ಬೆಂಗಳೂರು: ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿಸುವುದಾಗಿ ಇನ್ಫೋನಿಸ್‌ನ ಹಿರಿಯ ಕಾರ್ಯಾನಿರ್ವಾಹಕ ಅಧಿಕಾರಿಗೆ ಕರೆ ಮಾಡಿದ ಸೈಬರ್ ವಂಚಕರು ಬರೋಬರಿ 3.7 ಕೋಟಿ ರೂ. ಸುಲಿಗೆ ಮಾಡಿ ವಂಚಿಸಿದ್ದಾರೆ.
ಈ ಸಂಬಂಧ ವೈಟ್‌ಫೀಲ್ಡ್ ನಿವಾಸಿ ಯಾಗಿ ರುವ ಅಧಿಕಾರಿ ಕೇಂದ್ರ ವಿಭಾಗ ಸೆನ್ ಠಾಣೆಗೆ ದೂರು ನೀಡಿದ್ದರು. ಈ ಸಂಬಂಧ ಅಪರಿಚಿತ ವ್ಯಕ್ತಿಗಳ ವಿರುದ್ಧ ಸೆನ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ. ನ.21ರಂದು ವಂಚಕರು, ಟೆಲಿಕಾಂ ನಿಯಂತ್ರಣ ಪ್ರಾಧಿಕಾರ, ಸಿಬಿಐ ಹಾಗೂ ಮುಂಬೈ ಪೊಲೀಸ್ ಹೆಸರಿನಲ್ಲಿ ಕರೆ ಮಾಡಿ ಅಕ್ರಮ ಹಣ ವರ್ಗಾವಣೆ ಸೇರಿ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದೀರಿ ಎಂದು ಬೆದರಿಸಿದ್ದಾರೆ.
ಅಲ್ಲದೆ, ತಮ್ಮ ವಿರುದ್ಧ ಮುಂಬೈನಲ್ಲಿ ಕ್ರಿಮಿನಲ್ ಪ್ರಕರಣ ದಾಖಲು ಮಾಡಲಾಗಿದೆ ಎಂದು ಹೆದರಿಸಿದ್ದಾರೆ. ಬಳಿಕ ಎರಡು ದಿನಗಳ ನಂತರ ಕರೆ ಮಾಡಿ 3.7 ಕೋಟಿ ರೂ. ಕೊಟ್ಟರೆ ಪ್ರಕರಣ ದಾಖಲಿಸುವುದಿಲ್ಲ ಎಂದಿದ್ದರು. ಅದರಿಂದ ಬೆದರಿದ ಟೆಕಿ, ವಂಚಕರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತವಾಗಿ 3.7 ಕೋಟಿ ರೂ. ವರ್ಗಾವಣೆ ಮಾಡಿದ್ದಾರೆ.
ಆ ನಂತರ ಪರಿಶೀಲಿಸಿಕೊಂಡ ಟೆಕಿ, ತನ್ನ ವಿರುದ್ಧ ಯಾವುದೇ ಆರೋಪಗಳಿಲ್ಲ ಎಂಬುದು ಖಾತ್ರಿ ಪಡಿಸಿಕೊಂಡಾಗ ತಾನೂ ಸೈಬರ್ ವಂಚನೆಗೆ ಒಳಗಾಗಿದ್ದೇನೆ ಎಂದು ಗೊತ್ತಾಗಿ ಸೆನ್ ಠಾಣೆಗೆ ಬಂದು ದೂರು ನೀಡಿದ್ದಾರೆ.