Advertisement

ಜಿಲ್ಲೆಯಲ್ಲಿ ಅನಧಿಕೃತ ಶಾಲೆಗಳ ಹಾವಳಿಗೆ ಕಡಿವಾಣ ಹಾಕಿ

09:19 PM Feb 10, 2020 | Lakshmi GovindaRaj |

ತುಮಕೂರು: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ತುಮಕೂರು ಜಿಲ್ಲಾ ಖಾಸಗಿ, ಅನುದಾನರಹಿತ ಶಾಲಾ ಆಡಳಿತ ಮಂಡಳಿ ಸದಸ್ಯರು ಡಿಡಿಪಿಐ ಕಚೇರಿ ಎದುರು ಪ್ರತಿಭಟನೆ ನಡೆಸಿ ಶಾಸಕ ಜಿ.ಬಿ ಜ್ಯೋತಿಗಣೇಶ್‌ಗೆ ಮನವಿ ಸಲ್ಲಿಸಿದರು.

Advertisement

ನಗರದಲ್ಲಿ ಈಗಾಗಲೇ 130 ಅನುದಾನ ರಹಿತ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ಈ ಶಾಲೆಗಳ ಹತ್ತಿರದಲ್ಲೇ ಮತ್ತೂಂದು ಪ್ರೀ ಸ್ಕೂಲ್‌ ತೆರೆಯಲು ಡಿಡಿಪಿಐ ಹಾಗೂ ಬಿಇಒ ಅನುಮತಿ ನೀಡುತ್ತಿರುವುದು ಸರಿಯಲ್ಲ. ಕಾರ್ಪೋರೇಟ್‌ ಶಾಲೆಗಳ ವ್ಯಾಮೋಹದಲ್ಲಿ ಅಧಿಕಾರಿಗಳು ಸ್ಥಳೀಯ ಶಾಲಾ ಸಂಸ್ಥೆಗಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ಅಧಿಕಾರಿಗಳ ನಿರ್ಲಕ್ಷ್ಯ: ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ತುಮಕೂರು ಜಿಲ್ಲಾ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಹಾಲನೂರು ಎಸ್‌.ಲೇಪಾಕ್ಷಿ, ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಶಾಲೆಗಳಿಗೆ ಕಡಿವಾಣ ಹಾಕುವಂತೆ ಕಳೆದ ಜೂನ್‌ನಲ್ಲಿಯೇ ಡಿಡಿಪಿಐ ಹಾಗೂ ಬಿಇಒಗೆ ಮನವಿ ಸಲ್ಲಿಸಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯವಹಿಸಿದ್ದಾರೆ. ಕಾನೂನು ಉಲ್ಲಂಘಿಸಿ ಇಂತಹ ಶಾಲೆಗಳು ಕಾರ್ಯನಿರ್ವಹಿಸಲು ಅಧಿಕಾರಿಗಳೇ ಅನುವು ಮಾಡಿಕೊಡುತ್ತಿದ್ದಾರೆ ಎಂದು ದೂರಿದರು.

ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಶಾಲೆಗಳ ವಿರುದ್ಧ ಅಧಿಕಾರಿಗಳು ಕ್ರಮ ಕೈಗೊಳ್ಳದ ಕಾರಣ ಇಂದು ಖಾಸಗಿ ಅನುದಾನ ರಹಿತ ಶಾಲಾ ಆಡಳಿತ ಮಂಡಳಿ ಬೀದಿಗಿಳಿದು ಹೋರಾಟಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಅನೇಕ ಶಿಕ್ಷಣ ಸಂಸ್ಥೆಗಳು ಅನುಮತಿ ಇಲ್ಲದೇ ತರಗತಿ ನಡೆಸುತ್ತಿದ್ದು, ಡಿಡಿಪಿಐ ಕ್ರಮ ಕೈಗೊಳ್ಳದಿದ್ದರೆ ಕಚೇರಿಗೆ ಬೀಗ ಹಾಕಬೇಕಾಗುತ್ತದೆ ಎಂದು ಎಚ್ಚರಿಸಿದರು.

ಮಂಡಳಿ ಕಾರ್ಯದರ್ಶಿ ಶ್ರೀನಿವಾಸ್‌ ಮಾತನಾಡಿ, ಅಧಿಕಾರಿಗಳ ಧೋರಣೆಯಿಂದ ಯಾರು ಬೇಕಾದರೂ ಅನಧಿಕೃತವಾಗಿ ಪ್ರೀ ಸ್ಕೂಲ್‌ ಪ್ರಾರಂಭಿಸಬಹುದಾಗಿದೆ. ಶಿಕ್ಷಣ ಇಲಾಖೆ ಷರತ್ತು ಉಲ್ಲಂಘಿಸಿ ಪ್ರಿಸ್ಕೂಲ್‌ ಪ್ರಾರಂಭಿಸುತ್ತಿದ್ದು, ಇಂಟಿಗ್ರೇಟೆಡ್‌ ಶಾಲೆಗಳು ಕಾರ್ಯನಿರ್ವಹಿಸುತ್ತಿರುವುದರಿಂದ ಸ್ಥಳೀಯ ಖಾಸಗಿ ಶಾಲೆಗಳಿಗೆ ತೊಂದರೆಯಾಗುತ್ತಿದೆ ಎಂದು ದೂರಿದರು.

Advertisement

ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಅಡಿ ದಾಖಲಾಗಿರುವ ಮಕ್ಕಳ ಅನುದಾನ ಶಿಕ್ಷಣ ಇಲಾಖೆ ಕಳೆದ ವರ್ಷದಿಂದಲೂ ನೀಡಿಲ್ಲ, ಶೇ.80ರಷ್ಟು ಕಡತ ವಾಪಸ್‌ ಮಾಡಲಾಗಿದೆ. ಮಾರ್ಚ್‌ ತಿಂಗಳೊಳಗೆ ಮೊದಲ ಹಂತದ ಅನುದಾನ ಬಿಡುಗಡೆಯಾದರೆ ಸರ್ಕಾರದಿಂದ ಅನುದಾನ ಪಡೆಯುವುದಕ್ಕೆ ತೊಂದರೆಯಾಗಲಿದ್ದು, ಡಿಡಿಪಿಐ ಕಚೇರಿಯಿಂದ ಮನಸೋ ಇಚ್ಛೆ ಶಾಲೆಗೆ ಭೇಟಿ ನೀಡಿ ತೊಂದರೆ ನೀಡುತ್ತಿದ್ದಾರೆ. ಅನುದಾನರಹಿತ ಶಾಲೆಗಳ ಆಡಳಿತಕ್ಕೆ ತೊಂದರೆ ನೀಡುತ್ತಿದ್ದು, ಕಾನೂನುಬದ್ಧವಾಗಿ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಂತರ ಪ್ರತಿಭಟನಾನಿರತರನ್ನು ಉದ್ದೇಶಿಸಿ ಮಾತನಾಡಿದ ನಗರ ಶಾಸಕ ಜಿ.ಬಿ.ಜ್ಯೋತಿಗಣೇಶ್‌,ಆಂಧ್ರ ಮೂಲದ ಶಾಲೆಗಳು ನಾಯಿ ಕೊಡೆಗಳಂತೆ ಪ್ರಾರಂಭವಾಗುತ್ತಿವೆ. ಶಿಕ್ಷಣ ವ್ಯಾಪಾರೀಕರಣ ಮಾಡಲು ಮುಂದಾಗುತ್ತಿದ್ದು, ಅಧಿಕಾರಿಗಳು ಅನುಮತಿ ಇಲ್ಲದ ಶಾಲೆ ಮುಚ್ಚಿಸಲು ಕ್ರಮವಹಿಸಬೇಕು ಎಂದು ಡಿಡಿಪಿಐ ಕಾಮಾಕ್ಷಮ್ಮ ಹಾಗೂ ಬಿಇಒ ರಂಗಧಾಮಪ್ಪಗೆ ಸೂಚಿಸಿದರು.

ಶೈಕ್ಷಣಿಕ ನಗರಿಯಲ್ಲಿ ಗುಣಮಟ್ಟದ ಶಿಕ್ಷಣ ಉಳಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಅನಧಿಕೃತ ಶಾಲೆಗಳಿಗೆ ಕಡಿವಾಣ ಹಾಕಬೇಕು. ಹೊರರಾಜ್ಯಗಳ ಶಾಲೆ ತೆರೆಯುವುದಕ್ಕೆ ಅವಕಾಶ ನೀಡಿದರೆ, ಕನ್ನಡಿಗರ ಸ್ಥಳೀಯ ಶಾಲೆ ಉಳಿಸಲು ತೊಂದರೆಯಾಗಲಿದೆ. ಲಕ್ಷಗಟ್ಟಲೆ ಶುಲ್ಕ ವಸೂಲಿ ಮಾಡುತ್ತಿರುವ ಶಾಲೆಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವುದು ಅವಶ್ಯಕ ಎಂದರು.

ವಿದ್ಯಾವಾಹಿನಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಎನ್‌.ಬಿ.ಪ್ರದೀಪ್‌ ಕುಮಾರ್‌, ಲ್ಯಾನ್ಸಿಪಾಯಸ್‌, ನಯಾಜ್‌ ಅಹ್ಮದ್‌, ಶ್ರೀನಿವಾಸ್‌, ಪ್ರಕಾಶ್‌, ರಹಮತ್‌ ಅಲಿ, ಚಂದ್ರಣ್ಣ, ದೇವೇಗೌಡ, ಅರುಣ್‌ಕುಮಾರ್‌, ಲೋಕೇಶ್‌, ಪಾಲಾಕ್ಷಯ್ಯ, ಮುಮ್ತಾಜ್‌ ಬೇಗಂ, ಶರ್ಮಿಳಾ, ರೇಖಾ ಬಾಬು, ಅಶ್ವಿ‌ನಿ, ಮಂಡಳಿ ಒಕ್ಕೂಟದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.

8 ಶಾಲೆಗಳು ಅನಧಿಕೃತ: ನಗರದಲ್ಲಿಯೇ ಹೈದ್ರಾಬಾದ್‌, ಬಾಂಬೆ ಮೂಲದ ಶಿಕ್ಷಣ ಸಂಸ್ಥೆಗಳ ದಂಧೆ ಹೆಚ್ಚಿದ್ದು, 8 ಶಾಲೆಗಳು ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದು, ಅನುಮತಿ ಪಡೆದಿರುವುದಕ್ಕಿಂತ ಹೆಚ್ಚು ವಿಭಾಗಗಳಲ್ಲಿ ದಾಖಲಾತಿ ಮಾಡಿಕೊಳ್ಳುತ್ತಿವೆ. ಪ್ರೀ ಸ್ಕೂಲ್‌ ಹೆಸರಿನಲ್ಲಿ ಮೂಲ ಸೌಕರ್ಯವಿಲ್ಲದ ಕಡೆಯೂ ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದು, ವೃತ್ತಿಪರತೆ ಇಲ್ಲದ ಶಿಕ್ಷಕರನ್ನು ನೇಮಿಸಿಕೊಳ್ಳುವುದರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂದು ಜಿಲ್ಲಾ ಖಾಸಗಿ ಅನುದಾನರಹಿತ ಶಾಲಾ ಆಡಳಿತ ಮಂಡಳಿ ಒಕ್ಕೂಟದ ಅಧ್ಯಕ್ಷ ಹಾಲನೂರು ಎಸ್‌.ಲೇಪಾಕ್ಷಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಧಿಕಾರಿಗಳು ಶಾಲೆಗೆ ಅನುಮತಿ ಕೊಡುವ ಮುಂಚೆ ಪರಿಶೀಲಿಸಬೇಕು. ಅವಶ್ಯಕತೆ ಇಲ್ಲದೆ ಕಡೆ ತರಗತಿ ನಡೆಸಲು ಅನುಮತಿ ಕೊಡಬಾರದು. ಇದರಿಂದ ಉಳಿದ ಸಂಸ್ಥೆಗಳ ಮೇಲೆ ಪರಿಣಾಮ ಬೀರಲಿದೆ. ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಅನುಮತಿ ನೀಡಬಾರದು.
-ಸೀತರಾಂ, ಸರ್ವೋದಯ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next