Advertisement

ಸುಳ್ಳು ಜಾತಿ ಪತ್ರಕ್ಕೆ ಕಡಿವಾಣ ಹಾಕಿ

01:16 PM Oct 16, 2018 | |

ಕಲಬುರಗಿ: ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸಿ ಹಾಗೂ ಸುಳ್ಳು ಜಾತಿ ಪ್ರಮಾಣ ಪತ್ರಗಳಿಗೆ ಕಡಿವಾಣ ಹಾಕುವಂತೆ ಒತ್ತಾಯಿಸಿ ವಾಲ್ಮೀಕಿ ಸಮಾಜ ಆರಂಭಿಸಿರುವ ಹೋರಾಟ ಕ್ರಾಂತಿಕಾರಿ ಹೋರಾಟವಾಗಬೇಕು ಎಂದು ದೇವದುರ್ಗ ಕ್ಷೇತ್ರದ ಬಿಜೆಪಿ ಶಾಸಕ ಶಿವನಗೌಡ ನಾಯಕ ಹೇಳಿದರು.

Advertisement

ನಗರದಲ್ಲಿ ಹೈದ್ರಾಬಾದ್‌ ಕರ್ನಾಟಕ ಪ್ರದೇಶ ವಾಲ್ಮೀಕಿ ನಾಯಕರ ಸಂಘದ ವತಿಯಿಂದ ಎಸ್‌ಟಿ ಮೀಸಲಾತಿ ಶೇ.7.5ಕ್ಕೆ ಹೆಚ್ಚಿಸಬೇಕು ಮತ್ತು ಗೊಂಡ ಹೆಸರಲ್ಲಿ ನಕಲಿ ಜಾತಿ ಪ್ರಮಾಣಪತ್ರ ಪಡೆಯುತ್ತಿರುವವರ ವಿರುದ್ಧ ಕ್ರಮಕೈಗೊಳ್ಳುವುದು ಸೇರಿದಂತೆ ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ಬೃಹತ್‌ ಪ್ರತಿಭಟನಾ ಪಾದಯಾತ್ರೆ ಜಾಥಾ ಹಾಗೂ ಪ್ರಾದೇಶಿಕ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿದ ಸಂದರ್ಭದಲ್ಲಿ ಮಾತನಾಡಿದ ಆವರು, ವಾಲ್ಮೀಕಿ ಸಮಾಜದ ಜನರಿಗೆ ನ್ಯಾಯ ದೊರಕಿಸಬೇಕು ಎಂದು ವಾಲ್ಮೀಕಿ ಮಹಾಸಂಸ್ಥಾನದ ಜಗದ್ಗುರು ವಾಲ್ಮೀಕಿ ಪ್ರಸನ್ನಾನಂದಪುರಿ ಮಹಾಸ್ವಾಮಿಗಳು ಹೋರಾಟ ಆರಂಭಿಸುವ ಮೂಲಕ ಸರ್ಕಾರವನ್ನು ಎಚ್ಚರಿಸಿದ್ದಾರೆ. ಇದು ಸರ್ಕಾರ ಮತ್ತು ಬೇರೆ ಯಾವುದೇ ಜಾತಿ ವಿರುದ್ಧದ ಹೋರಾಟವಲ್ಲ. ವಾಲ್ಮೀಕಿ ಸಮಾಜದ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟ ಎಂದು ಹೇಳಿದರು.

ಸಮಾಜದ ಬೇಡಿಕೆ ಈಡೇರಿಸಿಕೊಳ್ಳಲು ಚಳಿಗಾಲದ ಅಧಿವೇಶನದ ವೇಳೆಗೆ ಬಸವಕಲ್ಯಾಣದಿಂದ ಬೆಂಗಳೂರಿಗೆ 600 ಕಿಮೀ ಪಾದಯಾತ್ರೆ ಹಮ್ಮಿಕೊ ಳ್ಳಬೇಕು. ಸ್ವಾಮೀಜಿ ಪಾದಯಾತ್ರೆ ಮುಂದಾಳತ್ವ ವಹಿಸಬೇಕು. ಈ ಮೂಲಕ ಸಮಾಜವನ್ನೂ ಗಟ್ಟಿಗೊಳಿಸುವ ಕೆಲಸ ಮಾಡಬೇಕಿದೆ ಎಂದು ಹೇಳಿದರು.

ಅಲ್ಲದೇ ನಮ್ಮ ಹೋರಾಟಕ್ಕೆ ಸರ್ಕಾರ ಸ್ಪಂದಿಸದೇ ಇದ್ದಲ್ಲಿ ಉಗ್ರ ಹೋರಾಟ ಮಾಡೋಣ. ಬೇಕಾದರೆ “ಆಯುಧ’ಗಳನ್ನು ಹಿಡಿಯೋಣ ಎಂದು ಅವರು ಆಕ್ರೋಶ ಭರಿತರಾಗಿ ಮಾತನಾಡಿದರು. ಪ್ರಸನ್ನಾನಂದಪುರಿ ಮಹಾಸ್ವಾಮಿ ಮಾತನಾಡಿ, ನಿಜವಾದ ಪರಿಶಿಷ್ಟ ಪಂಗಡದವರಿಗೆ ಸಿಗಬೇಕಾದ ಹಕ್ಕು ಬೇರೆ ಜಾತಿಯವರು ಅನ್ಯ ಮಾರ್ಗದಿಂದ ಪಡೆಯುತ್ತಿದ್ದಾರೆ. ಗೊಂಡ ಜಾತಿ ಹೆಸರಲ್ಲಿ ಹಿಂದುಳಿದ ವರ್ಗದಲ್ಲಿ ಬರುವ ಕುರುಬರು ಸುಳ್ಳು ಜಾತಿ ಪಡೆಯುತ್ತಿದ್ದಾರೆ. ಇದರಲ್ಲಿ ಅಧಿಕಾರಿಗಳು ಸಹ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. 

ತಮಗೆ ಆಗುತ್ತಿರುವ ಅನ್ಯಾಯ ಅರಿತು ವಾಲ್ಮೀಕಿ ಸಮಾಜ ಈಗ ಬೀದಿಗಳಿದು ಹೋರಾಟ ಮಾಡುತ್ತಿದೆ. ಸರ್ಕಾರ ನಕಲಿ ಜಾತಿ ಪ್ರಮಾಣ ವಿತರಣೆಗೆ ಕೂಡಲೇ ಕಡಿವಾಣ ಹಾಕಬೇಕು ಹಾಗೂ ಸುಳ್ಳು ಪ್ರಮಾಣ ಪತ್ರ ಪಡೆದವರ ವಿರುದ್ಧ ಕಾನೂನು ಕ್ರಮಗೈಕೊಳ್ಳಬೇಕು. ಅಲ್ಲದೇ, ಶೈಕ್ಷಣಿಕ ಹಾಗೂ ಉದ್ಯೋಗದ ಮೀಸಲಾತಿ ಪ್ರಮಾಣವನ್ನು ಶೇ.7.5ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿದರು.

Advertisement

ಬೇಡಿಕೆ ಪತ್ರ ಸ್ವೀಕರಿಸಿದ ಆರ್‌ಸಿ: ಪ್ರಸನ್ನಾನಂದಪುರಿ ಮಹಾಸ್ವಾಮಿಗಳ ನೇತೃತ್ವದಲ್ಲಿ ಕಲಬುರಗಿ, ಯಾದಗಿರಿ, ಬೀದರ, ರಾಯಚೂರು, ಕೊಪ್ಪಳ, ವಿಜಯಪುರ, ಬಳ್ಳಾರಿ ಜಿಲ್ಲೆಗಳ ವಾಲ್ಮೀಕಿ ಸಮಾಜದ ಮುಖಂಡರು, ನಾಯಕರು ಸಾವಿರಾರು ಜನರು ನಗರದ ರಾಮ ಮಂದಿರದಿಂದ ಪಾದಯಾತ್ರೆ ಕೈಗೊಂಡು ಪ್ರಾದೇಶಿಕ ಆಯುಕ್ತರ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು. ಪ್ರಾದೇಶಿಕ ಆಯುಕ್ತರಾದ ಸುಬೋಧ ಯಾದವ ಖುದ್ದು ಸ್ಥಳಕ್ಕೆ ಬಂದು ವಾಲ್ಮೀಕಿ ಸಮಾಜದ ಬೇಡಿಕೆಗಳ ಪತ್ರವನ್ನು ಪ್ರಸನ್ನಾನಂದಪುರಿ ಮಹಾಸ್ವಾಮಿ ಹಾಗೂ ಮುಖಂಡರಿಂದ ಸ್ವೀಕರಿಸಿದರು.

ವಾಲ್ಮೀಕಿ ಸಮಾಜದ ಬೇಡಿಕೆಗಳೇನು?: ಹಿಂದುಳಿದ ವರ್ಗದ 2ರಲ್ಲಿ ಬರುವ ಕುರುಬ ಮತ್ತು ಧನಗಾರ ಜಾತಿಯವರು ಗೊಂಡ, ಕಾಡು ಕುರುಬ, ರಾಜಗೊಂಡ ಜಾತಿ ಹೆಸರಲ್ಲಿ ಹಾಗೂ ಪ್ರವರ್ಗ-1ರಲ್ಲಿ ಬರುವ ಕಬ್ಬಲಿಗ ಜಾತಿಯವರು ಟೋಕ್ರಿ ಕೋಳಿ ಹೆಸರಲ್ಲಿ ಪರಿಶಿಷ್ಟ ಜಾತಿ ಪ್ರಮಾಣಪತ್ರ ಪಡೆದುಕೊಳ್ಳುತ್ತಿದ್ದಾರೆ. ರಾಜಕೀಯ ಅಧಿಕಾರ ಹಾಗೂ ಅಧಿಕಾರಿಗಳಿಗೆ ಆಮೀಷ ಒಡ್ಡಿ ಜಾತಿ ಪ್ರಮಾಣಪತ್ರ ಪಡೆಯುತ್ತಿದ್ದು, ಇದಕ್ಕೆ ತಕ್ಷಣವೇ
ತಡೆಗಟ್ಟಬೇಕು ಮತ್ತು ನಕಲಿ ಪ್ರಮಾಣಪತ್ರ ವಿತರಿಸಿದ ಅಧಿಕಾರಿಗಳು ಹಾಗೂ ಪಡೆದವರ ಮೇಲೆ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಬೇಕು.

ಶೈಕ್ಷಣಿಕ ಹಾಗೂ ಉದ್ಯೋಗದಲ್ಲಿ ಕೇಂದ್ರ ಸರ್ಕಾರದ ಮಾದರಿಯಲ್ಲಿ ಶೇ.7.5ರಷ್ಟು ಮೀಸಲಾತಿಯನ್ನು ರಾಜ್ಯ ಸರ್ಕಾರ ಕೂಡ ಜಾರಿಗೆ ತರಬೇಕು. ಪರಿಶಿಷ್ಟ ವರ್ಗಗಳ ಕಲ್ಯಾಣಕ್ಕಾಗಿ ಪ್ರತ್ಯೇಕ ಸಚಿವಾಲಯ ಸ್ಥಾಪಿಸಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಸರ್ಕಾರಿ ಬಡ್ತಿ ಮೀಸಲಾತಿ ರಾಜದಲ್ಲಿ ಶೀಘ್ರವೇ ಜಾರಿಗೆ ತರಬೇಕು. ವಲ್ಮೀಕಿ ಜನಾಂಗದ ಇನ್ನೂ ಮೂವರು ಶಾಸಕರಿಗೆ ಸಚಿವ ಸಂಪುಟದಲ್ಲಿ ಸ್ಥಾನ ನೀಡಬೇಕು ಹಾಗೂ 10
ಜನರಿಗೆ ನಿಗಮ ಮಂಡಳಿ ಹುದ್ದೆ ನೀಡಬೇಕು.

ಭಾರತೀಯ ಸೇನೆಯಲ್ಲಿ ಬೇಡ ಜನಾಂಗದವರ ರೆಜಿಮೆಂಟ್‌ ಸ್ಥಾಪಿಸಬೇಕು. ಕಲಬುರಗಿ ನಗರದ ಶ್ರೀಮಹರ್ಷಿ ವಲ್ಮೀಕಿ ವೃತ್ತದಲ್ಲಿ ಮಹರ್ಷಿ ವಲ್ಮೀಕಿಯ ಕಂಚಿನ ಪುತ್ಥಳಿ ಸ್ಥಾಪಿಸಬೇಕು. ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ಸುಳ್ಳು ಜಾತಿ ಪ್ರಮಾಣಗಳ ದೂರುಗಳನ್ನು ಸ್ವೀಕರಿಸಿ ನೈಜವಾಗಿ ತನಿಖೆ ಮಾಡುವ ಅಧಿಕಾರವನ್ನು ಪುನಃ ನೀಡಬೇಕು. ವೀರ ಸಿಂಧೂರ ಲಕ್ಷ್ಮಣ ಹೆಸರಲ್ಲಿ ಹಾಗೂ 1857ರ ದಂಗೆಯ ರೂವಾರಿಯಾದ ಹಲಗಲಿಯ ಬೇಡರ ಹೆಸರಲ್ಲಿ ಪ್ರತ್ಯೇಕ ಪ್ರಾಧಿಕಾರ ರಚಿಸಬೇಕು.

ಇದೇ ಸಂದರ್ಭದಲ್ಲಿ ಶಾಸಕ ಬಿ. ಶ್ರೀರಾಮುಲು ಅವರ ಹೋರಾಟಕ್ಕೆ ತಮ್ಮ ಬೆಂಬಲವಿದೆ ಎಂಬ ಸಂದೇಶ ಓದಿ ಹೇಳಿದರು. ತುಮಕೂರು ಜಿಲ್ಲೆ ಶಿರಾದ ಶಿಡಲಕೋಣದ ಮಹರ್ಷಿ ವಾಲ್ಮೀಕಿ ಆಶ್ರಮದ ಸಂಜಯಕುಮಾರ ಸ್ವಾಮೀಜಿ, ಎಸ್‌ಸಿ-ಎಸ್‌ಟಿ ನಕಲಿ ಜಾತಿ ಪ್ರಮಾಣಪತ್ರ ತಡೆ ಸಮಿತಿ ರಾಜ್ಯಾಧ್ಯಕ್ಷ ಶ್ರವಣಕುಮಾರ ನಾಯಕ, ಅಖೀಲ ಭಾರತ ವಾಲ್ಮೀಕಿ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಹರ್ತಿಕೋಟಿ ವೀರೇಂದ್ರ ಸಿಂಹ, ಹೈ-ಕ ಪ್ರದೇಶ ವಾಲ್ಮೀಕಿ ನಾಯಕರ ಸಂಘದ ಕಲಬುರಗಿ ವಿಭಾಗೀಯ ಅಧ್ಯಕ್ಷ ನಂದಕುಮಾರ ಮಾಲಿಪಾಟೀಲ, ವಿಭಾಗೀಯ ಸಂಘದ ರಘುವೀರ ನಾಯಕ, ಯಾದಗಿರಿ ಜಿಲ್ಲಾಧ್ಯಕ್ಷ ಮರೆಪ್ಪ ನಾಯಕ ಮಗದಂಪುರ, ಕಲಬುರಗಿ ಜಿಲ್ಲಾಧ್ಯಕ್ಷ ಅಯ್ಯಪ್ಪ ಕುರ್ಲೆ, ಬೀದರ ಜಿಲ್ಲಾಧ್ಯಕ್ಷ ಶಿವಾಜಿ ಸೀತಾಳಗೇರಾ, ಕೊಪ್ಪಳ ಜಿಲ್ಲಾಧ್ಯಕ್ಷ ಟಿ.ರತ್ನಾಕರ, ರಾಯಚೂರು ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ನಾಯಕ, ಬಳ್ಳಾರಿ ಜಿಲ್ಲಾಧ್ಯಕ್ಷ ದೊಡ್ಡ ಏರ್ರಿಸ್ವಾಮಿ, ವಿಜಯಪುರ
ಜಿಲ್ಲಾಧ್ಯಕ್ಷ ರವಿ ಬಿಸ್ನಾಳ, ಸಮಾಜದ ಮುಖಂಡ ಭೀಮರಾಯ ಹದ್ದಿನಾಳ ಪಾಲ್ಗೊಂಡಿದ್ದರು.

ಶೀಘ್ರವೇ ರಾಜಕೀಯ ಬದಲಾವಣೆ ಬಿಜೆಪಿ ಅಧಿಕಾರಕ್ಕೆ ಬಂದರೆ ವಾಲ್ಮೀಕಿ ಸಮಾಜದವರನ್ನು ಉಪಮುಖ್ಯಮಂತ್ರಿ ಮಾಡಬೇಕು ಎಂದು ಈ ಹಿಂದೆ ನಾನು ಬಹಿರಂಗವಾಗಿ ಹೇಳಿದ್ದೆ. ಅಲ್ಲದೇ, ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.7.5ಕ್ಕೆ ಹೆಚ್ಚಿಸಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮನವಿ ಮಾಡಿದ್ದೆ. ಆದರೆ, ಈಗ ರಾಜದ್ಯಲ್ಲಿ ಶೀಘ್ರವೇ ರಾಜಕೀಯ ಬದಲಾವಣೆಯಾಗಲಿದೆ. ರಾಜಕೀಯ ಬದಲಾವಣೆಯಾದರೆ ಪರಿಶಿಷ್ಟ ಪಂಗಡದ ಮೀಸಲಾತಿ ಹೆಚ್ಚಿಸಲು ಬೇರೆಯಾರೂ ಬೇಡ ನಾನೊಬ್ಬ ಸಾಕು.
ಶಿವನಗೌಡ ನಾಯಕ, ಬಿಜೆಪಿ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next