ಬಸವನಬಾಗೇವಾಡಿ: ಗ್ರಾಮೀಣ ಭಾಗದ ಜನರ ಸಣ್ಣ ಪುಟ್ಟ ಸಮಸ್ಯೆಗಳನ್ನು ತಕ್ಷಣ ಸಂಬಂಧಪಟ್ಟ ಅಧಿಕಾರಿಗಳು ಅಲ್ಲೇ ಪರಿಹರಿಸಬೇಕೆ ಹೊರತು ಕಚೇರಿಗಳಿಗೆ ಅಲೆದಾಡಿಸುವುದಕ್ಕೆ ಕಡಿವಾಣ ಹಾಕಬೇಕು ಎಂದು ತಹಶೀಲ್ದಾರ್ ವಿಜಯಕುಮಾರ ಕಡಕೋಳ ಅಧಿಕಾರಿಗಳಿಗೆ ಸೂಚಿಸಿದರು.
ತಾಲೂಕಿನ ಇವಣಗಿ ಗ್ರಾಮದ ಲಕ್ಕಮ್ಮದೇವಿ ದೇವಸ್ಥಾನದ ಆವರಣದಲ್ಲಿ ಹಮ್ಮಿಕೊಂಡಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಗ್ರಾಮೀಣ ಜನರ ಸಮಸ್ಯೆಗಳಾದ ಪಿಂಚಣಿ, ವಸತಿ ಯೋಜನೆ, ಸ್ಮಶಾನ, ಪಹಣಿ ತಿದ್ದುಪಡಿ, ಭೂ ಒತ್ತುವರಿ ತೆರವು, ಮತದಾರರ ಪಟ್ಟಿ ಪರಿಷ್ಕರಣೆ, ಬರ, ಪ್ರವಾಹ ಸಂತ್ರಸ್ತರಿಗೆ ಪರಿಹಾರ ನೀಡುವುದು, ಅರ್ಹ ಕುಟುಂಬಗಳಿಗೆ ಬಿಪಿಎಲ್ ಪಡಿತರ ಕಾರ್ಡ್, ಪೋಡಿ ಪ್ರಕರಣ ಸೇರಿದಂತೆ ಅನೇಕ ಸಮಸ್ಯೆಗಳನ್ನು ಅಲ್ಲೇ ಪರಿಹರಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಖ್ಯೋಪಾಧ್ಯಾಯರು ಮಾತನಾಡಿ, ಶಾಲೆಯಲ್ಲಿ 400ಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು ಹಲವಾರು ಸಮಸ್ಯೆ ಎದುರಿಸುತ್ತಿದ್ದಾರೆ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಅನುಕೂಲ ಮಾಡಿಕೊಡಬೇಕೆಂದು ಮನವಿ ಮಾಡಿಕೊಂಡರು. ಗ್ರಾಮದಲ್ಲಿ ಮಹಿಳಾ ಶೌಚಾಲಯ ನಿರ್ಮಾಣ, ನೂತನ ವಿದ್ಯುತ್ ವಾಹಕ ಅಳವಡಿಕೆ, ನೂತನ ಸಾರ್ವಜನಿಕ ಗ್ರಂಥಾಲಯ ಸ್ಥಾಪನೆ, ಗ್ರಾಮದಲ್ಲಿನ ಕೆರೆ ನಿರ್ಮಾಣಕ್ಕೆ ಭೂಮಿ ಸ್ವಾಧೀನ ಪಡಿಸಿಕೊಂಡಿದ್ದು ಪರಿಹಾರದ ಹಣ ಮಂಜೂರಿಸಲು, ಒತ್ತುವರಿಯಾದ ಜಮೀನನ್ನು ಗ್ರಾಮಕ್ಕೆ ನೀಡುವ ಕುರಿತಾಗಿ ಹತ್ತು ಹಲವು ಸಮಸ್ಯೆಗಳ ಇತ್ಯರ್ಥಕ್ಕಾಗಿ ಮನವಿ ಸಲ್ಲಿಸಲಾಗಿದ್ದು ತಹಶೀಲ್ದಾರ್ ಕಡಕೋಳ ಅವರು ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಅವುಗಳನ್ನು ಇತ್ಯರ್ಥ ಪಡಿಸುವದಾಗಿ ಭರವಸೆ ನೀಡಿದರು.
ಗ್ರಾಮ ವಾಸ್ತವ್ಯಕ್ಕೆ ಸಂಬಂಧಿಸಿದಂತೆ 28 ಇಲಾಖೆಗಳನ್ನು ಒಳಗೊಂಡಿದ್ದು ಇತ್ಯರ್ಥಕ್ಕಾಗಿ 85 ಅರ್ಜಿಗಳನ್ನು ಸಲ್ಲಿಕೆಯಾಗಿವೆ. ಇದರಲ್ಲಿ ಕಂದಾಯ ಇಲಾಖೆಗೆ ಸಂಬಂಧಿಸಿದ 46 ಪಿಂಚಣಿ ಅರ್ಜಿಗಳನ್ನು ಸ್ಥಳದಲ್ಲಿಯೇ ಇತ್ಯರ್ಥಪಡಿಸಲಾಗಿದ್ದು ಬಾಕಿ ವಿವಿಧ ಇಲಾಖೆಗಳಿಗೆ ಸೇರಿದ 35 ಅರ್ಜಿಗಳನ್ನು ಪರಿಹರಿಸಲು ಭರವಸೆ ನೀಡಲಾಯಿತು.
ತಾಪಂ ಇಒ ಭಾರತಿ ಚಲುವಯ್ಯ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಂ.ಎಚ್. ಯರಝೇರಿ, ಎಡಿಎಲ್ ಆರ್ ಮುರುಗೇಶ ರೂಡಗಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಗ್ರೇಡ್-1 ಪುಂಡಲೀಕ ಮಾನವರ, ಗ್ರೇಡ್-2 ತಹಶೀಲ್ದಾರ್ ಪಿ.ಜಿ. ಪವಾರ, ಸಿಡಿಪಿಒ ನಿರ್ಮಲಾ ಸುರಪುರ, ಪುರಸಭೆ ಮುಖ್ಯಾಧಿಕಾರಿ ಶಿವಾನಂದ ಪೂಜಾರಿ, ಲೋಕೋಪಯೋಗಿ ಇಲಾಖೆಯ ಜೆ.ಸಿ. ವಂದಾಲ, ರೈತ ಸಂಪರ್ಕ ಕೇಂದ್ರದ ಚಿದಾನಂದ ಹಿರೇಮಠ, ಹೆಸ್ಕಾಂನ ಚನಗೌಡ ಪಾಟೀಲ, ಮುಖ್ಯ ಪಶು ವೈದ್ಯಾಧಿಕಾರಿ ಪಿ.ಎಸ್. ಪಾಟೀಲ, ಗ್ರಾಪಂ ಅಧ್ಯಕ್ಷೆ ಕಮಲಾಬಾಯಿ ಕುಂಬಾರ ಸೇರಿದಂತೆ ಅನೇಕರು ಇದ್ದರು. ಕೊಟ್ರೇಶಿ ಹೆಗಡ್ಯಾಳ ಸ್ವಾಗತಿಸಿದರು. ಸಿದ್ದು ಅವಜಿ ನಿರೂಪಿಸಿದರು. ಚಕ್ರಮನಿ ವಂದಿಸಿದರು.