Advertisement

ಸೈಬರ್‌ ಅಪರಾಧಗಳ ತನಿಖೆ, ಸಂಶೋಧನೆಗೆ ಕೇಂದ್ರ

06:10 AM Mar 01, 2019 | Team Udayavani |

ಬೆಂಗಳೂರು: ಬ್ಯಾಂಕಿಂಗ್‌ ವಂಚನೆ, ವೈಯಕ್ತಿಕ ಮಾಹಿತಿ ಕಳವು ರೀತಿಯ ಸೈಬರ್‌ ಅಪರಾಧ ತಡೆಗಟ್ಟುವ ನಿಟ್ಟಿನಲ್ಲಿ ನಗರದ ಸಿಐಡಿ ಕಚೇರಿಯಲ್ಲಿ “ಸೈಬರ್‌ ತನಿಖೆ ಹಾಗೂ ಸಂಶೋಧನಾ ಕೇಂದ್ರ’ ಸ್ಥಾಪನೆಯಾಗಿದೆ. ನೂತನ ಕೇಂದ್ರಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗುರುವಾರ ಚಾಲನೆ ನೀಡಿದರು.

Advertisement

ಈ ವೇಳೆ ಮಾತನಾಡಿದ ಗೃಹ ಸಚಿವ ಎಂ.ಬಿ.ಪಾಟೀಲ್‌, ರಾಜ್ಯ ಪೊಲೀಸ್‌ ಇಲಾಖೆ ಹಾಗೂ ಇನ್ಫೋಸಿಸ್‌ ಫೌಂಡೇಶನ್‌ ಸಹಯೋಗದಲ್ಲಿ ಈ ಕೇಂದ್ರ ಸ್ಥಾಪಿಸಲಾಗಿದೆ. ಬೆಂಗಳೂರು ನಗರವನ್ನು ಸೈಬರ್‌ ಸುರಕ್ಷತೆಯಲ್ಲಿ ವಿಶ್ವಕ್ಕೆ ಮಾದರಿಯಾಗಿ ರೂಪಿಸುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಈ ಕೇಂದ್ರದಲ್ಲಿ ಪೊಲೀಸ್‌ ಅಧಿಕಾರಿಗಳು, ಕಾನೂನು, ಇಂಜಿನಿಯರಿಂಗ್‌ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುತ್ತದೆ. ಕೇಂದ್ರಕ್ಕೆ ಬೇಕಾಗುವ ಸಿಬ್ಬಂದಿ ನೇಮಕ ಸೇರಿ ಇನ್ನಿತರೆ ಪ್ರಕ್ರಿಯೆಗಳನ್ನು ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.

ಇನ್ಫೋಸಿಸ್‌ ಪ್ರತಿಷ್ಠಾನದ ಅಧ್ಯಕ್ಷೆ ಡಾ.ಸುಧಾ ಮೂರ್ತಿ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಸೈಬರ್‌ ಅಪರಾಧ ಅತ್ಯಂತ ಅಪಾಯಕಾರಿಯಾಗಿದೆ. ಇಂಥ ಅಪರಾಧ ಕೃತ್ಯಗಳನ್ನು ತಡೆಯುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಗೆ ನೆರವಾಗಲು “ಸೈಬರ್‌ ತನಿಖೆ ಹಾಗೂ ಸಂಶೋಧನಾ ಕೇಂದ್ರ’ ಸ್ಥಾಪಿಸಲಾಗಿದೆ. ಜತೆಗೆ, ಸಾರ್ವಜನಿಕರಿಗೂ ಜಾಗೃತಿ ಮೂಡಿಸುವ ಆಶಯ ಹೊಂದಲಾಗಿದೆ ಎಂದರು.

ಸಿಐಡಿ ಡಿಜಿ ಪ್ರವೀಣ್‌ ಸೂದ್‌ ಮಾತನಾಡಿ, ಸೈಬರ್‌ ಅಪರಾಧ ಕುರಿತು ಇಲಾಖೆ ಸಿಬ್ಬಂದಿ, ಸರ್ಕಾರಿ ಅಭಿಯೋಜಕರು ಹಾಗೂ ನ್ಯಾಯಾಧೀಶರಿಗೆ ಮೂರು ಹಂತಗಳಲ್ಲಿ ತರಬೇತಿ ನೀಡಲಾಗುತ್ತದೆ. ಸದ್ಯ ಕೇಂದ್ರದಲ್ಲಿ 100 ಮಂದಿಗೆ ಏಕಕಾಲದಲ್ಲಿ ತರಬೇತಿ ನೀಡಲು ಅವಕಾಶವಿದ್ದು, ಒಟ್ಟು 10 ಸಾವಿರ ಮಂದಿಗೆ ತರಬೇತಿ ನೀಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು.

Advertisement

ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌. ರಾಜು, ಸಿಐಡಿ ಐಜಿಪಿ ಹೇಮಂತ್‌ ನಿಂಬಾಳ್ಕರ್‌, ಡಾಟಾ ಸೆಕ್ಯೂರಿಟಿ ಕೌನ್ಸಿಲ್‌ ಆಫ್ ಇಂಡಿಯಾದ ಸಿಇಒ ರಮಾ ವೇದಶ್ರೀ ಉಪಸ್ಥಿತರಿದ್ದರು.

ತನಿಖೆ ಕುರಿತು ಅಮೆರಿಕದಲ್ಲಿ ತರಬೇತಿ: ಸೈಬರ್‌ ಅಪರಾಧಗಳ ತನಿಖಾ ವಿಧಾನಕ್ಕೆ ಸಂಬಂಧಿಸಿದಂತೆ ಮೊದಲ ಹಂತದಲ್ಲಿ ಅಮೆರಿಕದ ನಾರ್ವಾಕ್‌ ಸಿಟಿಯ ಸಂಶೋಧನಾ ಕೇಂದ್ರಕ್ಕೆ ಮೊದಲ ಹಂತದಲ್ಲಿ ಮೂವರು ಅಧಿಕಾರಿಗಳು ಎರಡು ವಾರಗಳ ಕಾಲ ತರಬೇತಿಗೆ ತೆರಳಲಿದ್ದಾರೆ.

ಈ ಬಾರಿ ಐಪಿಎಸ್‌ ಅಧಿಕಾರಿಗಳಾದ ಅನೂಪ್‌ ಶೆಟ್ಟಿ, ಡಿವೈಎಸ್‌ಪಿ ರಾಘವೇಂದ್ರ ಹೆಗಡೆ, ಡಾಟಾ ಸೆಕ್ಯೂರಿಟಿ ಕೌನ್ಸಿಲ್‌ ಆಫ್ ಇಂಡಿಯಾದ ಉಪನಿರ್ದೇಶಕ ವೆಂಕಟೇಶ್‌ ಮೂರ್ತಿ ತೆರಳಲಿದ್ದಾರೆ. ಹೀಗೆ, ಹಂತ ಹಂತವಾಗಿ ಪೊಲೀಸ್‌ ಕಾನ್‌ಸ್ಟೆಬಲ್‌ ಹುದ್ದೆಯಿಂದ ಐಪಿಎಸ್‌ ಅಧಿಕಾರಿಗಳನ್ನು ಕೂಡ ವಿದೇಶಗಳಿಗೆ ತರಬೇತಿಗೆ ಕಳುಹಿಸಿಕೊಡಲಾಗುತ್ತದೆ ಎಂದು ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next