Advertisement

80 ಸೆಕೆಂಡ್‌ನ‌ಲ್ಲಿ ಚಿನ್ನ ಗೆದ್ದ ಸುಶೀಲ್‌ ಕುಮಾರ್‌

06:00 AM Apr 13, 2018 | Team Udayavani |

ಗೋಲ್ಡ್‌ಕೋಸ್ಟ್‌: ಗುರುವಾರ ಮೊದಲ್ಗೊಂಡ ಗೋಲ್ಡ್‌ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ ಕುಸ್ತಿ ಸ್ಪರ್ಧೆಯಲ್ಲಿ ಭಾರತ ಅವಳಿ ಬಂಗಾರದೊಂದಿಗೆ ಮಿನುಗಿದೆ. ಪುರುಷರ ವಿಭಾಗದ 57 ಕೆಜಿ ಫ್ರೀಸ್ಟೈಲ್‌ನಲ್ಲಿ ರಾಹುಲ್‌ ಅವಾರೆ ಮತ್ತು 74 ಕೆಜಿ ಸ್ಪರ್ಧೆಯಲ್ಲಿ ಒಲಿಂಪಿಕ್‌ ಪದಕ ವಿಜೇತ ಸುಶೀಲ್‌ ಕುಮಾರ್‌ ಸ್ವರ್ಣ ಸಂಭ್ರಮವನ್ನಾಚರಿಸಿದರು.

Advertisement

ಆದರೆ ಕುಸ್ತಿಯಲ್ಲಿ ಮೊದಲ ಪದಕ ತಂದುಕೊಟ್ಟ ಹೆಗ್ಗಳಿಕೆ ಬಬಿತಾ ಕುಮಾರಿ ಪೋಗಟ್‌ ಅವರಿಗೆ ಸಲ್ಲುತ್ತದೆ. ಅವರು ವನಿತೆಯರ 53 ಕೆಜಿ ವಿಭಾಗದ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಗೆದ್ದರು. ಆದರೆ ಕಳೆದ ಗೇಮ್ಸ್‌ಗೆ ಹೋಲಿಸಿದರೆ ಇದು ಬಬಿತಾ ಅವರ ಕೆಳ ಮಟ್ಟದ ಸಾಧನೆಯಾಗಿದೆ. ಗ್ಲಾಸೊYàದಲ್ಲಿ ಅವರು ಬಂಗಾರದಿಂದ ಸಿಂಗಾರಗೊಂಡಿದ್ದರು.


ಅವಾರೆಗೆ ಒಲಿದ ಮೊದಲ ಗೇಮ್ಸ್‌ ಪದಕ
ಮೂಲತಃ ಮಹಾರಾಷ್ಟ್ರದ ಬೀಡ್‌ ಜಿಲ್ಲೆಯವರಾದ, ಈಗ ಹರಿಯಾಣದಲ್ಲಿರುವ 27ರ ಹರೆಯದ ರಾಹುಲ್‌ ಅವಾರೆ ಕೆನಡಾದ ಪ್ರಬಲ ಸ್ಪರ್ಧಿ ಸ್ಟೀವನ್‌ ಟಕಹಾಶಿ ವಿರುದ್ಧ 15-7 ಅಂಕಗಳ ಅಧಿಕಾರಯುತ ಜಯ ಸಾಧಿಸಿದರು. ತಾಂತ್ರಿಕವಾಗಿ ಹೆಚ್ಚು ಬಲಶಾಲಿಯಾಗಿದ್ದ ಕೆನಡಾದ ಜಟ್ಟಿ ವಿರುದ್ಧ ಅವಾರೆ ಪರಿಪೂರ್ಣ ಮೇಲುಗೈ ಸಾಧಿಸಿದ್ದೊಂದು ವಿಶೇಷ. ಆರಂಭದಲ್ಲಿ ಟಕಹಾಶಿ ಮೇಲುಗೈ ಸಾಧಿಸಿದರೂ ಬಳಿಕ ಎದುರಾಳಿಯ ದೌರ್ಬಲ್ಯವನ್ನು ಅರಿತುಕೊಂಡ ಅವಾರೆ ಇದಕ್ಕೆ ತಕ್ಕ ಪಟ್ಟುಗಳನ್ನು ಉಪಯೋಗಿಸಿ ಮುಂದಡಿ ಇರಿಸಿದರು. ಇದು ಅವಾರೆಗೆ ಒಲಿದ ಮೊದಲ ಕಾಮನ್ವೆಲ್ತ್‌ ಗೇಮ್ಸ್‌ ಪದಕ.ಇದಕ್ಕೂ ಮುನ್ನ 2011ರ ಮೆಲ್ಬರ್ನ್ ಕಾಮನ್ವೆಲ್ತ್‌ ಚಾಂಪಿಯನ್‌ಶಿಪ್‌ನಲ್ಲಿ ಅವಾರೆ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದರು. ಅದೇ ವರ್ಷ ಟಾಷೆRಂಟ್‌ನಲ್ಲಿ ನಡೆದ ಏಶ್ಯನ್‌ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.

ಸುಶೀಲ್‌ಗೆ ಹ್ಯಾಟ್ರಿಕ್‌ ಚಿನ್ನ
74 ಕೆಜಿ ಕುಸ್ತಿ ಸ್ಪರ್ಧೆಯಲ್ಲಿ ಅನುಭವಿ ಸುಶೀಲ್‌ ಕುಮಾರ್‌ ಭಾರತೀಯರ ನಿರೀಕ್ಷೆಯನ್ನು ಹುಸಿಗೊಳಿಸಲಿಲ್ಲ. ಫೈನಲ್‌ನಲ್ಲಿ ದಕ್ಷಿಣ ಆಫ್ರಿಕಾದ ಜೊಹಾನ್ನೆಸ್‌ ಬೋಥ ಅವರನ್ನು ಕೇವಲ 80 ಸೆಕೆಂಡ್‌ಗಳಲ್ಲಿ ಚಿತ್‌ ಮಾಡಿದರು; 10-0 ಅಂತರದಿಂದ ಬಗ್ಗುಬಡಿದು ಗೇಮ್ಸ್‌ ಹ್ಯಾಟ್ರಿಕ್‌ ಸಾಧಿಸಿದರು. ಹರಿಣಗಳ ನಾಡಿನ ಸ್ಪರ್ಧಿಯ ಈ ಶರಣಾಗತಿಗೆ ಕಾಲು ನೋವು ಕೂಡ ಕಾರಣವಾಗಿತ್ತು. ಇದಕ್ಕೂ ಮುನ್ನ ಹೊಸದಿಲ್ಲಿ ಹಾಗೂ ಗ್ಲಾಸೊYà ಗೇಮ್ಸ್‌ನಲ್ಲೂ ಸುಶೀಲ್‌ ಕುಮಾರ್‌ ಚಿನ್ನದ ಪದಕ ಜಯಿಸಿದ್ದರು.


ಫೈನಲ್‌ ಹಾದಿಯಲ್ಲಿ ಸುಶೀಲ್‌ ಕುಮಾರ್‌ ಕೆನಡಾದ ಜೆವಾನ್‌ ಬಾಲ್‌ಫೋರ್‌ (11-0), ಪಾಕಿಸ್ಥಾನದ ಮುಹಮ್ಮದ್‌ ಬಟ್‌ (10-0) ಮತ್ತು ಆಸ್ಟ್ರೇಲಿಯದ ಕಾನರ್‌ ಇವಾನ್ಸ್‌ (4-0) ಅವರನ್ನು ಉರುಳಿಸಿದ್ದರು. ಆದರೆ ಚಿನ್ನಕ್ಕೆ ಕೊರಳೊಡ್ಡಿದ ಬಳಿಕ ಅವರು ಮಾಧ್ಯಮದವರೊಂದಿಗೆ ಮಾತಾಡಲು ನಿರಾಕರಿಸಿದರು.

ಬೆಳ್ಳಿಗೆ ಇಳಿದ ಬಬಿತಾ
ವನಿತೆಯರ 53 ಕೆಜಿ ವಿಭಾಗದಲ್ಲಿ ಚಾಂಪಿಯನ್‌ ಆಗಿದ್ದ ಬಬಿತಾ ಕುಮಾರಿ ಈ ಬಾರಿ ಬೆಳ್ಳಿ ಪದಕಕ್ಕೆ ಸಮಾಧಾನಪಡಬೇಕಾಯಿತು. ಅವರು ಫೈನಲ್‌ನಲ್ಲಿ ಕೆನಡಾದ ಡಯಾನಾ ವೀಕರ್‌ ವಿರುದ್ಧ 2-5 ಅಂತರದಿಂದ ಪರಾಭವಗೊಂಡರು. ಆರಂಭದಿಂದಲೇ ಮೇಲುಗೈ ಸಾಧಿಸಿದ ವೀಕರ್‌, ತಾನು ದುರ್ಬಲಳಲ್ಲ ಎಂದು ಸಾಬೀತುಪಡಿಸುತ್ತಲೇ ಹೋದರು. ಅಂತಿಮ ನಿಮಿಷದ ವೇಳೆ ಬಬಿತಾ 2-3ರ ಹಿನ್ನಡೆಯಲ್ಲಿದ್ದರು. ಆಗ “ಆ್ಯಂಕಲ್‌ ಟ್ಯಾಪ್‌’ ಯತ್ನಕ್ಕೆ ಮುಂದಾದಾಗ ವೀಕರ್‌ ಇದಕ್ಕೆ ತಿರುಗೇಟು ನೀಡಿದರು. ಮತ್ತೆರಡು ಅಂಕ ಗಳಿಸಿ ತಮ್ಮ ಸಾಧನೆಗೆ ಚಿನ್ನದ ಮೆರುಗನ್ನಿತ್ತರು.


ಇದು ಕೇವಲ 5 ಮಂದಿ ಕುಸ್ತಿಪಟುಗಳ ರೌಂಡ್‌ ರಾಬಿನ್‌ ಮಾದರಿಯ ಸ್ಪರ್ಧೆಯಾಗಿತ್ತು. ಬಬಿತಾ ಮತ್ತು ವೀಕರ್‌ ತಲಾ 3 ಜಯದೊಂದಿಗೆ ಫೈನಲ್‌ ತಲುಪಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next