Advertisement

ನೀರಿನ ಅಪವ್ಯಯಕ್ಕೆ ಕಡಿವಾಣ ಹಾಕಿ

09:52 PM Apr 22, 2019 | Team Udayavani |

ದೇವನಹಳ್ಳಿ: ನೀರಿನ ಮಹತ್ವವನ್ನು ಅರಿತು ಮಳೆ ನೀರನ್ನು ಸರಿಯಾಗಿ ಉಪಯೋಗಿಸಿಕೊಂಡರೆ ನೀರಿನ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು ಎಂದು ಜಿಲ್ಲಾಧಿಕಾರಿ ಸಿ.ಎಸ್‌.ಕರೀಗೌಡ ತಿಳಿಸಿದರು.

Advertisement

ತಾಲೂಕಿನ ಚಪ್ಪರದಕಲ್ಲು ಸರ್ಕಲ್‌ ಬಳಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾಡಳಿತ ಭವನದಲ್ಲಿರುವ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ವ್ಯಾಪ್ತಿಯ ಕೈಗಾರಿಕೆಗಳು, ವಾಣಿಜ್ಯ ಕಟ್ಟಡಗಳು, ಕಲ್ಯಾಣ ಮಂಟಪಗಳು, ಚಿತ್ರಮಂದಿರಗಳು ಹಾಗೂ ನಿವೇಶನಗಳಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳಲ್ಲಿ ಕಡ್ಡಾಯವಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳಬೇಕು. ಜಿಲ್ಲೆಯಲ್ಲಿ ಮಳೆನೀರು ಕೊಯ್ಲು ಅನುಷ್ಠಾನಗೊಳಿಸುವ ಬಗ್ಗೆ ನಡೆದ ವಿಶೇಷ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಮಳೆ ನೀರನ್ನು ಸಂಗ್ರಹಿಸಲು ಮಳೆ ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳುವುದು ಅತೀ ಮುಖ್ಯವಾಗಿದೆ. ಅಧಿಕಾರಿಗಳು ಕೂಡಲೇ ಸಂಬಂಧಪಟ್ಟವರಿಗೆ ನೋಟಿಸ್‌ ಕೊಟ್ಟು ಚುನಾವಣೆ ಮಾದರಿಯಲ್ಲಿಯೇ ಈ ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಸೂಚನೆ ನೀಡಿದರು.

ಪ್ರಯೋಗ ಯಶಸ್ವಿ: 15 ದಿನಗಳ ಹಿಂದಷ್ಟೇ ದೊಡ್ಡಬಳ್ಳಾಪುರ ಕಾವೇರಿ ಕಲ್ಯಾಣ ಮಂಟಪದಲ್ಲಿ ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಂಡಿರುವುದರಿಂದ ಕಳೆದ ಏಪ್ರಿಲ್‌ 18 ರಂದು ಸುರಿದ ಮಳೆಯಿಂದಾಗಿ 23 ಸಾವಿರ ಲೀಟರ್‌ ಮಳೆ ನೀರು ಸಂಗ್ರಹವಾಗಿದೆ. ನಗರ ವ್ಯಾಪ್ತಿಯ ಕಲ್ಯಾಣ ಮಂಟಪಗಳಲ್ಲಿ ಮಳೆನೀರು ಕೊಯ್ಲು ಕಡ್ಡಾಯವಾಗಿ ಅಳವಡಿಸಿಕೊಳ್ಳುವಂತೆ ಒಂದು ತಿಂಗಳಿಂದ ಸೂಚನೆ ನೀಡಲಾಗಿತ್ತು.

ಈ ಪ್ರಯೋಗ ಯಶಸ್ವಿಯಾದ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಕೈಗಾರಿಕೆಗಳು, ವಾಣಿಜ್ಯ ಕಟ್ಟಡಗಳು, ಕಲ್ಯಾಣ ಮಂಟಪಗಳು, ಚಿತ್ರಮಂದಿರಗಳು, ನಿವೇಶನಗಳಲ್ಲಿ ನಿರ್ಮಿಸಲಾಗಿರುವ ಕಟ್ಟಡಗಳು ಒಂದು ತಿಂಗಳೊಳಗಾಗಿ ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿಕೊಳ್ಳುವಂತೆ ಸಂಬಂಧಪಟ್ಟ ಇಲಾಖೆಗಳಿಂದ ನೋಟಿಸ್‌ ಕಳಿಸಲಾಗುವುದು ಎಂದು ತಿಳಿಸಿದರು.

Advertisement

ಸೂಚನೆ ಪಾಲಿಸದಿದ್ದರೆ ಕ್ರಮ: ಮಳೆ ನೀರು ಕೊಯ್ಲು ಪದ್ಧತಿ ಅಳವಡಿಸಿಕೊಳ್ಳದ ಮನೆ ಅಥವಾ ಕಟ್ಟಡಗಳ ಮಾಲಿಕರು ಹಾಗೂ ಕಂಪನಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಾಂಪ್ರದಾಯಿಕ ವಿಧಾನ: ನಮ್ಮ ಸುತ್ತುಮುತ್ತಲು ವ್ಯರ್ಥವಾಗಿ ಹರಿದುಹೋಗುವ ಮಳೆ ನೀರನ್ನು ಹಿಡಿದಿಟ್ಟುಕೊಳ್ಳಲು ಅಗತ್ಯವಿರುವ ಎಲ್ಲಾ ಸಾಂಪ್ರದಾಯಿಕ ವಿಧಾನಗಳನ್ನು ಪುನಃಶ್ಚೇತನಗೊಳಿಸಿಕೊಳ್ಳಲು ನಾವು ಪ್ರಥಮ ಆದ್ಯತೆ ನೀಡಬೇಕಾಗಿದೆ.

ದೊಡ್ಡಬಳ್ಳಾಪುರ ತಾಲೂಕಿನ ಗಂಟಿಗಾನಹಳ್ಳಿ ಸಮೀಪದಲ್ಲಿ ಒಬ್ಬರು ಮುಂದೆ ಬಂದಿದ್ದು, ಎರಡು ಲಕ್ಷ ಅಡಿ ಜಾಗದಲ್ಲಿ ಒಂದು ವರ್ಷಕ್ಕೆ ಮಳೆ ನೀರಿನಿಂದ ಒಂದು ಕೆಒಟಿ 75 ಲಕ್ಷ ನೀರು ಉಳಿಸಿ ಒಂದು ದಿನಕ್ಕೆ 435 ಜನರಿಗೆ ನೀರು ಹಾಗೂ ಒಬ್ಬ ಮನುಷ್ಯನಿಗೆ 135 ಲೀಟರ್‌ ನೀರು ನೀಡುವ ಶಕ್ತಿ ಹೊಂದಿದ್ದಾರೆ ಎಂದರು.

ನೈಸರ್ಗಿಕ ನೀರಿನಿಂದ ಆರೋಗ್ಯ ವೃದ್ಧಿ: ಮಧುಗಿರಿ ಬಳಿ ಒಂದು ಹಳ್ಳಿಗೆ ತಂಡ ಭೇಟಿ ನೀಡಿ ಅಲ್ಲಿನ ಮಳೆ ಕೊಯ್ಲು ಬಗ್ಗೆ ಅಧ್ಯಯನ ಮಾಡಿದೆ. ನೈಸರ್ಗಿಕ ನೀರಿನಿಂದ ಆರೋಗ್ಯ ಹೆಚ್ಚಳ, ವಿವಿಧ ಕಾಯಿಲೆಗಳಿಂದ ಮುಕ್ತಿ, ಆ ನೀರನ್ನು ಸಂಸ್ಕರಿಸಿ ಮತ್ತೂಂದು ಗ್ರಾಮಕ್ಕೆ ಶುದ್ಧ ಕುಡಿಯುವ ನೀರು ನೀಡುತ್ತಿರುವುದು ತಂಡಕ್ಕೆ ಮನವರಿಕೆಯಾಗಿದೆ.

ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ, ಕಾರ್ಖಾನೆ ಮತ್ತು ಬಾಯ್ಲರ್‌, ಕಾರ್ಮಿಕ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ನಗರಸಭೆ, ಬೆಸ್ಕಾಂ, ಪುರಸಭೆ, ಮುಖ್ಯಾಧಿಕಾರಿಗಳು, ಪೌರಾಯುಕ್ತರು ತಮ್ಮ ವ್ಯಾಪ್ತಿಯಲ್ಲಿ ಬರುವ ಕೈಗಾರಿಕೆ, ವಾಣಿಜ್ಯ ಕಟ್ಟಡಗಳು ಹಾಗೂ ಕಟ್ಟಡಗಳ ಮಾಲಿಕರ ವಿವರ ಸಂಗ್ರಹಿಸಿ, ಸೂಚನೆ ನೀಡಬೇಕೆಂದರು.

ಫ್ಲೋರೈಡ್‌ಯುಕ್ತ ನೀರು: ಈ ಭಾಗದ ನೀರಿನಲ್ಲಿ ಫ್ಲೋರೈಡ್‌ ಅಂಶ ಇರುವುದರಿಂದ ಈ ನೀರನ್ನು ಕುಡಿದರೆ ಹಲ್ಲುಗಳ ಸಮಸ್ಯೆ, ಮುಖ ಬಿಳುಚುವುದು ಹೀಗೆ ಹತ್ತು ಹಲವಾರು ಸಮಸ್ಯೆಗಳನ್ನು ಎದುರಿಸುವಂತಾಗುತ್ತದೆ. ಫ್ಲೋರೋಸಿಸ್‌ನಿಂದ ಮೂಳೆ ಸಮಸ್ಯೆಯಾಗುತ್ತದೆ. ಇದರ ಜೊತೆಗೆ 35 ವರ್ಷದವರು 60 ವರ್ಷದವರಂತೆ ಕಾಣಿಸುತ್ತಾರೆ ಎಂದರು.

ಎನ್‌ಐಸಿಯಿಂದ ವೆಬ್‌ಸೈಟ್‌ ಆರಂಭ: ಪ್ರತಿ ಅಧಿಕಾರಿಯೂ ವೆಬ್‌ಸೈಟ್‌ ವಿವರಗಳನ್ನು ಅಪ್‌ಡೇಟ್‌ ಮಾಡಲು ಎನ್‌ಐಸಿ ಕಡೆಯಿಂದ ಹೊಸದಾಗಿ ವೆಬ್‌ಸೈಟ್‌ ಸೃಜಿಸಲಾಗುತ್ತದೆ. ಬೆಂಗಳೂರು ಗ್ರಾಮಾಂತರ ಮಳೆ ನೀರು ಕೊಯ್ಲು ಪ್ರಗತಿ ಎಂಬ ಜಿ-ಮೇಲ್‌ ಸಹ ಮಾಡುವಂತೆ ಸೂಚಿಸಲಾಗಿದೆ ಎಂದು ಹೇಳಿದರು.

ಸಭೆಯಲ್ಲಿ ಹಿರಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿ ಪಲ್ಲವಿ, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆ ಅಧಿಕಾರಿ ಕೆ.ಎಂ.ಜಗದೀಶ್‌. ನಂಜಪ್ಪ, ದೇವನಹಳ್ಳಿ ಪುರಸಭಾ ಮುಖ್ಯಾಧಿಕಾರಿ ಹನುಮಂತೇಗೌಡ, ವಿಜಯಪುರ ಪುರಸಭಾ ಮುಖ್ಯಾಧಿಕಾರಿ ನಾಗರಾಜ್‌ ಸೇರಿದಂತೆ ಸಂಬಂಧಪಟ್ಟ ಇಲಾಖೆಗಳ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಮತ್ತಿತರರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next