ಹೊಸದಿಲ್ಲಿ: ಐಸಿಸಿ ಏಕದಿನ ಕ್ರಿಕೆಟ್ ವಿಶ್ವಕಪ್ 2023ರ ಮೊದಲ ಅಪ್ ಸೆಟ್ ಗೆ ದಿಲ್ಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಸಾಕ್ಷಿಯಾಗಿದೆ. ಹಾಲಿ ವಿಶ್ವ ಚಾಂಪಿಯನ್ ಇಂಗ್ಲೆಂಡ್ ಗೆ ಸೋಲುಣಿಸಿದ ಅಫ್ಘಾನಿಸ್ತಾನ ತಂಡವು ಈ ಕೂಟದ ಮೊದಲ ಗೆಲುವು ಕಂಡಿದೆ.
ಇಂಗ್ಲೆಂಡ್ ವಿರುದ್ಧ 69 ರನ್ ಅಂತರದ ಗೆಲುವು ಕಂಡ ಬಳಿಕ ಅಫ್ಘಾನಿಸ್ತಾನವು ಯಾವುದೇ ತಂಡವನ್ನೂ ಸೋಲಿಸಬಹುದು ಎಂಬ ನಂಬಿಕೆ ಬಂದಿದೆ ಎಂದು ಸ್ಪಿನ್ನರ್ ರಶೀದ್ ಖಾನ್ ಹೇಳಿದ್ದಾರೆ.
“ಇದು ನಮಗೆ ದೊಡ್ಡ ಗೆಲುವಾಗಿದೆ. ಈ ರೀತಿಯ ಪ್ರದರ್ಶನವು ಯಾವುದೇ ದಿನದಲ್ಲಿ ನಾವು ಯಾವುದೇ ತಂಡವನ್ನು ಸೋಲಿಸಬಹುದು ಎಂಬ ನಂಬಿಕೆಯನ್ನು ನಮಗೆ ನೀಡುತ್ತದೆ. ತವರಿನ ಜನರಿಗೆ ಸಂತೋಷವನ್ನು ನೀಡುತ್ತದೆ. ಇಂಗ್ಲೆಂಡ್ ವಿರುದ್ಧದ ಪಂದ್ಯದ ಗೆಲುವು ನಮಗೆ ದೊಡ್ಡದು. ಇತ್ತೀಚೆಗೆ ಅಫ್ಘಾನಿಸ್ತಾನ ಭೂಕಂಪ ಕಂಡಿದೆ. ಸುಮಾರು 3000 ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡರು. ಈ ವಿಜಯವು ತವರಿನ ಜನರಿಗೆ ನಗುವನ್ನು ನೀಡುತ್ತದೆ ಎಂದು ನಾನು ಭಾವಿಸುತ್ತೇನೆ” ಎಂದು ರಶೀದ್ ಖಾನ್ ತಿಳಿಸಿದರು.
ಇದನ್ನೂ ಓದಿ:Bigg Boss Kannada: ಬಿಗ್‌ಬಾಸ್ ಮನೆಗೆ ಚಾರ್ಲಿ ಯಾಕೆ ಹೋಗಿಲ್ಲ?
” ಪಂದ್ಯಾವಳಿಯಲ್ಲಿ ಏನೇ ಆಗಲಿ, ನಾವು ಕೊನೆಯವರೆಗೂ ಹೋರಾಡಬೇಕು. ನಾವು ನಮಗಾಗಿ ಸಣ್ಣ ಗುರಿಗಳನ್ನು ಮಾಡಿದ್ದೇವೆ. ಆಟ ಮುಗಿಸಿ ಹೋಟೆಲ್ ಗೆ ಹಿಂತಿರುಗುವಾಗ ನೀವು ನಿಮ್ಮ 100% ಅನ್ನು ನೀಡಿದ್ದೀರಿ ಎಂದು ನೀವು ಸಂತೋಷಪಡಬೇಕು ಎಂದು ಡ್ರೆಸ್ಸಿಂಗ್ ರೂಮ್‌ನಲ್ಲಿರುವ ಎಲ್ಲರಿಗೂ ನಾನು ಸ್ಪಷ್ಟಪಡಿಸಿದ್ದೆ” ಎಂದು ರಶೀದ್ ಹೇಳಿದರು.
ರವಿವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಅಫ್ಘಾನ್, 49.5 ಓವರ್ ನಲ್ಲಿ 284 ರನ್ ಗಳಿಸಿತು. ಗುರ್ಬಾಜ್ 80 ರನ್ ಗಳಿಸಿದರೆ, ಇಕ್ರಮ್ ಇಲಿಖಿಲ್ 58 ರನ್ ಮಾಡಿದರು. ಗುರಿ ಬೆನ್ನತ್ತಿದ ಇಂಗ್ಲೆಂಡ್ ಕೇವಲ 40.3 ಓವರ್ ಗಳಲ್ಲಿ 215 ರನ್ ಗೆ ಆಲೌಟಾಯಿತು. ಮುಜೀಬ್ ಮತ್ತು ರಶೀದ್ ತಲಾ ಮೂರು ವಿಕೆಟ್ ಕಿತ್ತರೆ, ನಬಿ ಎರಡು ವಿಕೆಟ್ ಪಡೆದರು. ಆಂಗ್ಲರ ಪರ ಹ್ಯಾರಿ ಬ್ರೂಕ್ 66 ರನ್ ಮಾಡಿದರು.