ಸುಮಾರು 18 ವರ್ಷಗಳಾಗಿತ್ತಂತೆ ರಿಚರ್ಡ್ ಲೂಯಿಸ್ ಅವರು ಕನ್ನಡ ಚಿತ್ರವೊಂದಕ್ಕೆ ಕೆಲಸ ಮಾಡಿ. ಈಗ “ಎಳೆಯರು ನಾವು ಗೆಳೆಯರು’ ಚಿತ್ರದ ಮೂಲಕ ಅವರು ವಾಪಸ್ಸು ಬಂದಿದ್ದಾರೆ. ಚಿತ್ರದ ಕಥಾ ವಿಸ್ತರಣೆ ಮಾಡುವುದರ ಜೊತೆಗೆ ಅವರು ಸಂಭಾಷಣೆಯನ್ನೂ ರಚಿಸಿದ್ದಾರೆ. ಇಷ್ಟಕ್ಕೂ ಅವರು ಚಿತ್ರರಂಗದಿಂದ ದೂರ ಇದ್ದಿದ್ದು ಏಕೆ? ಅದಕ್ಕೆ ಅವರು ಇಂಥದ್ದೊಂದು ಕಾರಣ ನೀಡುತ್ತಾರೆ.
“ರಾಜ್ ಕಪೂರ್ ಅದೆಷ್ಟೋ ವರ್ಷಗಳ ಕಾಲ ಸಿನಿಮಾ ಮಾಡಿಕೊಂಡು ಬಂದರು. ಒಂದು ಹಂತದಲ್ಲಿ ಸಿನಿಮಾ ಮಾಡೋದನ್ನ ನಿಲ್ಲಿಸಿಬಿಟ್ಟರು. ಅವರು ಸಿನಿಮಾ ನಿಲ್ಲಿಸಿದ್ದು ನೋಡಿ, ಶಶಿ ಕಪೂರ್, ಶಮ್ಮಿ ಕಪೂರ್ ಎಲ್ಲಾ ಸಿನಿಮಾ ಮಾಡೋದನ್ನ ನಿಲ್ಲಿಸಬೇಡಿ ಎಂದು ಹೇಳಿದರಂತೆ. ಆಗ ರಾಜ್ ಕಪೂರ್ ಏನು ಹೇಳಿದರಂತೆ ಗೊತ್ತಾ?
ನಾನು ಸಿನಿಮಾ ಮಾಡಬೇಕಾ? ಮಾಡಬೇಕು ಅಂದರೆ ಶೈಲೇಂದ್ರನ್ನ ಕರ್ಕೊಂಡು ಬಾ, ಶಂಕರ್-ಜೈಕಿಶನ್‌ರನ್ನು ಕರ್ಕೊಂಡು ಬನ್ನಿ ಅಂದರು. ಏಕೆಂದರೆ, ಸಿನಿಮಾ ಆಗೋದು ಒಬ್ಬರಿಂದಲ್ಲ ಎನ್ನುವುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಅವರು ಯಶಸ್ವಿ ಯಾಗಿದ್ದಕ್ಕೆ ಶೈಲೇಂದ್ರ, ಶಂಕರ್-ಜೈಕಿಶನ್ ಎಲ್ಲರ ಕೈವಾಡವಿತ್ತು.
ಆದರೆ, ಅಷ್ಟರಲ್ಲಿ ಅವರೆಲ್ಲಾ ಒಬ್ಬಬ್ಬರಾಗಿ ಹೋಗಿಬಿಟ್ಟಿದ್ದರು. ಈ ಕಡೆ ರಾಜ್ ಕಪೂರ್ ಸಹ ಸಿನಿಮಾ ಮಾಡೋದನ್ನು ನಿಲ್ಲಿಸಿದರು. ಕೊನೆಗೆ ಲಕ್ಷ್ಮೀಕಾಂತ್-ಪ್ಯಾರೇಲಾಲ್‌ರಂತಹ ಸಂಗೀತ ನಿರ್ದೇಶಕರು ಜೊತೆಯಾದ ಮೇಲೆ ರಾಜ್ ಕಪೂರ್ ಸಿನಿಮಾ ಮಾಡೋದನ್ನ ಮುಂದುವರೆಸಿದರು’ ಎನ್ನುತ್ತಾರೆ ರಿಚರ್ಡ್ ಲೂಯಿಸ್.
ಇದಕ್ಕೂ ರಿಚರ್ಡ್ ಲೂಯಿಸ್ ಅವರಿಗೂ ಏನು ಸಂಬಂಧ ಎಂದರೆ, ಅದಕ್ಕೂ ಒಂದು ಸಂಬಂಧ ಇದೆ. “ನಾನು ಸಿನಿಮಾ ಮಾಡಿ 18 ವರ್ಷಗಳಾಗಿತ್ತು. ನನ್ನ ಸ್ನೇಹಿತರ್ಯಾರೂ ಈಗ ಇಲ್ಲ. ಡಿ. ರಾಜೇಂದ್ರ ಬಾಬು ಮುಂತಾದವರೆಲ್ಲಾ ಇಲ್ಲ. ಅದೇ ಕಾರಣಕ್ಕೆ ನಾನೂ ಸಿನಿಮಾಗೆ ಚಿತ್ರಕಥೆ, ಸಂಭಾಷಣೆ ಬರೆಯೋದನ್ನ ನಿಲ್ಲಿಸಿದ್ದೆ.
ಸಿನಿಮಾ ಟೀಮ್‌ವರ್ಕ್. ಅಲ್ಲಿ ಎಲ್ಲರ ಕೊಡುಗೆಯೂ ಇರುತ್ತದೆ. ಒಬ್ಬರಿಬ್ಬರಿಂದ ಖಂಡಿತಾ ಸಿನಿಮಾ ಆಗುವುದಿಲ್ಲ. ಸಿನಿಮಾ ಮುಂದೆ ಕಟೌಟ್ ಇರತ್ತೆ ಗೊತ್ತಾ? ಆ ಕಟೌಟ್ 90 ಅಡಿ ಇರಬಹುದು. ಆದರೆ, ಅದರ ಹಿಂದೆ ತುಂಬಾ ರಿಪೀಸ್ ಇರುತ್ತೆ. ಅದೇ ತರಹ ಸಿನಿಮಾದಲ್ಲಿ ಟೀಮ್ ವರ್ಕ್ ಬಹಳ ಮುಖ್ಯ’ ಎನ್ನುತ್ತಾರೆ ಅವರು.