ಕಾರಣವಾಗಿವೆ. ಸ್ವದೇಶಿ ಬ್ರ್ಯಾಂಡ್‌ಗಳಲ್ಲೂ ಕಡಿಮೆ ಬೆಲೆಗೆ ಉನ್ನತ ತಾಂತ್ರಿಕತೆಯ ಸೈಕಲ್‌ಗಳು ಲಭ್ಯವಿದ್ದು, 2 ಸಾವಿರ ರೂ.ಗಳಿಂದ 40 ಸಾವಿರ ರೂ.ವರೆಗೆ ಸೈಕಲ್‌ಗಳು ಲಭ್ಯವಿವೆ.
ಆ್ಯಕ್ಸೆಸರೀಸ್ ಮಾರಾಟವೂ ಜೋರು: ಸೈಕಲ್ ಅಂದಮೇಲೆ ಆ್ಯಕ್ಸಸೆರೀಸ್ ಮಾರಾಟವೂ ಜೋರಾಗಿದೆ. ಬೆಲ್, ಮಿನುಗುವ ಲೈಟ್‌ಗಳಿಂದ ಹಿಡಿದು, ಸೈಕಲ್ ಪಂಪ್, ಸೈಕ್ಲಿಂಗ್‌ಗೆ ಬೇಕಾದ ಬಟ್ಟೆಗಳು, ಹೆಲ್ಮೆಟ್, ಸ್ಕಾಫ್ì, ಬ್ಯಾಗ್‌ಗಳು, ಬಿಡಿಭಾಗಗಳು, ಕುಡಿಯುವ ನೀರಿನ ಬಾಟಲಿ, ಗ್ಲೌಸ್ ಇತ್ಯಾದಿಗಳೆಂದು ನೂರಾರು ವಿಧದ ಆ್ಯಕ್ಸೆಸರೀಸ್‌ಗಳು ಮಾರುಕಟ್ಟೆಯಲ್ಲಿ ಲಭ್ಯವಿವೆ. ಸೈಕಲ್ ಮಾರಾಟ ಜೋರಾಗುತ್ತಿದ್ದಂತೆ ಇವುಗಳ ಮಾರಾಟವೂ ದ್ವಿಗುಣಗೊಂಡಿದೆ.
* ಈಶ