ಕ್ರೈಸ್ಟ್ ಚರ್ಚ್: ವನಿತಾ ಏಕದಿನ ವಿಶ್ವಕಪ್ ಕೂಟದ ಎರಡನೇ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ದಕ್ಷಿಣ ಆಫ್ರಿಕಾ ತಂಡವನ್ನು ಸೋಲಿಸಿ ಫೈನಲ್ ತಲುಪಿದೆ. ಈ ಮೂಲಕ ವಿಶ್ವಕಪ್ ಫೈನಲ್ ನಲ್ಲಿ ಆಸ್ಟ್ರೇಲಿಯಾ ಮತ್ತುಇಂಗ್ಲೆಂಡ್ ತಂಡಗಳು ಮುಖಾಮುಖಿಯಾಗಲಿದೆ.
ಇಂದು ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ 137 ರನ್ ಅಂತರದ ಭರ್ಜರಿ ಗೆಲುವು ಸಾಧಿಸಿತು. ಮೊದಲು ಬ್ಯಾಟಿಂಗ್ ನಡೆಸಿದ ಇಂಗ್ಲೆಂಡ್ ಎಂಟು ವಿಕೆಟ್ ನಷ್ಟಕ್ಕೆ 293 ರನ್ ಗಳಿಸಿದರೆ, ದಕ್ಷಿಣ ಆಫ್ರಿಕಾ ತಂಡ 38 ಓವರ್ ಗಳಲ್ಲಿ ಕೇವಲ 156 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಇಂಗ್ಲೆಂಡ್ ಆರಂಭಿಕ ಆಘಾತ ಅನುಭವಿಸಿತು. ಒಂದೆಡೆ ವಿಕೆಟ್ ಉರುಳುತ್ತಿದ್ದರೂ ಕ್ರೀಸ್ ಕಚ್ಚಿ ನಿಂತ ಡೇನಿಯಲ್ ವ್ಯಾಟ್ ಭರ್ಜರಿ ಶತಕ ಸಿಡಿಸಿದರು. 125 ಎಸೆತ ಎದುರಿಸಿದ ವ್ಯಾಟ್ 129 ರನ್ ಗಳಿಸಿದರು. ಉಳಿದಂತೆ ಆಲ್ ರೌಂಡರ್ ಸೋಫಿಯಾ ಡಂಕ್ಲಿ 60 ರನ್ ಗಳಿಸಿದರು. ಕೊನೆಯಲ್ಲಿ ಎಕ್ಲೆಸ್ಟೋನ್ 11 ಎಸೆತಗಳಲ್ಲಿ 24 ರನ್ ಚಚ್ಚಿದರು.
ಇದನ್ನೂ ಓದಿ:ಲಸಿತ್ ಮಾಲಿಂಗ ದಾಖಲೆ ಮುರಿಯಲು ಡ್ವೇನ್ ಬ್ರಾವೋಗೆ ಬೇಕು ಕೇವಲ ಒಂದು ವಿಕೆಟ್
ದಕ್ಷಿಣ ಆಫ್ರಿಕಾ ಪರ ಇಸ್ಮಾಯಿಲ್ ಮೂರು ವಿಕೆಟ್ ಕಿತ್ತರೆ, ಕಪ್ಪ್ ಮತ್ತು ಮಸಬಾಟ ಕ್ಲಾಸ್ ತಲಾ ಎರಡು ವಿಕೆಟ್ ಪಡೆದರು.
ಗುರಿ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡ ಸತತ ವಿಕೆಟ್ ಕಳೆದುಕೊಂಡಿತು. ಡು ಪ್ರೀಜ್ 30 ರನ್, ಲಾರಾ ಗೂಡಲ್ 28 ರನ್, ನಾಯಕಿ ಸುನೆ ಲೂಸ್ 21 ರನ್ ಗಳಿಸಿದರು. ಆದರೆ ಯಾವೊಬ್ಬ ಬ್ಯಾಟರ್ ಕೂಡಾ ದೊಡ್ಡ ಇನ್ನಿಂಗ್ಸ್ ಆಡಲಿಲ್ಲ. ಕೊನೆಗೆ 38 ಓವರ್ ನಲ್ಲಿ ದಕ್ಷಿಣ ಆಫ್ರಿಕಾ ತಂಡ ಆಲೌಟಾಯಿತು. ಇಂಗ್ಲೆಂಡ್ ಪರ ಸೋಫಿ ಎಕ್ಲೆಸ್ಟೋನ್ ಆರು ವಿಕೆಟ್ ಕಿತ್ತು ಮಿಂಚಿದರು.