ಎಜ್‌ಬಾಸ್ಟನ್: ಕೆರಿಬಿಯನ್ ದ್ವೀಪದ ತಂಡವಾದ ಬಾರ್ಬಡಾಸ್ ವಿರುದ್ಧ 100 ರನ್ನುಗಳ ಗೆಲುವು ಸಾಧಿಸಿದ ಭಾರತದ ವನಿತಾ ತಂಡ ಕಾಮನ್ವೆಲ್ತ್ ಗೇಮ್ಸ್ ಸೆಮಿಫೈನಲ್ ಪ್ರವೇಶಿಸಿದೆ. ಇಂಗ್ಲೆಂಡ್-ನ್ಯೂಜಿಲ್ಯಾಂಡ್ ನಡುವಿನ ವಿಜೇತ ತಂಡವನ್ನು ಕೌರ್ ಬಳಗ ಶನಿವಾರ ಎದುರಿಸಲಿದೆ.
ಗುರುವಾರ ರಾತ್ರಿಯ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ 4 ವಿಕೆಟಿಗೆ 162 ರನ್ ಗಳಿಸಿದರೆ, ಬಾರ್ಬಡಾಸ್ 8 ವಿಕೆಟಿಗೆ ಬರೀ 62 ರನ್ ಗಳಿಸಿ ದೊಡ್ಡ ಅಂತರದ ಸೋಲುಂಡಿತು.
ಕಳೆದ ಪಂದ್ಯದಲ್ಲಿ ಮಿಂಚಿದ ಸ್ಮತಿ ಮಂಧನಾ (5) ಬೇಗನೇ ಔಟಾದ ಬಳಿಕ ಶಫಾಲಿ ವರ್ಮ-ಜೆಮಿಮಾ ರೋಡ್ರಿಗಸ್ 71 ರನ್ ಜತೆಯಾಟ ನಿಭಾಯಿಸಿದರು. ಶಫಾಲಿ 26 ಎಸೆತಗಳಿಂದ 43 ರನ್ (7 ಬೌಂಡರಿ, 1 ಸಿಕ್ಸರ್) ಹೊಡೆದರೆ, ಜೆಮಿಮಾ 56 ರನ್ ಹೊಡೆದು ಔಟಾಗದೆ ಉಳಿದರು (46 ಎಸೆತ, 6 ಬೌಂಡರಿ, 1 ಸಿಕ್ಸರ್). ಕೊನೆಯಲ್ಲಿ ದೀಪ್ತಿ ಶರ್ಮ ಉತ್ತಮ ಪ್ರದರ್ಶನ ನೀಡಿ ಅಜೇಯ 34 ರನ್ ಕೊಡುಗೆ ಸಲ್ಲಿಸಿದರು (28 ಎಸೆತ, 2 ಬೌಂಡರಿ, 1 ಸಿಕ್ಸರ್).
ಜೆಮಿಮಾ-ದೀಪ್ತಿ ಕೊನೆಯ 7 ಓವರ್‌ಗಳಲ್ಲಿ ಮುರಿಯದ 5ನೇ ವಿಕೆಟಿಗೆ 70 ರನ್ ಒಟ್ಟುಗೂಡಿಸಿ ತಂಡದ ಗೌರವಾರ್ಹ ಮೊತ್ತಕ್ಕೆ ಕಾರಣರಾದರು.
ಬೌಲಿಂಗ್‌ನಲ್ಲಿ ಮಧ್ಯಮ ವೇಗಿ ರೇಣುಕಾ ಸಿಂಗ್ ಅ ವರದು ಘಾತಕ ಪ್ರದರ್ಶನವಾಗಿತ್ತು. ಅವರು ಕೇವಲ 10 ರನ್ ವೆಚ್ಚದಲ್ಲಿ 4 ವಿಕೆಟ್ ಉರುಳಿಸಿದರು. ಬಾರ್ಬಡಾಸ್ ಪರ ಎರಡಂಕೆಯ ಸ್ಕೋರ್ ದಾಖಲಿಸಿದ್ದು ಇಬ್ಬರು ಮಾತ್ರ. ಕೈಶೋನಾ ನೈಟ್ (16) ಮತ್ತು ಶಕಿರಾ ಸೆಲ್ಮನ್ (ಅಜೇಯ 12).
ಸಂಕ್ಷಿಪ್ತ ಸ್ಕೋರ್: ಭಾರತ-4 ವಿಕೆಟಿಗೆ 162 (ಜೆಮಿಮಾ ಔಟಾಗದೆ 56, ಶಫಾಲಿ 43, ದೀಪ್ತಿ ಔಟಾಗದೆ 34). ಬಾರ್ಬಡಾಸ್-8 ವಿಕೆಟಿಗೆ 62 (ನೈಟ್ 16, ಶಕಿರಾ ಔಟಾಗದೆ 12, ರೇಣುಕಾ 10ಕ್ಕೆ 4).