Advertisement

ಸೈಬರ್‌ ಜಾಲದಲ್ಲಿ ಸುಶಿಕ್ಷಿತರೇ ಹೆಚ್ಚು ಸಂತ್ರಸ್ತರು!

02:59 PM Feb 24, 2021 | Team Udayavani |

ಹುಬ್ಬಳ್ಳಿ: ಸೈಬರ್‌ ಅಪರಾಧಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿವೆ. ಅಮಾಯಕರು ಮಾತ್ರವಲ್ಲದೇ ವಿದ್ಯಾವಂತರು, ಡಬಲ್‌ ಡಿಗ್ರಿ ಪ್ರವೀಣರೇ ಹೆಚ್ಚು ಹೆಚ್ಚಾಗಿ ವಂಚನೆಗೆ ಒಳಗಾಗುತ್ತಿರುವುದು ವಿಪರ್ಯಾಸವಾಗಿದೆ.

Advertisement

ಅಂತರ್ಜಾಲ ಕದೀಮರು ನೌಕರಿ ಕೊಡಿಸುವುದಾಗಿ,ಬೆಲೆಬಾಳುವ ಉಡುಗೊರೆ ಕಳುಹಿಸುವುದಾಗಿ, ವಾಹನಗಳನ್ನು ಮಾರಾಟ ಮಾಡುವುದಾಗಿ ಹಾಗೂ ಬ್ಯಾಂಕ್‌ ಮ್ಯಾನೇಜರ್‌ ಎಂದು ನಂಬಿಸಿ ತಮ್ಮ ಖಾತೆಗೆ ಹಣ ವರ್ಗಾಯಿಸಿಕೊಂಡುವಂಚಿಸುತ್ತಿರುವುದು ಹೆಚ್ಚುತ್ತಲೇ ಇದೆ. ಸೈಬರ್‌ ಕದೀಮರ ಜಾಲಕ್ಕೆ ಬಿದ್ದು ಬ್ಯಾಂಕ್‌ ಅಧಿಕಾರಿಗಳು, ಪೊಲೀಸ್‌ ಅಧಿಕಾರಿಗಳು, ಪ್ರತಿಷ್ಠಿತ ಕಂಪನಿಗಳ ಅಧಿಕಾರಿಗಳು, ಪ್ರಾಧ್ಯಾಪಕರು, ಉದ್ಯಮಿಗಳು, ವ್ಯಾಪಾರಸ್ಥರು ಸೇರಿದಂತೆ ವಿದ್ಯಾರ್ಥಿಗಳು, ಜನಸಾಮಾನ್ಯರು ಮೋಸಕ್ಕೊಳಗಾಗಿದ್ದಾರೆ.

ಈಗ ಇಂತಹ ಜಾಲಕ್ಕೆ ನಗರದ ಯುವಕನೊಬ್ಬ ಬಿದ್ದು, ತನ್ನ ತಂದೆಯ ನಿವೃತ್ತಿ ಹಣವನ್ನೆಲ್ಲಕಳೆದುಕೊಂಡಿದ್ದಲ್ಲದೆ, ನೌಕರಿಯೂ ಸಿಗದೆ ಪರದಾಡುತ್ತಿದ್ದಾನೆ.ಉದ್ಯೋಗದ ಹುಡುಕಾಟದಲ್ಲಿ ಇರುವವರನ್ನೇಗುರಿಯಾಗಿಸಿ ವಂಚಿಸುವ ದೊಡ್ಡ ಜಾಲವೇ ಸಕ್ರಿಯವಾಗಿದೆ. ಸರಕಾರಿ ಇಲಾಖೆಗಳ ಹಾಗೂ ಪ್ರತಿಷ್ಠಿತ ಕಂಪನಿಗಳ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಿ, ವಿವಿಧ ನೌಕರಿಗಳಿವೆ ಎಂದು ನಂಬಿಸಿ, ಉದ್ಯೋಗಾಕಾಂಕ್ಷಿಗಳಿಂದ ವಿವಿಧ ಬ್ಯಾಂಕ್‌ ಖಾತೆಗಳಿಗೆ ಲಕ್ಷಾಂತರ ರೂ. ವರ್ಗಾಯಿಸಿಕೊಂಡು ಮೋಸಗೊಳಿಸುತ್ತಿದ್ದಾರೆ.

8.40 ಲಕ್ಷ ರೂ. ವಂಚನೆ: ಎಂಜಿನಿಯರಿಂಗ್‌ ಓದಿ ಕೋವಿಡ್ ಲಾಕ್‌ಡೌನ್‌ಗೂ ಮುನ್ನ ಖಾಸಗಿ ಶಿಪ್ಪಿಂಗ್‌ ಕಂಪೆನಿ ಉದ್ಯೋಗದಲ್ಲಿದ್ದ ನಗರದ ಯುವಕನೊಬ್ಬ ಇದೀಗ ಆನ್‌ಲೈನ್‌ ವಂಚಕರ ಜಾಲಕ್ಕೆ ಸಿಲುಕಿ ಬರೋಬ್ಬರಿ 8.40 ಲಕ್ಷ ರೂ. ಕಳೆದುಕೊಂಡು ಪರಿತಪಿಸುತ್ತಿದ್ದಾನೆ.

ಅಂತರ್ಜಾಲ ತಾಣಗಳಲ್ಲಿ ನೌಕರಿ ಹುಡುಕಾಟ ನಡೆಸಿ ಈತ ಅರ್ಜಿ ಸಲ್ಲಿಸಿದ್ದ. ಈತನ ಇ-ಮೇಲ್‌ ಐಡಿಗೆ ಚಿಲ್ಲಿವೆಕ್‌ಡೇರಿ ಹೆಸರಿನಲ್ಲಿ ಮೇಲ್‌ ಕಳುಹಿಸಿದ್ದ ವಂಚಕರು, ಕೆನಡಾದಲ್ಲಿರುವ ನಮ್ಮ ಕಂಪನಿಯಲ್ಲಿ ಡೇರಿ ಫಾರ್ಮಿಂಗ್‌ ಮ್ಯಾನೇಜರ್‌ ಎಂದುಆಯ್ಕೆ ಆಗಿದ್ದೀರಿ ಎಂದು ಮೊಬೈಲ್‌ ವಾಟ್ಸ್‌ಆ್ಯಪ್‌ ಸಂಖ್ಯೆ ಹಾಗೂ ಮೇಲ್‌ ಕಳುಹಿಸಿದ್ದಾರೆ. ಇದನ್ನು ನಂಬಿದ ಯುವಕನು ಅವರೊಂದಿಗೆ ಸಂವಹನ ನಡೆಸಿದ್ದಾನೆ.

Advertisement

ತನ್ನ ಶಿಕ್ಷಣದ ಎಲ್ಲಾ ದಾಖಲಾತಿಗಳನ್ನು ಸ್ಕ್ಯಾನ್‌ ಮಾಡಿ 2020ರ ಡಿ. 9ರಂದು ಕಳುಹಿಸಿದ್ದಾನೆ. ಜೊತೆಗೆ 2021ರ ಜ. 9ರಂದು ಎಂಪ್ಲಾಯ್‌ಮೆಂಟ್‌ ಅಪ್ಲಿಕೇಶನ್‌ ಫಾರ್ಮ್ ಭರ್ತಿ ಮಾಡಿ ಸ್ಕ್ಯಾನ್‌ ಮಾಡಿ ಕಳುಹಿಸಿದ್ದಾನೆ. ನಿಮ್ಮ ದಾಖಲಾತಿಗಳನ್ನು ಪರಿಶೀಲಿಸಿದ್ದೇವೆ. ನೀವು ಕೆನಡಾದಲ್ಲಿ ಕೆಲಸ ಮಾಡಲು ಅರ್ಹರಿದ್ದೀರಿ ಎಂದು ಪಾಸ್‌ಪೋರ್ಟ್‌ ಹಾಗೂ ಮತ್ತಿತರ ಶೈಕ್ಷಣಿಕ ದಾಖಲೆ ಕಳುಹಿಸಲು ಹೇಳಿದ್ದಾರೆ.

ಅದರಂತೆ ಯುವಕದಾಖಲಾತಿಗಳನ್ನು ಕಳುಹಿಸಿದ್ದಾನೆ.ಈ ಮಧ್ಯೆ ವೀಸಾಪ್ರಕ್ರಿಯೆಗಳಿಗಾಗಿಬೆಂಗಳೂರಿಗನೆಂದು ಎರಿಕ್‌ ರಾಬಿನ್‌ಸನ್‌ ಎಂಬಾತನನ್ನು ಪರಿಚಯಿಸಿದ್ದಾರೆ. ಯುವಕನಿಗೆ ಬೆಂಗಳೂರಿನಆಸ್ಪತ್ರೆಯೊಂದರಲ್ಲಿ ವೈದ್ಯಕೀಯ ತಪಾಸಣೆಯನ್ನೂಮಾಡಿಸಿದ್ದಾರೆ. ಬಳಿಕ ಕೆನಡಾದಲ್ಲಿ ಬ್ಯಾಂಕ್‌ ಖಾತೆತೆರೆಯಲು, ಕ್ರಿಮಿನಲ್‌ ಹಿನ್ನೆಲೆ ಪರಿಶೀಲಿಸಲು, ಪ್ರಯಾಣ ವೆಚ್ಚ ಭರಿಸಲು, ಡಿಪೋಸಿಟ್‌ ಎಂದೆಲ್ಲಾ ನಂಬಿಸಿ ಹಂತ ಹಂತವಾಗಿ ತಿಂಗಳೊಳಗೆ

ಒಟ್ಟು 8.41ಲಕ್ಷ ರೂ.ಗಳನ್ನು ಬ್ಯಾಂಕ್‌ ಖಾತೆಗೆ ವರ್ಗಾಯಿಸಿಕೊಂಡು ವಂಚಿಸಿದ್ದಾರೆ. ಎಲ್ಲ ಮಾತುಕತೆ, ವ್ಯವಹಾರವೂ ಆನ್‌ಲೈನ್‌ನಲ್ಲೇ ನಡೆದಿದ್ದು, ಆರೋಪಿಗಳು ತೆರೆಯ ಹಿಂದೆಯೇಕರಾಮತ್ತು ನಡೆಸಿದ್ದಾರೆ. ಸೈಬರ್‌ ಕ್ರೈಂ ಪೊಲೀಸರು ಪ್ರಕರಣದಾಖಲಿಸಿಕೊಂಡು, ತನಿಖೆ ಕೈಗೊಂಡಿದ್ದಾರೆ.

ಏರುತ್ತಲೇ ಇದೆ ಸೈಬರ್‌ ಪ್ರಕರಣ :

ಸೈಬರ್‌ ಪ್ರಕರಣಗಳಿಗೆ ಸಂಬಂಧಿಸಿ ಹುಬ್ಬಳ್ಳಿ ಸೈಬರ್‌ ಕ್ರೈಂ ಪೊಲೀಸ್‌ ಠಾಣೆಯಲ್ಲಿ 2019ರಲ್ಲಿ ಅಂದಾಜು 138 ಪ್ರಕರಣಗಳು, 2020ರಲ್ಲಿ 118 ಹಾಗೂ 2021ರಲ್ಲಿ ಇಲ್ಲಿಯವರೆಗೆ ಅಂದಾಜು 37 ಪ್ರಕರಣಗಳು ದಾಖಲಾಗಿವೆ. ಈ ಠಾಣೆಯಲ್ಲಿ ಪ್ರತಿದಿನ ಒಂದಿಲ್ಲೊಂದು ಇಂತಹ ಪ್ರಕರಣಗಳು ದಾಖಲಾಗುತ್ತಲೇ ಇವೆ. ಕೆಲವರು ವಂಚನೆಗೊಂಡಿದ್ದರೂ ಠಾಣೆಯ ಮೆಟ್ಟಿಲೇರಲು ಹಿಂಜರಿಯುತ್ತಿದ್ದಾರೆ. ಇನ್ನು ಕೆಲವರು ಸಮರ್ಪಕ ದಾಖಲಾತಿಗಳು ಸಿಗದ್ದಕ್ಕೆ ದೂರು ಕೊಡಲು ಹಿಂದೇಟು ಹಾಕುತ್ತಿದ್ದಾರೆ.

ವಂಚನೆ ಖೆಡ್ಡಾಕ್ಕೆ ಬೀಳ್ಳೋದು ಹೇಗೆ? :

ಜಾಲತಾಣಗಳಲ್ಲಿ ಯಾರ್ಯಾರು ಯಾವ ವಸ್ತುಗಳನ್ನು ಖರೀದಿಸಲು ಇಲ್ಲವೆ ಮಾರಾಟ ಮಾಡಲು ಹೆಚ್ಚೆಚ್ಚು ಹುಡುಕಾಟ ಮಾಡುತ್ತಿದ್ದಾರೆ ಎಂಬುದನ್ನು ಸೈಬರ್‌ ವಂಚಕರು ಗೂಗಲ್‌ ಎಂಜಿನ್‌ ಸರ್ಚ್‌ ಮಾಡುವ ಮೂಲಕಕಂಡುಕೊಳ್ಳುತ್ತಾರೆ. ಹುಡುಕಾಟ ಮಾಡಿದವರ ಆಸಕ್ತಿಗೆ ಅನುಸಾರ ಅವರ ಮೊಬೈಲ್‌ ಸಂಖ್ಯೆಗೆ ಸಂದೇಶ, ವಾಟ್ಸ್‌ಆ್ಯಪ್‌ ಹಾಗೂ ಫೇಸ್‌ಬುಕ್‌,ಇ-ಮೇಲ್‌ಗೆ ಸಂದೇಶ ಕಳುಹಿಸುತ್ತಾರೆ. ಅವರು ಕಳುಹಿಸಿದ ಸಂದೇಶ ಹಾಗೂ ಮೇಲ್‌ನೊಂದಿಗೆ ಸಂಪರ್ಕ ಬೆಳೆಸಿದರೆ ಸಾಕು ಸುಳ್ಳು ಮಾಹಿತಿಗಳನ್ನು ಕಳುಹಿಸಿ, ತಮ್ಮ ವಿವಿಧ ಖಾತೆಗಳಿಗೆ ಹಣ ವರ್ಗಾಯಿಸಿಕೊಳ್ಳುತ್ತಾರೆ.

ಟೋಲ್ ಫ್ರೀ ಸಂಖ್ಯೆಯೂ ನಕಲು! :

ಕಂಪನಿಯ ಬಗ್ಗೆ ಇಲ್ಲವೆ ವಸ್ತುಗಳ ಕುರಿತು ಯಾವುದೇ ರೀತಿಯ ಮಾಹಿತಿ ಪಡೆಯಬೇಕಾದರೆ ಅಥವಾ ದೂರು ಸಲ್ಲಿಸಬೇಕಾದರೆ ಇಂತಹ ಟೋಲ್‌ ಫ್ರೀ ಸಂಖ್ಯೆಗೆ ಸಂಪರ್ಕಿಸಬಹುದೆಂದು ವಂಚಕರು ತಾವು ಕಳುಹಿಸುವ ಮೇಲ್‌, ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ನಲ್ಲಿ ನಕಲಿ ಸಂಖ್ಯೆ ಕೊಟ್ಟಿರುತ್ತಾರೆ.ಅದಕ್ಕೆ ಸಂಪರ್ಕಿಸಿದರೆ ನಂಬಿಕೆ ಬರುವಂತೆ ವಿವಿಧ ಮೊಬೈಲ್‌ ಸಂಖ್ಯೆಗಳ ಮೂಲಕ 3-4 ಜನರು ಮಾತನಾಡಿ ನಯವಾಗಿ ನಂಬಿಸಿ ವಂಚಿಸುತ್ತಾರೆ.

 

­-ಶಿವಶಂಕರ ಕಂಠಿ

Advertisement

Udayavani is now on Telegram. Click here to join our channel and stay updated with the latest news.

Next