Advertisement

ಜಿಮ್ನಾಸ್ಟ್‌ ಮೇಘನಾ ಅಸಮಾಧಾನ

07:00 AM Apr 12, 2018 | |

ಹೊಸದಿಲ್ಲಿ: ಗೋಲ್ಡ್‌ಕೋಸ್ಟ್‌ ಗೇಮ್ಸ್‌ಗೆ ಸಂಬಂಧಿಸಿ ಭಾರತೀಯ ಜಿಮ್ನಾಸ್ಟ್‌ ತಂಡದ ಅಸಮಾಧಾನ ಅಂತ್ಯಗೊಳ್ಳುವಂತೆ ಕಾಣುತ್ತಿಲ್ಲ. ಗೇಮ್ಸ್‌ಗೂ ಮೊದಲು ಆಯ್ಕೆಯ ವಿವಾದವಾಯಿತು, ವನಿತಾ ಆರ್ಟಿಸ್ಟಿಕ್‌ ತಂಡದ ಫೈನಲ್‌ ವೇಳೆ ಉಡುಪಿನಲ್ಲಿ ರಾಷ್ಟ್ರೀಯ ಲಾಂಛನ ಇಲ್ಲದ ಕಾರಣ ತಂಡಕ್ಕೆ ದಂಡ ವಿಧಿಸಲಾಯಿತು. ಇದೀಗ ರಿದಮಿಕ್‌ ಜಿಮ್ನಾಸ್ಟ್‌ ಮೇಘನಾ ರೆಡ್ಡಿ ಗುಂಡ್ಲಪಲ್ಲಿ ಅವರು ತನ್ನ ವೈಯಕ್ತಿಕ ತರಬೇತುದಾರರನ್ನು ಪಡೆಯಲು ಇಂಡಿಯನ್‌ ಒಲಿಂಪಿಕ್ಸ್‌ ಅಸೋಸಿಯೇಶನ್‌ (ಐಒಎ) ನೆರವು ನೀಡಲಿಲ್ಲವೆಂದು ದೂರಿತ್ತು ಸುದ್ದಿಯಾಗಿದ್ದಾರೆ.

Advertisement

19ರ ಹರೆಯದ ಹೈದರಾಬಾದ್‌ ಮೂಲದ ಜಿಮ್ನಾಸ್ಟ್‌ ಮೇಘನಾ, ವೈಯಕ್ತಿಕ ಕೋಚ್‌ ಗ್ರೀಕ್‌ನ ವರ್ವಾರಾ ಫಿಲಿಯೂ ಬಾಪºಪ ಅವರು ಸ್ಪರ್ಧೆಯ ವೇಳೆ ತನ್ನ ಜತೆಗಿರಲು ಐಒಎ ನೆರವು ನೀಡಿಲ್ಲವೆಂದು ಕ್ರೀಡಾ ಸಚಿವಾಲಯದ ಅಧಿಕಾರಿಗಳಿಗೆ ದೂರಿತ್ತಿದ್ದಾರೆ. ಬುಧವಾರದ ರಿದಮಿಕ್‌ ಸ್ಪರ್ಧೆಯ ತಂಡ ವಿಭಾಗದ ಫೈನಲ್‌ ಮತ್ತು ವೈಯಕ್ತಿಕ ವಿಭಾಗದ ಅರ್ಹತಾ ಸ್ಪರ್ಧೆಯ ವೇಳೆ ವರ್ವಾರಾ ಅವರು ವೈಯಕ್ತಿಕ ಕೋಚ್‌ ಆಗಿ ತನ್ನೊಡನೆ ಇರುವಂತೆ ಮೇಘನಾ ಬಯಸಿದ್ದರು. ಆದರೆ ಐಒಎ ಇದನ್ನು ಅನುಮೋದಿಸಿರಲಿಲ್ಲ. 

ಈ ಮೊದಲು ವರ್ವಾರಾ ಅವರಿಂದ ಮಾರ್ಗದರ್ಶನ, ತರಬೇತಿ ಪಡೆದಿದ್ದ ಮೇಘನಾ ಸ್ಪರ್ಧೆಯ ಸಂದರ್ಭ ವರ್ವಾರಾ ತನ್ನ ಸಮೀಪವಿದ್ದು ಹುರಿದುಂಬಿಸುವುದನ್ನು ನಿರೀಕ್ಷಿಸಿದ್ದರು. ಈ ಬಗ್ಗೆ ಎಐಒ ಅಧಿಕಾರಿಗಳನ್ನು ವಿನಂತಿಸಿದ್ದರು. ಆದರೆ ಮೇಘನಾ ಜತೆಗಿರಲು ವರ್ವಾರಾ ಅವರಿಗೆ ಐಒಎ ಅನುವು ಮಾಡದ ಕಾರಣ ಮೇಘನಾರ ಪ್ರದರ್ಶನವನ್ನು ವರ್ವಾರಾ ವೀಕ್ಷಕರ ಗ್ಯಾಲರಿಯಲ್ಲಿ ಕುಳಿತು ವೀಕ್ಷಿಸಲು ಮಾತ್ರ ಸಾಧ್ಯವಾಯಿತು. 

ಸಕ್ರಿಯ ವೈಯಕ್ತಿಕ ರಿದಮಿಕ್‌ ಜಿಮ್ನಾಸ್ಟ್‌ ಆಗಿರುವ ವರ್ವಾರಾ, ವನಿತಾ ವಿಭಾಗದಲ್ಲಿ 8 ಬಾರಿ ಗ್ರೀಕ್‌ ನ್ಯಾಶನಲ್‌ ಚಾಂಪಿಯನ್‌ ಆಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next